
14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ಎರಡನೇ ಚರಣಕ್ಕೆ ಭರ್ಜರಿ ಚಾಲನೆ ದೊರಕಿದೆ. ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ (CSK vs MI) ನಡುವೆ ಮೊದಲ ಪಂದ್ಯ ನಡೆಯಿತು. ಇದರಲ್ಲಿ ಧೋನಿ ಪಡೆ 20 ರನ್ಗಳ ಗೆಲುವು ಸಾಧಿಸಿ ಅಗ್ರಸ್ಥಾನಕ್ಕೇರಿದೆ. ಇಂದು ಎರಡನೇ ಪಂದ್ಯ ನಡೆಯಲಿದ್ದು ವಿರಾಟ್ ಕೊಹ್ಲಿ (Virat Kohli) ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಇಯಾನ್ ಮಾರ್ಗನ್ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ (KKRvsRCB) ತಂಡಗಳು ಮುಖಾಮುಖಿ ಆಗುತ್ತಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ವಿಶೇಷ ಕಾರಣದೊಂದಿಗೆ ಕಣಕ್ಕಿಳಿಯುತ್ತಿದೆ. ಕೆಕೆಆರ್ ವಿರುದ್ಧ ಕೊಹ್ಲಿ ಪಡೆ ಹೊಸ ನೀಲಿ ಜೆರ್ಸಿಯಲ್ಲಿ ಪಂದ್ಯವನ್ನು ಆಡುತ್ತಿದೆ. ಪ್ರತಿ ಸೀಸನ್ನಲ್ಲಿ ರೆಡ್ ಮತ್ತು ಗ್ರೀನ್ ಜೆರ್ಸಿಯಲ್ಲಿ ಕಾಣಿಸಿಕೊಳ್ಳುವ ಕೊಹ್ಲಿ ಸೈನ್ಯ ಈ ಬಾರಿ ಬ್ಲೂ ಜೆರ್ಸಿಯಲ್ಲಿ (Blue Jersey) ತನ್ನ ಮೊದಲ ಪಂದ್ಯವನ್ನು ಆಡಲಿದೆ.
ಕಳೆದೊಂದು ವರ್ಷದಿಂದ ಪಿಪಿಇ ಕಿಟ್ ಧರಿಸಿ ಕೆಲಸ ಮಾಡುತ್ತಿರುವ ಕೋವಿಡ್ ವಾರಿಯರ್ಸ್ಗೆ ಗೌರವ ಸೂಚಿಸುವ ಕಾರಣಗಳಿಂದ ಆರ್‌ಸಿಬಿ ನೀಲಿ ಜೆರ್ಸಿ ಧರಿಸಿ ಆಡಲಿದೆ. ಇದು ಅವರ ಅಮೂಲ್ಯ ಸೇವೆಗೆ ಗೌರವ ಸಲ್ಲಿಸುವ ಉದ್ದೇಶವಾಗಿದೆ. ಪಿಪಿಇ ಕಿಟ್‌ಗಳ ಬಣ್ಣವನ್ನು ಹೋಲುವ ನೀಲಿ ಜೆರ್ಸಿಯಲ್ಲಿ ಕಣಕ್ಕಿಳಿದು ಆರ್‌ಸಿಬಿ ಗೌರವ ಸೂಚಿಸಲಿದೆ. ಈ ಬಗ್ಗೆ ತಂಡದ ನಾಯಕ ವಿರಾಟ್ ಕೊಹ್ಲಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
Playing for a special cause tomorrow where we honour our frontline superheroes ?@RCBTweets @IPL pic.twitter.com/nFmMzh9XfI
— Virat Kohli (@imVkohli) September 19, 2021
ಆರ್‌ಸಿಬಿ ತಂಡ ಒಟ್ಟು ಏಳು ಪಂದ್ಯಗಳನ್ನು ಆಡಿದ್ದು ಐದರಲ್ಲಿ ಗೆಲುವು ಸಾಧಿಸಿ ಕೇವಲ ಎರಡರಲ್ಲಷ್ಟೆ ಸೋತಿದೆ. 10 ಅಂಕದೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆದರೆ, ಆರ್ಸಿಬಿಯ ನೆಟ್ ರನ್ರೇಟ್ -0.171 ಇಂದು ಇದನ್ನು ಪ್ಲಸ್ ಆಗಿ ಕನ್ವರ್ಟ್ ಮಾಡಬೇಕಿದೆ.
ಮೊದಲ ಚರಣದಲ್ಲಿ ಆರ್‌ಸಿಬಿ ಬ್ಯಾಟಿಂಗ್-ಬೌಲಿಂಗ್ ಎರಡರಲ್ಲೂ ಬಲಿಷ್ಠವಾಗಿತ್ತು. ಈಗ ಮೇಲ್ನೋಟಕ್ಕೆ ಕೊಹ್ಲಿ ಪಡೆಯ ಬೌಲಿಂಗ್ ವಿಭಾಗ ಮತ್ತಷ್ಟು ಕಠಿಣವಾಗಿದೆ. ಇದು ತಂಡದ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಯುಜ್ವೇಂದ್ರ ಚಾಹಲ್ಗೆ ಸಾಥ್ ನೀಡಲು ಲಂಕಾ ಸ್ಪಿನ್ನರ್ ವಾನಿಂದು ಹಸರಂಗ ಇದ್ದು ಇವರ ಪ್ರದರ್ಶನದ ಮೇಲೆ ಎಲ್ಲರ ಕಣ್ಣಿದೆ. ವೇಗಿಗಳ ಪೈಕಿ ಹರ್ಷಲ್ ಪಟೇಲ್ ಈ ಬಾರಿ ಗರಿಷ್ಠ ವಿಕೆಟ್ ಪಡೆದವರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ. ಕೈಲ್ ಜೇಮಿಸನ್ ಹಾಗೂ ಮೊಹಮ್ಮದ್ ಸಿರಾಜ್ ಮಾರಕವಾಗಿ ಗೋಚರಿಸಲಿದ್ದಾರೆ.
ಇನ್ನೂ ಬ್ಯಾಟಿಂಗ್ ವಿಭಾಗವೂ ಬಲಿಷ್ಠವಾಗಿದೆ. ಓಪನರ್ಗಳಾಗಿ ನಾಯಕ ವಿರಾಟ್ ಕೊಹ್ಲಿ ಜೊತೆ ದೇವದತ್ ಪಡಿಕ್ಕಲ್ ಕಣಕ್ಕಿಳಿಯಲಿದ್ದಾರೆ. ರಜತ್ ಪಟಿದಾರ್, ಗ್ಲೆನ್ ಮ್ಯಾಕ್ಸ್ವೆಲ್, ಎಬಿ ಡಿವಿಲಿಯರ್ಸ್ ತಂಡದ ಪ್ರಮುಖ ಬ್ಯಾಟಿಂಗ್ ಅಸ್ತ್ರ. ಅಭ್ಯಾಸ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಮೊಹಮ್ಮದ್ ಅಜರುದ್ದೀನ್ಗೆ ಅವಕಾಶ ನೀಡಿದರೆ ಅಚ್ಚರಿ ಪಡಬೇಕಿಲ್ಲ. ಇತ್ತ ಕೆಕೆಆರ್ ತಂಡ ಬಿಗ್ ಹಿಟ್ಟರ್ಗಳಿಂದ ಕೂಡಿದೆ.
ಉಭಯ ತಂಡಗಳು ಐಪಿಎಲ್ನಲ್ಲಿ ಈವರೆಗೆ 27 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 13 ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ 14 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ.
IPL 2021: ಇಂದು ಬಹುನಿರೀಕ್ಷೆಯ ಆರ್‌ಸಿಬಿ ಪಂದ್ಯ: ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ ಕೆಕೆಆರ್
(Virat Kohli RCB will sport the blue jersey in honour of frontline superheroes against KKR IPL 2021)