IND vs NZ: 14 ವರ್ಷಗಳ ನಂತರ ರೋಹಿತ್ ಬ್ಯಾಟ್ನಿಂದ ಬೇಡದ ಪ್ರದರ್ಶನ
Rohit Sharma's New Year Nightmare: ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ಅವರಿಗೆ ಹೊಸ ವರ್ಷ ನಿರಾಸೆ ತಂದಿದೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ, ಕೇವಲ 61 ರನ್ ಗಳಿಸಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಪ್ರದರ್ಶನ ನೀಡಿದರೂ, ಈ ಸರಣಿಯಲ್ಲಿ ರೋಹಿತ್ ತಮ್ಮ ಲಯ ಕಳೆದುಕೊಂಡಿದ್ದಾರೆ.

ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಅವರಿಗೆ ಹೊಸ ವರ್ಷ ಚೆನ್ನಾಗಿ ಆರಂಭವಾಗಿಲ್ಲ. 2027 ರ ಏಕದಿನ ವಿಶ್ವಕಪ್‌ಗಾಗಿ (2027 World Cup) ಟೀಂ ಇಂಡಿಯಾದಲ್ಲಿ ಭಾಗವಾಗಬೇಕೆಂದು ಆಶಿಸಿದ್ದ ರೋಹಿತ್, ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದ ರೋಹಿತ್ ಶರ್ಮಾಗೆ ಈ ಸರಣಿಯಲ್ಲಿ ಪರಿಣಾಮ ಬೀರಲು ಸಾಧ್ಯವಾಗಲಿಲ್ಲ. ಇಂದೋರ್‌ನಲ್ಲಿ ನಡೆದ ಸರಣಿಯ ಅಂತಿಮ ಪಂದ್ಯದಲ್ಲಿಯೂ ರೋಹಿತ್ ಕೇವಲ 11 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಈ ಮೂಲಕ ರೋಹಿತ್ ಈ ಇಡೀ ಸರಣಿಯಲ್ಲಿ ಕಲೆಹಾಕಲು ಸಾಧ್ಯವಾಗಿದ್ದು ಕೇವಲ 61 ರನ್ ಮಾತ್ರ.
3ನೇ ಪಂದ್ಯದಲ್ಲೂ ರೋಹಿತ್ ವಿಫಲ
ಈ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ, ರೋಹಿತ್ ಶರ್ಮಾ ಉತ್ತಮ ಆರಂಭ ಪಡೆದ ಹೊರತಾಗಿಯೂ ಅದನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸುವಲ್ಲಿ ವಿಫಲರಾದರು. ಆದ್ದರಿಂದ, ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ ಸರಣಿಯ ಅಂತಿಮ ಮತ್ತು ನಿರ್ಣಾಯಕ ಪಂದ್ಯದಲ್ಲಿ ಅವರು ತಪ್ಪು ಸರಿಪಡಿಸಿಕೊಳ್ಳುತ್ತಾರೆ ಎಂಬ ಭರವಸೆ ಇತ್ತು. ಇದಕ್ಕೆ ಪೂರಕವಾಗಿ ನ್ಯೂಜಿಲೆಂಡ್ 338 ರನ್‌ಗಳ ಬೃಹತ್ ಗುರಿಯನ್ನು ನೀಡಿದಾಗ ರೋಹಿತ್ ಅವರಿಂದ ಒಂದೊಳ್ಳೆ ಇನ್ನಿಂಗ್ಸ್ನ ನಿರೀಕ್ಷೆಯಿತ್ತು. ಅದರಂತೆ ರೋಹಿತ್ ಕೂಡ ಮೊದಲ ಎಸೆತದಲ್ಲೇ ಅದ್ಭುತ ಬೌಂಡರಿಯೊಂದಿಗೆ ತಮ್ಮ ಇನ್ನಿಂಗ್ಸ್ ಪ್ರಾರಂಭಿಸಿದರು.
ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದ ನಂತರ, ಮುಂದಿನ ಐದು ಎಸೆತಗಳಲ್ಲಿ ರನ್ ಗಳಿಸಲು ರೋಹಿತ್‌ಗೆ ಸಾಧ್ಯವಾಗಲಿಲ್ಲ. ನಂತರ, ನಾಲ್ಕನೇ ಓವರ್‌ನಲ್ಲಿ, ಜ್ಯಾಕ್ ಫೋಕ್ಸ್ ಅವರ ನಾಲ್ಕನೇ ಎಸೆತದಲ್ಲಿ ವಿಕೆಟ್ ಕೀಪರ್ ಕ್ಯಾಚ್ ಕೈಬಿಡುವ ಮೂಲಕ ರೋಹಿತ್‌ಗೆ ಜೀವದಾನವೂ ಸಿಕ್ಕಿತ್ತು. ಆ ಬಳಿಕ ರೋಹಿತ್ ಮುಂದಿನ ಎಸೆತದಲ್ಲೇ ಬೌಂಡರಿ ಬಾರಿಸಿ, ಈ ತಪ್ಪಿಗೆ ನ್ಯೂಜಿಲೆಂಡ್ ಅನ್ನು ಶಿಕ್ಷಿಸುತ್ತಾರೆ ಎಂಬ ಭರವಸೆಯನ್ನು ಹುಟ್ಟುಹಾಕಿದರು. ಆದರೆ ಮುಂದಿನ ಎಸೆತದಲ್ಲೇ ರೋಹಿತ್ ಕ್ಯಾಚಿತ್ತು ಕೇವಲ 11 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು.
3 ಪಂದ್ಯಗಳಲ್ಲಿ ಕೇವಲ 61 ರನ್
ಹೀಗಾಗಿ, ಈ ಸರಣಿ ರೋಹಿತ್‌ಗೆ ನಿರಾಶಾದಾಯಕವಾಗಿ ಕೊನೆಗೊಂಡಿತು. ಮೂರು ಪಂದ್ಯಗಳಲ್ಲಿಯೂ ಅವರು ದೊಡ್ಡ ಹೊಡೆತಗಳನ್ನು ಆಡಲು ಪ್ರಯತ್ನಿಸಿ ಕ್ಯಾಚ್ ಔಟ್ ಆದರು. ವಡೋದರಾದಲ್ಲಿ ನಡೆದ ಮೊದಲ ಏಕದಿನದಲ್ಲಿ ರೋಹಿತ್ 26 ರನ್ ಗಳಿಸಿದರೆ, ರಾಜ್‌ಕೋಟ್‌ನಲ್ಲಿ 24 ರನ್‌ಗಳಿಗೆ ಸುಸ್ತಾಗಿದ್ದರು. ಹೀಗಾಗಿ ಮೂರು ಪಂದ್ಯಗಳ ಸರಣಿಯಲ್ಲಿ ರೋಹಿತ್ ಕೇವಲ 20 ರ ಸರಾಸರಿಯಲ್ಲಿ 61 ರನ್ ಗಳಿಸುವಲ್ಲಿ ಯಶಸ್ವಿಯಾದರು. ಇದು ರೋಹಿತ್ ಅವರ ಏಕದಿನ ವೃತ್ತಿಜೀವನದಲ್ಲಿ ಆರಂಭಿಕ ಆಟಗಾರನಾಗಿ ಎರಡನೇ ಕೆಟ್ಟ ಸರಣಿಯಾಗಿದೆ. 15 ವರ್ಷಗಳ ಹಿಂದೆ ರೋಹಿತ್ ಜನವರಿ ತಿಂಗಳಲ್ಲಿ ಇಂತಹ ಪರಿಸ್ಥಿತಿಯನ್ನು ಕಂಡಿದ್ದರು. 2011 ರ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ರೋಹಿತ್ ಕೇವಲ 49 ರನ್ ಗಳಿಸಿ ಕೆಟ್ಟ ಪ್ರದರ್ಶನ ನೀಡಿದ್ದರು.
IND vs NZ: 650 ಆರು..! ಕ್ರಿಕೆಟ್ ಜಗತ್ತಿನಲ್ಲಿ ಈ ಸಾಧನೆ ಮಾಡಿದ ಏಕೈಕ ಆಟಗಾರ ರೋಹಿತ್ ಶರ್ಮಾ
2013 ರ ಬಳಿಕ ಕೆಟ್ಟ ಪ್ರದರ್ಶನ
ರೋಹಿತ್ ಆ ಒಂದು ಸರಣಿಯಲ್ಲಿ ಮಾತ್ರ ಇನ್ನಿಂಗ್ಸ್ ಆರಂಭಿಸಿದ್ದರೂ, 2013 ರಲ್ಲಿ ಪೂರ್ಣಾವಧಿ ಆರಂಭಿಕ ಆಟಗಾರನಾದ ನಂತರ ಇದು ಅವರ ಅತ್ಯಂತ ಕೆಟ್ಟ ಸರಣಿಯಾಗಿದೆ (ಕನಿಷ್ಠ ಮೂರು ಇನ್ನಿಂಗ್ಸ್). ಇತ್ತೀಚೆಗೆ ರೋಹಿತ್ ಅತ್ಯುತ್ತಮ ಫಾರ್ಮ್‌ನಲ್ಲಿರುವ ಸಮಯದಲ್ಲಿ ಅವರಿಂದ ಈ ಪ್ರದರ್ಶನ ಬಂದಿದೆ. ಕಳೆದ ವರ್ಷದ ಆಸ್ಟ್ರೇಲಿಯಾ ಪ್ರವಾಸದಲ್ಲಿ, ಅವರು ಒಂದು ಶತಕ ಸೇರಿದಂತೆ 201 ರನ್‌ಗಳೊಂದಿಗೆ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು. ನಂತರ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ರೋಹಿತ್ ಎರಡು ಅರ್ಧಶತಕಗಳನ್ನು ಬಾರಿಸಿದ್ದರು. ಆದರೆ ಕಿವೀಸ್ ವಿರುದ್ಧ ಅದೇ ಪ್ರದರ್ಶನವನ್ನು ಮುಂದುವರೆಸಲು ರೋಹಿತ್‌ಗೆ ಸಾಧ್ಯವಾಗಲಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:53 pm, Sun, 18 January 26
