IND vs AUS: 14 ವರ್ಷಗಳಲ್ಲಿ ಇದೇ ಮೊದಲು; ಕೊಹ್ಲಿ ಕೆರಿಯರ್‌ನ ಅತಿ ಕೆಟ್ಟ ಪ್ರವಾಸ

|

Updated on: Jan 04, 2025 | 2:56 PM

Virat Kohli's Disappointing Australia Tour 2024-25: ವಿರಾಟ್ ಕೊಹ್ಲಿ ಅವರ ಇತ್ತೀಚಿನ ಆಸ್ಟ್ರೇಲಿಯಾ ಪ್ರವಾಸವು ಅವರ ಕೆರಿಯರ್‌ನ ಅತಿ ಕೆಟ್ಟ ಪ್ರವಾಸವಾಗಿದೆ. 5 ಪಂದ್ಯಗಳಲ್ಲಿ ಕೇವಲ 190 ರನ್ ಗಳಿಸಿದ್ದು, ಇದು ಅವರ ಹಿಂದಿನ ಪ್ರವಾಸಗಳಿಗೆ ಹೋಲಿಸಿದರೆ ತೀರಾ ಕಡಿಮೆ. ಪರ್ತ್‌ನಲ್ಲಿ ಒಂದು ಶತಕ ಸಿಡಿಸಿದ್ದನ್ನು ಬಿಟ್ಟರೆ, ಉಳಿದ ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿಯ ಪ್ರದರ್ಶನ ನಿರಾಶಾದಾಯಕವಾಗಿತ್ತು.

IND vs AUS: 14 ವರ್ಷಗಳಲ್ಲಿ ಇದೇ ಮೊದಲು; ಕೊಹ್ಲಿ ಕೆರಿಯರ್‌ನ ಅತಿ ಕೆಟ್ಟ ಪ್ರವಾಸ
ವಿರಾಟ್ ಕೊಹ್ಲಿ
Follow us on

ಟೀಂ ಇಂಡಿಯಾದ ಅನುಭವಿ ಬ್ಯಾಟ್ಸ್​ಮನ್ ವಿರಾಟ್ ಕೊಹ್ಲಿಗೆ ಆಸ್ಟ್ರೇಲಿಯಾ ಪ್ರವಾಸದ ಕೊನೆಯ ಇನ್ನಿಂಗ್ಸ್​ನಲ್ಲೂ ವಿಶೇಷ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಸಿಡ್ನಿ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲೂ ವಿರಾಟ್ ಕೊಹ್ಲಿ ಮತ್ತದೇ ತಪ್ಪನ್ನು ಮಾಡಿ ವಿಕೆಟ್ ಕೈಚೆಲ್ಲಿ ಪೆವಿಲಿಯನ್‌ ಸೇರಿಕೊಂಡರು. ಇದರೊಂದಿಗೆ ವಿರಾಟ್ ಈ ಆಸ್ಟ್ರೇಲಿಯಾ ಪ್ರವಾಸವನ್ನು ನಿರಾಶಾದಾಯಕ ಪ್ರದರ್ಶನದೊಂದಿಗೆ ಕೊನೆಗೊಳಿಸಿದ್ದಾರೆ. ಇದು ವಿರಾಟ್ ಅವರ ಐದನೇ ಆಸ್ಟ್ರೇಲಿಯಾ ಪ್ರವಾಸವಾಗಿದ್ದು, ಈ ಹಿಂದೆ ಆಸ್ಟ್ರೇಲಿಯದಲ್ಲಿ ನಡೆದ ಟೆಸ್ಟ್‌ನಲ್ಲಿ ಭಾರೀ ಅಬ್ಬರ ಸೃಷ್ಟಿಸಿದ್ದ ಅವರ ಬ್ಯಾಟ್ ಈ ಬಾರಿ ಸಂಪೂರ್ಣವಾಗಿ ಮೌನಕ್ಕೆ ಶರಣಾಗಿತ್ತು. ಕಳೆದ 4 ಪ್ರವಾಸಗಳಿಗೆ ಹೋಲಿಸಿದರೆ ಈ ಬಾರಿಯ ಆಸ್ಟ್ರೇಲಿಯಾ ಪ್ರವಾಸ ಕೊಹ್ಲಿಯ ಇದುವರೆಗಿನ ಅತ್ಯಂತ ಕೆಟ್ಟ ಪ್ರವಾಸ ಎಂದು ಸಾಬೀತಾಗಿದೆ.

5 ಪಂದ್ಯಗಳಲ್ಲಿ ಕೇವಲ 190 ರನ್

ಸಿಡ್ನಿ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಸ್ಕಾಟ್ ಬೋಲ್ಯಾಂಡ್ ಎಸೆತದಲ್ಲಿ ಸ್ಲಿಪ್‌ನಲ್ಲಿ ನಿಂತಿದ್ದ ಸ್ಟೀವ್ ಸ್ಮಿತ್‌ಗೆ ಕ್ಯಾಚ್ ನೀಡಿ ಕೇವಲ 6 ರನ್ ಗಳಿಸಿ ಔಟಾದರು. ಇದರೊಂದಿಗೆ ಅವರು ಆಸ್ಟ್ರೇಲಿಯನ್ ಪ್ರವಾಸವನ್ನು ಯಾವ ರೀತಿಯಲ್ಲಿ ಆರಂಭಿಸಿದ್ದರೋ ಅದೇ ರೀತಿಯಲ್ಲಿ ಅಂತ್ಯಗೊಳಿಸಿದ್ದಾರೆ. ಸಿಡ್ನಿ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ, ವಿರಾಟ್ ಕೇವಲ 23 ರನ್ ಗಳಿಸಲು ಸಾಧ್ಯವಾಯಿತು. ಇಡೀ ಸರಣಿಯಲ್ಲಿ ಆಡಿದ ಐದು ಪಂದ್ಯಗಳ 9 ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿಗೆ ಕೇವಲ 190 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಇದರಲ್ಲಿ ಒಂದು ಶತಕವೂ ಸೇರಿದ್ದು, ಪರ್ತ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಕೊಹ್ಲಿ ಶತಕ ಸಿಡಿಸಿದ್ದನ್ನು ಬಿಟ್ಟರೆ ಉಳಿದ 8 ಇನ್ನಿಂಗ್ಸ್​ಗಳಲ್ಲಿ ಕೊಹ್ಲಿಗೆ ಅರ್ಧಶತಕ ಬಾರಿಸಲು ಸಾಧ್ಯವಾಗಲಿಲ್ಲ.

ಕಳೆದ ಪ್ರವಾಸಗಳಲ್ಲಿ ಕೊಹ್ಲಿ ಪ್ರದರ್ಶನ

ವಿರಾಟ್ ಕೊಹ್ಲಿ 2011 ರಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದರು. ಆ ಪ್ರವಾಸದಲ್ಲಿ ಕೊಹ್ಲಿ ಬ್ಯಾಟ್ ಒಂದು ಶತಕ ಮತ್ತು ಒಂದು ಅರ್ಧ ಶತಕ ಸಿಡಿಸಿತ್ತು. ಇದಾದ ಬಳಿಕ 2014ರಲ್ಲಿ ಎರಡನೇ ಟೆಸ್ಟ್‌ಗಾಗಿ ಆಸ್ಟ್ರೇಲಿಯಾಕ್ಕೆ ಬಂದಿದ್ದ ವಿರಾಟ್ ತಮ್ಮ ಅತ್ಯುತ್ತಮ ಆಟ ಪ್ರದರ್ಶಿಸಿದ್ದರು. ಈ ಅವಧಿಯಲ್ಲಿ ವಿರಾಟ್ ನಾಲ್ಕು ಟೆಸ್ಟ್‌ಗಳಲ್ಲಿ ನಾಲ್ಕು ಶತಕ ಮತ್ತು ಒಂದು ಅರ್ಧ ಶತಕದ ಸಹಾಯದಿಂದ 692 ರನ್ ಗಳಿಸಿದ್ದರು. ಈ ಪ್ರವಾಸದಲ್ಲಿ ಅವರ ಸರಾಸರಿ 86.50 ಆಗಿತ್ತು.

ನಂತರ 2018 ರಲ್ಲಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಬಂದಿದ್ದ ಕೊಹ್ಲಿ ಬ್ಯಾಟ್‌ನಿಂದ ಒಂದು ಶತಕ ಮತ್ತು ಒಂದು ಅರ್ಧ ಶತಕ ಬಂದಿತ್ತು. ನಾಲ್ಕನೇ ಬಾರಿಯ ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿರಾಟ್ ಕೇವಲ ಮೂರು ಇನ್ನಿಂಗ್ಸ್‌ಗಳನ್ನು ಆಡಿ ಒಂದು ಅರ್ಧಶತಕ ದಾಖಲಿಸಿದ್ದರು. ಒಟ್ಟಾರೆಯಾಗಿ, 2011-12 ರಿಂದ 2020-21 ರ ಪ್ರವಾಸದವರೆಗೆ, ವಿರಾಟ್ 13 ಪಂದ್ಯಗಳಲ್ಲಿ 54.08 ರ ಅತ್ಯುತ್ತಮ ಸರಾಸರಿಯಲ್ಲಿ 1352 ರನ್ ಗಳಿಸಿದ್ದರು. ಆದಾಗ್ಯೂ, 2024-25ರ ಆಸ್ಟ್ರೇಲಿಯಾ ಪ್ರವಾಸವು ವಿರಾಟ್‌ಗೆ ಅತ್ಯಂತ ಕೆಟ್ಟ ಮತ್ತು ಮರೆಯಲಾಗದ ಪ್ರವಾಸವಾಗಿದೆ. ಅಂದಹಾಗೆ, ವಿರಾಟ್‌ಗೆ ಈ ಆಸ್ಟ್ರೇಲಿಯಾ ಪ್ರವಾಸ ಮಾತ್ರವಲ್ಲದೆ 2024 ರ ವರ್ಷವೂ ಮರೆಯಲಾಗದಂತಿದೆ. ಏಕೆಂದರೆ ಈ ವರ್ಷ ಕೊಹ್ಲಿ ಆಡಿರುವ 19 ಇನ್ನಿಂಗ್ಸ್‌ಗಳಲ್ಲಿ ಕೇವಲ ಒಂದು ಶತಕ ಮತ್ತು ಒಂದು ಅರ್ಧಶತಕದೊಂದಿಗೆ 417 ರನ್ ಮಾತ್ರ ಕಲೆಹಾಕಿದ್ದಾರೆ. ಕಳೆದ ವರ್ಷ ಟೆಸ್ಟ್‌ನಲ್ಲಿ ಕೊಹ್ಲಿ ಸರಾಸರಿ 25ಕ್ಕಿಂತ ಕಡಿಮೆ ಇತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ