
ಇಂದೋರ್‌ನ ಹೊಳ್ಕರ್ ಮೈದಾನದಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ಮತ್ತೆ ಆಪತ್ಭಾಂದವನಾದ ವಿರಾಟ್ ಕೊಹ್ಲಿ (Virat Kohli) ಐತಿಹಾಸಿಕ ಇನ್ನಿಂಗ್ಸ್ ಆಡಿದ್ದಾರೆ. ನ್ಯೂಜಿಲೆಂಡ್ ನೀಡಿದ 338 ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪ್ರಮುಖ ವಿಕೆಟ್ ಕಳೆದುಕೊಂಡರೂ, ಇನ್ನೊಂದು ತುದಿಯಲ್ಲಿ ಸಂಯಮದಿಂದ ಬ್ಯಾಟ್ ಬೀಸಿದ ಕೊಹ್ಲಿ 93 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದರು. ಆರಂಭಿಕ ಆಘಾತಕ್ಕೆ ಗುರಿಯಾಗಿದ್ದ ಟೀಂ ಇಂಡಿಯಾದ ಇನ್ನಿಂಗ್ಸ್ ನಿಭಾಯಿಸುವುದರೊಂದಿಗೆ ಶತಕದ ಗಡಿ ದಾಟಿದ ಕೊಹ್ಲಿ, ಈ ಶತಕದೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಎಂಬ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಇದು ಮಾತ್ರವಲ್ಲದೆ ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ಕೊಹ್ಲಿಗೆ ಇದು ಚೊಚ್ಚಲ ಶತಕವೂ ಆಗಿದೆ. ಈ ಮೈದಾನದಲ್ಲಿ ಈ ಹಿಂದೆ ಆಡಿದ್ದ ಪ್ರತಿಯೊಂದು ಪಂದ್ಯದಲ್ಲೂ ವಿರಾಟ್ ಕೊಹ್ಲಿ ವಿಫಲರಾಗಿದ್ದರು. ಈ ಮೈದಾನದಲ್ಲಿ ಈ ಹಿಂದಿನ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿಗೆ ಅರ್ಧಶತಕವನ್ನು ಬಾರಿಸಲು ಸಾಧ್ಯವಾಗಿರಲಿಲ್ಲ. 4 ಇನ್ನಿಂಗ್ಸ್‌ಗಳಲ್ಲಿ ಒಟ್ಟು 99 ರನ್ ಬಾರಿಸಿದ್ದ ಕೊಹ್ಲಿ, ಈ ಬಾರಿ ಈ ಎಲ್ಲಾ ಅಡೆತಡೆಗಳನ್ನು ನಿವಾರಿಸಿದ್ದಲ್ಲದೆ, ಶತಕದ ಬರವನ್ನು ನೀಗಿಸಿಕೊಂಡರು. ಇದು ಕೊಹ್ಲಿ ಅವರ 54 ನೇ ಏಕದಿನ ಶತಕ ಮತ್ತು ಅವರ 85 ನೇ ಅಂತರರಾಷ್ಟ್ರೀಯ ಶತಕವಾಗಿದೆ.
ಆದಾಗ್ಯೂ, ಈ ಪಂದ್ಯದಲ್ಲಿ ಟೀಂ ಇಂಡಿಯಾದ ವಿಕೆಟ್‌ಗಳು ಒಂದರ ಹಿಂದೆ ಒಂದರಂತೆ ಬೀಳುತ್ತಿದ್ದರಿಂದ ಕೊಹ್ಲಿಯ ಶತಕ ಅಸಂಭವವೆಂದು ತೋರುತ್ತಿತ್ತು. ತಂಡದ ಸ್ಕೋರ್ ಕೇವಲ 28 ರನ್ಗಳಿದ್ದಾಗ ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಿದರು. ಆ ಬಳಿಕ ಕ್ರೀಸ್‌ಗೆ ಬಂದ ಕೊಹ್ಲಿ ತಮ್ಮ ಎಂದಿನ ಆಟವನ್ನು ಮುಂದುರೆಸಿದರು. ಆದಾಗ್ಯೂ ತಂಡವು ಕೇವಲ 71 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ಸೋಲು ಸನ್ನಿಹಿತವೆಂದು ತೋರುತ್ತಿತ್ತು, ಆದರೆ ಕೊಹ್ಲಿಗೆ ಜೊತೆಯಾದ ನಿತೀಶ್ ಕುಮಾರ್ ರೆಡ್ಡಿ 88 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ನಂತರ ಕೊಹ್ಲಿ ಮತ್ತು ನಿತೀಶ್ ತಮ್ಮ ತಮ್ಮ ಅರ್ಧಶತಕಗಳನ್ನು ಪೂರೈಸಿದರು.
ಈ ವೇಳೆ ಅರ್ಧಶತಕ ಬಾರಿಸಿದ್ದ ನಿತೀಶ್ ಔಟಾದ ಬಳಿಕ ಬಂದ ರವೀಂದ್ರ ಜಡೇಜಾ ಕೂಡ ಬೇಗನೇ ವಿಕೆಟ್ ಒಪ್ಪಿಸಿದರು. ಹೀಗಾಗಿ ಟೀಂ ಇಂಡಿಯಾ 178 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ಹಂತದಲ್ಲಿ ಕೊಹ್ಲಿಗೆ, ಹರ್ಷಿತ್ ರಾಣಾ ಅತ್ಯುತ್ತಮ ಬೆಂಬಲ ನೀಡಿದರು. ಇದರ ಲಾಭವನ್ನು ಪಡೆದುಕೊಂಡ ಕೊಹ್ಲಿ, ಅಂತಿಮವಾಗಿ 91 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿದರು. ಸರಣಿಯ ಮೊದಲ ಪಂದ್ಯದಲ್ಲಿ 93 ರನ್‌ಗಳಿಗೆ ಔಟಾಗಿದ್ದ ಕೊಹ್ಲಿ, ಇಂದಿನ ಪಂದ್ಯದಲ್ಲಿ ತಮ್ಮ 54 ನೇ ಏಕದಿನ ಶತಕವನ್ನು ಪೂರೈಸುವಲ್ಲಿ ಯಶಸ್ವಿಯಾದರು.
ಪತ್ನಿ ಜೊತೆ ಸೇರಿ 5 ಎಕರೆ ಭೂಮಿ ಖರೀದಿಸಿದ ವಿರಾಟ್ ಕೊಹ್ಲಿ; ಬೆಲೆ ಎಷ್ಟು ಗೊತ್ತಾ?
ಈ ಶತಕದ ಮೂಲಕ ಕೊಹ್ಲಿ ಈಗ ನ್ಯೂಜಿಲೆಂಡ್ ವಿರುದ್ಧ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇದು ಕಿವೀಸ್ ವಿರುದ್ಧ ಅವರ ಏಳನೇ ಏಕದಿನ ಶತಕವಾಗಿದ್ದು, ಈ ಮೂಲಕ ವೀರೇಂದ್ರ ಸೆಹ್ವಾಗ್ ಮತ್ತು ರಿಕಿ ಪಾಂಟಿಂಗ್ (ಇಬ್ಬರೂ ತಲಾ ಆರು ಶತಕಗಳು) ಅವರನ್ನು ಹಿಂದಿಕ್ಕಿದ್ದಾರೆ. ಹಾಗೆಯೇ ನ್ಯೂಜಿಲೆಂಡ್ ವಿರುದ್ಧ ಏಕದಿನ ಪಂದ್ಯಗಳಲ್ಲಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿಯೂ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಿದ್ದಾರೆ. ಕೊಹ್ಲಿ ಪ್ರಸ್ತುತ ಎಲ್ಲಾ ಸ್ವರೂಪಗಳಲ್ಲಿ ನ್ಯೂಜಿಲೆಂಡ್ ವಿರುದ್ಧ 10 ಶತಕಗಳನ್ನು ಬಾರಿಸಿದ್ದು, ಈ ವಿಚಾರದಲ್ಲಿ ಸಚಿನ್ ತೆಂಡೂಲ್ಕರ್, ಜೋ ರೂಟ್ ಮತ್ತು ಜಾಕ್ವೆಸ್ ಕಾಲಿಸ್ (ಮೂವರೂ ಒಂಬತ್ತು ಶತಕಗಳು) ಅವರನ್ನು ಹಿಂದಿಕ್ಕಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:17 pm, Sun, 18 January 26