ಏಷ್ಯಾಕಪ್ 2022 ರಲ್ಲಿ (Asia Cup 2022) ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Viart Kohli) ಭರ್ಜರಿ ಫಾರ್ಮ್ನಲ್ಲಿದ್ದಾರೆ. ಆಡಿದ ಮೂರೂ ಪಂದ್ಯಗಳ ಪೈಕಿ ಎರಡರಲ್ಲಿ ಅರ್ಧಶತಕ ಸಿಡಿಸಿ ಅತ್ಯುತ್ತಮ ಕಮ್ಬ್ಯಾಕ್ ಮಾಡಿದ್ದಾರೆ. ಈ ಮೂಲಕ ತನ್ನ ಬಗ್ಗೆ ಟೀಕೆ ಮಾಡುತ್ತಿದ್ದವರಿಗೆ ಸರಿಯಾಗಿ ತಿರುಗೇಟು ನೀಡಿದ್ದಾರೆ. ಕೇವಲ ಬ್ಯಾಟ್ ಮೂಲಕ ಮಾತ್ರವಲ್ಲದೆ ಮಾತಿನ ಮೂಲಕವೂ ಕೊಹ್ಲಿ ಖಡಕ್ ಸಂದೇಶ ರವಾನಿಸಿದ್ದಾರೆ. ಭಾನುವಾರ ಪಾಕಿಸ್ತಾನ (India vs Pakistan) ವಿರುದ್ಧದ ಪಂದ್ಯದಲ್ಲಿ ಭಾರತ ಸೋತಿತು. ಆದರೆ, ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 4 ಫೋರ್ ಹಾಗೂ 1 ಸಿಕ್ಸರ್ ಬಾರಿಸಿ 60 ರನ್ ಬಾರಿಸಿ ಎಲ್ಲರ ಮನ ಗೆದ್ದಿದ್ದರು. ಈ ಸಂದರ್ಭ ಪಂದ್ಯ ಮುಗಿದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಕೊಹ್ಲಿ ಕೆಲವೊಂದು ವಿಚಾರವನ್ನು ಹಂಚಿಕೊಂಡಿದ್ದು, ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಕೇಳಿಬರುತ್ತಿವೆ.
ಮುಖ್ಯವಾಗಿ ಕೊಹ್ಲಿ ತಾನು ಟೆಸ್ಟ್ ನಾಯಕತ್ವ ತೊರೆದಾಗ ಧೋನಿ ಮಾತ್ರ ನನಗೆ ಮೆಸೇಜ್ ಮಾಡಿ ವಿಚಾರಿಸಿದ್ದರು ಎಂದು ಹೇಳಿದ್ದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಬಗ್ಗೆ ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿದ್ದು ಕೊಹ್ಲಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಕೊಹ್ಲಿ ಹೇಳಿದ್ದೇನು?:
”ನಾನು ಟೆಸ್ಟ್ ನಾಯಕತ್ವ ತೊರೆದಾಗ ಈ ಹಿಂದೆ ನನ್ನೊಂದಿಗೆ ಆಡಿದ ಒಬ್ಬ ವ್ಯಕ್ತಿಯಿಂದ ಮಾತ್ರ ನನಗೆ ಸಂದೇಶ ಬಂದಿತ್ತು. ಅದು ಎಂ. ಎಸ್. ಧೋನಿ. ಅನೇಕ ಮಂದಿಯಲ್ಲಿ ನನ್ನ ಮೊಬೈಲ್ ಸಂಖ್ಯೆ ಇದೆ. ಆದರೆ ಧೋನಿಯನ್ನು ಬಿಟ್ಟು ನನ್ನ ನಂಬರ್ ಇರುವ ಬೇರೆ ಯಾವುದೇ ವ್ಯಕ್ತಿ ನನಗೆ ಸಂದೇಶ ಕಳುಹಿಸಿರಲಿಲ್ಲ. ನನಗೆ ಎಲ್ಲರ ಬಗ್ಗೆಯೂ ಗೌರವವಿದೆ. ಕೆಲವು ಜನರೊಂದಿಗೆ ನಾನು ಸಂಪರ್ಕ ಹೊಂದಿದ್ದೇನೆ. ಆದರೆ, ಅವರಿಂದ ನಾನೇನನ್ನೂ ಬಯಸುವುದಿಲ್ಲ. ನನ್ನಿಂದ ಅವರಿಗೂ ಏನೂ ಸಿಗಲ್ಲ. ನೀವು ಯಾರೊಂದಿಗೆ ಆದರೂ ನಿಜವಾದ ಗೌರವ ಹೊಂದಿದ್ದರೆ ಅದು ಈ ರೀತಿಯಾಗಿ ಕಾಣಸಿಗುತ್ತದೆ. ಏಕೆಂದರೆ ಒಬ್ಬರನ್ನೊಬ್ಬರು ನೆಚ್ಚಿಕೊಂಡಿರುತ್ತಾರೆ,” ಎಂಬುದು ಕೊಹ್ಲಿ ಹೇಳಿಕೆ.
ಬಿಸಿಸಿಐ ತಿರುಗೇಟು:
ಕೊಹ್ಲಿಯ ಈ ಹೇಳಿಕೆಗೆ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಖಡಕ್ ಆಗಿ ತಿರುಗೇಟು ನೀಡಿದ್ದಾರೆ. ”ವಿರಾಟ್‌ಗೆ ಎಲ್ಲರ ಬೆಂಬಲವಿದೆ. ಅವರ ಸಹ ಆಟಗಾರರಿಂದ ಹಿಡಿದು ಬಿಸಿಸಿಐನಲ್ಲಿರುವ ಎಲ್ಲರೂ ಅವರಿಗೆ ಸಪೋರ್ಟ್ ಮಾಡುತ್ತಾರೆ. ಬೆಂಬಲ ಸಿಗಲಿಲ್ಲ ಎಂದು ಹೇಳುವುದು ನಿಜವಲ್ಲ. ಅವರಿಗೆ ಸಾಕಷ್ಟು ಸಮಯ ವಿರಾಮ ನೀಡಲಾಯಿತು, ಅಲ್ಲದೆ ಆಗಾಗ್ಗೆ ವಿಶ್ರಾಂತಿಯನ್ನು ಕೂಡ ಪಡೆಯುತ್ತಿದ್ದರು. ಕೊಹ್ಲಿ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದಾಗ ಬಿಸಿಸಿಐನ ಎಲ್ಲರೂ ಸಾಮಾಜಿಕ ಮಾಧ್ಯಮದಲ್ಲಿ ಅವರಿಗೆ ಶುಭ ಹಾರೈಸಿದರು. ಅವರೀಗ ಏನು ಮಾತನಾಡುತ್ತಿದ್ದಾರೆಂದು ನನಗೆ ತಿಳಿದಿಲ್ಲ,” ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಇನ್ಸೈಡ್‌ಸ್ಪೋರ್ಟ್‌ಗೆ ತಿಳಿಸಿದ್ದಾರೆ.
ಟಿ.ವಿಯಲ್ಲಿ ಸಲಹೆ ನೀಡುತ್ತಾರೆ:
ಇದೇ ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ ತಮ್ಮ ಬಗ್ಗೆ ಹೇಳಿಕೆ ನೀಡುವವರ ಬಗ್ಗೆಯೂ ಮಾತನಾಡಿದ್ದಾರೆ. ”ಟಿ.ವಿಯಲ್ಲಿ ಅನೇಕ ಮಂದಿ ಸಲಹೆ ನೀಡುತ್ತಿರುತ್ತಾರೆ. ನಾನು ಯಾರಿಗಾದರು ಆಟದ ಬಗ್ಗೆ ಹೇಳಬೇಕಾದರೆ ಪ್ರತ್ಯೇಕವಾಗಿ ಅವರ ಬಳಿ ಹೋಗುತ್ತೇನೆ. ಯಾರಿಂದಾದರೂ ಸಲಹೆ ಪಡೆಯಬೇಕಾದರೂ ಹಾಗೆಯೇ ಮಾಡುವೆ. ಆದರೆ, ಕೆಲವರು ಟಿ.ವಿ. ಮುಂದೆ ಬಂದು ಸಲಹೆಗಳನ್ನು ನೀಡಲು ಬಯಸಿದ್ದರೆ ಅದಕ್ಕೆ ನಾನು ಯಾವುದೇ ಮೌಲ್ಯವನ್ನು ಕೊಡುವುದಿಲ್ಲ. ಪರಸ್ಪರ ಚರ್ಚಿಸಬೇಕು. ಅದನ್ನು ಪ್ರಾಮಾಣಿಕವಾಗಿ ಪಡೆದುಕೊಳ್ಳುತ್ತೇನೆ. ನಾನು ತುಂಬಾ ಪ್ರಾಮಾಣಿಕವಾಗಿ ಜೀವನ ನಡೆಸುವ ವ್ಯಕ್ತಿ. ಇಷ್ಟು ದಿನ ಕ್ರಿಕೆಟ್ ಅನ್ನು ಪ್ರಾಮಾಣಿಕವಾಗಿಯೇ ಆಡಿದ್ದೇನೆ”, ಎಂದು ಕೊಹ್ಲಿ ಹೇಳಿದ್ದಾರೆ. ಕೊಹ್ಲಿಯ ಈ ಮಾತಿಗೂ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿದೆ.