Rohit Sharma: ತನ್ನದೇ ತಂಡದ ಆಟಗಾರನ ವಿರುದ್ಧ ರೊಚ್ಚಿಗೆದ್ದ ರೋಹಿತ್ ಶರ್ಮಾ: ಸೋತ ಬಳಿಕ ಏನಂದ್ರು ಗೊತ್ತೇ?
India vs Pakistan, Asia Cup 2022: ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅರ್ಶ್ದೀಪ್ ಸಿಂಗ್ (Arshdeep Singh) ಕ್ಯಾಚ್ ಬೈಟ್ಟಿದ್ದು ಸೋಲಿಗೆ ಮುಖ್ಯ ಕಾರಣವಾಯಿತು. ಈ ಸಂದರ್ಭ ರೋಹಿತ್ ಶರ್ಮಾ ಕೋಪಗೊಂಡ ಘಟನೆ ಕೂಡ ನಡೆದಿದೆ.

ಏಷ್ಯಾಕಪ್ 2022ರ (Asia Cup 2022) ಸೂಪರ್ 4 ಹಂತದ ತನ್ನ ಮೊದಲ ಪಂದ್ಯದಲ್ಲೇ ಭಾರತ ಸೋಲು ಕಂಡಿದೆ. ಭಾನುವಾರ ಪಾಕಿಸ್ತಾನ ವಿರುದ್ಧ ದುಬೈನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲಿಂಗ್ ಹಾಗೂ ಫೀಲ್ಡಿಂಗ್ ವಿಭಾಗಗಳಲ್ಲಿ ವೈಫಲ್ಯ ಅನಭವಿಸಿದ್ದು ಸೋಲಿಗೆ ಮುಖ್ಯ ಕಾರಣವಾಯಿತು. ಕೊನೆಯ ಹಂತದಲ್ಲಿ ರೋಹಿತ್ ಪಡೆ ಪಂದ್ಯವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಬಹುದಾದ ಅವಕಾಶವಿತ್ತು. ಆದರೆ, ಬೌಲರ್ಗಳು ದುಬಾರಿಯಾಗುವ ಜೊತೆ ಫೀಲ್ಡಿಂಗ್ನಲ್ಲಿ ಕೂಡ ಕೆಲ ಕ್ಯಾಚ್ಗಳನ್ನು ಕೈಬಿಟ್ಟಿದ್ದು ದೊಡ್ಡ ಹೊಡೆತ ಬಿದ್ದಿತು. ಅದರಲ್ಲೂ ಮುಖ್ಯವಾಗಿ 18ನೇ ಓವರ್ನಲ್ಲಿ ಅರ್ಶ್ದೀಪ್ ಸಿಂಗ್ (Arshdeep Singh) ಕ್ಯಾಚ್ ಕೈಚೆಲ್ಲಿದ್ದು ಸ್ವತಃ ನಾಯಕ ರೋಹಿತ್ ಶರ್ಮಾ (Rohit Sharma) ಅವರಿಗೆನೇ ಕೋಪ ತರಿಸಿತು.
18ನೇ ಓವರ್ ಆರಂಭಕ್ಕೂ ಮುನ್ನ ಪಾಕಿಸ್ತಾನ ತಂಡ ಸ್ಫೋಟಕ ಬ್ಯಾಟರ್ಗಳಾದ ಮೊಹಮ್ಮದ್ ರಿಜ್ವಾನ್ (71) ಹಾಗೂ ಮೊಹಮ್ಮದ್ ನವಾಜ್ (42) ವಿಕೆಟ್ ಕಳೆದುಕೊಂಡಿತ್ತು. ಹೀಗಾಗಿ ಹೊಸ ಬ್ಯಾಟ್ಸ್ಮನ್ ಸಂಕಷ್ಟಕ್ಕೆ ಸಿಲುಕಿದ್ದರು. ಒತ್ತಡದ ನಡುವೆ 18ನೇ ಓವರ್ನ 3ನೇ ಎಸೆತದ ರವಿ ಬಿಷ್ಣೋಯ್ ಬೌಲಿಂಗ್ನಲ್ಲಿ ಅಸಿಫ್ ಅಲಿ ದೊಡ್ಡ ಹೊಡೆತಕ್ಕೆ ಮುಂದಾದರು. ಆದರೆ, ಚೆಂಡು ಅವರು ಅಂದುಕೊಂಡಂತೆ ಸಾಗದೆ ಟಾಪ್ ಎಡ್ಜ್ ಆಯಿತು. ಈ ಸಂದರ್ಭ ಫೀಲ್ಡಿಂಗ್ ಮಾಡುತ್ತಿದ್ದ ಅರ್ಶ್ದೀಪ್ ಸಿಂಗ್ ಹತ್ತಿರ ಚೆಂಡು ಬಂದಿದ್ದು ಸುಲಭ ಕ್ಯಾಚ್ ಹಿಡಿಯಬಹುದಿತ್ತು.
ಆದರೆ, ಅರ್ಶ್ದೀಪ್ ಮ್ಯಾಚ್ ಟರ್ನಿಂಗ್ ಪಾಯಿಂಟ್ ಆಗುತ್ತಿದ್ದ ಕ್ಯಾಚನ್ನು ಕೈಚೆಲ್ಲಿದರು. ಈ ಸಂದರ್ಭ ನಾಯಕ ರೋಹಿತ್ ಶರ್ಮಾ ಕೋಪಗೊಂಡು ಅರ್ಶ್ದೀಪ್ ಮೇಲೆ ರೇಗಾಡಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದೆ. ಕ್ಯಾಚ್ ಕೈ ಚೆಲ್ಲಿದ ಬಳಿಕ ಅಸಿಫ್ ಅಲಿ ಹಾಗೂ ಕುಶ್ದಿಲ್ ಶಾ ಜೊತೆಗೂಡಿ 17 ಎಸೆತಗಳಲ್ಲಿ 33 ರನ್ಗಳ ಜೊತೆಯಾಟ ಆಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
When #Arshdeep Dropped a Catch #RohitSharma Be Like Rey Pakad pakad ????#ArshdeepSingh #INDvsPAK2022 #INDvsPAK #DineshKarthik #RishabhPant #HardikPandya pic.twitter.com/YVDe8O6B8F
— Masthi Movie (@MasthiMovie123) September 4, 2022
ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ, ”ಇದೊಂದು ಸಾಕಷ್ಟು ಒತ್ತಡದಿಂದ ಕೂಡಿದ್ದ ಪಂದ್ಯ. ರಿಜ್ವಾನ್ ಮತ್ತು ನವಾಜ್ ನಡುವಣ ಜೊತೆಯಾಟ ಶುರುವಾದಾಗ ನಾವು ಶಾಂತವಾಗೇ ಇದ್ದೆವು. ಆದರೆ, ಅದು ದೊಡ್ಡ ಜೊತೆಯಾಟ ಆಯಿತು. ಅವರಿಬ್ಬರು ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಪಾಕಿಸ್ತಾನ ಬ್ಯಾಟರ್ಗಳ ಈರೀತಿಯ ಆಟವನ್ನು ಹಿಂದೆ ಕೂಡ ನೋಡಿದ್ದೇವೆ. ಹೀಗಾಗಿ ನಮಗೆ ಇದು ಆಶ್ಚರ್ಯ ತಂದಿಲ್ಲ,” ಎಂದು ಹೇಳಿದ್ದಾರೆ.
ಮಾತು ಮುಂದುವರೆಸಿದ ರೋಹಿತ್, ”ಎರಡನೇ ಇನ್ನಿಂಗ್ಸ್‌ನಲ್ಲಿ ಪಿಚ್ ಸ್ವಲ್ಪ ಉತ್ತಮವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೆವು. ಇದೊಂದು ನಮಗೆ ಒಳ್ಳೆಯ ಪಾಠ. ನಾವು ಕಲೆಹಾಕಿದ ಸ್ಕೋರ್ ಉತ್ತಮವಾಗಿತ್ತು. ಯಾವುದೇ ಪಿಚ್ ಆಗಿರಲಿ, ಯಾವುದೇ ಕಂಡೀಶನ್ ಇರಲಿ ಟಿ20 ಕ್ರಿಕೆಟ್ನಲ್ಲಿ 180 ಉತ್ತಮ ಮೊತ್ತ. ಆದರೆ, ಕ್ರೆಡಿಟ್ ಪಾಕಿಸ್ತಾನಕ್ಕೆ ಸಲ್ಲಬೇಕು. ನಮಗಿಂತ ಸೊಗಸಾಗಿ ಅವರು ಆಡಿದ್ದಾರೆ,” ಎಂದರು.
ಇನ್ನು ವಿರಾಟ್ ಕೊಹ್ಲಿ ವಿಚಾರವಾಗಿ ಮಾತನಾಡಿದ ರೋಹಿತ್, ”ಕೊಹ್ಲಿಯ ಫಾರ್ಮ್ ಅತ್ಯುತ್ತಮವಾಗಿದೆ. ವಿಕೆಟ್ ಕಳೆದುಕೊಂಡಾಗ ಕೊನೆಯ ವರೆಗೂ ಆಡುವ ಒಬ್ಬ ಆಟಗಾರ ಬೇಕು. ಕೊಹ್ಲಿ ಇಂದು ಆ ಜವಾಬ್ದಾರಿ ನಿರ್ವಹಿಸಿದ್ದಾರೆ. ಒತ್ತಡದ ನಡುವೆಯೂ ಅದ್ಭುತ ಬ್ಯಾಟಿಂಗ್ ಮಾಡಿದ್ದಾರೆ. ವಿರಾಟ್ ಗಳಿಸಿದ ರನ್ ನಮ್ಮ ತಂಡಕ್ಕೆ ತುಂಬಾ ಉಪಯುಕ್ತವಾಗಿದೆ. ಹಾರ್ದಿಕ್ ಹಾಗೂ ಪಂತ್ ವಿಕೆಟ್ ಆ ಸಮಯದಲ್ಲಿ ಹೋಗಬಾರದಿತ್ತು. ಆದರೆ ನಾವು ಮುಕ್ತ ಮನಸ್ಸಿನಿಂದ ಆಡಲು ಬಯಸುತ್ತೇವೆ. ಕೆಲವೊಂದು ನಿರ್ಧಾರವನ್ನು ತೆಗೆದುಕೊಳ್ಳುವಾಗ ಪ್ರತಿಬಾರಿ ಯಶಸ್ಸು ಸಿಗುವುದಿಲ್ಲ,” ಎಂಬುದು ರೋಹಿತ್ ಮಾತು.




