Virat Kohli, RCB vs MI: ಪೊಲಾರ್ಡ್, ಹಾರ್ದಿಕ್ ವಿಕೆಟ್ ಕೀಳಲು ಕೊಹ್ಲಿ ಮಾಡಿದ ಮಾಸ್ಟರ್ ಪ್ಲ್ಯಾನ್ ಏನು ಗೊತ್ತಾ?
Virat Kohli planned attack against Kieron Pollard and Hardik Pandya: ಪಂದ್ಯವನ್ನು ಯಾವುದೇ ಸಂದರ್ಭದಲ್ಲಿ ತಲೆಕೆಳಗಾಗಿಸುವ ಸಾಮರ್ಥ್ಯ ಪೊಲಾರ್ಡ್ ಹಾಗು ಹಾರ್ದಿಕ್ ಪಾಂಡ್ಯ ಹೊಂದಿದ್ದಾರೆ. ಹೀಗಾಗಿ ಇವರಿಬ್ಬರನ್ನು ಔಟ್ ಮಾಡಲು ವಿರಾಟ್ ಕೊಹ್ಲಿ ಮಾಡಿದ ಪ್ಲ್ಯಾನ್ ಏನು ನೋಡಿ.

ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟರ್ ಕೀರೊನ್ ಪೊಲಾರ್ಡ್ (Kieron Pollard) ಮುಂಬೈ ಇಂಡಿಯನ್ಸ್ (Mumbai Indians) ತಂಡಕ್ಕೆ ಅದೆಷ್ಟೊ ಬಾರಿ ಏಕಾಂಗಿ ನಿಂತು ಗೆಲುವು ತಂದುಕೊಟ್ಟಿದ್ದಾರೆ. ಮುಂಬೈ (MI) ಕುಸಿತ ಕಂಡಾಗ ಲೋವರ್ ಆರ್ಡರ್ನಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ಬಂದು ಮ್ಯಾಚ್ ವಿನ್ ಮಾಡಿದ ಉದಾಹರಣೆ ಸಾಕಷ್ಟಿವೆ. ಭಾನುವಾರ ನಡೆದ ಆರ್ಸಿಬಿ (RCB) ವಿರುದ್ಧದ ಪಂದ್ಯದಲ್ಲೂ ಮುಂಬೈ ಇಂಡಿಯನ್ಸ್ಗೆ ಇಂತಹ ಪರಿಸ್ಥಿತಿ ಎದುರಾಗಿತ್ತು. ಆದರೆ, ಇಲ್ಲಿ ಪೊಲಾರ್ಡ್ ಅಥವಾ ಹಾರ್ದಿಕ್ ಮಿಂಚಲಿಲ್ಲ. ಬದಲಾಗಿ ಪಂದ್ಯದ ಗತಿಯನ್ನೇ ಬದಲಾಯಿಸಿದ್ದು ವಿರಾಟ್ ಕೊಹ್ಲಿ (Virat Kohli) ಪಡೆಯ ಬೌಲರ್ಗಳು. ಕೊಹ್ಲಿ ಮಾಡಿದ ಮಾಸ್ಟರ್ ಮೈಂಡ್ಗೆ ಎದುರಾಳಿಯ ಇಬ್ಬರು ಅಪಾಯಕಾರಿ ಬ್ಯಾಟರ್ಗಳು ಪೆವಿಲಿಯನ್ ಸೇರಬೇಕಾಗಿ ಬಂತು. ಪರಿಣಾಮ ಆರ್ಸಿಬಿ 54 ರನ್ಗಳ ಭರ್ಜರಿ ಗೆಲುವು ಸಾಧಿಸಿತು.
ಪಂದ್ಯವನ್ನು ಯಾವುದೇ ಸಂದರ್ಭದಲ್ಲಿ ತಲೆಕೆಳಗಾಗಿಸುವ ಸಾಮರ್ಥ್ಯ ಪೊಲಾರ್ಡ್ ಹಾಗು ಹಾರ್ದಿಕ್ ಪಾಂಡ್ಯ ಹೊಂದಿದ್ದಾರೆ. ನಿನ್ನೆಯ ಪಂದ್ಯದಲ್ಲೂ ಮುಂಬೈ ಇವರನ್ನೇ ನಂಬಿತ್ತು. ಅನೇಕರು ಇವರಿಬ್ಬರು ಟಾರ್ಗೆಟ್ ಚೇಸ್ ಮಾಡಿ ಮುಂಬೈಗೆ ಗೆಲುವು ತಂದುಕೊಡುತ್ತಾರೆ ಎಂದೇ ಗ್ರಹಿಸಿದ್ದರು. ಇವರಿಬ್ಬರು ಕ್ರೀಸ್ನಲ್ಲಿ ಇದ್ದಾಗ ನಾಯಕ ವಿರಾಟ್ ಕೊಹ್ಲಿ ಮೊದಲು ಯುಜ್ವೇಂದ್ರ ಚಹಾಲ್ಗೆ ಬಾಲ್ ನೀಡಲು ಮುಂದಾದರು. ಬಳಿಕ ವೇಗಿಗಳು ಚೆಂಡು ಎಸೆಯ ಬೇಕು ಎಂಬ ತೀರ್ಮಾನ ಮಾಡಿಕೊಂಡಿದ್ದರಂತೆ. ಅದರಂತೆ 16ನೇ ಡ್ಯಾನ್ ಕ್ರಿಸ್ಟಿಯನ್ಗೆ ನೀಡಿದರು. ನಂತರ ಮುಂದಿನ ಓವರ್ ಹರ್ಷಲ್ ಪಟೇಲ್ಗೆ ಕೊಟ್ಟರು. ಈ ಬಗ್ಗೆ ವಿರಾಟ್ ಕೊಹ್ಲಿ ಮಾತನಾಡಿದ್ದು, ಇಬ್ಬರು ಸ್ಫೋಟಕ ಬ್ಯಾಟರ್ಗಳನ್ನು ಔಟ್ ಮಾಡಲು ಮಾಡಿದ ಪ್ಲ್ಯಾನ್ ಬಗ್ಗೆ ವಿವರಿಸಿದ್ದಾರೆ.
“ನಾನು ಎಬಿ ಡಿವಿಲಿಯರ್ಸ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಜೊತೆ ಈ ಕುರಿತು ಮಾತನಾಡಿದೆ. ಅವರು ನಿನ್ನ ಮನಸ್ಸಿಗೆ ಏನು ಅನಿಸುತ್ತದೋ ಅದನ್ನು ಮಾಡು ಎಂದು ಸಲಹೆ ನೀಡಿದರು. ನಾನು ಡ್ಯಾನ್ ಕ್ರಿಸ್ಟಿಯನ್ಗೆ ಬೌಲಿಂಗ್ ಕೊಡಲು ಯೋಚಿಸಿದೆ. ಯಾಕಂದ್ರೆ ಅವರು ಅನುಭವಿ ಬೌಲರ್ ಮತ್ತು ಸ್ಲೋವರ್ ಬೌನ್ಸರ್ ಎಸೆಯುವುದರಲ್ಲಿ ನಿಪುಣರಾಗಿದ್ದರು. ಆಗ ನಮಗೆ ವಿಕೆಟ್ ಬರಬಹುದೆಂದು ಯೋಚಿಸಿದೆ.”
“ಚಹಾಲ್ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದರು. ಆದರೆ, ಅದು ನಮಗೆ ಸಾಕಾಗಲಿಲ್ಲ. ಚಹಾಲ್ ಓವರ್ ಮುಗಿದ ನಂತರ ಹಾರ್ದಿಕ್-ಪೊಲಾರ್ಡ್ ಖಂಡಿತಾ ಇತರೆ ಬೌಲರ್ಗಳನ್ನು ಟಾರ್ಗೆಟ್ ಮಾಡುತ್ತಾರೆ ಎಂದು ತಿಳಿದಿತ್ತು. ಹೀಗಾಗಿ ಕ್ರಿಸ್ಟಿಯನ್ಗೆ ಬೌಲಿಂಗ್ ನೀಡಿದೆ, ಮತ್ತು ಅವರು ಅಮೋಘವಾಗಿ ಬೌಲಿಂಗ್ ಮಾಡಿದರು. ಇತ್ತ ಹರ್ಷಲ್ ಪಟೇಲ್ ಬೌಲಿಂಗ್ ಮಾಡಿದ ರೀತಿ ಊಹಿಸಲು ಸಾಧ್ಯವಿಲ್ಲ. ನಾವು ಮಾಡಿದ ಸ್ಲೋವರ್ ಬಾಲ್ ಚೆನ್ನಾಗಿ ವರ್ಕ್ ಆಯಿತು. ಆಗ ಪಂದ್ಯ ಸಂಪೂರ್ಣ ನಮ್ಮ ಹಿಡಿತಕ್ಕೆ ಬಂತು” ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಹ್ಯಾಟ್ರಿಕ್ ಹೀರೋ ಹರ್ಷಲ್ ಪಟೇಲ್ ಪಂದ್ಯ ಮುಗಿದ ಬಳಿಕ ಮಾತನಾಡಿದ್ದು, “ಬ್ಯಾಟರ್ಗಳು ನನ್ನ ಸ್ಲೋ ಬಾಲ್ ಅನ್ನು ಕನೆಕ್ಟ್ ಮಾಡಲು ಸಾಧ್ಯವಾಗದೆ ಇದ್ದಿದ್ದು ಸಹಾಯವಾಯಿತು. ಹ್ಯಾಟ್ರಿಕ್ ಪಡಯುವ ಮುನ್ನ ನಾನು ಬೆಟ್ ಮಾಡಿದ್ದೆ. ಇದು ಆರನೇ ಬಾರಿ ನನಗೆ ಹ್ಯಾಟ್ರಿಕ್ ಅವಕಾಶ ಸಿಕ್ಕಿದ್ದು. ಈ ಬಾರಿ ವಿಫಲವಾಗಲಿಲ್ಲ. ತುಂಬಾ ಸಂತಸ ತಂದಿದೆ” ಎಂದು ಪಟೇಲ್ ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ತಂಡದ ಬೌಲಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಒಂದು ಸಂದರ್ಭದಲ್ಲಿ ಆರ್ಸಿಬಿ ತಂಡದ ಮೊತ್ತ 180ರ ಗಡಿ ದಾಟುವುದರಲ್ಲಿತ್ತು. ಅದನ್ನು ನಮ್ಮ ಬೌಲರ್ಗಳು ತಡೆದು ಉತ್ತಮ ಪ್ರದರ್ಶನ ತೋರಿದ್ದಾರೆ. ಮುಂದಿನ ಪಂದ್ಯದಲ್ಲಿ ಖಂಡಿತಾ ಕಮ್ಬ್ಯಾಕ್ ಮಾಡುತ್ತೇವೆ. ಈರೀತಿಯ ಸಂದರ್ಭವನ್ನು ನಾವು ಈ ಸೀಸನ್ನಲ್ಲಿ ಮಾತ್ರವಲ್ಲ ಅನೇಕ ಬಾರಿ ಎದುರಿಸಿದ್ದೇವೆ ಎಂದು ರೋಹಿತ್ ವಿಶ್ವಾಸದ ಮಾತನ್ನು ಹೇಳಿದ್ದಾರೆ.
Virat Kohli: ಹ್ಯಾಟ್ರಿಕ್ ಸೋಲಿನಿಂದ ಪಾರಾಗಿ ರೋಚಕ ಗೆಲುವಿನ ಬಗ್ಗೆ ಇಂಚಿಂಚು ಮಾಹಿತಿ ತೆರೆದಿಟ್ಟ ವಿರಾಟ್ ಕೊಹ್ಲಿ
IPL 2021, SRH vs RR: ಹೈದರಾಬಾದ್ಗೆ ಔಪಚಾರಿಕ ಪಂದ್ಯ, ರಾಜಸ್ಥಾನಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ
(Virat Kohli Explained How we used Harshal Patel to Out Pollard and Hardik in IPl 2021 RCB vs MI Match)