ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಕ್ರೀಡಾಂಗಣದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯ ತನ್ನ ಮೂರನೇ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಮಣಿಸಿರುವ ಕರ್ನಾಟಕ ತಂಡ ಟೂರ್ನಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಇದುವರೆಗೆ ಆಡಿರುವ ಮೂರು ಪಂದ್ಯಗಳನ್ನು ಗೆದ್ದಿರುವ ಮಯಾಂಕ್ ಅಗರ್ವಾಲ್ ಪಡೆ ಸಿ ಗುಂಪಿನಲ್ಲಿ ಅಗ್ರಸ್ಥಾನವನ್ನು ಪಡೆದಿಕೊಂಡಿದೆ. ಇಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡ 49.2 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 247 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ ನಾಯಕ ಮಯಾಂಕ್ ಅಗರ್ವಾಲ್ ಸಿಡಿಸಿದ ಶತಕದ ನೆರವಿನಿಂದ 9 ವಿಕೆಟ್ ಕಳೆದುಕೊಂಡು ಇನ್ನು 15 ಎಸೆತಗಳು ಬಾಕಿ ಇರುವಂತೆಯೇ ಜಯದ ನಗೆ ಬೀರಿತು.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡಕ್ಕೆ ಸಾಧಾರಣ ಆರಂಭ ಸಿಕ್ಕಿತು. ಆರಂಭಿಕರಿಬ್ಬರು ಮೊದಲ ವಿಕೆಟ್ಗೆ 39 ರನ್ಗಳ ಜೊತೆಯಾಟ ನೀಡಿದರು. ಈ ವೇಳೆ ಕರ್ನಾಟಕ ಪರ ಚೊಚ್ಚಲ ವಿಜಯ್ ಹಜಾರೆ ಟ್ರೋಫಿ ಪಂದ್ಯವನ್ನಾಡುತ್ತಿರುವ ಅಭಿಲಾಷ್ ಶೆಟ್ಟಿ ಪಂಜಾಬ್ ನಾಯಕ ಅಭಿಷೇಕ್ ಶರ್ಮಾ ವಿಕೆಟ್ ಉರುಳಿಸಿ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಸ್ಫೋಟಕ ಬ್ಯಾಟರ್ ಪ್ರಭಾಸಿಮ್ರಾನ್ ಸಿಂಗ್ ಕೂಡ ಕೌಶಿಕ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಆದರೆ ಈ ಬಳಿಕ ಜೊತೆಯಾದ ಅನ್ಮೋಲ್ಪ್ರೀತ್ ಸಿಂಗ್ ಹಾಗೂ ನೆಹಾಲ್ ವದೇರಾ 3ನೇ ವಿಕೆಟ್ಗೆ ಅರ್ಧಶತಕದ ಜೊತೆಯಾಟ ನೀಡಿದರು.
ಈ ವೇಳೆ ಅನ್ಮೋಲ್ಪ್ರೀತ್ ಸಿಂಗ್ 51 ರನ್ಗಳ ಅರ್ಧಶತಕದ ಇನ್ನಿಂಗ್ಸ್ ಆಡಿದರೆ, ನೆಹಾಲ್ 37 ರನ್ಗಳ ಕಾಣಿಕೆ ನೀಡಿದರು. ಇಬ್ಬರ ವಿಕೆಟ್ ಪತನದ ಬಳಿಕ ಬಂದ ಅನ್ಮೋಲ್ ಮಲ್ಹೋತ್ರಾ 42 ರನ್ಗಳ ಇನ್ನಿಂಗ್ಸ್ ಆಡಿದರೆ, ಸನ್ವೀರ್ ಸಿಂಗ್ 35 ರನ್ ಕಲೆಹಾಕಿದರು. ಇವರ ಆಟದಿಂದ ಪಂಜಾಬ್ ತಂಡ 247 ರನ್ ಕಲೆಹಾಕಿತು. ಇತ್ತ ಕರ್ನಾಟಕ ಪರ ಬೌಲಿಂಗ್‌ನಲ್ಲಿ ಮಿಂಚಿದ ಅಭಿಲಾಷ್ ಶೆಟ್ಟಿ ಮೊದಲ ಪಂದ್ಯದಲ್ಲೇ 5 ವಿಕೆಟ್ ಪಡೆದ ಸಾಧನೆ ಮಾಡಿದರು. ಇವರಿಗೆ ಸಾಥ್ ನೀಡಿದ ಕೌಶಿಕ್ ಹಾಗೂ ನಿಖಿನ್ ತಲಾ 2 ವಿಕೆಟ್ ಪಡೆದರು.
ಪಂಜಾಬ್ ನೀಡಿದ 247 ರನ್ಗಳ ಗುರಿ ಬೆನ್ನಟ್ಟಿದ ಕರ್ನಾಟಕ ತಂಡಕ್ಕೆ ಮೊದಲ ವಿಕೆಟ್ಗೆ 50 ರನ್ಗಳ ಜೊತೆಯಾಟ ಸಿಕ್ಕಿತು. ಆರಂಭಿಕ ನಿಖಿನ್ 13 ರನ್ ಕಲೆಹಾಕಿ ವಿಕೆಟ್ ಒಪ್ಪಿಸುವ ಮೂಲಕ ಈ ಜೊತೆಯಾಟ ಮುರಿದುಬಿತ್ತು. ಆದರೆ ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ ಮಾಡಿದ ನಾಯಕ ಮಯಾಂಕ್ ಕೊನೆಯವರೆಗೂ ಅಜೇಯರಾಗಿ ಉಳಿದು ಸ್ಫೋಟಕ ಶತಕ ಸಿಡಿಸಿದಲ್ಲದೆ ತಂಡವನ್ನು ಗೆಲುವಿನ ದಡ ಸೇರಿಸಿದರು. ಮಯಾಂಕ್ಗೆ ಸಾಥ್ ನೀಡಿದ ಶ್ರೇಯಸ್ ಗೋಪಾಲ್ 29 ರನ್ಗಳ ಕಾಣಿಕೆ ನೀಡಿದರೆ, ಅಭಿನವ್ ಮನೋಹರ್ 20 ರನ್ಗಳಿಗೆ ಸುಸ್ತಾದರು.
ಒಂದೆಡೆ ವಿಕೆಟ್ ಪತನದ ನಡುವೆಯೂ ತಮ್ಮ ಆಟವನ್ನು ಮುಂದುವರೆಸಿದ ಮಯಾಂಕ್, ಇತರ ಆಟಗಾರರಿಂದ ಸಿಕ್ಕ ಅಲ್ಪ ಕಾಣಿಕೆಯ ನೆರವಿನಿಂದ ತಂಡಕ್ಕೆ ರೋಚಕ ಜಯ ತಂದುಕೊಟ್ಟರು. ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಮಯಾಂಕ್ ತಮ್ಮ ಇನ್ನಿಂಗ್ಸ್ನಲ್ಲಿ 127 ಎಸೆತಗಳನ್ನು ಎದುರಿಸಿ 13 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ಗಳ ನೆರವಿನಿಂದ 139 ರನ್ ಕಲೆಹಾಕಿದರು. ಮಯಾಂಕ್ ಹೊರತುಪಡಿಸಿ ತಂಡದ ಮತ್ತ್ಯಾವ ಆಟಗಾರನಿಂದಲೂ ಹೇಳಿಕೊಳ್ಳುವಂತಹ ಪ್ರದರ್ಶನ ಕಂಡುಬರಲಿಲ್ಲ. ಆದಾಗ್ಯೂ ಎಲ್ಲರಿಂದ ಸಿಕ್ಕ ಅಲ್ಪ ಕಾಣೆಕೆಯ ನೆರವಿನಿಂದ ತಂಡ ಸತತ ಮೂರನೇ ಜಯ ದಾಖಲಿಸಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ