AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಮತ್ತೊಂದು ಪಂದ್ಯವಾಡಲಿರುವ ವಿರಾಟ್ ಕೊಹ್ಲಿ

Virat Kohli: ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯು ಜನವರಿ 11 ರಿಂದ ಶುರುವಾಗಲಿದೆ. ಈ ಸರಣಿಗೂ ಮುನ್ನ ದೇಶೀಯ ಅಂಗಳದಲ್ಲಿ ಮತ್ತೊಂದು ಪಂದ್ಯವಾಡಲು ವಿರಾಟ್ ಕೊಹ್ಲಿ ನಿರ್ಧರಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ವಿಜಯ ಹಝಾರೆ ಟೂರ್ನಿಯಲ್ಲಿ ಕೊಹ್ಲಿ ಈವರೆಗೆ 2 ಪಂದ್ಯಗಳನ್ನಾಡಿದ್ದಾರೆ. ಇದೀಗ ಮತ್ತೊಂದು ಮ್ಯಾಚ್​ನಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ಬೆಂಗಳೂರಿನಲ್ಲಿ ಮತ್ತೊಂದು ಪಂದ್ಯವಾಡಲಿರುವ ವಿರಾಟ್ ಕೊಹ್ಲಿ
Virat Kohli
ಝಾಹಿರ್ ಯೂಸುಫ್
|

Updated on:Dec 29, 2025 | 11:59 AM

Share

ನ್ಯೂಝಿಲೆಂಡ್ ವಿರುದ್ಧದ ಸರಣಿಗೂ ಮುನ್ನ ವಿಜಯ ಹಝಾರೆ ಟೂರ್ನಿಯಲ್ಲಿ ಮತ್ತೊಂದು ಪಂದ್ಯವಾಡಲು ವಿರಾಟ್ ಕೊಹ್ಲಿ ನಿರ್ಧರಿಸಿದ್ದಾರೆ. ಜನವರಿ 6 ರಂದು ಬೆಂಗಳೂರಿನ ಆಲೂರಿನಲ್ಲಿರುವ ಕೆಎಸ್​​ಸಿಎ ಮೈದಾನದಲ್ಲಿ ನಡೆಯಲಿರುವ ರೈಲ್ವೇಸ್​ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರ ವಿರಾಟ್ ಕೊಹ್ಲಿ ಕೂಡ ಕಣಕ್ಕಿಳಿಯಲಿದ್ದಾರೆ ಎಂದು ದೆಹಲಿ ಕ್ರಿಕೆಟ್ ಅಸೋಸಿಯೇಷನ್ ಖಚಿತಪಡಿಸಿದೆ.

ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಎರಡು ಪಂದ್ಯಗಳನ್ನಾಡಿದ್ದಾರೆ. ಬೆಂಗಳೂರಿನ ಸಿಇಒ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಆಂಧ್ರ ಪ್ರದೇಶ್ ವಿರುದ್ಧ 131 ರನ್ ಬಾರಿಸಿದ್ದರು. ಇನ್ನು ದ್ವಿತೀಯ ಮ್ಯಾಚ್​ನಲ್ಲಿ ಗುಜರಾತ್ ವಿರುದ್ಧ 77 ರನ್ ಕಲೆಹಾಕಿದ್ದರು

ಈ ಪಂದ್ಯದ ಬಳಿಕ ಮುಂಬೈಗೆ ತೆರಳಿದ್ದ ವಿರಾಟ್ ಕೊಹ್ಲಿ ಜನವರಿ 6 ರೊಳಗೆ ಮತ್ತೆ ದೆಹಲಿ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಡಿಡಿಎಸ್​ಎ ತಿಳಿಸಿದ್ದಾರೆ. ಅದರಂತೆ ದೆಹಲಿ ತಂಡದ 6ನೇ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಮತ್ತೆ ಬ್ಯಾಟ್ ಬೀಸಲಿದ್ದಾರೆ. ಈ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಟೀಮ್ ಇಂಡಿಯಾಚವನ್ನು ಸೇರಿಕೊಳ್ಳಲಿದ್ದಾರೆ.

ಭಾರತ-ನ್ಯೂಝಿಲೆಂಡ್ ಸರಣಿ:

ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಏಕದಿನ ಸರಣಿಯು ಜನವರಿ 11 ರಿಂದ ಶುರುವಾಗಲಿದೆ. ಈ ಸರಣಿಗಾಗಿ ಜನವರಿ 7 ರಂದು ಬರೋಡಾದಲ್ಲಿ ಭಾರತೀಯ ಆಟಗಾರರು ಕೂಡಿಕೊಳ್ಳಲಿದ್ದಾರೆ. ಅಂದರೆ ವಿರಾಟ್ ಕೊಹ್ಲಿ ಬೆಂಗಳೂರಿನಲ್ಲಿ ಪಂದ್ಯ ಮುಗಿಸಿ ಅದೇ ದಿನ ಬರೋಡಾಗೆ ತೆರಳುವ ಸಾಧ್ಯತೆಯಿದೆ.

ರಿಷಭ್ ಪಂತ್ ನಾಯಕ:

ವಿಜಯ ಹಝಾರೆ ಟೂರ್ನಿಯಲ್ಲಿ ದೆಹಲಿ ತಂಡವನ್ನು ರಿಷಭ್ ಪಂತ್ ಮುನ್ನಡೆಸುತ್ತಿದ್ದಾರೆ. ಈಗಾಗಲೇ ಮೂರು ಮ್ಯಾಚ್​ಗಳಲ್ಲಿ ನಾಯಕನಾಗಿ ಕಣಕ್ಕಿಳಿದಿರುವ ಪಂತ್ ಅವರನ್ನು ಭಾರತ ಏಕದಿನ ತಂಡದಿಂದ ಕೈ ಬಿಟ್ಟರೆ, ದೇಶೀಯ ಟೂರ್ನಿಯಲ್ಲಿ ಮುಂದುವರೆಯಲಿದ್ದಾರೆ. ಅದು ಕೂಡ ನಾಯಕನಾಗಿ. ಅಂದರೆ ನ್ಯೂಝಿಲೆಂಡ್ ವಿರುದ್ಧದ ಸರಣಿಗೆ ರಿಷಭ್ ಪಂತ್ ಆಯ್ಕೆಯಾಗದಿದ್ದರೆ ವಿಜಯ ಹಝಾರೆ ಟೂರ್ನಿಯಲ್ಲಿ ಅವರು ಕ್ಯಾಪ್ಟನ್ ಆಗಿ ಮುಂದುವರೆಯಲಿದ್ದಾರೆ.

ಇದನ್ನೂ ಓದಿ: ದಿಢೀರ್ ನಿವೃತ್ತಿ ಘೋಷಿಸಿದ ನ್ಯೂಝಿಲೆಂಡ್ ಆಟಗಾರ

ದೆಹಲಿ ತಂಡ: ರಿಷಭ್ ಪಂತ್ (ನಾಯಕ), ವಿರಾಟ್ ಕೊಹ್ಲಿ, ಇಶಾಂತ್ ಶರ್ಮಾ, ನವದೀಪ್ ಸೈನಿ, ಆಯುಷ್ ಬದೋನಿ, ಅರ್ಪಿತ್ ರಾಣಾ, ಯಶ್ ಧುಲ್, ಸಾರ್ಥಕ್ ರಂಜನ್, ಪ್ರಿಯಾಂಶ್ ಆರ್ಯ, ತೇಜಸ್ವಿ ದಹಿಯಾ, ನಿತೀಶ್ ರಾಣಾ, ಹೃತಿಕ್ ಶೋಕೀನ್, ಹರ್ಷ್ ತ್ಯಾಗಿ, ಸಿಮರ್ಜೀತ್ ಸಿಂಗ್, ಪ್ರಿನ್ಸ್ ಯಾದವ್, ದಿವಿಜ್ ಮೆಹ್ರ, ಆಯುಷ್ ದೋಸೆಜ, ವೈಭವ್ ಕಡ್ಪಲ್, ರೋಹನ್ ರಾಣಾ, ಅನೂಜ್ ರಾವತ್ (ಮೀಸಲು ಆಟಗಾರ).

Published On - 11:30 am, Mon, 29 December 25