Virat Kohli: ಅರ್ಧಶತಕಕ್ಕೆ ಒಂದು ರನ್ ಬೇಕಿದ್ದಾಗ ನೀನೇ ಬ್ಯಾಟಿಂಗ್ ಮಾಡೆಂದು ಕಾರ್ತಿಕ್​ಗೆ ತಾಕೀತು ಮಾಡಿದ ಕೊಹ್ಲಿ: ವಿಡಿಯೋ

| Updated By: Vinay Bhat

Updated on: Oct 03, 2022 | 9:07 AM

India vs South Africa: ಕ್ರಿಕೆಟ್ ಲೋಕದಲ್ಲಿ ವಿರಾಟ್ ಕೊಹ್ಲಿ ಮಾಡಿರುವ ದಾಖಲೆಗಳಿಗೆ ಲೆಕ್ಕವಿಲ್ಲ. ಆದರೆ, ತಂಡ ಮೊದಲು ದಾಖಲೆ ನಂತರ ಎಂಬ ಸೂತ್ರವನ್ನು ಕೊಹ್ಲಿ ಅಚ್ಚುಕಟ್ಟಾಗಿ ಪಾಲಿಸುತ್ತಿರುವುದು ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20ಯಲ್ಲಿ ಮತ್ತೊಮ್ಮೆ ಕಂಡುಬಂತು.

Virat Kohli: ಅರ್ಧಶತಕಕ್ಕೆ ಒಂದು ರನ್ ಬೇಕಿದ್ದಾಗ ನೀನೇ ಬ್ಯಾಟಿಂಗ್ ಮಾಡೆಂದು ಕಾರ್ತಿಕ್​ಗೆ ತಾಕೀತು ಮಾಡಿದ ಕೊಹ್ಲಿ: ವಿಡಿಯೋ
Virat Kohli and Dinesh Karthik
Follow us on

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ 16 ರನ್​ಗಳ ಭರ್ಜರಿ ಜಯ ಸಾಧಿಸುವ ಮೂಲಕ ಭಾರತ (India vs South Africa) ಸರಣಿ ವಶಪಡಿಸಿಕೊಂಡಿದೆ. ಬರೋಬ್ಬರಿ 237 ರನ್ ಕಲೆಹಾಕಿ ರೋಹಿತ್ ಪಡೆ ತನ್ನ ಬ್ಯಾಟಿಂಗ್ ಶಕ್ತಿಯನ್ನು ಮತ್ತೊಮ್ಮೆ ಪ್ರದರ್ಶಿಸಿತು. ಟೀಮ್ ಇಂಡಿಯಾ ಇಷ್ಟು ದೊಡ್ಡ ಮೊತ್ತ ಕಲೆಹಾಕಲು ಮುಖ್ಯ ಕಾರಣ ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್ (Suryakumar Yadav) ಹಾಗೂ ವಿರಾಟ್ ಕೊಹ್ಲಿ. ರಾಹುಲ್ ಆರಂಭದಲ್ಲಿ ತಮ್ಮ ಕೆಲಸ ನಿರ್ವಹಿಸಿ ನಿರ್ಗಮಿಸಿದರೆ ಮಧ್ಯಮ ಕ್ರಮಾಂಕದಲ್ಲಿ ಸೂರ್ಯ ಹಾಗೂ ಕೊಹ್ಲಿ ಜೋಡಿ ಶತಕದ ಜೊತೆಯಾಟ ಆಡಿ ತಂಡದ ಮೊತ್ತ 200ರ ಗಡಿ ದಾಟುವಂತೆ ಮಾಡಿದರು. ಕೊನೆ ಕ್ಷಣದಲ್ಲಿ ಸೂರ್ಯಕುಮಾರ್ ರನೌಟ್​ಗೆ ಬಲಿಯಾದ ನಂತರ ಪಂದ್ಯವನ್ನು ಫಿನಿಶ್ ಮಾಡುವ ಜವಾಬ್ದಾರಿ ಕೊಹ್ಲಿ ಹೆಗಲಮೇಲಿತ್ತು. ಜೊತೆಗೆ ಅರ್ಧಶತಕದ ಹೊಸ್ತಿಲಲ್ಲಿ ಕೂಡ ಇದ್ದರು. ಆದರೆ, ಈ ಸಂದರ್ಭ ವಿರಾಟ್ (Virat Kohli) ನಡೆದುಕೊಂಡ ರೀತಿ ಅನೇಕರ ಮೆಚ್ಚಿಗೆಗೆ ಪಾತ್ರವಾಗಿದೆ.

ಕ್ರಿಕೆಟ್ ಲೋಕದಲ್ಲಿ ಕೊಹ್ಲಿ ಮಾಡಿರುವ ದಾಖಲೆಗಳಿಗೆ ಲೆಕ್ಕವಿಲ್ಲ. ಆದರೆ, ತಂಡ ಮೊದಲು ದಾಖಲೆ ನಂತರ ಎಂಬ ಸೂತ್ರವನ್ನು ಕೊಹ್ಲಿ ಅಚ್ಚುಕಟ್ಟಾಗಿ ಪಾಲಿಸುತ್ತಿರುವುದು ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20ಯಲ್ಲಿ ಮತ್ತೊಮ್ಮೆ ಕಂಡುಬಂತು. ಕೊನೆಯ 20ನೇ ಓವರ್​ ಪ್ರಾರಂಭ ಆಗುವುದಕ್ಕೂ ಮುನ್ನ ಕೊಹ್ಲಿ ಅರ್ಧಶತಕ ಸಿಡಿಸಲು ಕೇವಲ ಒಂದು ರನ್​ ಅಷ್ಟೇ ಬೇಕಾಗಿತ್ತು.

ಇದನ್ನೂ ಓದಿ
KL Rahul: ಪಂದ್ಯಶ್ರೇಷ್ಠ ನೀಡುವ ವೇಳೆ ಈ ಪ್ರಶಸ್ತಿ ನನಗೆ ಬೇಡ ಎಂದ ಕೆಎಲ್ ರಾಹುಲ್: ಯಾಕೆ ಗೊತ್ತೇ?
IND Vs SA: ಗುವಾಹಟಿಯಲ್ಲಿ ಸೂರ್ಯ ಸ್ಫೋಟ; ಕೇವಲ 573 ಎಸೆತಗಳಲ್ಲಿ 1000 ರನ್ ಪೂರ್ಣ..!
IND Vs SA: ಟಿ20 ಕ್ರಿಕೆಟ್​ನಲ್ಲಿ ದಾಖಲೆ ಬರೆದ ರೋಹಿತ್; ಧೋನಿ- ಕೊಹ್ಲಿಯನ್ನು ಹಿಂದಿಕ್ಕಿದ ಹಿಟ್​ಮ್ಯಾನ್.!
IND Vs SA: ಭಾರತ- ಆಫ್ರಿಕಾ ಪಂದ್ಯದ ನಡುವೆ ಮೈದಾನಕ್ಕೆ ನುಗ್ಗಿದ ಹಾವು! ಕೆಲಕಾಲ ನಿಂತ ಪಂದ್ಯ; ವಿಡಿಯೋ ನೋಡಿ

6 ಎಸೆತಗಳಲ್ಲಿ 1 ರನ್ ಗಳಿಸುವುದು ದೊಡ್ಡ ಕಷ್ಟವೇನಲ್ಲ. ಕ್ರೀಸ್​ನಲ್ಲಿದ್ದ ಕಾರ್ತಿಕ್ ಸಿಂಗಲ್ ರನ್ ಕಲೆಹಾಕಿ ಕೊಹ್ಲಿಗೆ ಸ್ಟ್ರೈಕ್ ಕೊಡಬೇಕಿತ್ತಷ್ಟೆ. ಆದರೆ, ಅಲ್ಲಿ ಹಾಗಾಗಲು ಕೊಹ್ಲಿ ಮುಂದಾಗಲಿಲ್ಲ. ಬದಲಾಗಿ ನನ್ನ ಅರ್ಧಶತಕದ ಬಗ್ಗೆ ಚಿಂತೆ ಮಾಡಬೇಡ ನೀನು ಬಿಗ್ ಶಾಟ್ ಹೊಡಿ ಎಂದು ಕಾರ್ತಿಕ್ ಬಳಿ ಕೊಹ್ಲಿ ಹೇಳಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಕೊಹ್ಲಿಯ ಈ ನಡೆಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದೆ.

 

20ನೇ ಓವರ್​ ಸಂಪೂರ್ಣವಾಗಿ ಆಡಿದ ಕಾರ್ತಿಕ್ ಅವರು ಕಗಿಸೊ ರಬಾಡ ಬೌಲಿಂಗ್​ನಲ್ಲಿ 18 ರನ್ ಚಚ್ಚಿದರು. ಮೊದಲ ಎಸೆತ ಡಾಟ್ ಆದರೆ, ಎರಡನೇ ಎಸೆತದಲ್ಲಿ ಫೋರ್ ಬಾರಿಸಿದರು. ಮೂರನೇ ಎಸೆತ ಮತ್ತೆ ಡಾಟ್ ಆಯಿತು. ನಾಲ್ಕನೇ ಎಸೆತ ವೈಡ್ ಆದ ಕಾರಣ ಮುಂದಿನ ಎಸೆತದಲ್ಲಿ ಸಿಕ್ಸ್ ಸಿಡಿಸಿದರು. 5ನೇ ಎಸೆತದಲ್ಲಿ ಮತ್ತೊಂದು ಸಿಕ್ಸ್ ಮತ್ತು ಅಂತಿಮ ಆರನೇ ಎಸೆತದಲ್ಲಿ 1 ರನ್ ಕಲೆಹಾಕಿದರು. ಈ ಮೂಲಕ ಕಾರ್ತಿಕ್ ಒಟ್ಟು 7 ಎಸೆತಗಳಲ್ಲಿ 1 ಫೋರ್, 2 ಸಿಕ್ಸರ್ ಸಿಡಿಸಿ ಅಜೇಯ 17 ರನ್ ಗಳಿಸಿದರು. ಮತ್ತೊಂದು ತುದಿಯಲ್ಲಿದ್ದ ಕೊಹ್ಲಿ 28 ಎಸೆತಗಲ್ಲಿ 7 ಫೋರ್, 1 ಸಿಕ್ಸರ್​ನೊಂದಿಗೆ ಅಜೇಯ 49 ರನ್ ಗಳಿಸಿದರು.

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಭಾರತ ಭರ್ಜರಿ ಆರಂಭ ಪಡೆದುಕೊಂಡಿತು. ರೋಹಿತ್​ ಶರ್ಮಾ 37 ಎಸೆತದಲ್ಲಿ 43 ರನ್​ ಬಾರಿಸಿ ಔಟಾದರೆ, ರಾಹುಲ್ 28 ಎಸೆತದಲ್ಲಿ 57 ರನ್​ ಗಳಿಸಿದರು. ಬಳಿಕ ಕೊಹ್ಲಿ – ಸೂರ್ಯಕುಮಾರ್​ ಯಾದವ್ ಜೊತೆಯಾಗಿ ಶತಕದ ಜೊತೆಯಾಟ ಆಡಿದರು. ಸೂರ್ಯ 22 ಬಾಲ್​ನಲ್ಲಿ 5 ಸಿಕ್ಸರ್​ ಹಾಗೂ 5 ಬೌಂಡರಿಯಿಂದ 61 ರನ್ ​ಚಚ್ಚಿದರು. ಅಂತಿಮವಾಗಿ ಭಾರತ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 237 ರನ್ ಕಲೆಹಾಕಿತು.

ಟಾರ್ಗೆಟ್ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 1 ರನ್​ಗೆ 2 ವಿಕೆಟ್ ಕಳೆದುಕೊಂಡಿತು. ನಂತರ ಕ್ವಿಂಟನ್ ಡಿಕಾಕ್ ಹಾಗೂ ಡೇವಿಡ್ ಮಿಲ್ಲರ್ ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡದ ಗೆಲುವಿಗೆ ಹೋರಾಟ ನಡೆಸಿದರೂ ಯಶಸ್ಸು ಸಿಗಲಿಲ್ಲ. ಮಿಲ್ಲರ್ ಕೇವಲ 47 ಎಸೆತಗಳಲ್ಲಿ 8 ಫೋರ್, 7 ಸಿಕ್ಸರ್​ನೊಂದಿಗೆ ಅಜೇಯ 106 ರನ್ ಸಿಡಿಸಿದರೆ, ಡಿಕಾಕ್ 48 ಎಸೆತಗಳಲ್ಲಿ ಅಜೇಯ 69 ರನ್ ಗಳಿಸಿದರು. ಆಫ್ರಿಕಾ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿ ಸೋಲಿಗೆ ಶರಣಾಯಿತು. ಕೆಎಲ್ ರಾಹುಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

Published On - 9:07 am, Mon, 3 October 22