Virat Kohli: ಶ್ರೀಲಂಕಾ ನಾಯಕ ದಿಮುತ್ ಕರುಣರತ್ನೆ ಶತಕ ಸಿಡಿಸಿದ ವೇಳೆ ವಿರಾಟ್ ಕೊಹ್ಲಿ ಮಾಡಿದ್ದೇನು ನೋಡಿ

| Updated By: Vinay Bhat

Updated on: Mar 15, 2022 | 12:45 PM

IND vs SL: ತಂಡದ ಗೆಲುವಿಗೆ ಹೋರಾಟ ನಡೆಸಿದ ಶ್ರೀಲಂಕಾ ನಾಯಕ ದಿಮುತ್ ಕರುಣರತ್ನೆ ಆಟಕ್ಕೆ ಕೇವಲ ಅವರ ತಂಡದ ಆಟಗಾರರು ಮಾತ್ರವಲ್ಲ ಇಡೀ ಚಿನ್ನಸ್ವಾಮಿ ಕ್ರೀಡಾಂಗಣವೇ ಮನಸೋತಿತು. ಅದರಲ್ಲೂ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಏನು ಮಾಡಿದರು ಎಂಬುದನ್ನು ನೋಡಿ.

Virat Kohli: ಶ್ರೀಲಂಕಾ ನಾಯಕ ದಿಮುತ್ ಕರುಣರತ್ನೆ ಶತಕ ಸಿಡಿಸಿದ ವೇಳೆ ವಿರಾಟ್ ಕೊಹ್ಲಿ ಮಾಡಿದ್ದೇನು ನೋಡಿ
Virat Kohli Dimuth Karunaratne
Follow us on

ಮೂರು ಪಂದ್ಯಗಳ ಟಿ20 ಹಾಗೂ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ಪ್ರವಾಸ ಬೆಳೆಸಿದ ಶ್ರೀಲಂಕಾಕ್ಕೆ (Sri Lanka Cricket Team) ಈ ಬಾರಿ ದೊಡ್ಡ ಮುಖಭಂಗವಾಯಿತು. ಟಿ20 ಸರಣಿಯಲ್ಲಿ ವೈಟ್​ವಾಷ್ ಹಿನ್ನಡೆ ಅನುಭವಿಸಿದರೆ ಆಡಿದ ಎರಡೂ ಟೆಸ್ಟ್​ ಪಂದ್ಯದಲ್ಲಿ ಹೀನಾಯ ಸೋಲು ಕಂಡು ಬರೀ ಗೈಯಲ್ಲಿ ತವರಿಗೆ ಮರಳಬೇಕಾಯಿತು. ಇದರ ನಡುವೆ ಲಂಕಾ ಆಟಗಾರರಿಗೆ ಈ ಪ್ರವಾಸದಲ್ಲಿ ಇಂಜುರಿ ಸಮಸ್ಯೆ ಕೂಡ ಬೆಂಬಿಡದೆ ಕಾಡಿತು. ಪಂದ್ಯದ ಮಧ್ಯೆಯೆ ಕೆಲ ಆಟಗಾರರು ಮೈದಾನದಿಂದ ಹೊರ ನಡೆದರು. ರೋಹಿತ್ ಶರ್ಮಾ (Rohit Sharma) ಸಾರಥ್ಯದ ಭಾರತ ತಂಡಕ್ಕೆ ಲಂಕಾ ದೊಡ್ಡ ಸವಾಲಾಗಿ ಪರಿಣಮಿಸಲೇ ಇಲ್ಲ. ಆದರೆ, ಲಂಕಾ ಆಟಗಾರರ ಪರಿಶ್ರಮ, ಅದರಲ್ಲೂ ಎಲ್ಲ ಬ್ಯಾಟರ್​ಗಳು ಕೈಕೊಟ್ಟಾಗ ನಾಯಕನ ಆಟವಾಡಿದ ದಿಮುತ್ ಕರುಣರತ್ನೆ (Dimuth Karunaratne) ಅವರ ಹೋರಾಟವನ್ನು ಅಲ್ಲಗೆಳೆಯುವಂತಿಲ್ಲ. ಎರಡನೇ ಟೆಸ್ಟ್​ನ ಎರಡನೇ ಇನ್ನಿಂಗ್ಸ್​ನಲ್ಲೂ ಇದು ಎದ್ದು ಕಂಡಿತು. ತಂಡದ ಗೆಲುವಿಗೆ ಹೋರಾಟ ನಡೆಸಿದ ಲಂಕಾ ನಾಯಕನ ಆಟಕ್ಕೆ ಕೇವಲ ಅವರ ತಂಡದ ಆಟಗಾರರು ಮಾತ್ರವಲ್ಲ ಇಡೀ ಚಿನ್ನಸ್ವಾಮಿ ಕ್ರೀಡಾಂಗಣವೇ ಮನಸೋತಿತು.

ಹೌದು, ಭಾರತ ನೀಡಿದ್ದ ಬೃಹತ್ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ತಂಡ ಮೊದಲ ಓವರ್​ನಲ್ಲೇ ಲಹಿರು ತಿರಿಮನ್ನೆ(0) ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಗಿತ್ತು. 3ನೇ ದಿನ ಕೂಡ ಲಂಕಾ ಬ್ಯಾಟರ್​ಗಳು ಪೆವಿಲಿಯನ್ ಹಾದಿ ಹಿಡಿದರು. 60 ಎಸೆತಗಳಲ್ಲಿ 8ಬೌಂಡರಿ ಸಹಿತ 54 ರನ್​ಗಳಿಸಿದ್ದ ಕುಸಾಲ್​ ಮೆಂಡಿಸ್​ ಔಟಾಗುತ್ತಿದ್ದಂತೆ ಲಂಕಾ ತಂಡದ ಪತನ ಆರಂಭವಾಯಿತು. ಮ್ಯಾಥ್ಯೂಸ್​(1), ಧನಂಜಯ ಡಿ ಸಿಲ್ವಾ(4), ನಿರೋಷನ್ ಡಿಕ್ವೆಲ್ಲಾ(12), ಅಸಲಂಕಾ(5), ಎಂಬುಲ್ದೇನಿಯಾ(2), ಸುರಂಗ ಲಕ್ಮಲ್(1) ವಿಶ್ವ ಫರ್ನಾಂಡೊ(2) ಭಾರತೀಯ ಬೌಲರ್​ಗಳ ದಾಳಿಗೆ ಉತ್ತರಿಸಲಾಗದೆ ಅಲ್ಪಮೊತ್ತಕ್ಕೆ ವಿಕೆಟ್​ ಒಪ್ಪಿಸಿದರು.

ಇವರೆಲ್ಲರ ನಡುವೆ ತಂಡದ ಸೋಲು ಖಚಿತವಾಗಿದ್ದರೂ ಎಷ್ಟು ಆಗುತ್ತದೋ ಅಷ್ಟು ರನ್ ಕಲೆಹಾಕೋಣ ಎಂದು ಏಕಾಂಗಿ ಹೋರಾಟ ನಡೆಸಿದ್ದು ನಾಯಕ ದಿಮುತ್ ಕರುಣರತ್ನೆ. ತಮ್ಮ ವೃತ್ತಿ ಜೀವನದ 14ನೇ ಶತಕ ಸಿಡಿಸಿದ ಅವರು 174 ಎಸೆತಗಳಲ್ಲಿ 15 ಬೌಂಡರಿ ಸಹಿತ 107ರನ್​ ಗಳಿಸಿದರು. ಭಾರತೀಯ ಬೌಲರ್‌ಗಳ ದಾಳಿಗೆ ಉತ್ತಮ ಪ್ರತ್ಯುತ್ತರ ನೀಡಿದ ಕರುಣರತ್ನೆ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು ಶತಕ ಗಳಿಸುತ್ತಿದ್ದಂತೆ ಇಡೀ ಚಿನ್ನಸ್ವಾಮಿ ಕ್ರೀಡಾಂಗಣವೇ ಶರಣಾಯಿತು. ಅದರಲ್ಲೂ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಚಪ್ಪಾಳೆ ತಟ್ಟಿ ಲಂಕಾ ನಾಯಕನ ಆಟವನ್ನು ಪ್ರಶಂಸಿಸಿದರು. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

 

ಈ ಪಂದ್ಯ ರೋಹಿತ್ ಶರ್ಮ ಪೂರ್ಣ ಪ್ರಮಾಣದ ನಾಯಕತ್ವ ವಹಿಸಿಕೊಂಡ ಬಳಿಕ ಭಾರತ ತಂಡ ಸತತ 14ನೇ ಗೆಲುವಾಗಿದೆ. 9 ಟಿ20, 3 ಏಕದಿನ, 2 ಟೆಸ್ಟ್ ಪಂದ್ಯದಲ್ಲಿ ರೋಹಿತ್ ನಾಯಕತ್ವ ವಹಿಸಿಕೊಂಡ ಬಳಿಕ ಭಾರತ ಗೆಲುವಿನ ಕೇಕೆ ಹಾಕಿದೆ. ಟೀಮ್ ಇಂಡಿಯಾ ಆರ್. ಅಶ್ವಿನ್ (55ಕ್ಕೆ 4) ಮಾರಕ ದಾಳಿ ನೆರವಿನಿಂದ ಪ್ರವಾಸಿ ಶ್ರೀಲಂಕಾ ವಿರುದ್ಧದ 2ನೇ ಹಾಗೂ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಎರಡೂವರೆ ದಿನಗಳಲ್ಲೇ 238 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿತು. ಇದರೊಂದಿಗೆ ಭಾರತ 2-0ಯಿಂದ ಸರಣಿ ವಶಪಡಿಸಿಕೊಂಡು ಬೀಗಿತು.

IPL 2022: ಐಪಿಎಲ್ 2022 ರಲ್ಲಿ ದೊಡ್ಡ ಬದಲಾವಣೆ: ಹೊಸ ನಿಯಮ ಜಾರಿಗೆ ತಂದ ಬಿಸಿಸಿಐ

Rohit Sharma: ದ್ವಿತೀಯ ಟೆಸ್ಟ್ ಮುಗಿದ ಬಳಿಕ ರೋಹಿತ್ ಶರ್ಮಾ ಏನು ಹೇಳಿದರು ಗೊತ್ತೇ?: ಇಲ್ಲಿದೆ ನೋಡಿ