ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಆಡಿದ ಒಂಬತ್ತು ಪಂದ್ಯಗಳಲ್ಲಿ ಐದರಲ್ಲಿ ಗೆಲುವು ನಾಲ್ಕರಲ್ಲಿ ಸೋಲು ಕಂಡು 10 ಅಂಕದೊಂದಿಗೆ ಪಾಯಿಂಟ್ ಟೇಬಲ್ನಲ್ಲಿ ಐದನೇ ಸ್ಥಾನದಲ್ಲಿದೆ. ಮುಂಬರುವ ಪಂದ್ಯಗಳು ಆರ್ಸಿಬಿಗೆ ಬಹುಮುಖ್ಯವಾಗಿದ್ದು ಪ್ಲೇ ಆಫ್ ಪ್ರವೇಶಿಸಬೇಕಾದರೆ ಗೆಲ್ಲಬೇಕಾಗಿದೆ. ಆದರೆ, ಕಳೆದ ಎರಡು ಪಂದ್ಯಗಳಲ್ಲಿ ಡುಪ್ಲೆಸಿಸ್ ಪಡೆ ಬ್ಯಾಟಿಂಗ್ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿರುವುದು ತಲೆನೋವಾಗಿ ಪರಿಣಮಿಸಿದೆ. ಫಾಫ್, ಕೊಹ್ಲಿ, ದಿನೇಶ್ ಕಾರ್ತಿಕ್, ಮ್ಯಾಕ್ಸ್ವೆಲ್ (Glenn Maxwell) ನಂತಹ ಘಟಾನುಘಟಿ ಬ್ಯಾಟ್ಸ್ಮನ್ಗಳು ತಂಡದಲ್ಲಿದ್ದರೂ ಯಶಸ್ಸು ಸಿಗುತ್ತಿಲ್ಲ. ಆರ್ಸಿಬಿ ತನ್ನ ಮುಂದಿನ ಪಂದ್ಯವನ್ನ ಶನಿವಾರ ಗುಜರಾತ್ ಟೈಟಾನ್ಸ್ ವಿರುದ್ಧ ಆಡಲಿದೆ. ಇದಕ್ಕೂ ಮುನ್ನ ಬೆಂಗಳೂರು ಆಟಗಾರರು ಪಾರ್ಟಿ ಮಾಡಿ ಸಖತ್ ಎಂಜಾಯ್ ಮಾಡಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿ (Virat Kohli) ಪುಷ್ಪಾ ಸಿನಿಮಾದ ಹಾಡಿಗೆ ಸ್ಟೆಪ್ ಹಾಕಿ ಮಿಂಚಿದ್ದಾರೆ.
ಹೌದು, ಆರ್ಸಿಬಿಯ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಅವರು ಭಾರತೀಯ ಮೂಲದ ವಿನಿ ರಾಮನ್ ಜೊತೆ ಮದುವೆಯಾಗಿ ಏಪ್ರಿಲ್ 27ಕ್ಕೆ ಒಂದು ತಿಂಗಳಾಗಿದೆ. ಈ ಪ್ರಯುಕ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಯೋಬಬಲ್ ಅಡಿಯಲ್ಲಿ ಆಟಗಾರರಿಗೆ ಪಾರ್ಟಿ ಹಮ್ಮಿಕೊಂಡಿತ್ತು. ಆರ್ಸಿಬಿ ತಂಡದ ಬಹುತೇಕ ಎಲ್ಲ ಆಟಗಾರರು ಇದರಲ್ಲಿ ಹಾಜರಿದ್ದರು. ಅಲ್ಲದೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅನೇಕರು ಫೋಟೋ, ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲೂ ಅಲ್ಲು ಅರ್ಜುನ್ ನಟನೆಯ ಪುಷ್ಪಾ ಸಿನಿಮಾದ ಐಟಮ್ ಸಾಂಗ್ ಸಮಂತಾ ಡ್ಯಾನ್ಸ್ ಮಾಡಿರುವ ‘ಹು ಅಂಟಾವ ಮಾವ’ ಹಾಡಿಗೆ ಕಿಂಗ್ ಕೊಹ್ಲಿ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಇದರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
Mood ? @imVkohli @RCBTweets #IPL #IPL2022 #ViratKohli #CricketTwitter #RCB #PlayBold pic.twitter.com/pWwYYSFFq0
— RCBIANS OFFICIAL (@RcbianOfficial) April 27, 2022
ಆರ್ಸಿಬಿ ಸ್ಪಿನ್ನರ್ ಶ್ರೀಲಂಕಾದ ವನಿಂದು ಹಸರಂಗ ಕೂಡ ಹಸಿರು ಕುರ್ತಾದಲ್ಲಿ ಮಿಂಚಿದ್ದು ಫೋಟೋ ಹಂಚಿಕೊಂಡಿದ್ದಾರೆ. ಇವರ ಜೊತೆಗೆ ರುಥರ್ಫಾರ್ಡ್ ಕೂಡ ಇದ್ದಾರೆ. ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ಪತಿಯ ಜೊತೆ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ಮನ್ ಗ್ಲೆನ್ ಮ್ಯಾಕ್ಸ್ವೆಲ್ ತಮಿಳುನಾಡಿನ ವಿನಿ ರಾಮನ್ ಅವರನ್ನು ಕಳೆದ ತಿಂಗಳು ಮಾರ್ಚ್ 27 ರಂದು ತಮಿಳು ಸಂಪ್ರದಾಯದಂತೆ ಮದುವೆಯಾಗಿದ್ದರು. ಇದಕ್ಕೂ ಮುನ್ನ ಮಾರ್ಚ್ 18 ರಂದು ಆಸ್ಟ್ರೇಲಿಯಾದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾಗಿದ್ದರು. ವಿನಿ ರಾಮನ್ ತಮಿಳುನಾಡು ಮೂಲದವರಾದವರೂ ಹುಟ್ಟಿ ಬೆಳೆದದ್ದೆಲ್ಲಾ ಆಸ್ಟ್ರೇಲಿಯಾದಲ್ಲೇ. ಮೆಡಿಕಲ್ ಸೈನ್ಸ್ ಓದಿರುವ ಇವರು ಔಷಧ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಗ್ಲೆನ್ ಮತ್ತು ವಿನಿ ರಾಮನ್ ಮೊದಲು ಪರಿಚಯ ಆಗಿದ್ದು 2013ರಲ್ಲಿ. ಮೆಲ್ಬೋರ್ನ್ ಸ್ಟಾರ್ಸ್ ಕಾರ್ಯಕ್ರಮದಲ್ಲಿ ಇಬ್ಬರ ಪರಿಚಯ ಆಗಿದೆ. 2017 ರಿಂದ ಇಬ್ಬರೂ ಡೇಟಿಂಗ್ ಮಾಡುತ್ತಿದ್ದರು.
ಇವರಿಬ್ಬರ ಲವ್ ಸ್ಟೋರಿಯಲ್ಲಿ ಮೊದಲು ಪ್ರೊಪೋಸ್ ಮಾಡಿದ್ದೇ ಗ್ಲೆನ್ ಮ್ಯಾಕ್ಸ್ವೆಲ್ ಅವರಂತೆ. ನಾಲ್ಕು ವರ್ಷಗಳಲ್ಲಿ ಇಬ್ಬರೂ ಬಹಳಷ್ಟು ದೇಶಗಳನ್ನ ಸುತ್ತಿದ್ದಾರೆ. ನಾಲ್ಕು ವರ್ಷಗಳ ಡೇಟಿಂಗ್ ಬಳಿಕ 2020ರ ಫೆಬ್ರವರಿಯಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ವಿನಿ ರಾಮನ್ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಆ ವರ್ಷವೇ ಮದುವೆ ಆಗಬೇಕಿತ್ತು. ಆದರೆ, ಕೋವಿಡ್ ಮಹಾಮಾರಿ ವಕ್ಕರಿಸಿದ್ದರಿಂದ ಮದುವೆ ಮುಂದೂಡಲಾಗಿತ್ತು. ಮದುವೆ ಬಳಿಕ ಮ್ಯಾಕ್ಸ್ವೆಲ್ ಇದೀಗ ಐಪಿಎಲ್ನಲ್ಲಿ ಆರ್ಸಿಬಿ ತಂಡದ ಪರ ಆಡುತ್ತಿದ್ದಾರೆ.
Muttiah Muralitharan: ರಶೀದ್ ಸಿಕ್ಸ್ ಕಂಡು ತಾಳ್ಮೆ ಕಳೆದುಕೊಂಡ ಮುರಳಿಧರನ್: ಡಗೌಟ್ನಲ್ಲಿ ಮಾಡಿದ್ದೇನು ನೋಡಿ
IPL 2022 Points Table: 14 ಅಂಕದೊಂದಿಗೆ ಗುಜರಾತ್ ಪ್ಲೇ ಆಫ್ ಹಾದಿ ಸುಗಮ: ಐಪಿಎಲ್ 2022 ಪಾಯಿಂಟ್ ಟೇಬಲ್ ಹೇಗಿದೆ?