ಟೀಮ್ ಇಂಡಿಯಾಗೆ ಮಿಸ್ಟರಿ ಸ್ಪಿನ್ನರ್ ಎಂಟ್ರಿ: ತಂಡದಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ
India vs England: ಭಾರತ ಮತ್ತು ಇಂಗ್ಲೆಂಡ್ ನಡುವಣ ಏಕದಿನ ಸರಣಿಯು ಫೆಬ್ರವರಿ 6 ರಿಂದ ಶುರುವಾಗಲಿದೆ. ಈ ಸರಣಿಗಾಗಿ ಟೀಮ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಅದರಂತೆ ಈ ಮೊದಲು ತಂಡಕ್ಕೆ ಆಯ್ಕೆಯಾಗದಿದ್ದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿಯನ್ನು ಇದೀಗ ಏಕದಿನ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ ಭಾರತ ತಂಡಕ್ಕೆ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಆಯ್ಕೆ ಮಾಡಲಾಗಿದೆ. ಈ ಹಿಂದೆ ಹೆಸರಿಸಲಾದ ಭಾರತ ಏಕದಿನ ತಂಡದಲ್ಲಿ ವರುಣ್ಗೆ ಸ್ಥಾನ ನೀಡಲಾಗಿರಲಿಲ್ಲ. ಇದೀಗ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ಬೆನ್ನಲ್ಲೇ ವರುಣ್ ಚಕ್ರವರ್ತಿ ಅವರಿಗೆ ಏಕದಿನ ತಂಡದಲ್ಲೂ ಸ್ಥಾನ ನೀಡಲಾಗಿದೆ.
ವರುಣ್ ಚಕ್ರವರ್ತಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ್ದರು. ಅಲ್ಲದೆ 14 ವಿಕೆಟ್ ಕಬಳಿಸಿ ಮಿಂಚಿದ್ದರು. ಈ ಭರ್ಜರಿ ಪ್ರದರ್ಶನದ ಬೆನ್ನಲ್ಲೇ ವರುಣ್ ಅವರನ್ನು ತಂಡಕ್ಕೆ ಕರೆಸಿಕೊಂಡಿರುವುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಚಾನ್ಸ್?
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡಲಾದ ತಂಡದಲ್ಲಿ ಪರಿಪೂರ್ಣ ಸ್ಪಿನ್ನರ್ ಆಗಿ ಸ್ಥಾನ ಪಡೆದಿರುವುದು ಕುಲ್ದೀಪ್ ಯಾದವ್. ಇದೀಗ ವರುಣ್ ಚಕ್ರವರ್ತಿ ಅವರನ್ನು ಕರೆಸಿಕೊಂಡಿರುವ ಕಾರಣ ತಂಡದಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ.
ಒಂದು ವೇಳೆ ವರುಣ್ ಚಕ್ರವರ್ತಿ ಅವರನ್ನು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕಣಕ್ಕಿಳಿಸಿದರೆ, ಅವರು ಚಾಂಪಿಯನ್ಸ್ ಟ್ರೋಫಿಯಲ್ಲೂ ಕಾಣಿಸಿಕೊಳ್ಳುವುದು ಖಚಿತ.
ಏಕೆಂದರೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕಣಕ್ಕಿಳಿಯುವ ಆಟಗಾರರೇ ಚಾಂಪಿಯನ್ಸ್ ಟ್ರೋಫಿಯಲ್ಲೂ ಆಡಲಿದ್ದಾರೆ. ಹೀಗಾಗಿ ವರುಣ್ ಆಂಗ್ಲರ ವಿರುದ್ಧ ಏಕದಿನ ಸರಣಿಯಲ್ಲಿ ಮಿಂಚಿದರೆ, ಚಾಂಪಿಯನ್ಸ್ ಟ್ರೋಫಿಗೂ ಆಯ್ಕೆಯಾಬಹುದು.
ಒಟ್ಟಿನಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಆರಂಭಕ್ಕೂ ಮುನ್ನ ವರುಣ್ ಚಕ್ರವರ್ತಿ ಅವರನ್ನು ನಾಗ್ಪುರಕ್ಕೆ ಕರೆಸಿಕೊಂಡಿರುವುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ. ಈ ಕುತೂಹಲದೊಂದಿಗೆ ಅವರಿಗೆ ಚಾಂಪಿಯನ್ಸ್ ಟ್ರೋಫಿಯಲ್ಲೂ ಸ್ಥಾನ ಸಿಗಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.
ಭಾರತ ಮತ್ತು ಇಂಗ್ಲೆಂಡ್ ಏಕದಿನ ಸರಣಿ ವೇಳಾಪಟ್ಟಿ:
- ಫೆಬ್ರವರಿ 06, ಗುರುವಾರ ಭಾರತ vs ಇಂಗ್ಲೆಂಡ್, ಮೊದಲ ಏಕದಿನ ಪಂದ್ಯ (ನಾಗ್ಪುರ)- 01:30 PM IST
- ಫೆಬ್ರವರಿ 09, ಭಾನುವಾರ ಭಾರತ vs ಇಂಗ್ಲೆಂಡ್, ಎರಡನೇ ಏಕದಿನ ಪಂದ್ಯ ( ಕಟಕ್)- 01:30 PM IST
- ಫೆಬ್ರವರಿ 12, ಬುಧವಾರ ಭಾರತ vs ಇಂಗ್ಲೆಂಡ್, ಮೂರನೇ ಏಕದಿನ ಪಂದ್ಯ (ಅಹಮದಾಬಾದ್)- 01:30 PM IST
ಇದನ್ನೂ ಓದಿ: ಆ್ಯಂಡ್ರೆ ರಸೆಲ್ ಆರ್ಭಟಕ್ಕೆ ಮ್ಯಾಕ್ಸ್ವೆಲ್ ವಿಶ್ವ ದಾಖಲೆ ಉಡೀಸ್
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಜಸ್ಪ್ರೀತ್ ಬುಮ್ರಾ (3ನೇ ಪಂದ್ಯಕ್ಕೆ).