IND vs PAK: ಪಂದ್ಯದ ಮಧ್ಯೆ ಸೂರ್ಯಕುಮಾರ್ ಜೊತೆ ಜಗಳಕ್ಕಿಳಿದ ರಿಜ್ವಾನ್, ಶದಾಬ್: ಮುಂದೇನಾಯ್ತು?
Asia Cup 2022, India vs Pakistan: ಏಷ್ಯಾಕಪ್ 2022 ಸೂಪರ್ 4 ಹಂತದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸೂರ್ಯುಮಾರ್ ಯಾದವ್ ಕ್ರೀಸ್ನಲ್ಲಿ ಇದ್ದಾಗ ಮೊಹಮ್ಮದ್ ರಿಜ್ವಾನ್ ಹಾಗೂ ಶದಾಬ್ ಇವರನ್ನು ಸ್ಲೆಡ್ಜ್ ಮಾಡಲು ಮುಂದಾದ ಘಟನೆ ನಡೆದಿದೆ.

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ನ (Asia Cup 2022) ಸೂಪರ್ 4 ಹಂತದ ಎರಡನೇ ಪಂದ್ಯ ಅಂದುಕೊಂಡಂತೆ ರಣರೋಚಕವಾಗಿತ್ತು. ಅಂತಿಮ ಹಂತದ ವರೆಗೂ ತುದಿಗಾಲಿನಲ್ಲಿ ನಿಲ್ಲಿಸಿದ್ದ ಪಂದ್ಯದಲ್ಲಿ ಭಾರತ ವಿರುದ್ಧ ಪಾಕಿಸ್ತಾನ (India vs Pakistan) 5 ವಿಕೆಟ್ಗಳಿಂದ ಗೆದ್ದು ಬೀಗಿತು. ಏಷ್ಯಾಕಪ್ 2022 ರಲ್ಲಿ ಟೀಮ್ ಇಂಡಿಯಾ ಅನುಭವಿಸಿದ ಮೊದಲ ಸೋಲು ಇದಾಗಿದೆ. ಟಿ20 ಕ್ರಿಕೆಟ್ನ ಬಲಿಷ್ಠ ತಂಡ ಪಾಕಿಸ್ತಾನಕ್ಕೆ 200 ರನ್ಗಳ ಟಾರ್ಗೆಟ್ ನೀಡಿದರೂ ಅದು ಕಮ್ಮಿಯೆ. ಇದನ್ನೆ ಗಮನದಲ್ಲಿಟ್ಟುಕೊಂಡು ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ತಂಡಕ್ಕೆ ಸ್ಫೋಟಕ ಆರಂಭವೇನೊ ಒದಗಿಸಿದ್ದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಬಿಟ್ಟರೆ ಮತ್ಯಾವ ಬ್ಯಾಟರ್ ರನ್ ಕಲೆಹಾಕಲಿಲ್ಲ, ಕ್ರೀಸ್ನಲ್ಲಿ ನಿಲ್ಲಲಿಲ್ಲ. ಕಳೆದ ಹಾಂಗ್ ಕಾಂಗ್ ವಿರುದ್ಧ ಅಬ್ಬರಿಸಿದ್ದ ಸೂರ್ಯಕುಮಾರ್ ಯಾದವ್ (Suryakumar Yadav) ಕೂಡ ವೈಫಲ್ಯ ಅನುಭವಿಸಿದರು.
ಹಾಂಗ್ ಕಾಂಗ್ ವಿರುದ್ಧ ಕೇವಲ 26 ಎಸೆತಗಳಲ್ಲಿ 68 ರನ್ ಚಚ್ಚಿದ್ದ ಸೂರ್ಯ ಈ ಬಾರಿ 10 ಎಸೆತಗಳಲ್ಲಿ 2 ಫೋರ್ ಬಾರಿಸಿ 13 ರನ್ಗೆ ಬ್ಯಾಟ್ ಕೆಳಗಿಟ್ಟರು. ಆದರೆ, ಇವರು ಕ್ರೀಸ್ನಲ್ಲಿ ಇದ್ದಾಗ ಪಾಕಿಸ್ತಾನ ಆಟಗಾರರು ಇವರನ್ನು ಸ್ಲೆಡ್ಜ್ ಮಾಡಲು ಮುಂದಾದ ಘಟನೆ ನಡೆದಿದೆ. ಶದಾಬ್ ಖಾನ್ ಬೌಲಿಂಗ್ನಲ್ಲಿ ಸೂರ್ಯಕಮಾರ್ ಕಟ್ ಹೊಡೆಯಲು ಪ್ರಯತ್ನಿಸಿದರು. ಆದರೆ, ಚೆಂಡು ಬ್ಯಾಟ್ಗೆ ತಾಗದೆ ಕೀಪರ್ ಕೈ ಸೇರಿತು. ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಔಟೆಂದು ಅಂಪೈರ್ಗೆ ಮನವಿ ಮಾಡಿದರು.
ಚೆಂಡು ಬ್ಯಾಟ್ನಿಂದ ದೂರ ಇರುವುದು ಸ್ಪಷ್ಟವಾಗಿ ಗೋಚರಿಸದ ಕಾರಣ ಅಂಪೈರ್ ನಾಟೌಟ್ ಎಂದರು. ಈ ಸಂದರ್ಭ ರಿಜ್ವಾನ್ ಅವರು ಸೂರ್ಯಕುಮಾರ್ ಜೊತೆ ಮಾತುಕತೆಗೆ ಇಳಿದಿದ್ದಾರೆ. ಅತ್ತ ಬೌಲರ್ ಶದಾಬ್ ಕೂಡ ರಿಜ್ವಾನ್ ಜೊತೆ ಸೇರಿ ಸೂರ್ಯ ಅವರಿಗೆ ಸ್ಲೆಡ್ಜ್ ಮಾಡಿದ್ದಾರೆ. ಆದರೆ, ಸೂರ್ಯಕುಮಾರ್ ಇದಾವುದಕ್ಕೂ ತಲೆ ಕೆಡಿಸಿಕೊಳ್ಳದೆ ರಿಜ್ವಾನ್–ಶದಾಬ್ ಮಾತುಗಳನ್ನು ಕೇಳೇ ಇಲ್ಲವೆಂಬ ರೀತಿಯಲ್ಲಿ ಮುಂದೆ ಸಾಗಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
— Guess Karo (@KuchNahiUkhada) September 4, 2022
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್‌ಗಳನ್ನು ಕಲೆ ಹಾಕಿತು. ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಜೋಡಿ ಮೊದಲ ವಿಕೆಟ್ ನಷ್ಟಕ್ಕೆ 54 ರನ್ ಪೇರಿಸಿದರು. ರೋಹಿತ್ ಹಾಗೂ ಕೆಎಲ್ ರಾಹುಲ್ ತಲಾ 28 ರನ್ಗಳಿಸಿ ಔಟಾದರು. ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ಗಳು ಉರುಳುತ್ತಿದ್ದಂತೆ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ, ತಾವೆದುರಿಸಿದ 44 ಎಸೆತಗಳಲ್ಲಿ 1 ಸಿಕ್ಸರ್, 4 ಬೌಂಡರಿಯೊಂದಿಗೆ 60 ರನ್ ಗಳಿಸಿದರು. ಕೊನೆ ಓವರ್ನಲ್ಲಿ ರನೌಟ್ ಬಲೆಗೆ ಬಿದ್ದರು. ಪಾಕಿಸ್ತಾನದ ಪರ ಶದಾಬ್ ಖಾನ್ 2 ವಿಕೆಟ್ ಪಡೆದರೆ, ನಸೀಮ್ ಶಾ, ಮೊಹಮ್ಮದ್, ಹ್ಯಾರಿಸ್ ರೌಫ್ ಹಾಗೂ ನವಾಜ್ ತಲಾ 1 ವಿಕೆಟ್ ಕಿತ್ತರು.
182 ರನ್ಗಳ ಗುರಿ ಬೆನ್ನಟ್ಟಿದ್ದ ಪಾಕಿಸ್ತಾನ 19.5 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿ ಗೆಲುವಿನ ನಗೆ ಬೀರಿದೆ. ನಾಯಕ ಬಾಬರ್ ಅಜಮ್ (14) ಬೇಗನೆ ಔಟಾದರು. ಫಾಖರ್ ಝಮಾನ್ (15) ಕೂಡ ಬೇಗನೆ ನಿರ್ಗಮಿಸಿದರು. ಆದರೆ, ನಂತರ ಜೊತೆಯಾದ ಮೊಹಮ್ಮದ್ ರಿಜ್ವಾನ್ (71 ರನ್, 51 ಎಸೆತ, 6 ಬೌಂಡರಿ,2 ಸಿಕ್ಸರ್) ಹಾಗೂ ಮೊಹಮ್ಮದ್ ನವಾಜ್ (42 ರನ್, 20 ಎಸೆತ) 3ನೇ ವಿಕೆಟಿಗೆ 73 ರನ್ ಜೊತೆಯಾಟ ನಡೆಸಿ ಗೆಲುವಿಗೆ ಕಾರಣರಾದರು. ಭಾರತದ ಪರ ಭುವನೇಶ್ವರ್, ರವಿ ಬಿಷ್ಣೋಯಿ, ಹಾರ್ದಿಕ್ ಪಾಂಡ್ಯ ಹಾಗೂ ಯುಜ್ವೇಂದ್ರ ಚಹಲ್ ತಲಾ 1 ವಿಕೆಟ್ ಪಡೆದರು.
Published On - 8:49 am, Mon, 5 September 22