ಕ್ರಿಕೆಟ್ ಅಂಗಳದ ಸೆನ್ಸೇಷನ್ ವಿರಾಟ್ ಕೊಹ್ಲಿ (Virat Kohli) ನಿಂತರೂ..ಕೂತರೂ ಟ್ರೆಂಡ್ ಸೃಷ್ಟಿಯಾಗುತ್ತೆ. ಈ ಟ್ರೆಂಡಿಂಗ್ಗಳಿಗೆ ಕಿಚ್ಚು ಹಚ್ಚುವಂತಹ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಈ ಬಾರಿ ವಿರಾಟ್ ಕೊಹ್ಲಿ ವೈರಲ್ ಆಗಲು ಮುಖ್ಯ ಕಾರಣ ಸುಯ್ಯಂತ ಎಂಟ್ರಿ ಕೊಟ್ಟಿರುವುದು. ಅಫ್ಘಾನಿಸ್ತಾನ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ನಲ್ಲಿ ವಿಫಲರಾಗಿದ್ದರು. ಆದರೆ ಫೀಲ್ಡಿಂಗ್ನಲ್ಲಿ ಅತ್ಯದ್ಭುತ ಪ್ರದರ್ಶನ ನೀಡುವ ಮೂಲಕ ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಅದರಲ್ಲೂ ಅಫ್ಘಾನಿಸ್ತಾನ್ ಇನಿಂಗ್ಸ್ನ 17ನೇ ಓವರ್ನಲ್ಲಿ ಬೌಂಡರಿ ಲೈನ್ನಲ್ಲಿ ಕಿಂಗ್ ಕೊಹ್ಲಿ ಸಿಕ್ಸ್ವೊಂದನ್ನು ತಡೆದು 5 ರನ್ಗಳನ್ನು ಉಳಿಸಿದ್ದರು. ಈ ಅಮೂಲ್ಯ ಐದು ರನ್ಗಳ ನೆರವಿನಿಂದಾಗಿ ಈ ಪಂದ್ಯವು ಟೈನಲ್ಲಿ ಅಂತ್ಯ ಕಂಡಿತ್ತು ಎಂದರೆ ತಪ್ಪಾಗಲಾರದು.
ಇದಾದ ಬಳಿಕ ನಡೆದ ಮೊದಲ ಸೂಪರ್ನಲ್ಲಿ ಅಫ್ಘಾನಿಸ್ತಾನ್ ನೀಡಿದ 16 ರನ್ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ಟೀಮ್ ಇಂಡಿಯಾ ಕಲೆಹಾಕಿದ್ದು 16 ರನ್ಗಳು. ಈ ಟೈನೊಂದಿಗೆ ಪಂದ್ಯವು 2ನೇ ಸೂಪರ್ ಓವರ್ನತ್ತ ಸಾಗಿತು. ದ್ವಿತೀಯ ಸೂಪರ್ ಓವರ್ನಲ್ಲಿ ಭಾರತ ತಂಡವು 11 ರನ್ ಕಲೆಹಾಕಿದರೆ, ಅಫ್ಘಾನಿಸ್ತಾನ್ 1 ರನ್ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು 10 ರನ್ಗಳಿಂದ ಸೋಲೊಪ್ಪಿಕೊಂಡಿತು.
ಈ ಗೆಲುವಿನ ಬಳಿಕ ನಡೆದ ಫೋಟೋಶೂಟ್ಗೆ ಎಲ್ಲಾ ಆಟಗಾರರು ಪೋಸ್ ನೀಡಲು ಸಜ್ಜಾಗಿ ನಿಂತಿದ್ದರೆ ಅತ್ತ ವಿರಾಟ್ ಕೊಹ್ಲಿ ಆಗಮಿಸಿರಲಿಲ್ಲ. ಮತ್ತೊಂದೆಡೆ ರೋಹಿತ್ ಶರ್ಮಾ ಟ್ರೋಫಿಯನ್ನು ಪಡೆದು ವಿಕ್ಟರಿ ಪೋಸ್ ನೀಡಲು ಬರುತ್ತಿದ್ದರು.
ಈ ವೇಳೆ ಅತ್ತ ಕಡೆಯಿಂದ ಓಡಿ ಬಂದ ವಿರಾಟ್ ಕೊಹ್ಲಿ ಸುಯ್ಯಂತ ಜಾರಿ ಟೀಮ್ ಇಂಡಿಯಾ ಬಳಗವನ್ನು ಸೇರಿಕೊಂಡರು. ಇದೀಗ ಕಿಂಗ್ ಕೊಹ್ಲಿ ಸುಯ್ಯಂತ ಎಂಟ್ರಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾಗಿದ್ದರು. ಇದರೊಂದಿಗೆ ಭಾರತದ ಪರ ಅತ್ಯಧಿಕ ಬಾರಿ ಶೂನ್ಯಕ್ಕೆ ಔಟಾದ ಅನಗತ್ಯ ದಾಖಲೆಯೊಂದು ಕೊಹ್ಲಿ ಹೆಸರಿಗೆ ಸೇರ್ಪಡೆಯಾಗಿದೆ. ಇದಕ್ಕೂ ಮುನ್ನ ಈ ಹೀನಾಯ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು.
ಟೀಮ್ ಇಂಡಿಯಾ ಪರ ಒಟ್ಟು 664 ಪಂದ್ಯಗಳನ್ನಾಡಿರುವ ಸಚಿನ್ ತೆಂಡೂಲ್ಕರ್ 782 ಇನಿಂಗ್ಸ್ ಆಡಿದ್ದಾರೆ. ಈ ವೇಳೆ 34 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಈ ಮೂಲಕ ಭಾರತದ ಪರ ಅತೀ ಹೆಚ್ಚು ಬಾರಿ ಡಕ್ ಔಟ್ ಆದ ಬ್ಯಾಟರ್ ಎಂಬ ಕಳಪೆ ದಾಖಲೆಯೊಂದನ್ನು ಸಚಿನ್ ನಿರ್ಮಿಸಿದ್ದರು.
ಇದನ್ನೂ ಓದಿ: Rohit Sharma: 5 ಭರ್ಜರಿ ರೆಕಾರ್ಡ್ಸ್: ಹಿಟ್ಮ್ಯಾನ್ ಅಬ್ಬರಕ್ಕೆ ಹಳೆಯ ದಾಖಲೆಗಳು ಧೂಳೀಪಟ
ಇದೀಗ ಟೀಮ್ ಇಂಡಿಯಾ ಪರ 580 ಇನಿಂಗ್ಸ್ಗಳನ್ನಾಡಿರುವ ವಿರಾಟ್ ಕೊಹ್ಲಿ ಒಟ್ಟು 35 ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಈ ಮೂಲಕ ಭಾರತದ ಪರ ಅತ್ಯಧಿಕ ಬಾರಿ ಸೊನ್ನೆ ಸುತ್ತಿದ ಬ್ಯಾಟರ್ ಎಂಬ ಅನಗತ್ಯ ದಾಖಲೆಯನ್ನು ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ.
Published On - 1:09 pm, Thu, 18 January 24