IND vs ENG: ಇಂಗ್ಲೆಂಡ್ ನೆಲದಲ್ಲಿ ಬೇಡದ ದಾಖಲೆ ಬರೆದ ವೈಭವ್ ಸೂರ್ಯವಂಶಿ

Vaibhav Suryavanshi: ಯು-19 ಏಕದಿನ ಸರಣಿಯಲ್ಲಿ 29 ಸಿಕ್ಸರ್‌ಗಳನ್ನು ಬಾರಿಸಿ ದಾಖಲೆ ನಿರ್ಮಿಸಿದ ವೈಭವ್ ಸೂರ್ಯವಂಶಿ, ಯು-19 ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಗೋಲ್ಡನ್ ಡಕ್‌ಗೆ ಬಲಿಯಾದರು. ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡ ವೈಭವ್, ಯು-19 ಟೆಸ್ಟ್ ಪಂದ್ಯಗಳಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದಾರೆ.

IND vs ENG: ಇಂಗ್ಲೆಂಡ್ ನೆಲದಲ್ಲಿ ಬೇಡದ ದಾಖಲೆ ಬರೆದ ವೈಭವ್ ಸೂರ್ಯವಂಶಿ
Vaibhav Suryavanshi

Updated on: Jul 23, 2025 | 10:09 PM

ಭಾರತ ಕ್ರಿಕೆಟ್​ನಲ್ಲಿ ಸಂಚಲನ ಮೂಡಿಸಿರುವ 14 ವರ್ಷದ ವೈಭವ್ ಸೂರ್ಯವಂಶಿ (Vaibhav Suryavanshi) ಸಿಕ್ಸರ್‌ಗಳ ಮೇಲೆ ಸಿಕ್ಸರ್‌ಗಳನ್ನು ಬಾರಿಸುವುದಕ್ಕೆ ಹೆಸರುವಾಸಿ. ಪ್ರಸ್ತುತ ಇಂಗ್ಲೆಂಡ್ ಪ್ರವಾಸದಲ್ಲೂ ವೈಭವ್ ಅವರ ಬ್ಯಾಟ್ ಸಖತ್ ಸದ್ದು ಮಾಡಿತ್ತು. ಅಂಡರ್ 19 ಯೂತ್ ಏಕದಿನ ಸರಣಿಯಲ್ಲಿ 29 ಸಿಕ್ಸರ್‌ಗಳನ್ನು ಬಾರಿಸಿ ದಾಖಲೆ ಬರೆದಿದ್ದ ವೈಭವ್, ಯೂತ್ ಟೆಸ್ಟ್ ಸರಣಿಯಲ್ಲಿ (Youth Test Series) ಮಾತ್ರ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಎರಡನೇ ಯೂತ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ವೈಭವ್ ಸೂರ್ಯವಂಶಿ ಗೋಲ್ಡನ್​ ಡಕ್​ಗೆ ಬಲಿಯಾದರು. ಅಂದರೆ ಇನ್ನಿಂಗ್ಸ್​ನ ಮೊದಲ ಎಸೆತವನ್ನು ಎದುರಿಸಿದ ವೈಭವ್ ಅದೇ ಎಸೆತದಲ್ಲಿ ತಮ್ಮ ಖಾತೆಯನ್ನು ತೆರೆಯದೆ ವಿಕೆಟ್ ಒಪ್ಪಿಸಿದರು. ಈ ಮೂಲಕ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಬೇಡದ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡರು.

ಶೂನ್ಯಕ್ಕೆ ಔಟಾದ ವೈಭವ್

ಎರಡನೇ ಯೂತ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡವು ಟೀಂ ಇಂಡಿಯಾಗೆ 355 ರನ್‌ಗಳ ಗುರಿಯನ್ನು ನೀಡಿದೆ. ಈ ಗುರಿ ಬೆನ್ನಟ್ಟಿದ ಭಾರತದ ಪರ ವೈಭವ್ ಸೂರ್ಯವಂಶಿ ಮತ್ತು ಆಯುಷ್ ಮ್ಹಾತ್ರೆ ಆರಂಭಿಕರಾಗಿ ಕಣಕ್ಕಿಳಿದರು. ಇಬ್ಬರೂ ಉತ್ತಮ ಆರಂಭ ನೀಡುತ್ತಾರೆ ಎಂದು ತಂಡವು ಆಶಿಸಿತ್ತು ಆದರೆ ಈ ಭರವಸೆ ಮೊದಲ ಎಸೆತದಲ್ಲೇ ಭಗ್ನಗೊಂಡಿತು. ವೈಭವ್ ಸೂರ್ಯವಂಶಿ ಅವರನ್ನು ಮೊದಲ ಎಸೆತದಲ್ಲೇ ಅಲೆಕ್ಸ್ ಗ್ರೀನ್ ಪೆವಿಲಿಯನ್​ಗೆ ಕಳುಹಿಸುವಲ್ಲಿ ಯಶಸ್ವಿಯಾದರು. ವೈಭವ್ ಸೂರ್ಯವಂಶಿ ಮೊದಲ ಎಸೆತವನ್ನೇ ಸಿಕ್ಸರ್​ಗಟ್ಟಲು ಪ್ರಯತ್ನಿಸಿದರು, ಆದರೆ ಚೆಂಡು ಅವರ ಬ್ಯಾಟ್‌ನ ಅಂಚಿಗೆ ತಗುಲಿ ವಿಕೆಟ್‌ಗೆ ಬಡಿಯಿತು. ಇದರೊಂದಿಗೆ ವೈಭವ್ ಯೂತ್ ಟೆಸ್ಟ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದರು. ಅಷ್ಟೇ ಅಲ್ಲ, ಈ ಪ್ರವಾಸದಲ್ಲಿ ಸೂರ್ಯವಂಶಿ ಮೊದಲ ಬಾರಿಗೆ ಖಾತೆ ತೆರೆಯದೆ ವಿಕೆಟ್ ಕಳೆದುಕೊಂಡರು.

ಯೂತ್ ಟೆಸ್ಟ್ ಸರಣಿಯಲ್ಲಿ ವೈಭವ್ ವಿಫಲ

ಯೂತ್ ಟೆಸ್ಟ್ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಬ್ಯಾಟ್ ಮೌನಕ್ಕೆ ಶರಣಾಯಿತು. ಆಡಿದ 4 ಇನ್ನಿಂಗ್ಸ್‌ಗಳಲ್ಲಿ ವೈಭವ್ ಕೇವಲ 90 ರನ್‌ ಗಳಿಸಿದರು. ವೈಭವ್ ಅವರ ಈ ಅಂಕಿಅಂಶಗಳು ದೀರ್ಘ ಸ್ವರೂಪದಲ್ಲಿ ರನ್ ಗಳಿಸಲು ಹೊಸ ತಂತ್ರವನ್ನು ರೂಪಿಸಬೇಕಾಗುತ್ತದೆ ಎಂಬುದನ್ನು ಸೂಚಿಸುತ್ತದೆ.

‘ಪೃಥ್ವಿ ಶಾ ರೀತಿ ಹಾಳಾಗಬೇಡಿ’; ವೈಭವ್ ಸೂರ್ಯವಂಶಿಗೆ ಎಚ್ಚರಿಕೆ

ಯೂತ್ ಏಕದಿನ ಸರಣಿಯಲ್ಲಿ ಅಬ್ಬರ

ವೈಭವ್ ಸೂರ್ಯವಂಶಿ ಯೂತ್ ಟೆಸ್ಟ್‌ನಲ್ಲಿ ವಿಫಲರಾದರೂ ಏಕದಿನ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ಆಡಿದ 5 ಪಂದ್ಯಗಳಲ್ಲಿ ಅವರು 71 ಸರಾಸರಿಯಲ್ಲಿ 355 ರನ್ ಗಳಿಸಿದರು. ಇಡೀ ಸರಣಿಯಲ್ಲಿ ಅವರು ಒಟ್ಟು 29 ಸಿಕ್ಸರ್‌ಗಳನ್ನು ಬಾರಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ