VHT 2025-26: ತಮಿಳುನಾಡು ತಂಡವನ್ನು ಮಣಿಸಿ ಹ್ಯಾಟ್ರಿಕ್ ಜಯ ದಾಖಲಿಸಿದ ಕರ್ನಾಟಕ

Vijay Hazare Trophy: ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡ ತಮಿಳುನಾಡು ವಿರುದ್ಧ 4 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ತಮಿಳುನಾಡು 281 ರನ್ ಗಳಿಸಿತು. ಅಭಿಲಾಶ್ ಶೆಟ್ಟಿ 4 ವಿಕೆಟ್ ಪಡೆದರು. ಕರ್ನಾಟಕ ತಂಡದ ನಾಯಕ ಮಯಾಂಕ್, ಶ್ರೀಜಿತ್, ಹಾಗೂ ಶ್ರೇಯಸ್ ಗೋಪಾಲ್ ಅವರ ಅರ್ಧಶತಕದ ನೆರವಿನಿಂದ 17 ಎಸೆತಗಳು ಬಾಕಿ ಇರುವಂತೆ ಗುರಿ ತಲುಪಿ, ಸತತ ಮೂರನೇ ಜಯ ಸಾಧಿಸಿತು.

VHT 2025-26: ತಮಿಳುನಾಡು ತಂಡವನ್ನು ಮಣಿಸಿ ಹ್ಯಾಟ್ರಿಕ್ ಜಯ ದಾಖಲಿಸಿದ ಕರ್ನಾಟಕ
Karnataka

Updated on: Dec 29, 2025 | 5:30 PM

ವಿಜಯ್ ಹಜಾರೆ ಟ್ರೋಫಿಯ (Vijay Hazare Trophy) ತನ್ನ ಮೂರನೇ ಪಂದ್ಯದಲ್ಲಿ ತಮಿಳುನಾಡು ತಂಡವನ್ನು ಎದುರಿಸಿದ್ದ ಕರ್ನಾಟಕ ತಂಡ (Tamil Nadu vs Karnataka) ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಅಹಮದಾಬಾದ್​ನಲ್ಲಿರುವ ಗುಜರಾತ್ ಕಾಲೇಜು ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್‌ ಮಾಡಿದ ತಮಿಳುನಾಡು ತಂಡ 50ನೇ ಓವರ್​ನಲ್ಲಿ ತನ್ನೇಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 281 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ 6 ವಿಕೆಟ್‌ಗಳನ್ನು ಕಳೆದುಕೊಂಡು ಇನ್ನು 17 ಎಸೆತಗಳು ಬಾಕಿ ಇರುವಂತೆಯೇ ಜಯದ ನಗೆ ಬೀರಿತು. ಇದು ಟೂರ್ನಿಯಲ್ಲಿ ಕರ್ನಾಟಕ ತಂಡದ 3ನೇ ಜಯವಾಗಿದ್ದು, ಈ ಹಿಂದೆ ಆಡಿದ್ದ ಎರಡೂ ಪಂದ್ಯಗಳಲ್ಲೂ ಕರ್ನಾಟಕ ಜಯಭೇರಿ ಬಾರಿಸಿತ್ತು.

ತಮಿಳುನಾಡಿಗೆ ನಾಯಕನ ಆಸರೆ

ಮೊದಲು ಬ್ಯಾಟಿಂಗ್‌ ಮಾಡಿದ ತಮಿಳುನಾಡು ಪರ ನಾಯಕ ಎನ್​ ಜಗದೀಸನ್ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಜಗದೀಸನ್ 67 ರನ್​ಗಳ ಇನ್ನಿಂಗ್ಸ್ ಆಡಿದರೆ, ನಾಯಕನಿಗೆ ಸಾಥ್ ನೀಡಿದ ಪ್ರದೋಷ್ ಪಾಲ್ ಕೂಡ 57 ರನ್​ಗಳ ಇನ್ನಿಂಗ್ಸ್ ಕಟ್ಟಿದರು. ಇವರಿಬ್ಬರ ಆಟದಿಂದಾಗಿ ತಂಡದ ಮೊತ್ತ 100 ರನ್​ಗಳ ಗಡಿ ದಾಟಿತು.

4 ವಿಕೆಟ್ ಉರುಳಿಸಿದ ಅಭಿಲಾಶ್

ಉಳಿದಂತೆ 6 ನೇ ಕ್ರಮಾಂಕದಲ್ಲಿ ಬಂದ ಮೊಹಮ್ಮದ್ ಅಲಿ 31 ರನ್​ಗಳ ಇನ್ನಿಂಗ್ಸ್ ಆಡಿದರೆ, ಸಾಯಿ ಕಿಶೋರ್ ಕೂಡ 38 ರನ್​ಗಳ ಕಾಣಿಕೆ ನೀಡಿದರು. ಇಂದ್ರಜಿತ್ 28 ರನ್​ಗಳಿಗೆ ಸುಸ್ತಾದರೆ, ಆರಂಭಿಕ ಅಥೀಶ್ ಇನ್ನಿಂಗ್ಸ್​ 14 ರನ್​ಗಳಿಗೆ ಅಂತ್ಯವಾಯಿತು. ಹೀಗಾಗಿ ತಂಡ 49.5 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡಿತು. ಕರ್ನಾಟಕ ಪರ ಬೌಲಿಂಗ್‌ನಲ್ಲಿ ಮತ್ತೊಮ್ಮೆ ಮಿಂಚಿದ ಅಭಿಲಾಶ್ ಶೆಟ್ಟಿ 4 ವಿಕೆಟ್ ಪಡೆದರೆ, ವಿದ್ಯಾದರ್ ಪಾಟೀಲ್ ಹಾಗೂ ಶ್ರೇಯಸ್ ಆಚಾರ್ ತಲಾ 2 ವಿಕೆಟ್​ ಪಡೆದರು.

ಮಯಾಂಕ್ ಅರ್ಧಶತಕ

ಈ ಗುರಿ ಬೆನ್ನಟ್ಟಿದ ಕರ್ನಾಟಕಕ್ಕೂ ಸಾಧಾರಣ ಆರಂಭ ಸಿಕ್ಕಿತು. ಮೊದಲೆರಡು ಪಂದ್ಯಗಳಲ್ಲಿ ಸ್ಫೋಟಕ ಶತಕ ಸಿಡಿಸಿದ್ದ ದೇವದತ್ ಪಡಿಕ್ಕಲ್ ಈ ಪಂದ್ಯದಲ್ಲಿಯೂ ಉತ್ತಮ ಆರಂಭ ಪಡೆದುಕೊಂಡರು. ಆದಾಗ್ಯೂ ಪಡಿಕ್ಕಲ್ ಇನ್ನಿಂಗ್ಸ್ 22 ರನ್​ಗಳಿಗೆ ಅಂತ್ಯವಾಯಿತು. ಅನುಭವಿ ಕರುಣ್ ಕೂಡ 17 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ಸ್ಮರಣ್ ಆಟವೂ 15 ರನ್​ಗಳಿಗೆ ಅಂತ್ಯವಾಯಿತು. ಆದರೆ ಒಂದು ತುದಿಯಲ್ಲಿ ಭದ್ರವಾಗಿ ಬೇರೂರಿದ್ದ ನಾಯಕ ಮಯಾಂಕ್ 58 ರನ್​ಗಳ ಇನ್ನಿಂಗ್ಸ್ ಆಡಿ ತಂಡವನ್ನು ಒತ್ತಡದಿಂದ ಹೊರತೆಗೆದರು.

ಶ್ರೀಜಿತ್, ಶ್ರೇಯಸ್ ಜೊತೆಯಾಟ

ನಾಯಕನ ಬಳಿಕ ಜೊತೆಯಾದ ಶ್ರೀಜಿತ್ ಹಾಗೂ ಶ್ರೇಯಸ್ ಗೋಪಾಲ್ ತಲಾ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಗೆಲುವಿನ ಸನಿಹಕ್ಕೆ ತಂದರು. ಶ್ರೀಜಿತ್ 77 ರನ್​ಗಳ ಇನ್ನಿಂಗ್ಸ್ ಆಡಿದರೆ, ಶ್ರೇಯಸ್ ಗೋಪಾಲ್ 55 ರನ್​ಗಳ ಕಾಣಿಕೆ ನೀಡಿದರು. ಉಳಿದ ಕೆಲಸ ಮಾಡಿದ ಅಭಿನವ್ ಮನೋಹರ್ ಅಜೇಯ 20 ರನ್ ಹಾಗೂ ವಿದ್ಯಾದರ್ ಅಜೇಯ 17 ರನ್ ಬಾರಿಸಿ ತಂಡವನ್ನು ಸತತ ಮೂರನೇ ಗೆಲುವಿನತ್ತ ಕೊಂಡೊಯ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:26 pm, Mon, 29 December 25