Breaking: ಕೊನೆಯಲ್ಲಿ ಎಡವಿದ ರಾಜಸ್ಥಾನ; ಮೊದಲ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಎತ್ತಿಹಿಡಿದ ಹರಿಯಾಣ..!

|

Updated on: Dec 16, 2023 | 10:12 PM

Vijay Hazare Trophy 2023: ಡಿಸೆಂಬರ್ 16 ರ ಶನಿವಾರದಂದು ರಾಜ್​ಕೋಟ್​ನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್‌ ಹಣಾಹಣಿಯಲ್ಲಿ ರಾಜಸ್ಥಾನ ತಂಡವನ್ನು ಮಣಿಸಿದ ಹರಿಯಾಣ ತಂಡ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ.

Breaking: ಕೊನೆಯಲ್ಲಿ ಎಡವಿದ ರಾಜಸ್ಥಾನ; ಮೊದಲ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಎತ್ತಿಹಿಡಿದ ಹರಿಯಾಣ..!
ಹರಿಯಾಣ ತಂಡ
Follow us on

ಡಿಸೆಂಬರ್ 16 ರ ಶನಿವಾರದಂದು ರಾಜ್​ಕೋಟ್​ನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ (Vijay Hazare Trophy) ಕ್ರಿಕೆಟ್ ಟೂರ್ನಿಯ ಫೈನಲ್‌ ಹಣಾಹಣಿಯಲ್ಲಿ ರಾಜಸ್ಥಾನ ತಂಡವನ್ನು ಮಣಿಸಿದ ಹರಿಯಾಣ (Haryana vs Rajasthan) ತಂಡ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹರಿಯಾಣ ತಂಡ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 287 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡ ಆರಂಭಿಕ ಅಭಿಜಿತ್ ತೋಮರ್ (Abhijeet Tomar) ಅವರ ಶತಕ ಹಾಗೂ ಕುನಾಲ್ ಸಿಂಗ್ ರಾಥೋಡ್ ಅವರ ಅರ್ಧಶತಕದ ಹೋರಾಟದ ಇನ್ನಿಂಗ್ಸ್ ಹೊರತಾಗಿಯೂ ಕೊನೆಯ ಕ್ಷಣದಲ್ಲಿ ಪಂದ್ಯವನ್ನು ಕೈಚೆಲ್ಲಿ 48 ಓವರ್​ಗಳ ಅಂತ್ಯಕ್ಕೆ ತನ್ನೇಲ್ಲ ವಿಕೆಟ್ ಕಳೆದುಕೊಂಡು 257 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಇದರೊಂದಿಗೆ 30 ರನ್​ಗಳ ಸೋಲು ಅನುಭವಿಸಿ ಮೊದಲ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಎತ್ತಿಹಿಡಿಯುವ ಅವಕಾಶದಿಂದ ವಂಚಿತವಾಯಿತು.

ಹರಿಯಾಣಕ್ಕೆ ಕಳಪೆ ಆರಂಭ

ಇನ್ನು ಉಭಯ ತಂಡಗಳಿಗೂ ಮೊದಲ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಎತ್ತಿಹಿಡಿಯುವ ಅವಕಾಶವಿದ್ದಿದ್ದರಿಂದ ಆರಂಭದಿಂದಲೇ ಪೈಪೋಟಿ ಜೋರಾಗಿತ್ತು. ಎರಡೂ ತಂಡಗಳು ಸೆಮಿಫೈನಲ್ ಸುತ್ತಿನಲ್ಲಿ ಬಲಿಷ್ಠ ತಂಡಗಳಾದ ಕರ್ನಾಟಕ ಹಾಗೂ ತಮಿಳುನಾಡು ತಂಡಗಳನ್ನು ಮಣಿಸಿ ಫೈನಲ್​ಗೆ ಪ್ರವೇಶಿಸಿದ್ದರಿಂದ ಸ್ಫರ್ಧೆಯ ರೋಚಕತೆ ಹೆಚ್ಚಿತ್ತು. ಅದರಂತೆ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಹರಿಯಾಣ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಆರಂಭಿಕ ಯುವರಾಜ್ ಸಿಂಗ್ ಕೇವಲ 1 ರನ್​ಗಳಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ಬಂದ ಹಿಮ್ನಾಶು ರಾಣಾ ಕೂಡ 10 ರನ್​ಗಳಿಗೆ ಸುಸ್ತಾದರು. ಹೀಗಾಗಿ ತಂಡ 41 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಅಶೋಕ್- ಅಂಕಿತ್ ಅರ್ಧಶತಕದಾಟ

ಆದರೆ ಮೂರನೇ ವಿಕೆಟ್​​ಗೆ ಜೊತೆಯಾದ ನಾಯಕ ಅಶೋಕ್ ಮೆನಾರಿಯಾ ಹಾಗೂ ಮತ್ತೊಬ್ಬ ಆರಂಭಿಕ ಅಂಕಿತ್ ಕುಮಾರ್ ತಲಾ ಅರ್ಧಶತಕ ಸಿಡಿಸುವ ಮೂಲಕ ತಂಡದ ಇನ್ನಿಂಗ್ಸ್​ಗೆ ಜೀವತುಂಬಿದರು. ಈ ವೇಳೆ 88 ರನ್​ಗಳ ಇನ್ನಿಂಗ್ಸ್ ಆಡಿದ ಅಂಕಿತ್ ಶತಕದಂಚಿನಲ್ಲಿ ಎಡವಿದರೆ, ನಾಯಕ ಅಶೋಕ್ ಕೂಡ 70 ರನ್​ಗಳಿಗೆ ಪೆವಿಲಿಯನ್​ ಹಾದಿ ಹಿಡಿದರು. ಈ ಇಬ್ಬರ ನಂತರ ತಂಡದ ಪರ ಯಾರಿಂದಲೂ ಬಿಗ್ ಇನ್ನಿಂಗ್ಸ್ ಬರದಿದ್ದರೂ, ಉಪಯುಕ್ತ ಕೊಡುಗೆಯಂತೂ ಬಂತು. ತಂಡದ ಕೆಳಕ್ರಮಾಂಕದ ನಾಲ್ವರು ಬ್ಯಾಟರ್​ಗಳು ಕ್ರಮವಾಗಿ ತಲಾ 20, 29, 24, 28 ರನ್​ಗಳ ಕೊಡುಗೆ ನೀಡಿದರು. ಹೀಗಾಗಿ ತಂಡ ಸ್ಪರ್ಧಾತ್ಮಕ ಮೊತ್ತವನ್ನು ಸವಾಲಾಗಿ ನೀಡಿತು.

12 ರನ್​ಗಳಿಗೆ 3 ವಿಕೆಟ್

ಹರಿಯಾಣ ನೀಡಿದ 287 ರನ್​ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡಕ್ಕೂ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಅಭಿಜಿತ್ ತೋಮರ್ ಹೊರತುಪಡಿಸಿ ಮಿಕ್ಕ ಮೂವರು ಬ್ಯಾಟರ್​ಗಳು ಕ್ರಮವಾಗಿ 1,2,0 ರನ್​ಗಳಿಗೆ ಪೆವಿಲಿಯನ್ ಸೇರಿಕೊಂಡರು. ಅದರಲ್ಲೂ ಕರ್ನಾಟಕ ವಿರುದ್ಧದ ಸೆಮಿಫೈನಲ್​ ಪಂದ್ಯದಲ್ಲಿ 180 ರನ್​ಗಳ ಸ್ಫೋಟಕ ಗೆಲುವಿನ ಇನ್ನಿಂಗ್ಸ್ ಆಡಿದ್ದ ನಾಯಕ ದೀಪಕ್ ಹೂಡಾ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದು, ತಂಡದ ಆರಂಭಿಕ ಹಿನ್ನಡೆಗೆ ಕಾರಣವಾಯಿತು. ಹೀಗಾಗಿ ತಂಡ ಕೇವಲ 12 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಶೂನ್ಯಕ್ಕೆ ದೀಪಕ್ ಹೂಡಾ ಔಟ್

ನಾಲ್ಕನೇ ಕ್ರಮಾಂದಲ್ಲಿ ಬಂದ ಕರಣ್ ಲಂಬ ಕೂಡ 20 ರನ್​ಗಳಿಗೆ ಬ್ಯಾಟ್ ಎತ್ತಿಟ್ಟರು. ಆದರೆ ಈ ನಾಲ್ಕು ವಿಕೆಟ್​ಗಳ ಪತನದ ಬಳಿಕ ಜೊತೆಯಾದ ಆರಂಭಿಕ ಅಭಿಜಿತ್ ತೋಮರ್ ಹಾಗೂ ಕುನಾಲ್ ಸಿಂಗ್ ರಾಥೋಡ್ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಇಬ್ಬರು ತಲಾ ಅರ್ಧಶತಕ ಸಿಡಿಸಿ ಮಿಂಚಿದರು. ಈ ಹಂತದಲ್ಲಿ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸಿದ ಆರಂಭಿಕ ಅಭಿಜಿತ್ ತೋಮರ್ 106 ರನ್​ಗಳ ಹೋರಾಟದ ಇನ್ನಿಂಗ್ಸ್ ಬಳಿಕ ವಿಕೆಟ್ ಒಪ್ಪಿಸಿದರೆ, ಅವರ ಹಿಂದೆ ಅರ್ಧಶತಕ ಸಿಡಿಸಿದ್ದ ಕುನಾಲ್ ಸಿಂಗ್ ರಾಥೋಡ್ ಕೂಡ ಔಟಾದರು. ಈ ಇಬ್ಬರು ಮೈದಾನದಲ್ಲಿ ಇರುವವರೆಗೂ ಗೆಲುವಿನ ಹಾದಿಯಲ್ಲಿದ್ದ ರಾಜಸ್ಥಾನ ತಂಡ ಆ ಬಳಿಕ ಲಯ ಕಳೆದುಕೊಂಡಿತು.

ಬೌಲಿಂಗ್​ನಲ್ಲಿ ಮಿಂಚಿದ ಹರ್ಷಲ್ ಪಟೇಲ್

ಕೊನೆಯ ಹಂತದಲ್ಲಿ ರಾಹುಲ್ ಚಹರ್ 18 ರನ್​ಗಳ ಇನ್ನಿಂಗ್ಸ್ ಆಡಿದ್ದನ್ನು ಬಿಟ್ಟರೆ ಉಳಿದವರಿಂದ ಯಾವುದೇ ಕೊಡುಗೆ ಕಂಡು ಬರಲಿಲ್ಲ. ಹೀಗಾಗಿ ತಂಡ 30 ರನ್​ಗಳ ಸೋಲನ್ನು ಎದುರಿಸಬೇಕಾಯಿತು. ಇನ್ನು ಹರಿಯಾಣ ಪರ ಬೌಲಿಂಗ್​ನಲ್ಲಿ ಮಿಂಚಿದ ಹರ್ಷಲ್ ಪಟೇಲ್ ಹಾಗೂ ಸುಮಿತ್ ಕುಮಾರ್ ತಲಾ 3 ವಿಕೆಟ್ ಪಡೆದು ಮಿಂಚಿದರೆ, ಅಂಶುಲ್ ಕಾಂಬೋಜ್ ಹಾಗೂ ರಾಹುಲ್ ತೇವಾಟಿಯಾ ತಲಾ 2 ವಿಕೆಟ್ ಪಡೆದು ತಂಡಕ್ಕೆ ನೆರವಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:47 pm, Sat, 16 December 23