Virat Kohli: ನನ್ನ ನಂಬರ್ ಅನೇಕರಲ್ಲಿದೆ, ಆದ್ರೆ ಮೆಸೇಜ್ ಮಾಡಿದ್ದು ಧೋನಿ ಮಾತ್ರ: ಕೊಹ್ಲಿ ಶಾಕಿಂಗ್ ಹೇಳಿಕೆ
MS Dhoni: 2022ರಲ್ಲಿ ಟೆಸ್ಟ್ ನಾಯಕತ್ವ ತೊರೆದ ಸಂದರ್ಭ ಎಂಎಸ್ ಧೋನಿ ಮಾತ್ರವೇ ವೈಯಕ್ತಿಕವಾಗಿ ನನಗೆ ಸಂದೇಶ ಕಳುಹಿಸಿದ್ದರು ಎಂಬ ವಿಚಾರವನ್ನು ವಿರಾಟ್ ಕೊಹ್ಲಿ ಬಹಿರಂಗ ಪಡಿಸಿದ್ದಾರೆ. ಅವರು ಆಡಿರುವ ಮಾತುಗಳು ಇಲ್ಲಿವೆ ನೋಡಿ.

ಸತತವಾಗಿ ಕಳಪೆ ಫಾರ್ಮ್ನಿಂದ ಕಂಗೆಟ್ಟಿದ್ದ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಈಗ ರನ್ ಬಾರಿಸಲು ಶುರುಮಾಡಿದ್ದಾರೆ. ಕೊಹ್ಲಿ 2.0 ರನ್ ಮಳೆ ಈಗ ಶುರುವಾಗಿದೆ ಎಂದು ಅನೇಕರು ಹೇಳುತ್ತಿದ್ದಾರೆ. ಸದ್ಯ ಸಾಗುತ್ತಿರುವ ಏಷ್ಯಾಕಪ್ನಲ್ಲಿ (Asia Cup 2022) ಬೊಂಬಾಟ್ ಪ್ರದರ್ಶನ ತೋರುತ್ತಿರುವ ವಿರಾಟ್ ಆಡಿದ ಮೂರು ಪಂದ್ಯಗಳಲ್ಲಿ ಎರಡು ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಭಾನುವಾರ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ (India vs Pakistan) ಸೋತಿತಾದರೂ ವಿರಾಟ್ ಕೊಹ್ಲಿ ಆಡಿದ ಆಟ ಎಲ್ಲರ ಗಮನ ಸೆಳೆಯಿತು. ಒಂದುಕಡೆ ವಿಕೆಟ್ ಕಳೆದುಕೊಳ್ಳುತ್ತಿದ್ದರೂ ಕೊಹ್ಲಿ ಏಕಾಂಗಿಯಾಗಿ ಕೊನೆಯ ಓವರ್ ವರೆಗೂ ರನ್ಗಾಗಿ ಹೋರಾಟ ನಡೆಸಿದರು.
44 ಎಸೆತಗಳಲ್ಲಿ 4 ಫೋರ್ ಹಾಗೂ 1 ಸಿಕ್ಸರ್ ಬಾರಿಸಿ 60 ರನ್ ಚಚ್ಚಿದ ಕೊಹ್ಲಿ ಪಂದ್ಯ ಮುಗಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮುಖ್ಯವಾಗಿ 2022ರಲ್ಲಿ ಟೆಸ್ಟ್ ನಾಯಕತ್ವ ತೊರೆದ ಸಂದರ್ಭ ಮಹೇಂದ್ರ ಸಿಂಗ್ ಧೋನಿ ಮಾತ್ರವೇ ವೈಯಕ್ತಿಕವಾಗಿ ನನಗೆ ಸಂದೇಶ ಕಳುಹಿಸಿದ್ದರು ಎಂಬ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಕೊಹ್ಲಿ ಆಡಿರುವ ಮಾತುಗಳು ಇಲ್ಲಿವೆ ನೋಡಿ.
“ನಾನು ಟೆಸ್ಟ್ ನಾಯಕತ್ವ ತೊರೆದಾಗ ಈ ಹಿಂದೆ ನನ್ನೊಂದಿಗೆ ಆಡಿದ ಒಬ್ಬ ವ್ಯಕ್ತಿಯಿಂದ ಮಾತ್ರ ನನಗೆ ಸಂದೇಶ ಬಂದಿತ್ತು. ಅದು ಎಂ. ಎಸ್. ಧೋನಿ. ಅನೇಕ ಮಂದಿಯಲ್ಲಿ ನನ್ನ ಮೊಬೈಲ್ ಸಂಖ್ಯೆ ಇದೆ. ಟಿ.ವಿಯಲ್ಲಿ ಅನೇಕ ಮಂದಿ ಸಲಹೆ ನೀಡುತ್ತಿರುತ್ತಾರೆ. ಆದರೆ ಧೋನಿಯನ್ನು ಬಿಟ್ಟು ನನ್ನ ನಂಬರ್ ಇರುವ ಬೇರೆ ಯಾವುದೇ ವ್ಯಕ್ತಿ ನನಗೆ ಸಂದೇಶ ಕಳುಹಿಸಿರಲಿಲ್ಲ,” ಎಂದು ಕೊಹ್ಲಿ ಹೇಳಿದ್ದಾರೆ.
“ನನಗೆ ಎಲ್ಲರ ಬಗ್ಗೆಯೂ ಗೌರವವಿದೆ. ಕೆಲವು ಜನರೊಂದಿಗೆ ನಾನು ಸಂಪರ್ಕ ಹೊಂದಿದ್ದೇನೆ. ಆದರೆ, ಅವರಿಂದ ನಾನೇನನ್ನೂ ಬಯಸುವುದಿಲ್ಲ. ನನ್ನಿಂದ ಅವರಿಗೂ ಏನೂ ಸಿಗಲ್ಲ. ನೀವು ಯಾರೊಂದಿಗೆ ಆದರೂ ನಿಜವಾದ ಗೌರವ ಹೊಂದಿದ್ದರೆ ಅದು ಈ ರೀತಿಯಾಗಿ ಕಾಣಸಿಗುತ್ತದೆ. ಏಕೆಂದರೆ ಒಬ್ಬರನ್ನೊಬ್ಬರು ನೆಚ್ಚಿಕೊಂಡಿರುತ್ತಾರೆ.”
“ನಾನು ಯಾರಿಗಾದರು ಆಟದ ಬಗ್ಗೆ ಹೇಳಬೇಕಾದರೆ ಪ್ರತ್ಯೇಕವಾಗಿ ಅವರ ಬಳಿ ಹೋಗುತ್ತೇನೆ. ಯಾರಿಂದಾದರೂ ಸಲಹೆ ಪಡೆಯಬೇಕಾದರೂ ಹಾಗೆಯೇ ಮಾಡುವೆ. ಆದರೆ, ಕೆಲವರು ಟಿ.ವಿ. ಮುಂದೆ ಬಂದು ಸಲಹೆಗಳನ್ನು ನೀಡಲು ಬಯಸಿದ್ದರೆ ಅದಕ್ಕೆ ನಾನು ಯಾವುದೇ ಮೌಲ್ಯವನ್ನು ಕೊಡುವುದಿಲ್ಲ. ಪರಸ್ಪರ ಚರ್ಚಿಸಬೇಕು. ಅದನ್ನು ಪ್ರಾಮಾಣಿಕವಾಗಿ ಪಡೆದುಕೊಳ್ಳುತ್ತೇನೆ. ನಾನು ತುಂಬಾ ಪ್ರಾಮಾಣಿಕವಾಗಿ ಜೀವನ ನಡೆಸುವ ವ್ಯಕ್ತಿ. ಇಷ್ಟು ದಿನ ಕ್ರಿಕೆಟ್ ಅನ್ನು ಪ್ರಾಮಾಣಿಕವಾಗಿಯೇ ಆಡಿದ್ದೇನೆ“, ಎಂದು ಕೊಹ್ಲಿ ಹೇಳಿದ್ದಾರೆ.
ಪಾಕ್ ವಿರುದ್ಧದ ಪಂದ್ಯದಲ್ಲಿ ಭಾರತ ಸ್ಫೋಟಕ ಆರಂಭ ಪಡೆದುಕೊಂಡಿದ್ದು ಬಿಟ್ಟರೆ ನಂತರ ವಿರಾಟ್ ಕೊಹ್ಲಿ ಬಿಟ್ಟು ಬೇರೆ ಯಾವ ಬ್ಯಾಟರ್ ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಕೊನೆಯ ಓವರ್ನಲ್ಲಿ ರನೌಟ್ ಆಗುವ ಮೂಲಕ ಕೊಹ್ಲಿ ಪೆವಿಲಿಯನ್ ಸೇರಿಕೊಂಡರು. ಇದರ ಜೊತೆಗೆ ಕೆಲ ದಾಖಲೆಗಳನ್ನು ಕೂಡ ತಮ್ಮ ಖಾತೆಗೆ ಸೇರಿಸಿಕೊಂಡರು. ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಬಾರಿ 50+ ರನ್ ಬಾರಿಸಿದ ಬ್ಯಾಟ್ಸ್ಮನ್ ಈಗ ಕೊಹ್ಲಿ ಆಗಿದ್ದಾರೆ. ಈ ಹಿಂದೆ ಈ ವಿಶ್ವ ದಾಖಲೆಯು ರೋಹಿತ್ ಶರ್ಮಾ ಹೆಸರಿನಲ್ಲಿತ್ತು. ಕೊಹ್ಲಿ ಟಿ20 ಕ್ರಿಕೆಟ್ನಲ್ಲಿ ಒಟ್ಟು 32 ಅರ್ಧಶತಕಗಳನ್ನು ಗಳಿಸಿದ ಸಾಧನೆ ಮಾಡಿದ್ದಾರೆ.




