Virat Kohli: 100ನೇ ಟೆಸ್ಟ್​ ಪಂದ್ಯದಲ್ಲಿ ಕೊಹ್ಲಿಯ 71ನೇ ಲೆಕ್ಕಚಾರ..!

| Updated By: ಝಾಹಿರ್ ಯೂಸುಫ್

Updated on: Mar 03, 2022 | 5:24 PM

Virat Kohli 100th Test: ಕೊಹ್ಲಿ ಕುರಿತ ಚರ್ಚೆ 71ನೇ ಶತಕ ಮತ್ತು 100ನೇ ಟೆಸ್ಟ್ ಸುತ್ತ ಸುತ್ತುತ್ತಿದೆ, ಇದು ನಿಜ ಕೂಡ, ಆದರೆ ಕೊಹ್ಲಿಗೆ ಈ ಎರಡು ಅಂಕಿ ಅಂಶಗಳ ಹೊರತಾಗಿ ಮೂರನೇ ಪ್ರಮುಖ ಅಂಕಿ ಅಂಶವೆಂದರೆ 138 ರನ್.

Virat Kohli: 100ನೇ ಟೆಸ್ಟ್​ ಪಂದ್ಯದಲ್ಲಿ ಕೊಹ್ಲಿಯ 71ನೇ ಲೆಕ್ಕಚಾರ..!
Virat Kohli
Follow us on

100ನೇ ಟೆಸ್ಟ್​ ಪಂದ್ಯವಾಡಲು ವಿರಾಟ್ ಕೊಹ್ಲಿ (Virat Kohli) ಸಜ್ಜಾಗಿದ್ದಾರೆ. ಮೊಹಾಲಿಯಲ್ಲಿ ಮಾರ್ಚ್ 4 ರಂದು ನಡೆಯಲಿರುವ ಶ್ರೀಲಂಕಾ (India vs Sri Lanka) ವಿರುದ್ದದ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಕಿಂಗ್ ಕೊಹ್ಲಿ 100 ಟೆಸ್ಟ್ ಪಂದ್ಯವಾಡಿದ ವಿಶೇಷ ಸಾಧಕರ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಅನಿಲ್ ಕುಂಬ್ಳೆ, ಸುನಿಲ್ ಗವಾಸ್ಕರ್, ಸೌರವ್ ಗಂಗೂಲಿ, ಕಪಿಲ್ ದೇವ್, ದಿಲೀಪ್ ವೆಂಗ್‌ಸರ್ಕರ್, ಇಶಾಂತ್ ಶರ್ಮಾ, ಹರ್ಭಜನ್ ಸಿಂಗ್ ಮತ್ತು ವೀರೇಂದ್ರ ಸೆಹ್ವಾಗ್ ಅವರ ನಂತರ 100 ಟೆಸ್ಟ್ ಪಂದ್ಯಗಳನ್ನು ಆಡಿದ ಹಿರಿಮೆಗೆ ಕೊಹ್ಲಿ ಪಾತ್ರರಾಗಲಿದ್ದಾರೆ. ಅಷ್ಟೇ ಅಲ್ಲದೆ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಕೊಹ್ಲಿ ಮುಂದೆ 71ನೇ ಲೆಕ್ಕಚಾರವೊಂದು ಕಾಣಿಸಿಕೊಂಡಿದೆ.

ಹೌದು, ವಿರಾಟ್ ಕೊಹ್ಲಿ 71ನೇ ಶತಕಕ್ಕಾಗಿ ಕಳೆದ ಎರಡು ವರ್ಷಗಳಿಂದ ಕಾಯುತ್ತಿದ್ದಾರೆ. 2019 ರಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಡೇ ನೈಟ್ ಟೆಸ್ಟ್​ನಲ್ಲಿ ವಿರಾಟ್ ಕೊಹ್ಲಿ ತಮ್ಮ ಕೊನೆಯ ಶತಕ ಬಾರಿಸಿದ್ದರು. ಇದಾದ ಬಳಿಕ ಕೊಹ್ಲಿಯ ಬ್ಯಾಟ್​​ನಿಂದ ಶತಕ ಮೂಡಿಬಂದು 2 ವರ್ಷಗಳೇ ಕಳೆದಿವೆ. ಹೀಗಾಗಿಯೇ ಮೊಹಾಲಿ ಮೈದಾನದಲ್ಲಿ 100ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಕೊಹ್ಲಿ ಬ್ಯಾಟ್​ನಿಂದ ಅಭಿಮಾನಿಗಳು 71ನೇ ಶತಕವನ್ನು ನಿರೀಕ್ಷಿಸುತ್ತಿದ್ದಾರೆ.

ಇಲ್ಲಿ ವಿಶೇಷ ಎಂದರೆ ಈ ಪಂದ್ಯದ ಮೂಲಕ ವಿರಾಟ್ ಕೊಹ್ಲಿ 100 ಟೆಸ್ಟ್ ಪಂದ್ಯವಾಡಿದ ವಿಶ್ವದ 71ನೇ ಆಟಗಾರ ಎಂದೆನಿಸಿಕೊಳ್ಳಲಿದ್ದಾರೆ. ಇನ್ನೊಂದೆಡೆ ವಿರಾಟ್ ಕೊಹ್ಲಿ ಶತಕ ಬಾರಿಸದೇ 71ನೇ ಇನಿಂಗ್ಸ್​ನಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಅಂದರೆ ಇಲ್ಲಿ ವಿರಾಟ್ ಕೊಹ್ಲಿ ನೂರು ಟೆಸ್ಟ್ ಪಂದ್ಯವಾಡಿದ ವಿಶ್ವದ 71ನೇ ಆಟಗಾರನಾಗಿ, ಶತಕವಿರದೇ 71ನೇ ಇನಿಂಗ್ಸ್​ನಲ್ಲಿ 71ನೇ ಶತಕ ಬಾರಿಸುವ ವಿಶ್ವಾಸದಲ್ಲಿದ್ದಾರೆ ಅಭಿಮಾನಿಗಳು. ಒಟ್ಟಿನಲ್ಲಿ ವಿರಾಟ್ ಕೊಹ್ಲಿಯ ಈ ಹೊಸ ಮೈಲುಗಲ್ಲಿನ ಪಂದ್ಯದಲ್ಲೇ ಕಾಕಾತಾಳೀಯ ಎಂಬಂತೆ 71 ರ ಲೆಕ್ಕಚಾರಗಳು ಮೂಡಿಬಂದಿರುವುದು ವಿಶೇಷ.

138 ರನ್ ಕೂಡ​  ಮುಖ್ಯ:
ಸದ್ಯ ಕೊಹ್ಲಿ ಕುರಿತ ಚರ್ಚೆ 71ನೇ ಶತಕ ಮತ್ತು 100ನೇ ಟೆಸ್ಟ್ ಸುತ್ತ ಸುತ್ತುತ್ತಿದೆ, ಇದು ನಿಜ ಕೂಡ, ಆದರೆ ಕೊಹ್ಲಿಗೆ ಈ ಎರಡು ಅಂಕಿ ಅಂಶಗಳ ಹೊರತಾಗಿ ಮೂರನೇ ಪ್ರಮುಖ ಅಂಕಿ ಅಂಶವೆಂದರೆ 138 ರನ್. ಟೀಮ್ ಇಂಡಿಯಾ ಮಾಜಿ ನಾಯಕ  ಈ ಸರಣಿಯಲ್ಲಿ 138 ರನ್ ಗಳಿಸಬೇಕಾಗಿದೆ. ಏಕೆಂದರೆ ವಿರಾಟ್ ಕೊಹ್ಲಿ ಈ ಸರಣಿಯ ಎಲ್ಲಾ ನಾಲ್ಕು ಇನ್ನಿಂಗ್ಸ್‌ಗಳನ್ನು ಆಡಿದರೆ, ನಾಲ್ಕರಲ್ಲೂ ಔಟಾದರೆ ಮತ್ತು 138 ರನ್‌ಗಳಿಗಿಂತ ಕಡಿಮೆ ಸ್ಕೋರ್ ಮಾಡಿದರೆ ಅವರ ಟೆಸ್ಟ್ ಬ್ಯಾಟಿಂಗ್ ಸರಾಸರಿ 50 ಕ್ಕಿಂತ ಕೆಳಗಿಳಿಯುತ್ತದೆ.

ವಿರಾಟ್ ಕೊಹ್ಲಿ ಇದುವರೆಗೆ 99 ಟೆಸ್ಟ್‌ಗಳ 168 ಇನ್ನಿಂಗ್ಸ್‌ಗಳಲ್ಲಿ 7962 ರನ್ ಗಳಿಸಿದ್ದಾರೆ. ಇದರಲ್ಲಿ ಅವರು 50.39 ಸರಾಸರಿ ಹೊಂದಿದ್ದಾರೆ. ನಾಲ್ಕು ಬಾರಿ ಔಟಾದರೂ ಈ ಸರಣಿಯಲ್ಲಿ ಕೊಹ್ಲಿ 138ಕ್ಕೂ ಹೆಚ್ಚು ರನ್ ಗಳಿಸಿದರೆ ಅವರ ಸರಾಸರಿ 50ಕ್ಕಿಂತ ಹೆಚ್ಚಾಗಿರುತ್ತದೆ. ಹೀಗಾಗಿ ಕಳೆದ ಕೆಲ ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ರನ್ ಸರಾಸರಿಯನ್ನು ಉಳಿಸುವುದು ಕೊಹ್ಲಿಗೆ ಅನಿವಾರ್ಯ. ಇದರಲ್ಲಿ ಕೊಹ್ಲಿ ವಿಫಲರಾದರೆ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಅವರ ಸರಾಸರಿ 50ಕ್ಕಿಂತ ಕೆಳಗಿಳಿಯಲಿದೆ. ಅಂದಹಾಗೆ, 2017ರ ಆಗಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧವೇ ಕೊಹ್ಲಿ ಸರಾಸರಿ 50 ರಿಂದ 49.55ಕ್ಕೆ ಕುಸಿದಿರುವುದು ಕಾಕತಾಳೀಯ. ಇದೀಗ ಶ್ರೀಲಂಕಾ ವಿರುದ್ದದ ಪಂದ್ಯವೇ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಸರಾಸರಿಯನ್ನು ನಿರ್ಧರಿಸಲಿದೆ.

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?

(Virat Kohli All Set For A Special ‘71’)