ಮುಂಬರುವ ಐಸಿಸಿ ಟಿ-20 ವಿಶ್ವಕಪ್ (ICC T20 World Cup) ಟೂರ್ನಿ ಮುಗಿದ ಬೆನ್ನಲೇ ಭಾರತ ಟಿ-20 ತಂಡದ ನಾಯಕತ್ವಕ್ಕೆ ವಿದಾಯ ಹೇಳುವುದಾಗಿ ಟೀಮ್ ಇಂಡಿಯಾ (Team India) ನಾಯಕ ವಿರಾಟ್ ಕೊಹ್ಲಿ (Virat Kohli) ಘೋಷಿಸಿರುವುದು ಅಚ್ಚರಿಗೆ ಕಾರಣವಾಗಿದೆ. 32 ವರ್ಷದ ಅನುಭವಿ ಬಲಗೈ ಬ್ಯಾಟ್ಸ್‌ಮನ್ ಸದ್ಯ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಹಲವು ವರ್ಷಗಳಿಂದ ಭಾರತ ತಂಡದ ನಾಯಕನಾಗಿ ತಂಡವನ್ನು ಅದ್ಭುತ ರೀತಿಯಲ್ಲಿ ಮುನ್ನಡೆಸುತ್ತಾ ಬಂದಿದ್ದು, ಈಗ ಟಿ-20 ಕ್ರಿಕೆಟ್ ಬಿಟ್ಟು ಕೇವಲ ಟೆಸ್ಟ್ ಮತ್ತು ಒಡಿಐ ಕ್ರಿಕೆಟ್‌ನಲ್ಲಿ ಮಾತ್ರವೇ ನಾಯಕನಾಗಿ ಮುಂದುವರಿಯುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಬಿಸಿಸಿಐ (BCCI) ಕೂಡ ಸ್ಪಷ್ಟನೆ ನೀಡಿದ್ದು, ಕಾರ್ಯದರ್ಶಿ ಜಯ್ ಶಾ (Jay Shah) ಕಳೆದ 6 ತಿಂಗಳುಗಳಿಂದ ಕೊಹ್ಲಿ ಮತ್ತು ತಂಡದ ನಾಯಕತ್ವ ಗುಂಪಿನೊಂದಿಗೆ ಚರ್ಚೆಗಳು ನಡೆಯುತ್ತಿವೆ. ಹೀಗಾಗಿ ಯೋಚಿಸಿ ಕೊಹ್ಲಿ ರಾಜೀನಾಮೆ ನೀಡಲು ಸಿದ್ಧತೆ ನಡೆಸಿದ್ದಾರೆ ಎಂದು ಹೇಳಿದೆ. ಇತ್ತ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಕೂಡ ಕೊಹ್ಲಿ ಟಿ-20 ನಾಯಕತ್ವದ ವಿದಾಯದ ಬಗ್ಗೆ ಮಾತನಾಡಿದ್ದಾರೆ.
ಟಿ-20 ನಾಯಕನಾಗಿ ಭಾರತೀಯ ಕ್ರಿಕೆಟ್ ತಂಡಕ್ಕೆ ನೀಡಿದ ಕೊಡುಗೆಗಳಿಗಾಗಿ ಧನ್ಯವಾದಗಳು ವಿರಾಟ್ ಎಂದು ಸೌರವ್ ಗಂಗೂಲಿ ಕೊಹ್ಲಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. “ಭಾರತೀಯ ಕ್ರಿಕೆಟ್ ತಂಡಕ್ಕೆ ವಿರಾಟ್ ಕೊಹ್ಲಿ ನಿಜವಾಗಿಯೂ ಆಸ್ತಿಯಾಗಿದ್ದಾರೆ ಮತ್ತು ತಂಡವನ್ನು ಅದ್ಭುತವಾಗಿ ಮುನ್ನಡೆಸಿದ್ದಾರೆ. ವಿರಾಟ್ ಕೊಹ್ಲಿ ಮೂರು ಮಾದರಿಯಲ್ಲೂ ಅತ್ಯಂತ ಯಶಸ್ವೀ ನಾಯಕರಲ್ಲಿ ಒಬ್ಬರೆನಿಸಿದ್ದಾರೆ. ಭವಿಷ್ಯದ ಹಾದಿಯನ್ನು ಗಮನದಲ್ಲಿಟ್ಟುಕೊಂಡು ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ” ಎಂದು ಗಂಗೂಲಿ ಹೇಳಿಕೆ ನೀಡಿದ್ದಾರೆ.
ಇನ್ನೂ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, “ಟೀಮ್ ಇಂಡಿಯಾಗೆ ಒಂದು ಸ್ಪಷ್ಟ ಮಾರ್ಗವನ್ನ ಹಾಕಿದ್ದೇವೆ. ಸದ್ಯದ ಕಾರ್ಯದೊತ್ತಡಗಳನ್ನ ಗಮನದಲ್ಲಿಟ್ಟುಕೊಂಡು ಹಾಗೂ ನಾಯಕತ್ವ ಬದಲಾವಣೆ ಪ್ರಕ್ರಿಯೆ ಸರಾಗವಾಗಿ ಆಗುವ ದೃಷ್ಟಿಯಿಂದ ವಿರಾಟ್ ಕೊಹ್ಲಿ ಅವರು ಟಿ20 ವಿಶ್ವಕಪ್ ಬಳಿಕ ಟಿ20 ಟೀಮ್ ಇಂಡಿಯಾದ ನಾಯಕ ಸ್ಥಾನದಿಂದ ಹಿಂದಕ್ಕೆ ಸರಿಯಲು ನಿರ್ಧರಿಸಿದ್ದಾರೆ. ಕಳೆದ 6 ತಿಂಗಳಿಂದ ವಿರಾಟ್ ಕೊಹ್ಲಿ ಹಾಗೂ ನಾಯಕತ್ವ ತಂಡದೊಂದಿಗೆ ಚರ್ಚೆ ನಡೆಸುತ್ತಲೇ ಇದ್ದೇನೆ. ಇದು ಬಹಳ ಯೋಚಿಸಿಯೇ ತೆಗೆದುಕೊಂಡ ನಿರ್ಧಾರವಾಗಿದೆ” ಎಂದು ಶಾ ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ವಿರಾಟ್ ಕೊಹ್ಲಿ, ಮುಂಬರುವ ಐಸಿಸಿ ಟಿ-20 ಕ್ರಿಕೆಟ್ ವಿಶ್ವಕಪ್ ಟೂರ್ನಿ ಬಳಿಕ ಒಡಿಐ ಮತ್ತು ಟಿ-20 ತಂಡಗಳ ನಾಯಕತ್ವ ಬಿಡಲಿದ್ದಾರೆ ಎಂದು ವರದಿಗಳಾಗಿತ್ತು. ಈ ಬೆಳವಣಿಗೆಯನ್ನು ಬಿಸಿಸಿಐ ತಳ್ಳಿ ಹಾಕಿತ್ತು ಕೂಡ. ಈಗ ಖುದ್ದಾಗಿ ವಿರಾಟ್ ಕೊಹ್ಲಿ ಈ ಸುದ್ದಿ ಸ್ಫೋಟ ಮಾಡಿದ್ದು, ವಿಶ್ವಕಪ್ ಬಳಿಕ ಕೇವಲ ಟಿ-20 ತಂಡದ ನಾಯಕತ್ವದಿಂದ ಕೆಳೆಗಿಳಿಯುವ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್ ಮತ್ತು ಟೆಸ್ಟ್ ಕ್ರಿಕೆಟ್ ನಾಯಕತ್ವದಲ್ಲಿ ಮುಂದುವರಿಯುವುದಾಗಿ ಸ್ಪಷ್ಟ ಪಡಿಸಿದ್ದಾರೆ.
ಕೊಹ್ಲಿ ಸ್ಥಾನಕ್ಕೆ ರೋಹಿತ್ ಮಾತ್ರ ಸ್ಪರ್ಧಿಯಲ್ಲ! ನಾಯಕತ್ವದ ರೇಸ್ನಲ್ಲಿದ್ದಾರೆ ಟೀಂ ಇಂಡಿಯಾದ ಈ ಮೂವರು
(Virat Kohli Thank You for his tremendous performance as India T20I captain Says Sourav Ganguly)