India vs Pakistan: ಟಿ20 ವಿಶ್ವಕಪ್​ನಲ್ಲಿಂದು ರೋಚಕ ಕದನ: ಪಾಕ್​ಗೆ ಮತ್ತೆ ಮಣ್ಣು ಮುಕ್ಕಿಸುತ್ತಾ ಭಾರತ?

| Updated By: ಆಯೇಷಾ ಬಾನು

Updated on: Oct 24, 2021 | 7:07 AM

T20 World Cup 2021, IND vs PAK: ಟಿ20 ಮಾದರಿಯಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಕಾಣುತ್ತಲೇ ಬಂದಿರುವ ಪಾಕಿಸ್ತಾನದ ಬತ್ತಳಿಕೆಯಲ್ಲಿ ಅಪಾಯಕಾರಿ ಕ್ರಿಕೆಟ್‌ ಅಸ್ತ್ರಗಳಿರುವುದು ಸುಳ್ಳಲ್ಲ. ಹೀಗಿರುವಾಗ ಇಂದು ಟೀಮ್ ಇಂಡಿಯಾ ಯಾವರೀತಿ ಪ್ರದರ್ಶನ ನೀಡುತ್ತದೆ ಎಂಬುದು ಕುತೂಹಲ ಕೆರಳಿಸಿದೆ.

India vs Pakistan: ಟಿ20 ವಿಶ್ವಕಪ್​ನಲ್ಲಿಂದು ರೋಚಕ ಕದನ: ಪಾಕ್​ಗೆ ಮತ್ತೆ ಮಣ್ಣು ಮುಕ್ಕಿಸುತ್ತಾ ಭಾರತ?
ಇನ್ನು ಆಲ್​ರೌಂಡರ್​ಗಳಾಗಿ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅದೇ ರೀತಿ ಸ್ಪಿನ್ನರ್ ಆಗಿ ವರುಣ್ ಚಕ್ರವರ್ತಿ ತಂಡದಲ್ಲಿದ್ದು, ವೇಗಿಗಳಾ ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್ ಕಣಕ್ಕಿಳಿಯಲಿದ್ದಾರೆ. ಉಭಯ ತಂಡಗಳು ಹೀಗಿವೆ:
Follow us on

ಕೊನೆಗೂ ಇಡೀ ಕ್ರಿಕೆಟ್ ಜಗತ್ತು ಕಾತುರದಿಂದ ಕಾದುಕುಳಿತಿರುವ ದಿನ ಬಂದುಬಿಟ್ಟಿದೆ. ಟಿ20 ವಿಶ್ವಕಪ್ (ICC T20 World Cup) ಮಹಾಸಮರದಲ್ಲಿಂದು ಸಾಂಪ್ರದಾಯಿಕ ಎದುರಾಳಿ ಭಾರತ ಹಾಗೂ ಪಾಕಿಸ್ತಾನ (India vs Pakistan) ತಂಡಗಳು ಮುಖಾಮುಖಿ ಆಗುತ್ತಿದೆ. ಟಿ20 ವಿಶ್ವಕಪ್​ನಲ್ಲಿ ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾವನ್ನು (Team India) ನಾಯಕನಾಗಿ ವಿರಾಟ್ ಕೊಹ್ಲಿ (Virat Kohli) ಮತ್ತು ಪಾಕಿಸ್ತಾನವನ್ನು ಬಾಬರ್ ಅಜಮ್ (Babar Azam) ಮುನ್ನಡೆಸುತ್ತಿದ್ದಾರೆ. ಉಭಯ ತಂಡಗಳೂ ಗೆಲುವಿನ ವಿಶ್ವಾಸದಲ್ಲಿದ್ದರೂ ಭಾರತವೇ ಇಲ್ಲಿ ಫೇವರಿಟ್‌. ಇದಕ್ಕೆ ಕಾರಣವೆಂದರೆ ಇದುವರೆಗೆ ಭಾರತ ವಿಶ್ವಕಪ್‌ನಲ್ಲಿ ಪಾಕ್‌ (Pakistan) ವಿರುದ್ಧ ಸೋತೇ ಇಲ್ಲ. ಇಲ್ಲಿಯ ವರೆಗೆ ಐದು ಬಾರಿ ಇತ್ತಂಡಗಳು ಮುಖಾಮುಖೀಯಾಗಿದ್ದು, ಪ್ರತೀ ಬಾರಿಯೂ ಭಾರತವೇ ಗೆದ್ದ ಇತಿಹಾಸವಿದೆ. ಈಗ ಮತ್ತೊಮ್ಮೆ ಇದೇ ದಾಖಲೆಯನ್ನು ಮುಂದುವರೆಸುವ ಪ್ಲಾನ್​ನಲ್ಲಿದೆ ಕೊಹ್ಲಿ ಪಡೆ.

ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಗೆಲ್ಲುವ ಮೂಲಕ ಭಾರತ ಭರ್ಜರಿ ಸಿದ್ಧತೆ ನಡೆಸಿದೆ. ಬ್ಯಾಟಿಂಗ್​ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಆಟಗಾರರು ದೊಡ್ಡ ಮೊತ್ತದ ಟಾರ್ಗೆಟ್ ಇದ್ದರೂ ಚೇಸ್ ಮಾಡುವ ಸಾಮರ್ಥ್ಯವಿರುವಂತೆ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಓಪನರ್​ಗಳಾದ ಕನ್ನಡಿದ ಕೆ. ಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಸೂಪರ್ ಫಾರ್ಮ್​ನಲ್ಲಿದ್ದಾರೆ. ಮೊದಲ ಅಭ್ಯಾಸ ಪಂದ್ಯದಲ್ಲೇ ರಾಹುಲ್ ಸ್ಪೋಟಕ ಅರ್ಧಶತಕ ಸಿಡಿಸಿದ್ದರು. ಭರ್ಜರಿ ಫಾರ್ಮ್​ನಲ್ಲಿರುವ ಇವರು ಇತ್ತೀಚೆಗಷ್ಟೆ ಮುಕ್ತಾಯಗೊಂಡ ಐಪಿಎಲ್​ನಲ್ಲಿ 13 ಪಂದ್ಯಗಳಿಂದ ಬರೋಬ್ಬರಿ 626 ರನ್ ಸಿಡಿಸಿದ್ದರು. 6 ಅರ್ಧಶತಕ ಕೂಡ ಬಾರಿಸಿದ್ದರು. ಇವರು ಟೀಮ್ ಇಂಡಿಯಾದ ಪ್ರಮುಖ ಗೇಮ್ ಚೇಂಜರ್ ಆಗಲಿದ್ದಾರೆ.

ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಸಲುವಾಗಿ ಮೂರನೇ ಸ್ಥಾನದಲ್ಲಿ ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌ ಮತ್ತು ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್ ಪಂತ್‌ ಕಣಕ್ಕಿಳಿಯುವುದು ಖಚಿತ. ಆಲ್‌ರೌಂಡರ್‌ಗಳಾಗಿ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಕಾಣಿಸಿಕೊಳ್ಳಬಹುದು.

ಅನುಭವಿ ವೇಗದ ಬೌಲರ್‌ ಮೊಹಮ್ಮದ್‌ ಶಮಿ ಮತ್ತು ಜಸ್​ಪ್ರೀತ್ ಬುಮ್ರಾ ಪ್ರಮುಖ ಅಸ್ತ್ರವಾಗಿದ್ದಾರೆ. ಅಭ್ಯಾಸ ಪಂದ್ಯದಲ್ಲಿ ದುಬಾರಿಯಾಗಿದ್ದ ಭುವನೇಶ್ವರ್‌ ಕುಮಾರ್‌ ಲಭ್ಯತೆ ಅನುಮಾನ. ಪರಿಣತ ಸ್ಪಿನ್ನರ್‌ಗಳಾಗಿ ವರುಣ್ ಚಕ್ರವರ್ತಿ ಜೊತೆ ರಾಹುಲ್‌ ಚಹರ್‌ ಅಥವಾ ಆರ್. ಅಶ್ವಿನ್ ನಿರೀಕ್ಷಿಸಲಾಗಿದೆ.

ಇತ್ತ ಪಾಕಿಸ್ತಾನ ತಂಡ ಬಾಬರ್‌ ಅಜಮ್‌ ಅವರ ನಾಯಕತ್ವ ಮತ್ತು ಬ್ಯಾಟಿಂಗ್‌ ಪಾಕ್‌ಗೆ ಬಲ. ಹಾಗೆಯೇ ಫ‌ಖರ್‌ ಜಮಾನ್‌, ಹೈದರ್‌ ಅಲಿ, ಆಸಿಫ್ ಅಲಿ ಬ್ಯಾಟಿಂಗ್‌ ಬಲವಿದೆ. ಶಬಾಬ್‌ ಖಾನ್‌, ಹ್ಯಾರೀಸ್‌ ರೌಫ್, ಶಹೀನ್‌ ಶಾ ಅಫ್ರಿದಿ ಬೌಲಿಂಗ್‌ ಬಲವಿದೆ. ಅಲ್ಲದೆ ಪಾಕಿಸ್ಥಾನಕ್ಕೆ ಯುಎಇ ಎರಡನೇ ತವರಿದ್ದಂತೆ. ಕಳೆದ ಕೆಲವು ವರ್ಷಗಳಿಂದ ಪಾಕ್‌ ಆತಿಥ್ಯದ ಸರಣಿಗಳೆಲ್ಲ ನಡೆಯುವುದು ಇಲ್ಲಿಯೇ. ಯುಎಇಯಲ್ಲಿ ಪಾಕಿಸ್ಥಾನದ ದಾಖಲೆ ಕೂಡ ಉತ್ತಮ ಮಟ್ಟದಲ್ಲಿದೆ. ಹೀಗಾಗಿ ಬಾಬರ್‌ ಆಜಂ ಪಡೆ ಕೂಟದ ಮೆಚ್ಚಿನ ತಂಡವೇ ಆಗಿದೆ.

ಟಿ20 ಮಾದರಿಯಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಕಾಣುತ್ತಲೇ ಬಂದಿರುವ ಪಾಕಿಸ್ತಾನದ ಬತ್ತಳಿಕೆಯಲ್ಲಿ ಅಪಾಯಕಾರಿ ಕ್ರಿಕೆಟ್‌ ಅಸ್ತ್ರಗಳಿರುವುದು ಸುಳ್ಳಲ್ಲ. ಇಲ್ಲಿನ ಕೆಲವು ಆಟಗಾರರ ಸಾಮರ್ಥ್ಯ ಎದುರಾಳಿಗಳ ಅರಿವಿಗೆ ಇನ್ನೂ ಬಂದಿಲ್ಲ. ಅನುಭವಿಗಳಾದ ಶೋಯಿಬ್‌ ಮಲಿಕ್‌, ಮೊಹಮ್ಮದ್‌ ಹಫೀಜ್‌ರನ್ನು ತಂಡಕ್ಕೆ ಸೇರಿಸಿಕೊಂಡಿರುವ ಪಾಕ್‌ ರಣತಂತ್ರ ಸದ್ಯಕ್ಕೆ ನಿಗೂಢವಾಗಿಯೇ ಇದೆ.

ಒಟ್ಟಾರೆ ಮೇಲ್ನೋಟಕ್ಕೆ ಉಭಯ ತಂಡಗಳು ಬಲಿಷ್ಠವಾಗಿದೆ. ದ್ವಿಪಕ್ಷೀಯ ಸರಣಿಗಳಲ್ಲಿ ಭಾರತದ ವಿರುದ್ಧ ಕೊಂಚ ಮೇಲುಗೈ ಸಾಧಿಸಿರುವ ಪಾಕಿಸ್ತಾನ, ವಿಶ್ವಕಪ್​ ಎಂದಾಕ್ಷಣ ಮುದುರಿ ಮೂಲೆ ಸೇರುತ್ತಿದೆ. ಏಕದಿನ ವಿಶ್ವಕಪ್​​ನಲ್ಲಿ 7 ಬಾರಿ, ಟಿ-20 ವಿಶ್ವಕಪ್​ನಿಂದ 2007ರಿಂದ ಇಲ್ಲಿಯವರೆಗೆ 5 ಮೂಖಾಮುಖಿಯಲ್ಲಿ ಭಾರತವೇ ಗೆಲುವು ಸಾಧಿಸಿದೆ. ಹೀಗಾಗಿ ಇಂದಿನ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.

ಪಂದ್ಯದ ವಿವರ

ಭಾರತ vs ಪಾಕಿಸ್ತಾನ, ಟಿ20 ವಿಶ್ವಕಪ್‌-2021

ದಿನಾಂಕ: ಅಕ್ಟೋಬರ್‌ 24, 2021

ಸಮಯ: ರಾತ್ರಿ 07:30ಕ್ಕೆ (ಭಾರತೀಯ ಕಾಲಮಾನ)

ಸ್ಥಳ: ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣ, ದುಬೈ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್

(Virat Kohli India vs Babar Azam Pakistan will face each other Today T20 World Cup 2021 Super 12 stages)