ಸದ್ಯಕ್ಕಿಲ್ಲ ಚಾನ್ಸ್​… ವೈಭವ್ ಸೂರ್ಯವಂಶಿ ಕಾಯಲೇಬೇಕು!

Vaibhav Sooryavanshi: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​-19 ರಲ್ಲಿ 776 ರನ್ ಬಾರಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದ ವೈಭವ್ ಸೂರ್ಯವಂಶಿ ಐರ್ಲೆಂಡ್ ವಿರುದ್ಧದ ಸರಣಿ ಮೂಲಕ ಇಂಟರ್​ನ್ಯಾಷನಲ್ ಕೆರಿಯರ್ ಆರಂಭಿಸುವ ಇರಾದೆಯಲ್ಲಿದ್ದರು. ಆದರೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಯುವ ದಾಂಡಿಗನನ್ನು ಕಣಕ್ಕಿಳಿಸಿರಲಿಲ್ಲ.

ಸದ್ಯಕ್ಕಿಲ್ಲ ಚಾನ್ಸ್​... ವೈಭವ್ ಸೂರ್ಯವಂಶಿ ಕಾಯಲೇಬೇಕು!
Vaibhav Sooryavanshi
Image Credit source: GettyImages

Updated on: Jun 29, 2026 | 2:16 PM

ಟಿ20 ಕ್ರಿಕೆಟ್​ನ ಹೊಸ ಸೆನ್ಸೇಷನ್ ವೈಭವ್ ಸೂರ್ಯವಂಶಿ ಟೀಮ್ ಇಂಡಿಯಾ ಪರ ಕಣಕ್ಕಿಳಿಯುವುದು ಯಾವಾಗ? ಐರ್ಲೆಂಡ್ ವಿರುದ್ಧದ ಸರಣಿ ಮೂಲಕ ಪಾದಾರ್ಪಣೆ ಮಾಡಲಿದ್ದಾರಾ ಎಂಬ ನಿರೀಕ್ಷೆ ಹುಸಿಯಾಗಿದೆ. ಇದೀಗ ವೈಭವ್ ಎಂಟ್ರಿಗೆ ಇಂಗ್ಲೆಂಡ್ ವಿರುದ್ಧದ ಸರಣಿಯವರೆಗೆ ಕಾಯಲೇಬೇಕು. ಅದರೆ ಈ ಸರಣಿಯಲ್ಲೂ ಯುವ ದಾಂಡಿಗನಿಗೆ ಚಾನ್ಸ್ ಸಿಗಲಿದೆ ಎನ್ನುವುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಏಕೆಂದರೆ ವೈಭವ್ ಸೂರ್ಯವಂಶಿ ಅವಕಾಶಕ್ಕಾಗಿ ಕಾಯುವುದು ಅನಿವಾರ್ಯ ಎಂದು ಟೀಮ್ ಇಂಡಿಯಾ ಸಹಾಯಕ ಕೋಚ್ ರಯಾನ್ ಟೆನ್ ಡೊಶ್ಚೇಟ್ ಸ್ಪಷ್ಟಪಡಿಸಿದ್ದಾರೆ.

ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿನ ಹೀನಾಯ ಸೋಲಿನ ಬಳಿಕ ಮಾತನಾಡಿದ ರಯಾನ್ ಟೆನ್ ಡೊಶ್ಚೇಟ್, ವೈಭವ್ ಸೂರ್ಯವಂಶಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ. ಆದರೆ, ನಾವು ಸಂಜು ಸ್ಯಾಮ್ಸನ್ ಅವರನ್ನು ತಂಡದಿಂದ ಹೊರಗಿಡಲು ಸಾಧ್ಯವಿಲ್ಲ. ಹೀಗಾಗಿ ವೈಭವ್ ತನ್ನ ಅವಕಾಶಕ್ಕಾಗಿ ಕಾಯುವುದು ಅನಿವಾರ್ಯ ಎಂದು ತಿಳಿಸಿದ್ದಾರೆ.

ಸ್ಯಾಮ್ಸನ್ ಪರ ಬ್ಯಾಟ್ ಬೀಸಿದ ಕೋಚ್:

ಐರ್ಲೆಂಡ್ ವಿರುದ್ಧದ 2 ಪಂದ್ಯಗಳ ಸರಣಿಯಲ್ಲಿ ಸಂಜು ಸ್ಯಾಮ್ಸನ್ ಸತತ ಎರಡು ಪಂದ್ಯಗಳಲ್ಲೂ ನಿರಾಶದಾಯಕ ಪ್ರದರ್ಶನ ನೀಡಿದ್ದಾರೆ. ಮೊದಲ ಮ್ಯಾಚ್​ನಲ್ಲಿ 5 ರನ್ ಬಾರಿಸಿದ್ದ ಸಂಜು ದ್ವಿತೀಯ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದ್ದಾರೆ.  ಇದಾಗ್ಯೂ ಸಂಜು ಸ್ಯಾಮ್ಸನ್ ಅವರನ್ನು ಕೈಬಿಡಲಾಗುವುದಿಲ್ಲ ಎಂದು ಟೀಮ್ ಇಂಡಿಯಾ ಸಹಾಯಕ ಕೋಚ್ ರಯಾನ್ ಟೆನ್ ಡೊಶ್ಚೇಟ್ ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಭಾರತ ತಂಡ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಸಂಜು ಸ್ಯಾಮ್ಸನ್ ಪ್ರಮುಖ ಪಾತ್ರ ವಹಿಸಿದ್ದರು. ಕೇವಲ ಒಂದೆರಡು ಪಂದ್ಯಗಳ ವೈಫಲ್ಯದ ಆಧಾರದ ಮೇಲೆ ಅವರನ್ನು ಕೈಬಿಡುವುದು ಸರಿಯಲ್ಲ. ನಾವು ಆಟಗಾರರಿಗೆ ದೀರ್ಘಾವಧಿಯವರೆಗೆ ಅವಕಾಶ ನೀಡಲು ಬಯಸುತ್ತೇವೆ. ಅವರಿಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಸೂಕ್ತ ಸಮಯ ಸಿಗಬೇಕು. ಹೀಗಾಗಿ ವೈಭವ್ ಸೂರ್ಯವಂಶಿ ತಮ್ಮ ಅವಕಾಶಕ್ಕಾಗಿ ಕಾಯಲೇಬೇಕಾಗುತ್ತದೆ ರಯಾನ್ ಟೆನ್ ಡೊಶ್ಚೇಟ್ ತಿಳಿಸಿದ್ದಾರೆ.

ಆಟಗಾರ ಇತ್ತೀಚಿನ ಪ್ರದರ್ಶನ ಮ್ಯಾನೇಜ್ಮೆಂಟ್ ನಿರ್ಧಾರ
ಸಂಜು ಸ್ಯಾಮ್ಸನ್ ಐಪಿಎಲ್​ 2026 ರಲ್ಲಿ 477 ರನ್ / ಐರ್ಲೆಂಡ್ ಸರಣಿಯಲ್ಲಿ ಕೇವಲ 5 ರನ್​ ವಿಶ್ವಕಪ್ ಕೊಡುಗೆಯನ್ನು ಪರಿಗಣಿಸಿ ಪೂರ್ಣ ಬೆಂಬಲ.
ವೈಭವ್ ಸೂರ್ಯವಂಶಿ ಐಪಿಎಲ್ 2026 ರಲ್ಲಿ 776 ರನ್ ಗಳಿಸಿ MVP ಪ್ರಶಸ್ತಿ ವಿಜೇತ. ಭವಿಷ್ಯದ ಆಶಾಕಿರಣ, ಆದರೆ ಸದ್ಯಕ್ಕೆ ಬೆಂಚ್ ಕಾಯಬೇಕು.

ಇತಿಹಾಸ ಸೃಷ್ಟಿಯ ಹೊಸ್ತಿಲಲ್ಲಿ ವೈಭವ್:

ಐಪಿಎಲ್‌ನಲ್ಲಿ 230ಕ್ಕೂ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ ಅಬ್ಬರಿಸಿರುವ ವೈಭವ್ ಸೂರ್ಯವಂಶಿ ಮುಂದಿನ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಕಣಕ್ಕಿಳಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಅಂದರೆ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿದರೆ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಪಂದ್ಯವಾಡಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಳ್ಳಲಿದ್ದಾರೆ. ಸದ್ಯ ಈ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ.

ಇದನ್ನೂ ಓದಿ: ಟೀಮ್ ಇಂಡಿಯಾದ ವಿಶ್ವ ದಾಖಲೆಯ ನಾಗಾಲೋಟಕ್ಕೆ ಬ್ರೇಕ್!

1989 ರಲ್ಲಿ ಸಚಿನ್ ತೆಂಡೂಲ್ಕರ್ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವಾಡಿದಾಗ ಅವರ ವಯಸ್ಸು 16 ವರ್ಷ 205 ದಿನಗಳು. ಇದೀಗ 15ನೇ ವಯಸ್ಸಿನಲ್ಲಿ ಇಂಟರ್​ನ್ಯಾಷನಲ್ ಕೆರಿಯರ್ ಆರಂಭಿಸಲು ವೈಭವ್ ಸೂರ್ಯವಂಶಿ ಕಾದು ನಿಂತಿದ್ದಾರೆ. ಅದರಂತೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕಣಕ್ಕಿಳಿಯಲು ವೈಭವ್​ಗೆ ಅವಕಾಶ ಸಿಗಲಿದೆಯಾ ಕಾದು ನೋಡಬೇಕಿದೆ.

 

Follow Us