ಕನ್ನಡಿಗನ ಅಬ್ಬರ, ಅರ್ಜುನ್ ಆಲ್ರೌಂಡರ್ ಪ್ರದರ್ಶನ; ಗೋವಾ ತಂಡಕ್ಕೆ ಭಾರಿ ಜಯ

|

Updated on: Dec 26, 2024 | 7:54 PM

Vijay Hazare Trophy: ಜಯ್ ಹಜಾರೆ ಟ್ರೋಫಿಯಲ್ಲಿ ಗೋವಾ ತಂಡವು ಮಣಿಪುರವನ್ನು ಸೋಲಿಸಿದೆ. ತಂಡದ ಪರ ಅರ್ಜುನ್ ತೆಂಡೂಲ್ಕರ್ 26 ರನ್ ಮತ್ತು ಒಂದು ವಿಕೆಟ್ ಪಡೆದು ಆಲ್-ರೌಂಡರ್ ಪ್ರದರ್ಶನ ನೀಡಿದರೆ, ಕನ್ನಡಿಗ ಕೃಷ್ಣಮೂರ್ತಿ ಸಿದ್ಧಾರ್ಥ್ ಶತಕ ಸಿಡಿಸಿ ಗೋವಾ ತಂಡವನ್ನು ಗೆಲುವಿಗೆ ಕೊಂಡೊಯ್ದರು.

ಕನ್ನಡಿಗನ ಅಬ್ಬರ, ಅರ್ಜುನ್ ಆಲ್ರೌಂಡರ್ ಪ್ರದರ್ಶನ; ಗೋವಾ ತಂಡಕ್ಕೆ ಭಾರಿ ಜಯ
ಸಿದ್ಧಾರ್ಥ್​, ಅರ್ಜುನ್
Follow us on

ವಿಜಯ್ ಹಜಾರೆ ಟ್ರೋಫಿಯಲ್ಲಿ ಅರ್ಜುನ್ ತೆಂಡೂಲ್ಕರ್ ಮತ್ತೊಮ್ಮೆ ತಮ್ಮ ಮ್ಯಾಜಿಕ್ ತೋರಿಸಿದ್ದಾರೆ. ಈ ಟೂರ್ನಿಯಲ್ಲಿ ಗೋವಾ ಪರ ಕಣಕ್ಕಿಳಿಯುತ್ತಿರುವ ಅರ್ಜುನ್ ತೆಂಡೂಲ್ಕರ್ ಇಂದು ನಡೆದ ಮಣಿಪುರ ವಿರುದ್ಧದ ಪಂದ್ಯದಲ್ಲಿ ತಮ್ಮ ಆಲ್​ರೌಂಡರ್ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗೋವಾ 298 ರನ್​ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಮಣಿಪುರ ತಂಡ ಕೇವಲ 127 ರನ್‌ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್ ಬ್ಯಾಟಿಂಗ್​ನಲ್ಲಿ 24 ಎಸೆತಗಳಲ್ಲಿ 26 ರನ್​ಗಳ ಇನ್ನಿಂಗ್ಸ್ ಆಡಿದರೆ, ಬೌಲಿಂಗ್‌ನಲ್ಲಿ 40 ರನ್ ನೀಡಿ ಒಂದು ವಿಕೆಟ್ ಪಡೆದರು.

ಕನ್ನಡಿಗ ಸಿದ್ಧಾರ್ಥ್ ಶತಕ

ಗೋವಾ ತಂಡದ ಈ ಗೆಲುವಿನಲ್ಲಿ ಕನ್ನಡಿಗ ಕೃಷ್ಣಮೂರ್ತಿ ಸಿದ್ಧಾರ್ಥ ಅವರ ಶತಕದ ಇನ್ನಿಂಗ್ಸ್ ಪ್ರಮುಖ ಪಾತ್ರವಹಿಸಿತು. ಈ ವಿಕೆಟ್ ಕೀಪರ್ ಕಠಿಣ ಪರಿಸ್ಥಿತಿಯಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಗೋವಾ ಕೇವಲ 8 ರನ್ ಗಳಿಸುವಷ್ಟರಲ್ಲಿ ಆರಂಭಿಕರನ್ನು ಕಳೆದುಕೊಂಡಿತು. ಸ್ನೇಹಲ್ ಕೌತಾಂಕರ್ 1 ಮತ್ತು ಇಶಾನ್ ಗಡೇಕರ್ 5 ರನ್ ಗಳಿಸಿ ಔಟಾದರು. ಇದಾದ ಬಳಿಕ ಸಿದ್ಧಾರ್ಥ್ ಅದ್ಭುತವಾಗಿ ಬ್ಯಾಟಿಂಗ್ ಮಾಡುವ ಮೂಲಕ ಗೋವಾ ಇನ್ನಿಂಗ್ಸ್ ನಿಭಾಯಿಸಿದರು. ಒಂದು ಹಂತದಲ್ಲಿ ಗೋವಾ 92 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಆದರೆ ಇದಾದ ನಂತರ ವಿಕಾಸ್ ಸಿಂಗ್ ಮತ್ತು ಸಿದ್ಧಾರ್ಥ್ ಶತಕದ ಜೊತೆಯಾಟ ನಡೆಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಆದರೆ, ವಿಕಾಸ್ ಸಿಂಗ್ ಶತಕ ಪೂರೈಸಲು ಸಾಧ್ಯವಾಗದೆ 95 ರನ್ ಗಳಿಸಿ ಔಟಾದರು. ಇದಾದ ಬಳಿಕ ಅರ್ಜುನ್ ತೆಂಡೂಲ್ಕರ್ ಕೊನೆಯ ಓವರ್‌ಗಳಲ್ಲಿ 26 ರನ್ ಕೊಡುಗೆ ನೀಡಿ ತಂಡವನ್ನು 300ರ ಸಮೀಪಕ್ಕೆ ಕೊಂಡೊಯ್ದರು.

ತತ್ತರಿಸಿದ ಮಣಿಪುರ

299 ರನ್‌ಗಳ ಗುರಿ ಬೆನ್ನತ್ತಿದ್ದ ಮಣಿಪುರ ತಂಡಕ್ಕೆ ಅರ್ಜುನ್ ತೆಂಡೂಲ್ಕರ್ ಮೊದಲ ಹೊಡೆತ ನೀಡಿದರು. ಈ ಎಡಗೈ ವೇಗದ ಬೌಲರ್ ಆರಂಭಿಕರಾದ ಕರೆಂಜಿತ್ ಯಮನಮ್ ಅವರನ್ನು 11 ರನ್‌ಗಳಿಗೆ ಔಟ್ ಮಾಡಿದರು. ಇದಾದ ನಂತರ ದೀಪರಾಜ್ ಗಾಂವ್ಕರ್ ಮತ್ತು ಅಮೂಲ್ಯ ಪಾಂಡ್ರೇಕರ್ ದಾಳಿಗೆ ನಲುಗಿದ ಮಣಿಪುರದ ಪೆವಿಲಿಯನ್ ಪರೇಡ್ ಆರಂಭಿಸಿತು. ಈ ಇಬ್ಬರು ಬೌಲರ್‌ಗಳು ಸೇರಿ ಮಣಿಪುರದ 7 ಬ್ಯಾಟ್ಸ್‌ಮನ್‌ಗಳನ್ನು ಬೇಟೆಯಾಡಿದರು. ಪಾಂಡ್ರೇಕರ್ 7.2 ಓವರ್​ಗಳಲ್ಲಿ ಕೇವಲ 20 ರನ್ ನೀಡಿ 5 ವಿಕೆಟ್ ಪಡೆದರು. ವಿಜಯ್ ಹಜಾರೆ ಟ್ರೋಫಿಯಲ್ಲಿ ಗೋವಾ 3 ಪಂದ್ಯಗಳನ್ನು ಆಡಿದ್ದು 2 ರಲ್ಲಿ ಗೆಲುವು ಸಾಧಿಸಿ 1 ರಲ್ಲಿ ಸೋಲು ಕಂಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ