Virat Kohli: ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಅತ್ಯುತ್ತಮ ಕ್ರಿಕೆಟಿಗ ಎಂಬುದರಲ್ಲಿ ಡೌಟೇ ಅಲ್ಲ. ಅದರ ಜೊತೆಗೆ ಉತ್ತಮ ಬಿಸಿನೆಸ್ಮ್ಯಾನ್ ಕೂಡ ಹೌದು. ಏಕೆಂದರೆ ಈಗಾಗಲೇ ವಿರಾಟ್ ಕೊಹ್ಲಿ ಆರಂಭಿಸಿರುವ ಉದ್ಯಮಗಳು ಒಂದೊಂದಾಗಿ ಛಾಪು ಮೂಡಿಸುತ್ತಿದೆ. ಇದಕ್ಕೆ ಮತ್ತೊಂದು ಸೇರ್ಪಡೆ ಕೊಹ್ಲಿಯ ಬಂಗಲೆ ರೆಸ್ಟೋರೆಂಟ್. ಈಗಾಗಲೇ ಒನ್ ಯೈಟ್ (18) ಹೆಸರಿನಲ್ಲಿ ರೆಸ್ಟೋರೆಂಟ್ ನಡೆಸುತ್ತಿರುವ ವಿರಾಟ್ ಕೊಹ್ಲಿ ಇದೀಗ ದಿವಂಗತ ಬಾಲಿವುಡ್ನ ಖ್ಯಾತ ಗಾಯಕ ಕಿಶೋರ್ ಕುಮಾರ್ ಅವರ ಬಂಗಲೆಯಲ್ಲಿ ಮತ್ತೊಂದು ರೆಸ್ಟೋರೆಂಟ್ ಪ್ರಾರಂಭಿಸಲಿದ್ದಾರೆ.
ವರದಿಯ ಪ್ರಕಾರ, ವಿರಾಟ್ ಕೊಹ್ಲಿ ಅವರು ಕಿಶೋರ್ ಕುಮಾರ್ ಅವರ ಜುಹು ಬಂಗಲೆಯ ಆವರಣದ ಪ್ರಮುಖ ಭಾಗವನ್ನು ಗುತ್ತಿಗೆಗೆ ಪಡೆದುಕೊಂಡಿದ್ದಾರೆ. ಅಲ್ಲದೆ ಅದನ್ನು ತ್ವರಿತವಾಗಿ ಉನ್ನತ ದರ್ಜೆಯ ರೆಸ್ಟೋರೆಂಟ್ ಆಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ಕೆಲಸಗಳು ಪ್ರಗತಿಯಲ್ಲಿದ್ದು, ಮುಂದಿನ ತಿಂಗಳು ವಿರಾಟ್ ಕೊಹ್ಲಿ ಈ ರೆಸ್ಟೋರೆಂಟ್ ಅನ್ನು ಪ್ರಾರಂಭಿಸಲಿದ್ದಾರೆ ಎಂಬ ವರದಿಯಾಗಿದೆ. ಇದನ್ನು ದೃಢಪಡಿಸಿರುವ ಕಿಶೋರ್ ಕುಮಾರ್ ಅವರ ಪುತ್ರ ಅಮಿತ್ ಕುಮಾರ್, ಈ ಜಾಗವನ್ನು ವಿರಾಟ್ ಕೊಹ್ಲಿಗೆ 5 ವರ್ಷ ಗುತ್ತಿಗೆ ನೀಡಿದ್ದೇವೆ’ ಎಂದು ತಿಳಿಸಿದ್ದಾರೆ.
2017 ರಲ್ಲಿ, ವಿರಾಟ್ ಕೊಹ್ಲಿ ದೆಹಲಿಯ ಆರ್‌ಕೆ ಪುರಂನಲ್ಲಿ ನ್ಯೂವಾ ಎಂಬ ರೆಸ್ಟೋರೆಂಟ್ ಅನ್ನು ಪ್ರಾರಂಭಿಸಿದ್ದರು. ಇದಲ್ಲದೆ, ಅವರು ದೆಹಲಿಯಲ್ಲಿಯೇ One8commune ಹೆಸರಿನ ಮತ್ತೊಂದು ರೆಸ್ಟೋರೆಂಟ್ ಸಹ ಹೊಂದಿದ್ದಾರೆ.
ಇದಲ್ಲದೆ ತನ್ನದೇ ಆದ ಬಟ್ಟೆ ಬ್ರಾಂಡ್ನಲ್ಲೂ ಕೊಹ್ಲಿ ಹೂಡಿಕೆ ಮಾಡಿದ್ದಾರೆ. ಈಗಾಗಲೇ ಜನಪ್ರಿಯವಾಗಿರುವ WROGN ಹೆಸರಿನ ಬ್ರಾಂಡ್ ವಿರಾಟ್ ಕೊಹ್ಲಿ ಒಡೆತನದ್ದು ಎಂಬುದು ವಿಶೇಷ. ಒಟ್ಟಿನಲ್ಲಿ ಕ್ರಿಕೆಟ್ ಮೂಲಕ ಗಳಿಸಿದ ಮೊತ್ತವನ್ನು ಕೊಹ್ಲಿ ಬಿಸಿನೆಸ್ಗೆ ಹೂಡಿಕೆ ಮಾಡುವ ಮೂಲಕ ತಮ್ಮ ವಾರ್ಷಿಕ ಆದಾಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವತ್ತ ಹೆಜ್ಜೆಯನ್ನಿಟ್ಟಿರುವುದು ವಿಶೇಷ.