ಈ ಭಾರತೀಯ ಬ್ಯಾಟರ್ ನನ್ನ ವಿಶ್ವ ದಾಖಲೆ ಮುರೀತಾನೆ: ಬಟ್ಲರ್ ಭವಿಷ್ಯ

Jos Buttler World Record: ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟರ್ ಜೋಸ್ ಬಟ್ಲರ್ ಅಗ್ರಸ್ಥಾನಕ್ಕೇರಿದ್ದಾರೆ. ಈ ಮೂಲಕ ವೆಸ್ಟ್ ಇಂಡೀಸ್‌ನ ದಿಗ್ಗಜ ಕೀರನ್ ಪೊಲಾರ್ಡ್​ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

ಈ ಭಾರತೀಯ ಬ್ಯಾಟರ್ ನನ್ನ ವಿಶ್ವ ದಾಖಲೆ ಮುರೀತಾನೆ: ಬಟ್ಲರ್ ಭವಿಷ್ಯ
Jos Buttler
Image Credit source: GettyImages

Updated on: Aug 06, 2026 | 1:01 PM

ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಯಾರು? ಈ ಪ್ರಶ್ನೆಗೆ ಸದ್ಯ ಉತ್ತರ ಜೋಸ್ ಬಟ್ಲರ್. ಇಂಗ್ಲೆಂಡ್​ನಲ್ಲಿ ನಡೆದಯುತ್ತಿರುವ ದಿ ಹಂಡ್ರೆಡ್ ಲೀಗ್ ಟೂರ್ನಿಯ 21ನೇ ಪಂದ್ಯದಲ್ಲಿ 20 ಎಸೆತಗಳಲ್ಲಿ 51 ರನ್ ಸಿಡಿಸುವ ಮೂಲಕ ಬಟ್ಲರ್ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಸಹ ಕೀರನ್ ಪೊಲಾರ್ಡ್ ಹೆಸರಿನಲ್ಲಿದ್ದ  14,803 ರನ್‌ಗಳ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

  • ಟಿ20 ಕ್ರಿಕೆಟ್​ನಲ್ಲಿ ಈವರೆಗೆ  492 ಇನಿಂಗ್ಸ್ ಆಡಿರುವ ಜೋಸ್ ಬಟ್ಲರ್ 10074 ಎಸೆತಗಳಲ್ಲಿ 14833 ರನ್ ಕಲೆಹಾಕಿದ್ದಾರೆ.
  • ಟಿ20 ಕ್ರಿಕೆಟ್​ನಲ್ಲಿ ಈವರೆಗೆ 663 ಇನಿಂಗ್ಸ್ ಆಡಿರುವ ಕೀರನ್ ಪೊಲಾರ್ಡ್ 9802 ಎಸೆತಗಳಲ್ಲಿ 14803 ರನ್ ರನ್ ಗಳಿಸಿದ್ದಾರೆ.

ಸದ್ಯ ಟಿ20 ರನ್ ಸರದಾರರ ಪಟ್ಟಿಯಲ್ಲಿ ಜೋಸ್ ಬಟ್ಲರ್ ಅಗ್ರಸ್ಥಾನದಲ್ಲಿದ್ದು, ಈ ಮೂಲಕ ಹೊಸ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ದಾಖಲೆ ಮುರಿಯುವವರು ಯಾರು?

ಈ ಐತಿಹಾಸಿಕ ದಾಖಲೆ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡಿದ ಜೋಸ್ ಬಟ್ಲರ್​ಗೆ ಭವಿಷ್ಯದಲ್ಲಿ ನಿಮ್ಮ ದಾಖಲೆ ಯಾರು ಮುರಿಯಬಹುದು? ಎಂಬ ಪ್ರಶ್ನೆ ಮುಂದಿಡಲಾಗಿತ್ತು. ಈ ಪ್ರಶ್ನೆಗೆ ಬಟ್ಲರ್ ಕಡೆಯಿಂದ ಮೂಡಿಬಂದ ಉತ್ತರ ವೈಭವ್ ಸೂರ್ಯವಂಶಿ.

“ನನ್ನ ಈ ದಾಖಲೆಯನ್ನು ಭವಿಷ್ಯದಲ್ಲಿ ಯಾರಾದರೂ ಮುರಿಯುತ್ತಾರೆ ಎಂದರೆ ಅದು ಬಹುಶಃ ಭಾರತದ ವೈಭವ್ ಸೂರ್ಯವಂಶಿ” ಎಂದು ಸ್ಕೈ ಸ್ಪೋರ್ಟ್ಸ್ ಸಂದರ್ಶನದಲ್ಲಿ ಬಟ್ಲರ್ ಹೇಳಿದ್ದಾರೆ. ಈ ಮೂಲಕ ವೈಭವ್ ಕೂಡ ಟಿ20 ಕ್ರಿಕೆಟ್​ನಲ್ಲಿ ರನ್ ರಾಶಿ ಪೇರಿಸಲಿದ್ದಾರೆ ಎಂದು ಬಟ್ಲರ್ ಭವಿಷ್ಯ ನುಡಿದಿದ್ದಾರೆ.

ಬಟ್ಲರ್ ಮನಗೆದ್ದ ವೈಭವ್!

ಕೇವಲ 15 ವರ್ಷದ ಬಿಹಾರದ ಎಡಗೈ ಓಪನರ್ ವೈಭವ್ ಸೂರ್ಯವಂಶಿ ಪ್ರಸ್ತುತ ಕ್ರಿಕೆಟ್ ಜಗತ್ತಿನ ಅತ್ಯಂತ ಚರ್ಚಿತ ಆಟಗಾರ. ಬಟ್ಲರ್ ತಮ್ಮ ಮಾಜಿ ಐಪಿಎಲ್ ಸಹ ಆಟಗಾರನ ಬಗ್ಗೆ ಇಷ್ಟೊಂದು ದೊಡ್ಡ ಭವಿಷ್ಯ ನುಡಿಯಲು ಬಲವಾದ ಕಾರಣಗಳಿವೆ…

  • ಅತಿ ಕಿರಿಯ ವಯಸ್ಸಿನಲ್ಲೇ ಅಬ್ಬರ: ವೈಭವ್ ಸೂರ್ಯವಂಶಿ ಕೇವಲ 23 ಐಪಿಎಲ್​ ಇನ್ನಿಂಗ್ಸ್‌ಗಳಲ್ಲಿ 2 ಶತಕ ಹಾಗೂ 6 ಅರ್ಧಶತಕಗಳೊಂದಿಗೆ 1,028 ರನ್ ಚಚ್ಚಿದ್ದಾರೆ.
  • ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರ್ಭಟ: ಇತ್ತೀಚೆಗೆ ಝಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ಭಾರತದ ಪರ ಕೇವಲ 3 ಪಂದ್ಯಗಳಲ್ಲಿ 151 ರನ್ ಗಳಿಸಿ ‘ಪ್ಲೇಯರ್ ಆಫ್ ದಿ ಸೀರಿಸ್’ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಇನ್ನು ಮೊದಲ 40 ಇನ್ನಿಂಗ್ಸ್‌ಗಳ ಅಂಕಿ-ಅಂಶಗಳ ಹೋಲಿಕೆಯಲ್ಲೂ ವೈಭವ್ ಸೂರ್ಯವಂಶಿ ಜೋಸ್ ಬಟ್ಲರ್ ಅವರಿಗಿಂತ ಮುಂದಿದ್ದಾರೆ. ಇಬ್ಬರ ಮೊದಲ 40 ಇನಿಂಗ್ಸ್​ಗಳ ಹೋಲಿಕೆ ಈ ಕೆಳಗಿನಂತಿದೆ…

ಮೊದಲ 40 ಇನ್ನಿಂಗ್ಸ್ ಒಟ್ಟು ರನ್ ಸ್ಟ್ರೈಕ್ ರೇಟ್ ಶತಕಗಳು
ವೈಭವ್ ಸೂರ್ಯವಂಶಿ 1,670 216.32 4
ಜೋಸ್ ಬಟ್ಲರ್ 1,590 152.44 0
ಇದನ್ನೂ ಓದಿ: ಏಕದಿನ ವಿಶ್ವಕಪ್​ಗೆ ಬಲಿಷ್ಠ ಭಾರತ ತಂಡ ಹೆಸರಿಸಿದ ಸುನಿಲ್ ಗವಾಸ್ಕರ್

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಂಡಿಗರು:

ಸ್ಥಾನ ಆಟಗಾರ ದೇಶ ಒಟ್ಟು ಟಿ20 ರನ್‌ಗಳು
1 ಜೋಸ್ ಬಟ್ಲರ್ ಇಂಗ್ಲೆಂಡ್ 14,833
2 ಕೀರನ್ ಪೊಲಾರ್ಡ್ ವೆಸ್ಟ್ ಇಂಡೀಸ್ 14,803
3 ಕ್ರಿಸ್ ಗೇಲ್ ವೆಸ್ಟ್ ಇಂಡೀಸ್ 14,562

“ಇಷ್ಟು ದೊಡ್ಡ ದಾಖಲೆ ನಿರ್ಮಿಸಿರುವುದು ಹೆಮ್ಮೆಯ ವಿಷಯ. ಆದರೆ ಯಾರಾದರೂ ಒಬ್ಬರು ಇದನ್ನು ದಾಟಿ ಹೋಗಲೇಬೇಕು. ವೈಭವ್ ಸೂರ್ಯವಂಶಿ ಬೌಲರ್‌ಗಳನ್ನು ಧ್ವಂಸ ಮಾಡುವ ಸಂಪೂರ್ಣ ‘ಬಾಕ್ಸ್ ಆಫೀಸ್’ ಆಟಗಾರ” ಎಂದು ಬಟ್ಲರ್ ಹೊಗಳಿದ್ದಾರೆ. ಹೀಗಾಗಿ ಭವಿಷ್ಯದಲ್ಲಿ ವೈಭವ್ ಸೂರ್ಯವಂಶಿ ಟಿ20 ಕ್ರಿಕೆಟ್​ನಲ್ಲಿ 15 ಸಾವಿರ ರನ್​ಗಳನ್ನು ಪೇರಿಸಿದರೂ ಅಚ್ಚರಿಪಡಬೇಕಿಲ್ಲ.
Loading...
Unable to load recommendations.
Follow Us