ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯದಲ್ಲಿ ಇಂದು ನಡೆದ ಜಾರ್ಖಂಡ್ ಹಾಗೂ ಹರಿಯಾಣ ತಂಡಗಳ ನಡುವಿನ ಪಂದ್ಯ ರೋಚಕ ಕ್ಷಣಕ್ಕೆ ಸಾಕ್ಷಿಯಾಯಿತು. ಕೊನೆಯ ಎಸೆತದವರೆಗೂ ತೀವ್ರ ಕುತೂಹಲ ಕೆರಳಿಸಿದ್ದ ಈ ಪಂದ್ಯವನ್ನು ಜಾರ್ಖಂಡ್ ತಂಡ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಉಭಯ ತಂಡಗಳ ನಡುವಿನ ಈ ಪಂದ್ಯವನ್ನು ಮಳೆಯಿಂದಾಗಿ ತಲಾ 16 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹರಿಯಾಣ 16 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 111 ರನ್ ಗಳಿಸಿತು. ತಂಡದ ಪರ ಯುವ ಆಲ್‌ರೌಂಡರ್ ನಿಶಾಂತ್ ಸಿಂಧು ಮತ್ತೊಂದು ಅತ್ಯುತ್ತಮ ಇನ್ನಿಂಗ್ಸ್ ಆಡಿ ಕೇವಲ 36 ಎಸೆತಗಳಲ್ಲಿ 57 ರನ್‌ಗಳ ಕಾಣಿಕೆ ನೀಡಿದರು.
112 ರನ್‌ಗಳ ಗುರಿ ಬೆನ್ನಟ್ಟಿದ ಜಾರ್ಖಂಡ್ ತಂಡಕ್ಕೆ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ ವೇಗದ ಆರಂಭ ನೀಡಿದರು. ಆದರೆ, 18 ರನ್ ಗಳಿಸಿ ಔಟಾದರು. ಕಿಶನ್ ವಿಕೆಟ್ ಪತನದ ನಂತರ ಇದ್ದಕ್ಕಿದ್ದಂತೆ ಜಾರ್ಖಂಡ್ ತಂಡದ ಪೆವಿಲಿಯನ್ ಪರೇಡ್ ಆರಂಭವಾಯಿತು. ಆದರೆ ತಂಡದ ನಾಯಕ ವಿರಾಟ್ ಸಿಂಗ್ ಏಕಾಂಗಿಯಾಗಿ ನಿಂತು ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾದರು.
112 ರನ್‌ಗಳ ಗುರಿ ಬೆನ್ನಟ್ಟಿದ್ದ ಜಾರ್ಖಂಡ್ ತಂಡ 19ನೇ ಓವರ್ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 103 ರನ್ ಕಲೆಹಾಕಿತ್ತು. ಹೀಗಾಗಿ ತಂಡದ ಗೆಲುವಿಗೆ ಕೊನೆಯ 4 ಎಸೆತಗಳಲ್ಲಿ 9 ರನ್ ಬೇಕಿತ್ತು. ಆದರೆ ತಂಡದ ಬಳಿ ಉಳಿದಿದ್ದು ಏಕೈಕ ವಿಕೆಟ್ ಮಾತ್ರ. ಈ ವೇಳೆ 9ನೇ ಕ್ರಮಾಂಕದ ಬ್ಯಾಟ್ಸ್ಮನ್ ರನ್ ಔಟ್ ಆದ ಕಾರಣ ನಾಯಕ ವಿರಾಟ್ ಸ್ಟ್ರೈಕ್ಗೆ ಬಂದರು. ಆವರೆಗೆ ವಿರಾಟ್ 26 ಎಸೆತಗಳಲ್ಲಿ 26 ರನ್ ಗಳಿಸಿ ತಂಡದ ಗೆಲುವಿಗೆ ನೆರವಾಗುವ ಸಂಕಲ್ಪ ತೊಟ್ಟಿದ್ದರು.
ಕೊನೆಯ ಓವರ್ನಲ್ಲಿ ಸ್ಟ್ರೈಕ್ಗೆ ಬಂದ ವಿರಾಟ್ ಓವರ್‌ನ ಮೂರನೇ ಎಸೆತವನ್ನು ಫೋರ್‌ಗೆ ಕಳುಹಿಸಿದರು. ಆದರೆ ನಂತರದ ಎರಡು ಎಸೆತಗಳಲ್ಲಿ ಯಾವುದೇ ರನ್ ಗಳಿಸಲು ಅವರಿಗೆ ಸಾಧ್ಯವಾಗಲಿಲ್ಲ. ಈಗ ಕೊನೆಯ ಎಸೆತ ಬಾಕಿ ಇದ್ದು ಗೆಲುವಿಗೆ 5 ರನ್‌ಗಳ ಅಗತ್ಯವಿತ್ತು. ಹೀಗಾಗಿ ತಂಡ ಗೆಲ್ಲಬೇಕೆಂದರೆ ಕೊನೆಯ ಎಸೆತದಲ್ಲಿ ವಿರಾಟ್ ಸಿಕ್ಸರ್ ಸಿಡಿಸಬೇಕಿತ್ತು. ಜಾರ್ಖಂಡ್‌ನಿಂದ ಬಂದಿರುವ ಭಾರತದ ಶ್ರೇಷ್ಠ ನಾಯಕ ಎಂಎಸ್ ಧೋನಿ ತಮ್ಮ ವೃತ್ತಿಜೀವನದಲ್ಲಿ ಅನೇಕ ಬಾರಿ ಮಾಡಿದ್ದನ್ನು ವಿರಾಟ್ ಸಿಂಗ್ ಈ ಪಂದ್ಯದಲ್ಲಿ ಪುನಾರವರ್ತಿಸಿದರು. ವಿರಾಟ್ ಕೊನೆಯ ಎಸೆತದಲ್ಲಿ ಅದ್ಭುತ ಸಿಕ್ಸರ್ ಬಾರಿಸಿ ತಂಡಕ್ಕೆ 1 ವಿಕೆಟ್‌ನಿಂದ ರೋಚಕ ಜಯ ತಂದುಕೊಟ್ಟರು. ಅಂತಿಮವಾಗಿ ವಿರಾಟ್ 30 ಎಸೆತಗಳಲ್ಲಿ 36 ರನ್ಗಳಿಸಿ ಅಜೇಯರಾಗಿ ಮರಳಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ