IND vs SL: ಭಾರತ-ಶ್ರೀಲಂಕಾ ಪಂದ್ಯಕ್ಕೆ ಮಳೆಯ ಕಾಟ?: ಇಲ್ಲಿದೆ ಹವಾಮಾನ ವರದಿ, ಪಿಚ್ ರಿಪೋರ್ಟ್
Dubai Weather Forecast And Pitch Report: ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿರುವ ಭಾರತಕ್ಕೆ ಶ್ರೀಲಂಕಾ (India vs Sri Lanka) ಸವಾಲು ಹಾಕುತ್ತಿದ್ದು, ರೋಹಿತ್ ಪಡೆಗೆ ಗೆದ್ದರಷ್ಟೆ ಉಳಿಗಾಲ.
ಏಷ್ಯಾಕಪ್ 2022 ರಲ್ಲಿಂದು (Asia Cup 2022) ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿರುವ ಭಾರತಕ್ಕೆ ಶ್ರೀಲಂಕಾ (India vs Sri Lanka) ಸವಾಲು ಹಾಕುತ್ತಿದ್ದು, ರೋಹಿತ್ ಪಡೆಗೆ ಗೆದ್ದರಷ್ಟೆ ಉಳಿಗಾಲ. ಸೂಪರ್ 4 ಹಂತದಲ್ಲಿ ಅತ್ಯಧಿಕ ಅಂಕ ಸಂಪಾದಿಸಿದ ಎರಡು ತಂಡಗಳು ನೇರವಾಗಿ ಫೈನಲ್ ಪ್ರವೇಶಿಸಲಿವೆ. ಹೀಗಾಗಿ ಇಲ್ಲಿ ಭಾರತ ಕೇವಲ ಗೆದ್ದರಷ್ಟೇ ಸಾಲದು, ರನ್‌ಧಾರಣೆಯನ್ನೂ ಉತ್ತಮ ಪಡಿಸಿಕೊಳ್ಳಬೇಕಿದೆ. ಎಲ್ಲಾದರು ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಸೋತರೆ ಏಷ್ಯಾಕಪ್ನಿಂದ ಹೊರಬೀಳಲಿದೆ. ಈ ಕಾರಣದಿಂದ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ರೋಚಕ ಸೆಣೆಸಾಟ ನಡೆಯಲಿದೆ. ಇಲ್ಲಿನ ಪಿಚ್ ಹೇಗಿದೆ?, ಪಂದ್ಯಕ್ಕೆ ಮಳೆಯ ಕಾಟ ಇದೆಯೇ? ಎಂಬುದನ್ನು ನೋಡೋಣ.
ಪಿಚ್ ರಿಪೋರ್ಟ್:
ಭಾರತದ ಆಟಗಾರರು ಇಲ್ಲಿ ಅನೇಕ ಐಪಿಎಲ್ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಇಲ್ಲಿನ ಪಿಚ್ ಸಮಯೋಜಿತವಾಗಿದೆ. ಹೊಸ ಚೆಂಡಿನಲ್ಲಿ ವೇಗಿಗಳು ಲಾಭ ಪಡೆದುಕೊಳ್ಳಬಹುದಾಗಿದೆ. ಆದರೆ, ಈ ಪಿಚ್‌ನಲ್ಲಿ ವಿಕೆಟ್‌ಗಳನ್ನು ಉಳಿಸಿಕೊಳ್ಳುವುದು ಬಹುಮುಖ್ಯ ಸಂಗತಿಯಾಗಿದೆ. ಪಂದ್ಯ ಸಾಗುತ್ತಿದ್ದಂತೆ ಬ್ಯಾಟಿಂಗ್ ಸ್ವಲ್ಪ ಸುಲಭವಾಗುತ್ತದೆ. ಇನ್ನು ಈ ಪಿಚ್‌ನಲ್ಲಿ ನಿಧಾನಗತಿಯ ಬೌಲರ್‌ಗಳು ಹೆಚ್ಚಿನ ಯಶಸ್ಸು ಸಾಧಿಸಿದ ಇತಿಹಾಸವಿದೆ. ಅಂತೆಯೆ ಸ್ಪಿನ್ನರ್‌ಗಳ ದಾಳಿಯ ಮುಂದೆ ಬ್ಯಾಟರ್‌ಗಳು ಪರದಾಡುವುದು ಖಚಿತ. ಭಾರತ ಈ ಪಿಚ್‌ನಲ್ಲಿ ನಮೀಬಿಯ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಸ್ಕಾಟ್ಲೆಂಡ್ ತಂಡದ ವಿರುದ್ಧ ಆಡಿದೆ. ಇದರಲ್ಲಿ ಪಾಕಿಸ್ತಾನ, ನಮೀಬಿಯ ಮತ್ತು ಸ್ಕಾಟ್ಲೆಂಡ್ ವಿರುದ್ಧ ಜಯ ಸಾಧಿಸಿದೆ.
ಹವಾಮಾನ ವರದಿ:
ಭಾರತ ಹಾಗೂ ಶ್ರೀಲಂಕಾ ನಡುವಣ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿಲ್ಲ. ಹೀಗಾಗಿ ಪಂದ್ಯ ನಿರಾತಂಕವಾಗಿ ಸಾಗಲಿದೆ. ದಿನವಿಡೀ ಶುಭ್ರ ವಾತಾವರಣದಿಂದ ಕೂಡಿರಲಿದೆ. ಪಂದ್ಯದ ದಿನದಂದು ಗಾಳಿ ಕೊಂಚ ಇರಬಹುದು ಎಂದು ಹೇಳಲಾಗಿದ್ದು ಹಗಲು ತಾಪಮಾನವು ಸುಮಾರು 39 ಡಿಗ್ರಿ ಸೆಲ್ಸಿಯಸ್ ಮತ್ತು ರಾತ್ರಿ 30 ಡಿಗ್ರಿ ಸೆಲ್ಸಿಯಸ್ ಇರಲಿದೆಯಂತೆ. ಹೀಗಾಗಿ ಯಾವುದೇ ಅಡೆತಡೆ ಇಲ್ಲದೆ ಈ ರೋಚಕ ಪಂದ್ಯ ನಡೆಯಲಿದೆ.
ಟಾಸ್ ಕೂಡ ಈ ಪಂದ್ಯದಲ್ಲಿ ಬಹುಮುಖ್ಯ ಪಾತ್ರವಹಿಸಲಿದ್ದು, ಟಾಸ್ ಗೆದ್ದ ತಂಡ ಬೌಲಿಂಗ್ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಯಾಕೆಂದರೆ ಇಲ್ಲಿ ಚೇಸಿಂಗ್ ಮಾಡಿದ ತಂಡ ಹೆಚ್ಚು ಗೆದ್ದ ಇತಿಹಾಸವಿದೆ. ಮೊದಲ ಇನ್ನಿಂಗ್ಸ್ ಸರಾಸರಿ 142 ರನ್ ಆದರೆ, ಎರಡನೇ ಇನ್ನಿಂಗ್ಸ್ ಸರಾಸರಿ 124 ಆಗಿದೆ. 211 ರನ್ ಗಳಿಸಿರುವುದು ಈ ಗ್ರೌಂಡ್ನ ಗರಿಷ್ಠ ಸ್ಕೋರ್ ಆಗಿದೆ.
ಮುಖಾಮುಖಿ:
ಭಾರತ ಹಾಗೂ ಶ್ರೀಲಂಕಾ ಪಂದ್ಯ ನಡೆಯಲಿರುವ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಪಿಚ್‌ನಲ್ಲಿ ಉಭಯ ತಂಡಗಳು ಇದುವರೆಗೆ ಮುಖಾಮುಖಿ ಆಗಿಲ್ಲ. ಆದರೆ ಏಷ್ಯಾಕಪ್ನಲ್ಲಿ 20 ಪಂದ್ಯಗಳನ್ನಾಡಿದೆ. ಈ ವೇಳೆ ಟೀಮ್ ಇಂಡಿಯಾ 10 ಬಾರಿ ಜಯ ಸಾಧಿಸಿದರೆ, ಶ್ರೀಲಂಕಾ ಕೂಡ ಭಾರತವನ್ನು 10 ಬಾರಿ ಮಣಿಸಿತ್ತು. ಕೊನೆಯ 5 ಟಿ20 ಮುಖಾಮುಖಿಯನ್ನು ಪರಿಗಣೆನೆಗೆ ತೆಗೆದುಕೊಂಡರೆ ಭಾರತ 4 ಪಂದ್ಯಗಳನ್ನು ಗೆದ್ದು ಪಾರುಪತ್ಯ ಮೆರೆದಿದೆ.
ಸಂಭಾವ್ಯ ಪ್ಲೇಯಿಂಗ್ XI:
ಭಾರತ: ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್‌ಕೀಪರ್), ದೀಪಕ್ ಹೂಡ, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ರವಿ ಬಿಷ್ಣೋಯಿ/ಆರ್. ಅಶ್ವಿನ್, ಯುಜ್ವೇಂದ್ರ ಚಹಲ್.
ಶ್ರೀಲಂಕಾ ತಂಡ: ದನುಷ್ಕ ಗುಣತಿಲಕ, ಪತುಮ್ ನಿಸಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಚರಿತ್ ಅಸಲಂಕಾ, ಭನುಕಾ ರಾಜಪಕ್ಷ, ದಸುನ್ ಶನಕ (ನಾಯಕ), ವಾನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಮಹೀಶ ತೀಕ್ಷಣ, ದಿಲ್ಶನ್ ಮಧುಶಂಕ, ಮತೀಶ ಪತಿರಣ.
Published On - 9:27 am, Tue, 6 September 22