ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ಎರಡನೇ ಟೆಸ್ಟ್ ಪಂದ್ಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಅಚ್ಚರಿ ಎಂದರೆ ಟೀಮ್ ಇಂಡಿಯಾ (Team India) ಟೆಸ್ಟ್ ನಾಯಕ ವಿರಾಟ್ ಕೊಹ್ಲಿ (Virat Kohli) ಎರಡನೇ ಪಂದ್ಯದಿಂದ ಹೊರಗುಳಿದಿದ್ದಾರೆ. ಹೀಗಾಗಿ ಕೆಎಲ್ ರಾಹುಲ್ (KL Rahul) ತಂಡವನ್ನು ಮುನ್ನಡೆಸುತ್ತಿದ್ದಾರೆ. ಜಸ್ಪ್ರೀತ್ ಬುಮ್ರಾ ಉಪ ನಾಯಕನಾಗಿದ್ದಾರೆ. ಕೊಹ್ಲಿ ಬೆನ್ನಿನ ಸೆಳೆತದ ನೋವಿನಿಂದ ಬಳಲುತ್ತಿರುವ ಕಾರಣ ಎರಡನೇ ಟೆಸ್ಟ್ಗೆ ಅಲಭ್ಯರಾಗಿದ್ದಾರೆ.ಕೊಹ್ಲಿ ಬದಲು ಇವರ ಜಾಗಕ್ಕೆ ಹನುಮಾ ವಿಹಾರಿ (Hanuma Vihari) ಅವರಿಗೆ ಸ್ಥಾನ ನೀಡಲಾಗಿದೆ. ಈಗಾಗಲೇ ಟಾಸ್ ಗೆದ್ದ ನಾಯಕ ರಾಹುಲ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಟೀಮ್ ಇಂಡಿಯಾದಲ್ಲಿ ಕೇವಲ ಒಂದು ಬದಲಾವಣೆ ಅಷ್ಟೇ ಮಾಡಲಾಗಿದೆ. ಈಗಲೆ ತಿಳಿಸಿರುವಂತೆ ಕೊಹ್ಲಿ ಬದಲು ವಿಹಾರಿ ಸ್ಥಾನ ಪಡೆದುಕೊಂಡಿದ್ದಾರೆ. ಭಾರತ ಈ ಪಂದ್ಯ ಗೆದ್ದರೆ ಹರಿಣಗಳ ನಾಡಲ್ಲಿ ಮೊಟ್ಟಮೊದಲ ಟೆಸ್ಟ್ ಸರಣಿ ಜಯಿಸಿ ಇತಿಹಾಸ ನಿರ್ಮಾಣ ಮಾಡಲಿದೆ. ಹೀಗಾಗಿ ಎರಡನೇ ಟೆಸ್ಟ್ ಕದನದ ಮೇಲೆ ಎಲ್ಲರ ಕಣ್ಣಿದೆ. ಜೊಹಾನ್ಸ್‌ಬರ್ಗ್‌ನ ವಾಂಡರರ್ ಸ್ಟೇಡಿಯಂ ಈ ರೋಚಕ ಕದನಕ್ಕೆ ಸಾಕ್ಷಿಯಾಗಲಿದೆ.
ಭಾರತದ ಪ್ಲೇಯಿಂಗ್ XI:
ಕೆಎಲ್ ರಾಹುಲ್ (ನಾಯಕ), ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಹನುಮಾ ವಿಹಾರಿ, ರಿಷಭ್ ಪಂತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್‌ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಭಾರತ ಟೆಸ್ಟ್ ತಂಡವನ್ನು ಮುನ್ನಡೆಸುತ್ತಿರುವ 34ನೇ ನಾಯಕ ಕೆಎಲ್ ರಾಹುಲ್ ಆಗಿದ್ದಾರೆ. ಕರ್ನಾಟಕದ 4ನೇ ಆಟಗಾರನಾಗಿದ್ದಾರೆ. ಈ ಹಿಂದೆ 1980 ರಲ್ಲಿ ಗುಂಡಪ್ಪ ವಿಶ್ವನಾಥ್ 2 ಟೆಸ್ಟ್ನಲ್ಲಿ ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸಿದ್ದರು. ಅಂತೆಯೆ ರಾಹುಲ್ ದ್ರಾವಿಡ್ 25 ಟೆಸ್ಟ್ ಪಂದ್ಯ ಮತ್ತು ಅನಿಲ್ ಕುಂಬ್ಳೆ 14 ಟೆಸ್ಟ್ಗಳನ್ನು ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಿದ ಕನ್ನಡಿಗರಾಗಿದ್ದಾರೆ.
ಟಾಸ್ ವೇಳೆ ಮಾತನಾಡಿದ ಕೆಎಲ್ ರಾಹುಲ್, “ದುರದೃಷ್ಟವಶಾತ್ ವಿರಾಟ್ ಕೊಹ್ಲಿ ಇಂಜುರಿಗೆ ತುತ್ತಾದ ಕಾರಣ ಈ ಟೆಸ್ಟ್ನಿಂದ ಹೊರಗುಳಿದಿದ್ದಾರೆ. ವೈದ್ಯಕೀಯ ತಂಡ ಅವರನ್ನು ಪರೀಕ್ಷಿಸುತ್ತಿದೆ. ಮುಂದಿನ ಟೆಸ್ಟ್ ವೇಳೆ ಅವರು ಗುಣಮುಖರಾಗಲಿದ್ದಾರೆ. ತನ್ನ ದೇಶದ ನಾಯಕನಾಗಬೇಕು ಎಂಬುದು ಪ್ರತಿಯೊಬ್ಬ ಆಟಗಾರನ ಕನಸು. ಇದಕ್ಕೆ ನಾನು ಅಬಾರಿ ಮತ್ತು ಈ ಚಾಲೆಂಜ್ ಅನ್ನು ಸ್ವೀಕರಿಸುತ್ತೇನೆ. ಈ ಮೈದಾನದಲ್ಲಿ ನಾವು ಕೆಲವು ಉತ್ತಮ ಗೆಲುವನ್ನು ಕಂಡಿದ್ದೇವೆ. ಅದನ್ನೇ ಈ ಬಾರಿ ಕೂಡ ಮುಂದುವರೆಸುತ್ತೇವೆ ಎಂಬ ನಂಬಿಕೆಯಿದೆ,” ಎಂದು ಹೇಳಿದ್ದಾರೆ.
ಸೆಂಚುರಿಯನ್‌ನ ಮೊದಲ ಪಂದ್ಯವನ್ನು 113 ರನ್‌ಗಳ ಅಂತರದಿಂದ ಗೆದ್ದಿರುವ ಟೀಮ್ ಇಂಡಿಯಾ (Team India) ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ವಂಡರರ್ಸ್ ಸ್ಟೇಡಿಯಂ ಕೂಡ ವೇಗಿಗಳಿಗೆ ಸ್ವರ್ಗವಾಗಿದ್ದು ವಿಕೆಟ್ಗಳ ಮಳೆ ಸುರಿಯುವುದು ಖಚಿತ. ವಂಡರ್ ಆಫ್ ಕ್ರಿಕೆಟ್ ಎನಿಸಿರುವ ಜೋಹನ್ಸ್‌ಬರ್ಗ್‌ನ ವಾಂಡರರ್ ಸ್ಟೇಡಿಯಂ ಭಾರತದ ಪಾಲಿನ ಅದೃಷ್ಟದ ತಾಣ. 1992ರಿಂದ ಇದುವರೆಗೆ ಭಾರತ ತಂಡ ವಂಡರರ್ಸ್‌ನಲ್ಲಿ 5 ಟೆಸ್ಟ್ ಆಡಿದ್ದು, ಒಂದರಲ್ಲೂ ಸೋತಿಲ್ಲ. 2 ಗೆಲುವು ದಾಖಲಿಸಿರುವ ಭಾರತ ತಂಡ, 3 ರಲ್ಲಿ ಡ್ರಾ ಸಾಧಿಸಿದೆ. ಹೀಗಾಗಿ ಜೊಹಾನ್ಸ್‌ಬರ್ಗ್ ಭಾರತ ತಂಡಕ್ಕೆ ವಿದೇಶದ ತವರು ಮೈದಾನದಂತಿದೆ. ದಕ್ಷಿಣ ಆಫ್ರಿಕಾ ಇಲ್ಲಿ ಆಡಿದ 42 ಟೆಸ್ಟ್ ಗಳಲ್ಲಿ 18 ಜಯ ಸಾಧಿಸಿದರೂ ಭಾರತವನ್ನು ಇನ್ನೂ ಸೋಲಿಸಿಲ್ಲ ಎಂಬುದೊಂದು ಅಚ್ಚರಿ. ಜೊಹಾನ್ಸ್‌ಬರ್ಗ್‌ನಲ್ಲಿ ಅಜೇಯ ದಾಖಲೆಯನ್ನು ಹೊಂದಿರುವ ಟೀಮ್ ಇಂಡಿಯಾ ಇದನ್ನು ಮುಂದುವರಿಸುತ್ತಾ ಎಂಬುದು ನೋಡಬೇಕಿದೆ.
Published On - 1:07 pm, Mon, 3 January 22