
ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ನಡೆದ ಏಷ್ಯಾಕಪ್ನ ಸೂಪರ್-4 ಹಂತದ 3ನೇ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ವಿರಾಟ್ ಕೊಹ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಆ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ಕಿಂಗ್ ಕೊಹ್ಲಿ 94 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ ಅಜೇಯ 122 ರನ್ ಬಾರಿಸಿ ಅಬ್ಬರಿಸಿದ್ದರು.
ಆದರೆ ಇದೇ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಎದುರಿಸಿದ್ದು 12 ಎಸೆತಗಳು. ಕಲೆಹಾಕಿದ್ದು ಕೇವಲ 3 ರನ್ಗಳು ಮಾತ್ರ. ಅಂದರೆ ಒಂದೇ ದಿನಕ್ಕೆ ವಿರಾಟ್ ಕೊಹ್ಲಿ ಮೂರಂಕಿ ಮೊತ್ತದಿಂದ 3 ಅಂಕಿಗೆ ಇಳಿದಿದ್ದರು. ಇದಕ್ಕೆ ಮುಖ್ಯ ಕಾರಣ ಎಡಗೈ ಸ್ಪಿನ್ನರ್ ಮೋಡಿ.
ಅಂದರೆ ಶ್ರೀಲಂಕಾ ನಾಯಕ ದಸುನ್ ಶಾನಕ ಎಡಗೈ ಸ್ಪಿನ್ನರ್ ಅನ್ನು ವಿರಾಟ್ ಕೊಹ್ಲಿ ವಿರುದ್ಧ ಹೊಸ ಅಸ್ತ್ರವಾಗಿ ಪ್ರಯೋಗಿಸಿದ್ದರು. ಅತ್ತ ಶುಭ್ಮನ್ ಗಿಲ್ ವಿಕೆಟ್ ಪಡೆದ ಖುಷಿಯಲ್ಲಿದ್ದ ದುನಿತ್ ವೆಲ್ಲಲಾಗೆ ಕೊಹ್ಲಿ ಕೂಡ ಸುಲಭವಾಗಿ ವಿಕೆಟ್ ಒಪ್ಪಿಸಿದರು.
ಸಾಮಾನ್ಯವಾಗಿ ವಿರಾಟ್ ಕೊಹ್ಲಿ ಎಡಗೈ ಸ್ಪಿನ್ನರ್ಗಳ ಎಸೆತದಲ್ಲಿ ಶಾರ್ಟ್ ಮಿಡ್ ವಿಕೆಟ್ನತ್ತ ಶಾಟ್ ಬಾರಿಸಲು ತಡಕಾಡುತ್ತಾರೆ. ಈ ದೌರ್ಬಲ್ಯವನ್ನು ಅರಿತಿದ್ದ ಶ್ರೀಲಂಕಾ ನಾಯಕ ದಸುನ್ ಶಾನಕ ಎಡಗೈ ಸ್ಪಿನ್ನರ್ ಅನ್ನು ಕೊಹ್ಲಿ ವಿರುದ್ಧ ಪ್ರಯೋಗಿಸಿದ್ದಾರೆ. ಅದರಂತೆ ಯುವ ಎಡಗೈ ಸ್ಪಿನ್ನರ್ ದುನಿತ್ ಕೊಹ್ಲಿಯನ್ನು ಶಾರ್ಟ್ ಮಿಡ್ ವಿಕೆಟ್ನತ್ತ ಬಾರಿಸುವಲ್ಲಿ ಪ್ರೇರೇಪಿಸಿದರು.
ಇತ್ತ ಭರ್ಜರಿ ಫಾರ್ಮ್ನಲ್ಲಿದ್ದ ಕೊಹ್ಲಿ ಕೂಡ ಯುವ ಸ್ಪಿನ್ನರ್ನ ಸವಾಲನ್ನು ಸ್ವೀಕರಿಸಿ ಶಾರ್ಟ್ ಮಿಡ್ ವಿಕೆಟ್ನತ್ತ ಬಾರಿಸಲು ಯತ್ನಿಸಿದರು. ಆದರೆ ಚೆಂಡು ಲೆಗ್ ಸೈಡ್ನಲ್ಲಿ ಫ್ರಂಟ್ ಫೀಲ್ಡ್ನಲ್ಲಿದ್ದ ದಸುನ್ ಶಾನಕ ಕೈ ಸೇರಿತು. ಇದರೊಂದಿಗೆ ಎಡಗೈ ಸ್ಪಿನ್ನರ್ ವಿರಾಟ್ ಕೊಹ್ಲಿ ಪಾಲಿಗೆ ಮತ್ತೊಮ್ಮೆ ಮುಳುವಾದರು.
ಏಕೆಂದರೆ ಏಕದಿನ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ 97 ಇನಿಂಗ್ಸ್ಗಳಲ್ಲಿ ಎಡಗೈ ಸ್ಪಿನ್ನರ್‌ಗಳನ್ನು ಎದುರಿಸಿದ್ದಾರೆ. ಈ ವೇಳೆ 22 ಬಾರಿ ವಿಕೆಟ್ ಒಪ್ಪಿಸಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ. ಹಾಗೆಯೇ ಎಡಗೈ ಸ್ಪಿನ್ನರ್ಗಳ ದಾಳಿಯಲ್ಲಿ ವಿರಾಟ್ ಕೊಹ್ಲಿ 89.97 ಸ್ಟ್ರೈಕ್ ರೇಟ್‌ನಲ್ಲಿ 1427 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ.
ಈ ಎಲ್ಲಾ ಅಂಕಿ ಅಂಶಗಳೊಂದಿಗೆ ತಂತ್ರ ರೂಪಿಸಿದ್ದ ಶ್ರೀಲಂಕಾ ತಂಡವು ವಿರಾಟ್ ಕೊಹ್ಲಿ ವಿರುದ್ಧ ಎಡಗೈ ಸ್ಪಿನ್ನರ್ ಅಸ್ತ್ರವನ್ನು ಬಳಸಿದ್ದಾರೆ. ಈ ಮೂಲಕ ಸುಲಭವಾಗಿ ಔಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
2022 ರಿಂದ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ 12 ಬಾರಿ ಎಡಗೈ ಸ್ಪಿನ್ನರ್ಗಳ ವಿರುದ್ಧ ಬ್ಯಾಟ್ ಬೀಸಿದ್ದಾರೆ. ಈ ವೇಳೆ 8 ಬಾರಿ ಔಟ್ ಆಗಿರುವುದು ಅಚ್ಚರಿ. ಇಲ್ಲಿ ಮತ್ತೊಂದು ಅಚ್ಚರಿ ಎಂದರೆ ಈ 12 ಇನಿಂಗ್ಸ್ಗಳಲ್ಲಿ ಒಮ್ಮೆಯೂ ಬಲಗೈ ಸ್ಪಿನ್ನರ್ಗಳು ಔಟ್ ಮಾಡಿಲ್ಲ ಎಂಬುದು. ಅಂದರೆ ಕಳೆದೊಂದು ವರ್ಷದಿಂದ ವಿರಾಟ್ ಕೊಹ್ಲಿ ಪಾಲಿಗೆ ಎಡಗೈ ಸ್ಪಿನ್ನರ್ಗಳೇ ಕಂಟಕವಾಗಿ ಪರಿಣಮಿಸಿದ್ದಾರೆ.
ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ ಮಾತ್ರ ಎಡಗೈ ಸ್ಪಿನ್ನರ್ಗಳ ಎಸೆತಗಳಲ್ಲಿ ಮುಗ್ಗರಿಸುತ್ತಿದ್ದಾರೆ. ಇದಾಗ್ಯೂ ಒಟ್ಟಾರೆ ಅಂಕಿ ಅಂಶಗಳನ್ನು ಗಣನೆಗೆ ತೆಗೆದುಕೊಂಡರೆ ಕೊಹ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ ಎನ್ನಬಹುದು. ಏಕೆಂದರೆ ವಿರಾಟ್ ಕೊಹ್ಲಿ ಎಲ್ಲಾ ಮೂರು ಸ್ವರೂಪಗಳಲ್ಲಿ 220 ಇನ್ನಿಂಗ್ಸ್‌ಗಳಲ್ಲಿ ಎಡಗೈ ಸ್ಪಿನ್ನರ್‌ಗಳನ್ನು ಎದುರಿಸಿದ್ದಾರೆ.
ಇದನ್ನೂ ಓದಿ: ಕಿಂಗ್ ಕೊಹ್ಲಿಯ 1 ಶತಕಕ್ಕೆ 10 ದಾಖಲೆಗಳು ಉಡೀಸ್..!
ಈ ವೇಳೆ 45 ಬಾರಿ ಎಡಗೈ ಸ್ಪಿನ್ನರ್ಗೆ ತಮ್ಮ ವಿಕೆಟ್ ನೀಡಿದ್ದಾರೆ. ಇದೇ ವೇಳೆ 71.86 ಸರಾಸರಿಯಲ್ಲಿ 2989 ರನ್ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಾಗ್ಯೂ 2022 ರಿಂದ ವಿರಾಟ್ ಕೊಹ್ಲಿ 12 ಏಕದಿನ ಇನಿಂಗ್ಸ್ಗಳಲ್ಲಿ 8 ಬಾರಿ ಎಡಗೈ ಸ್ಪಿನ್ನರ್ಗಳಿಗೆ ವಿಕೆಟ್ ಒಪ್ಪಿಸಿರುವುದು ಅಚ್ಚರಿ ಎನ್ನದೇ ವಿಧಿಯಿಲ್ಲ.
Published On - 6:29 pm, Tue, 12 September 23