
ಪ್ರಸ್ತುತ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಐದು ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ಇದಾದ ಬಳಿಕ ಉಭಯ ತಂಡಗಳ ನಡುವೆ ಏಕದಿನ ಸರಣಿ ನವೆಂಬರ್ 4ರಿಂದ ಆರಂಭವಾಗಲಿದೆ. ಈ ಸರಣಿಯಲ್ಲಿ ಒಟ್ಟು 5 ಪಂದ್ಯಗಳು ನಡೆಯಲಿವೆ. ಈ ಸರಣಿಯ ಮೂಲಕ ಬರೋಬ್ಬರಿ 6 ವರ್ಷಗಳ ಬಳಿಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನ್ಯೂಜಿಲೆಂಡ್ ನೆಲದಲ್ಲಿ ಆಡಲು ಸಜ್ಜಾಗಿದ್ದಾರೆ. ಇದೇ ಈ ದೇಶದಲ್ಲಿ ಅವರ ಕೊನೆಯ ಸರಣಿಯಾಗುವ ಸಾಧ್ಯತೆಯಿರುವುದರಿಂದ ಅಭಿಮಾನಿಗಳು ಮಾತ್ರವಲ್ಲದೆ ಕ್ರಿಕೆಟ್ ಮಂಡಳಿಯೂ ಈ ಸರಣಿಯನ್ನು ವಿಶೇಷವಾಗಿಸಲು ಉತ್ಸುಕವಾಗಿದೆ. ಈ ಇಬ್ಬರು ಅನುಭವಿ ಆಟಗಾರರು ಕೂಡ ಈ ಸರಣಿಯನ್ನು ಸ್ಮರಣೀಯವಾಗಿಸಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 100 ಶತಕಗಳ ಮೈಲಿಗಲ್ಲು ತಲುಪುವ ಗುರಿ ಹೊಂದಿರುವ ವಿರಾಟ್ ಕೊಹ್ಲಿ, ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ ತಮ್ಮ ತಯಾರಿಯನ್ನು ಚುರುಕುಗೊಳಿಸಿದ್ದಾರೆ. ಇತ್ತೀಚೆಗೆ ಮುಂಬೈನ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾಗೆ ಸೇರಿದ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಅವರು ಭರ್ಜರಿ ಅಭ್ಯಾಸ ನಡೆಸಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ನೆಟ್ನಲ್ಲಿ ಬ್ಯಾಟಿಂಗ್ ಮಾಡಿದ ಕೊಹ್ಲಿ, ಆಕರ್ಷಕ ಹೊಡೆತಗಳ ಮೂಲಕ ಗಮನ ಸೆಳೆದಿದ್ದಾರೆ. ಮತ್ತೊಂದೆಡೆ, ರೋಹಿತ್ ಶರ್ಮಾ ಕೂಡ ಮುಂಬೈನಲ್ಲಿ ಫಿಟ್ನೆಸ್ ಅಭ್ಯಾಸ ಆರಂಭಿಸಿದ್ದು, ತಮ್ಮ ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ವಿರಾಟ್ ಕೊಹ್ಲಿ ಅತ್ಯುತ್ತಮ ಫಾರ್ಮ್ನೊಂದಿಗೆ ಕಣಕ್ಕಿಳಿಯಲಿದ್ದಾರೆ. 2026ರಲ್ಲಿ ಏಕದಿನ ಕ್ರಿಕೆಟ್ನಲ್ಲಿ ಆಡಿರುವ 9 ಇನ್ನಿಂಗ್ಸ್ಗಳಲ್ಲಿ ಅವರು 69ರ ಸರಾಸರಿ ಮತ್ತು 118ರ ಸ್ಟ್ರೈಕ್ರೇಟ್ನೊಂದಿಗೆ ಒಟ್ಟು 552 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಕೊಹ್ಲಿ 2 ಶತಕ ಹಾಗೂ 3 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಒಂದು ಪಂದ್ಯದಲ್ಲಿ ಅವರು ಕೇವಲ 7 ರನ್ಗಳಿಂದ ಶತಕ ವಂಚಿತರಾಗಿ 93 ರನ್ಗಳಿಗೆ ಔಟಾಗಿದ್ದರು. ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ತಲಾ ಒಂದು ಶತಕ ಸಿಡಿಸಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ಕೊಹ್ಲಿ, ಬುಮ್ರಾ ಇಲ್ಲದ ಟೀಂ ಇಂಡಿಯಾ! ರಹಾನೆ ಆಯ್ಕೆಗೆ ಅಭಿಮಾನಿಗಳು ಸುಸ್ತು
ಇಂಗ್ಲೆಂಡ್ ಪ್ರವಾಸದಲ್ಲಿ ಶತಕ ಗಳಿಸಲು ಸಾಧ್ಯವಾಗದಿದ್ದರೂ, ಮೂರು ಪಂದ್ಯಗಳ ಸರಣಿಯಲ್ಲಿ 48ರ ಸರಾಸರಿಯಲ್ಲಿ 144 ರನ್ ಗಳಿಸಿದ್ದರು. ಈ ವೇಳೆ ಎರಡು ಅರ್ಧಶತಕಗಳನ್ನೂ ದಾಖಲಿಸಿದ್ದರು. ಹೀಗಾಗಿ, ನ್ಯೂಜಿಲೆಂಡ್ ವಿರುದ್ಧದ ಮುಂಬರುವ ಏಕದಿನ ಸರಣಿಯಲ್ಲಿ ಕೊಹ್ಲಿ ಮತ್ತು ರೋಹಿತ್ ಅವರ ಪ್ರದರ್ಶನದ ಮೇಲೆ ಅಭಿಮಾನಿಗಳ ಕಣ್ಣಿರಲಿದೆ. ಇಬ್ಬರು ದಿಗ್ಗಜರು ತಮ್ಮ ಅನುಭವ ಹಾಗೂ ಬ್ಯಾಟಿಂಗ್ ಸಾಮರ್ಥ್ಯದ ಮೂಲಕ ಮತ್ತೊಮ್ಮೆ ಅಭಿಮಾನಿಗಳನ್ನು ರಂಜಿಸುತ್ತಾರೆಯೇ ಎಂಬ ಕುತೂಹಲ ಹೆಚ್ಚಾಗಿದೆ.
Published On - 3:07 pm, Mon, 26 October 26