ಕೌಶಿಕ್ ದಾಳಿಗೆ ತಮಿಳುನಾಡು ತತ್ತರ: 11.3 ಓವರ್‌ಗಳಲ್ಲಿ ಪಂದ್ಯ ಮುಗಿಸಿದ ಕರ್ನಾಟಕ

Syed Mushtaq Ali Trophy 2024: ತಮಿಳುನಾಡು ವಿರುದ್ಧದ ಗೆಲುವಿನೊಂದಿಗೆ ಕರ್ನಾಟಕ ತಂಡವು ಗ್ರೂಪ್-ಬಿ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಈವರೆಗೆ ಐದು ಪಂದ್ಯಗಳನ್ನಾಡಿರುವ ಕರ್ನಾಟಕ ತಂಡವು ಮೂರು ಜಯ ಹಾಗೂ 2 ಸೋಲನುಭವಿಸಿದೆ.

ಕೌಶಿಕ್ ದಾಳಿಗೆ ತಮಿಳುನಾಡು ತತ್ತರ: 11.3 ಓವರ್‌ಗಳಲ್ಲಿ ಪಂದ್ಯ ಮುಗಿಸಿದ ಕರ್ನಾಟಕ
V Koushik - MayankImage Credit source: SHIV KUMAR PUSHPAKAR
Follow us
ಝಾಹಿರ್ ಯೂಸುಫ್
|

Updated on: Dec 02, 2024 | 7:25 AM

ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಗ್ರೂಪ್-ಬಿ ಪಂದ್ಯದಲ್ಲಿ ಕರ್ನಾಟಕ ತಂಡ ಭರ್ಜರಿ ಪ್ರದರ್ಶನ ನೀಡಿದೆ. ಇಂದೋರ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ತಮಿಳುನಾಡು ತಂಡವು ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ತಮಿಳುನಾಡು ಪಡೆಗೆ ಕರ್ನಾಟಕ ವೇಗಿಗಳು ಆರಂಭಿಕ ಆಘಾತ ನೀಡಿದ್ದರು.

ಖಾತೆ ತೆರೆಯುವ ಮುನ್ನವೇ ಎನ್.ಜಗದೀಸನ್ (0) ಅವರನ್ನು ವಿ.ಕೌಶಿಕ್ ಪೆವಿಲಿಯನ್​ಗೆ ಕಳುಹಿಸಿದರೆ, ಮತ್ತೋರ್ವ ಆರಂಭಿಕ ಇಂದ್ರಜಿತ್ (5) ವಿಕೆಟ್ ಪಡೆಯುವಲ್ಲಿ ವಿದ್ಯಾಧರ್ ಪಾಟೀಲ್ ಯಶಸ್ವಿಯಾದರು.

ಆ ಬಳಿಕ ಬಂದ ಭೂಪತಿ ಕುಮಾರ್ (1) ಹಾಗೂ ವಿಜಯ ಶಂಕರ್ (0) ಕೌಶಿಕ್ ಎಸೆತಗಳಲ್ಲಿ ಔಟಾದರು. ಈ ಹಂತದಲ್ಲಿ ನಾಯಕ ಶಾರುಖ್ ಖಾನ್ 19 ರನ್ ಬಾರಿಸಿ ತಂಡಕ್ಕೆ ಆಸರೆಯಾದರೂ, ಮನೋಜ್ ಭಾಂಡಗೆ ಎಸೆತವನ್ನು ಗುರುತಿಸುವಲ್ಲಿ ಎಡವಿ ವಿಕೆಟ್ ಒಪ್ಪಿಸಿದರು.

ಈ ವಿಕೆಟ್ನೊಂದಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಕರ್ನಾಟಕ ಬೌಲರ್‌ಗಳು ತಮಿಳುನಾಡು ತಂಡವನ್ನು 20 ಓವರ್‌ಗಳಲ್ಲಿ 90 ರನ್​ಗೆ ಆಲೌಟ್ ಮಾಡಿದರು. ಕರ್ನಾಟಕ ಪರ ವಿ.ಕೌಶಿಕ್ 4 ಓವರ್‌ಗಳಲ್ಲಿ ಕೇವಲ 10 ರನ್ ನೀಡಿ 3 ವಿಕೆಟ್ ಪಡೆದರೆ, ಮನೋಜ್ ಭಾಂಡಗೆ 4 ಓವರ್‌ಗಳಲ್ಲಿ 19 ರನ್ ಬಿಟ್ಟು ಕೊಟ್ಟು ಮೂರು ವಿಕೆಟ್ ಕಬಳಿಸಿದರು.

11.3 ಓವರ್‌ಗಳಲ್ಲಿ ಪಂದ್ಯ ಮುಕ್ತಾಯ:

91 ರನ್ ಗಳ ಸುಲಭ ಗುರಿ ಬೆನ್ನತ್ತಿದ ಕರ್ನಾಟಕ ತಂಡಕ್ಕೆ ಮನೀಶ್ ಪಾಂಡೆ ಹಾಗೂ ಮಯಾಂಕ್ ಅಗರ್ವಾಲ್ ಸ್ಪೋಟಕ ಆರಂಭ ಒದಗಿಸಿದ್ದರು. ಕೇವಲ 29 ಎಸೆತಗಳನ್ನು ಎದುರಿಸಿದ ಮನೀಶ್ ಪಾಂಡೆ 2 ಸಿಕ್ಸ್ ಹಾಗೂ 4 ಫೋರ್ ಗಳೊಂದಿಗೆ 42 ರನ್ ಚಚ್ಚಿದರು.

ಮತ್ತೊಂದೆಡೆ ಮಯಾಂಕ್ ಅಗರ್ವಾಲ್ 30 ರನ್ ಗಳ ಕೊಡುಗೆ ನೀಡಿದರು. ಈ ಮೂಲಕ ಕರ್ನಾಟಕ ತಂಡವು 11.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 93 ರನ್ ಬಾರಿಸಿ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.

ಕರ್ನಾಟಕ ಪ್ಲೇಯಿಂಗ್ 11: ಮನೀಶ್ ಪಾಂಡೆ , ಮಯಾಂಕ್ ಅಗರವಾಲ್ (ನಾಯಕ) , ಕೃಷ್ಣನ್ ಶ್ರೀಜಿತ್ (ವಿಕೆಟ್ ಕೀಪರ್) , ಸ್ಮರಣ್ ರವಿಚಂದ್ರನ್ , ಅಭಿನವ್ ಮನೋಹರ್ , ಶ್ರೇಯಸ್ ಗೋಪಾಲ್ , ಶುಭಾಂಗ್ ಹೆಗ್ಡೆ , ಮನೋಜ್ ಭಾಂಡಗೆ , ವಾಸುಕಿ ಕೌಶಿಕ್ , ವಿಜಯ್ ಕುಮಾರ್ ವೈಶಾಕ್ , ವಿದ್ಯಾಧರ್ ಪಾಟೀಲ್.

ಇದನ್ನೂ ಓದಿ: IPL 2025: RCB ತಂಡಕ್ಕೆ 4 ತವರು ಮೈದಾನ..!

ತಮಿಳುನಾಡು ಪ್ಲೇಯಿಂಗ್ 11: ಬಾಬಾ ಇಂದ್ರಜಿತ್ , ಎನ್ ಜಗದೀಸನ್ (ವಿಕೆಟ್ ಕೀಪರ್) , ಭೂಪತಿ ಕುಮಾರ್ , ರಿತಿಕ್ ಈಶ್ವರನ್ , ಶಾರುಖ್ ಖಾನ್ (ನಾಯಕ) , ವಿಜಯ್ ಶಂಕರ್ , ರವಿಶ್ರೀನಿವಾಸನ್ ಸಾಯಿ ಕಿಶೋರ್ , ಮೊಹಮ್ಮದ್ ಅಲಿ , ವರುಣ್ ಚಕ್ರವರ್ತಿ , ಸಂದೀಪ್ ವಾರಿಯರ್ , ಗುರ್ಜಪ್ನೀತ್ ಸಿಂಗ್.