
ನಿರ್ಣಾಯಕ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರನಿಗೆ ಕ್ರಿಕೆಟ್ ಲೋಕದಲ್ಲಿ ಸಾಕಷ್ಟು ಮನ್ನಣೆ ಸಿಗುತ್ತದೆ. ಆತ ಕ್ರೀಸ್ನಲ್ಲಿದ್ದರೆ ಎದುರಾಳಿ ತಂಡಗಳಿಗೆ ನಡುಕದ ಜೊತೆಗೆ ಸೋಲಿನ ಭಯವೂ ಇರುತ್ತದೆ. ಆ ರೀತಿಯ ಭಯ ಹುಟ್ಟಿಸಿರುವ ಆಟಗಾರರ ಪಟ್ಟಿಗೆ ಇತ್ತೀಚೆಗೆ ಸೇರ್ಪಡೆಗೊಂಡಿರುವ ಹೆಸರು ವೈಭವ್ ಸೂರ್ಯವಂಶಿ (Vaibhav Sooryavanshi). ತನ್ನ ಹೊಡಿಬಡಿ ಆಟದ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಸಂಚಲನ ಮೂಡಿಸಿರುವ ವೈಭವ್ ನಿರ್ಣಾಯಕ ಪಂದ್ಯಗಳಲ್ಲಿ ಮತ್ತು ತಂಡ ಸಂಕಷ್ಟದಲ್ಲಿದ್ದ ಸಮಯದಲ್ಲಿ ಏಕಾಂಗಿ ಹೋರಾಟ ನೀಡುವುದರಲ್ಲಿ ನಿಸ್ಸೀಮ. ಇದನ್ನು ಸುಖಾಸುಮ್ಮನೆ ಹೇಳುತ್ತಿಲ್ಲ. ಬದಲಿಗೆ ಅಂಕಿಅಂಶಗಳೇ ಇದನ್ನು ಸಾಭೀತುಪಡಿಸಿವೆ.
ಈ ವರ್ಷ ಭಾರತದ ಅಂಡರ್-19 ತಂಡ ಏಕದಿನ ವಿಶ್ವಕಪ್ ಗೆದ್ದಿತು. ಈ ಗೆಲುವಿನಲ್ಲಿ ವೈಭವ್ ಸೂರ್ಯವಂಶಿ ನಿರ್ಣಾಯಕ ಪಾತ್ರ ವಹಿಸಿದರು. ಫೆಬ್ರವರಿ 4, 2026 ರಂದು ನಡೆದಿದ್ದ ಅಫ್ಘಾನಿಸ್ತಾನ ವಿರುದ್ಧದ ಅಂಡರ್-19 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ವೈಭವ್, 33 ಎಸೆತಗಳಲ್ಲಿ 200 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ 68 ರನ್ ಗಳಿಸಿದರು. ವೈಭವ್ ಸೂರ್ಯವಂಶಿ ಅವರ ಈ ಇನ್ನಿಂಗ್ಸ್ ಭಾರತದ ಅಂಡರ್-19 ತಂಡವನ್ನು ಫೈನಲ್ ತಲುಪಲು ಸಹಾಯ ಮಾಡಿತು.
ಸೆಮಿಫೈನಲ್ ಬಳಿಕ ಅಂಡರ್-19 ವಿಶ್ವಕಪ್ ಫೈನಲ್ ಪಂದ್ಯದಲ್ಲಿಯೂ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸ್ಫೋಟಕ ಶತಕ ಸಿಡಿಸಿದ ವೈಭವ್ ಸೂರ್ಯವಂಶಿ 80 ಎಸೆತಗಳಲ್ಲಿ 200 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ ನಲ್ಲಿ 175 ರನ್ ಗಳಿಸಿದರು. ವೈಭವ್ ಅವರ ಈ ಆಟದಿಂದಾಗಿ ಭಾರತ ಈ ಪಂದ್ಯವನ್ನು 100 ರನ್ ಗಳಿಂದ ಗೆದ್ದು ಟ್ರೋಫಿಯನ್ನು ಎತ್ತಿಹಿಡಿದಿತ್ತು.
2026 ರ ಐಪಿಎಲ್ನ ಎಲಿಮಿನೇಟರ್ ಮತ್ತು ಕ್ವಾಲಿಫೈಯರ್ ಪಂದ್ಯಗಳಲ್ಲಿಯೂ ವೈಭವ್ ಸೂರ್ಯವಂಶಿ ನಿರ್ಣಾಯಕ ಇನ್ನಿಂಗ್ಸ್ ಆಡಿದರು. ಎಲಿಮಿನೇಟರ್ ಪಂದ್ಯದಲ್ಲಿ ವೈಭವ್, ಕೇವಲ 29 ಎಸೆತಗಳಲ್ಲಿ 67 ರನ್ ಗಳಿಸಿದರು. ಈ ಇನ್ನಿಂಗ್ಸ್ ರಾಜಸ್ಥಾನ್ ರಾಯಲ್ಸ್ ತಂಡವು ಕ್ವಾಲಿಫೈಯರ್ 2ಗೆ ಅರ್ಹತೆ ಪಡೆಯಲು ಸಹಾಯ ಮಾಡಿತು. ಹಾಗೆಯೇ ಕ್ವಾಲಿಫೈಯರ್ ಪಂದ್ಯದಲ್ಲಿಯೂ ವೈಭವ್ 47 ಎಸೆತಗಳಲ್ಲಿ 96 ರನ್ಗಳ ಇನ್ನಿಂಗ್ಸ್ ಆಡಿದರು. ಆದರೆ ಇತರರ ವೈಫಲ್ಯದಿಂದಾಗಿ ಈ ಪಂದ್ಯದಲ್ಲಿ ರಾಜಸ್ಥಾನ್ ಸೋಲು ಕಂಡಿತು.
ಸಚಿನ್ ಕ್ರಿಕೆಟ್ ದೇವರಾದರೆ, ವೈಭವ್ ದೇವರ ಮಗ ಎಂದ ಟೀಂ ಇಂಡಿಯಾದ ಮಾಜಿ ನಾಯಕ
ಇದೀಗ ತ್ರಿಕೋನ ಸರಣಿಯ ಫೈನಲ್ನಲ್ಲೂ ವೈಭವ್ ಬ್ಯಾಟ್ ಅಬ್ಬರಿಸಿದೆ. ಈ ಸರಣಿಯ ಮೊದಲ ನಾಲ್ಕು ಪಂದ್ಯಗಳಲ್ಲಿ ಒಂದೇ ಒಂದು ಅರ್ಧಶತಕ ಗಳಿಸದ ವೈಭವ್ ಸೂರ್ಯವಂಶಿ, ಶ್ರೀಲಂಕಾ ಎ ವಿರುದ್ಧದ ಸರಣಿ ಫೈನಲ್‌ನಲ್ಲಿ ಕೇವಲ 29 ಎಸೆತಗಳಲ್ಲಿ 94 ರನ್ ಗಳಿಸುವ ಮೂಲಕ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದರು. ಲಿಸ್ಟ್ ಎ ಕ್ರಿಕೆಟ್‌ನಲ್ಲಿ 11 ಎಸೆತಗಳಲ್ಲಿ ಅತಿ ವೇಗದ ಅರ್ಧಶತಕದ ದಾಖಲೆಯನ್ನು ಸಹ ಅವರು ನಿರ್ಮಿಸಿದರು.
Published On - 5:35 pm, Sun, 21 June 26