South Africa vs India: ಇಂದಿನಿಂದ ಭಾರತ-ಆಫ್ರಿಕಾ ಎರಡನೇ ಟೆಸ್ಟ್ ಆರಂಭ: ಐತಿಹಾಸಿಕ ಸಾಧನೆ ಮಾಡುತ್ತಾ ವಿರಾಟ್ ಕೊಹ್ಲಿ ಪಡೆ?

| Updated By: Vinay Bhat

Updated on: Jan 03, 2022 | 11:46 AM

IND vs SA 2nd Test: ವಂಡರ್‌ ಆಫ್ ಕ್ರಿಕೆಟ್‌ ಎನಿಸಿರುವ ಜೋಹನ್ಸ್‌ಬರ್ಗ್‌ನ ವಾಂಡರರ್ ಸ್ಟೇಡಿಯಂ ಭಾರತದ ಪಾಲಿನ ಅದೃಷ್ಟದ ತಾಣ. 1992ರಿಂದ ಇದುವರೆಗೆ ಭಾರತ ತಂಡ ವಂಡರರ್ಸ್‌ನಲ್ಲಿ 5 ಟೆಸ್ಟ್ ಆಡಿದ್ದು, ಒಂದರಲ್ಲೂ ಸೋತಿಲ್ಲ. 2 ಗೆಲುವು ದಾಖಲಿಸಿರುವ ಭಾರತ ತಂಡ, 3 ರಲ್ಲಿ ಡ್ರಾ ಸಾಧಿಸಿದೆ.

South Africa vs India: ಇಂದಿನಿಂದ ಭಾರತ-ಆಫ್ರಿಕಾ ಎರಡನೇ ಟೆಸ್ಟ್ ಆರಂಭ: ಐತಿಹಾಸಿಕ ಸಾಧನೆ ಮಾಡುತ್ತಾ ವಿರಾಟ್ ಕೊಹ್ಲಿ ಪಡೆ?
India vs South Africa 3rd Test
Follow us on

ಹೊಸ ವರ್ಷದ (New Year) ಮೊದಲ ಪಂದ್ಯಕ್ಕೆ ಭಾರತ ಸಜ್ಜಾಗಿದೆ. ದಕ್ಷಿಣ ಆಫ್ರಿಕಾ (India vs South Africa) ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಇಂದಿನಿಂದ ಶುರುವಾಗಲಿದ್ದು, ಜೋಹನ್ಸ್‌ ಬರ್ಗ್​​ನ ವಂಡರರ್ಸ್‌ ಸ್ಟೇಡಿಯಂ (Wanderers Stadium, Johannesburg) ಮತ್ತೊಂದು ರೋಚಕ ಕಾದಾಟಕ್ಕೆ ಸಾಕ್ಷಿಯಾಗಲಿದೆ. ಭಾರತ ಈ ಪಂದ್ಯ ಗೆದ್ದರೆ ಹರಿಣಗಳ ನಾಡಲ್ಲಿ ಮೊಟ್ಟಮೊದಲ ಟೆಸ್ಟ್ ಸರಣಿ ಜಯಿಸಿ ಇತಿಹಾಸ ನಿರ್ಮಾಣ ಮಾಡಲಿದೆ. ಸೆಂಚುರಿಯನ್‌ನ ಮೊದಲ ಪಂದ್ಯವನ್ನು 113 ರನ್‌ಗಳ ಅಂತರದಿಂದ ಗೆದ್ದಿರುವ ಟೀಮ್ ಇಂಡಿಯಾ (Team India) ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ವಂಡರರ್ಸ್‌ ಸ್ಟೇಡಿಯಂ ಕೂಡ ವೇಗಿಗಳಿಗೆ ಸ್ವರ್ಗವಾಗಿದ್ದು ವಿಕೆಟ್​ಗಳ ಮಳೆ ಸುರಿಯುವುದು ಖಚಿತ. ಆಸ್ಟ್ರೇಲಿಯಾ, ಇಂಗ್ಲೆಂಡ್‌ನಲ್ಲಿ ಜಯಭೇರಿಯ ನಂತರ ದಕ್ಷಿಣ ಆಫ್ರಿಕಾದಲ್ಲಿಯೂ ಸರಣಿ ಗೆದ್ದ ನಾಯಕನೆಂಬ ಕೀರ್ತಿಗೆ ಭಾಜನರಾಗಲು ವಿರಾಟ್ (Virat Kohli) ಕಾತುರರಾಗಿದ್ದಾರೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಮಧ್ಯಾಹ್ನ 1:30ಕ್ಕೆ ಶುರುವಾಗಲಿದೆ.

ವಂಡರ್‌ ಆಫ್ ಕ್ರಿಕೆಟ್‌ ಎನಿಸಿರುವ ಜೋಹನ್ಸ್‌ಬರ್ಗ್‌ನ ವಾಂಡರರ್ ಸ್ಟೇಡಿಯಂ ಭಾರತದ ಪಾಲಿನ ಅದೃಷ್ಟದ ತಾಣ. 1992ರಿಂದ ಇದುವರೆಗೆ ಭಾರತ ತಂಡ ವಂಡರರ್ಸ್‌ನಲ್ಲಿ 5 ಟೆಸ್ಟ್ ಆಡಿದ್ದು, ಒಂದರಲ್ಲೂ ಸೋತಿಲ್ಲ. 2 ಗೆಲುವು ದಾಖಲಿಸಿರುವ ಭಾರತ ತಂಡ, 3 ರಲ್ಲಿ ಡ್ರಾ ಸಾಧಿಸಿದೆ. ಹೀಗಾಗಿ ಜೊಹಾನ್ಸ್‌ಬರ್ಗ್ ಭಾರತ ತಂಡಕ್ಕೆ ವಿದೇಶದ ತವರು ಮೈದಾನದಂತಿದೆ. ದಕ್ಷಿಣ ಆಫ್ರಿಕಾ ಇಲ್ಲಿ ಆಡಿದ 42 ಟೆಸ್ಟ್‌ ಗಳಲ್ಲಿ 18 ಜಯ ಸಾಧಿಸಿದರೂ ಭಾರತವನ್ನು ಇನ್ನೂ ಸೋಲಿಸಿಲ್ಲ ಎಂಬುದೊಂದು ಅಚ್ಚರಿ. ಜೊಹಾನ್ಸ್‌ಬರ್ಗ್‌ನಲ್ಲಿ ಅಜೇಯ ದಾಖಲೆಯನ್ನು ಹೊಂದಿರುವ ಟೀಮ್‌ ಇಂಡಿಯಾ ಇದನ್ನು ಮುಂದುವರಿಸುತ್ತಾ ಎಂಬುದು ನೋಡಬೇಕಿದೆ.

ಸೆಂಚುರಿಯನ್ ಗೆಲುವಿನ ಹೊರತಾಗಿಯೂ 2ನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ವಿನ್ನಿಂಗ್ ಕಾಂಬಿನೇಷನ್‌ನಲ್ಲಿ ಬದಲಾವಣೆ ಕಾಣುವ ಸಾಧ್ಯತೆಗಳಿವೆ. ವೇಗಿಗಳಿಗೆ ಹೆಚ್ಚು ನೆರವಾಗುವ ಕಾರಣ ಉಮೇಶ್ ಯಾದವ್ ಅವರನ್ನು ದ್ರಾವಿಡ್-ಕೊಹ್ಲಿ ಕಣಕ್ಕಿಳಿಸಬಹುದು. ಹೀಗಾಗಿ ಶಾರ್ದೂಲ್ ಠಾಕೂರ್ ಹೊರಗುಳಿಯಬಹುದು. ಅಂತೆಯೆ ಸೆಂಚುರಿಯನ್ ಟೆಸ್ಟ್‌ನ ಕೊನೇ 2 ವಿಕೆಟ್ ಕಬಳಿಸಿದ್ದು ಹೊರತಾಗಿ ಸ್ಪಿನ್ನರ್ ಆರ್. ಅಶ್ವಿನ್ ಹೆಚ್ಚು ಯಶಸ್ಸು ಕಂಡಿರಲಿಲ್ಲ. ಹೀಗಾಗಿ ಅಶ್ವಿನ್ ಆಡುವರೇ ಅಥವಾ ಹೆಚ್ಚುವರಿ ಬ್ಯಾಟರ್ ಆಗಿ ಹನುಮ ವಿಹಾರಿ 7ನೇ ಕ್ರಮಾಂಕದಲ್ಲಿ ಅವಕಾಶ ಪಡೆಯುವರೇ ಎಂಬ ನೋಡಬೇಕಿದೆ. ಇದರ ನಡುವೆ ಚೇತೇಶ್ವರ್ ಪೂಜಾರ ಕೈಬಿಟ್ಟರೂ ಅಚ್ಚರಿ ಪಡಬೇಕಿಲ್ಲ.

ಇತ್ತ ದಕ್ಷಿಣ ಆಫ್ರಿಕಾ ತಂಡ ಈಗ ಮೊದಲಿನಂತೆ ಪ್ರವಾಸಿಗರಿಗೆ ಭಯ ಹುಟ್ಟಿಸುವಂತಹ ಆಟಗಾರರಿಲ್ಲ. ಕೆಲವು ವರ್ಷಗಳ ಹಿಂದೆ ಗ್ರೆಮ್ ಸ್ಮಿತ್, ಹಾಶೀಂ ಆಮ್ಲಾ, ಎಬಿ ಡಿವಿಲಿಯರ್ಸ್, ಜಾಕಸ್ ಕಾಲಿಸ್, ಡೇಲ್ ಸ್ಟೇನ್, ಮಾರ್ನಿ ಮಾರ್ಕೆಲ್ ಅವರಂತಹ ಅಪ್ರತಿಮ ಆಟಗಾರರಿದ್ದರು. ಒಂದಿಷ್ಟು ಭರವಸೆ ಇಡಬಹುದಾಗಿದ್ದ ಕ್ವಿಂಟನ್ ಡಿ ಕಾಕ್ ಕೂಡ ಮೊದಲ ಟೆಸ್ಟ್ ಸೋಲಿನ ನಂತರ ನಿವೃತ್ತಿ ಘೋಷಿಸಿದ್ದಾರೆ. ನಾಯಕ ಡೀನ್ ಎಲ್ಗರ್, ತೆಂಬಾ ಬವುಮಾ ಬಿಟ್ಟರೆ ಬ್ಯಾಟಿಂಗ್‌ನಲ್ಲಿ ಅಂತಹ ಭರವಸೆಯ ಆಟಗಾರರು ಕಾಣುತ್ತಿಲ್ಲ. ಬೌಲಿಂಗ್‌ನಲ್ಲಿ ಕಗಿಸೊ ರಬಾಡ, ಲುಂಗಿ ಗಿಡಿ ಅವರಿಬ್ಬರೂ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುವ ಆಟಗಾರರು.

ಪಂದ್ಯ ನಡೆಯುವ ಸ್ಥಳ: ಜೋಹನ್ಸ್‌ ಬರ್ಗ್​​ನ ವಂಡರರ್ಸ್‌ ಸ್ಟೇಡಿಯಂ

ದಿನಾಂಕ: ಜನವರಿ 3, 2022

ಪಂದ್ಯ ಆರಂಭದ ಸಮಯ: ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಮಧ್ಯಾಹ್ನ 1: 30ಕ್ಕೆ ಆರಂಭವಾಗಲಿದೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್‌ ನೆಟ್​ವರ್ಕ್, ಡಿಸ್ನಿ ಪ್ಲಸ್ ಹಾಟ್​​ಸ್ಟಾರ್​​ನಲ್ಲೂ ನೇರ ಪ್ರಸಾರ ಕಾಣಲಿದೆ

Pro Kabaddi League: ಪುಣೆ ವಿರುದ್ಧ ಬೆಂಗಳೂರು ಬುಲ್ಸ್‌ಗೆ ಭರ್ಜರಿ ಜಯ; ಮಿಂಚಿದ ಪವನ್ ಶೆರಾವತ್

(Virat Kohli-led Indian unit is set to take on a struggling South African side in Johannesburg)

Published On - 7:19 am, Mon, 3 January 22