AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೆಸ್ಟೋರೆಂಟ್​ಗಿಂತ ಜೊಮಾಟೋದಲ್ಲಿ ಭಾರೀ ರೇಟ್; ಆನ್​ಲೈನ್​ನಲ್ಲಿ ಡಿಬೇಟ್; ಕರ್ಮ ಫುಡ್ ಆ್ಯಪ್​ನದ್ದೋ, ಹೋಟೆಲ್​ನದ್ದೋ?

X user shows price difference in Zomato and Restaurant: ರೆಸ್ಟೋರೆಂಟ್ ಹಾಗೂ ಜೊಮಾಟೊದಲ್ಲಿ ಊಟದ ಬೆಲೆಯಲ್ಲಿ ಎಷ್ಟು ವ್ಯತ್ಯಾಸ ಇರುತ್ತದೆ ಎಂದು ಎಕ್ಸ್ ಬಳಕೆದಾರರೊಬ್ಬರು ಎತ್ತಿ ತೋರಿಸಿದ್ದಾರೆ. ರೆಸ್ಟೋರೆಂಟ್​ನಲ್ಲಿ 320 ರೂ ಆಗುವ ಊಟಕ್ಕೆ ಜೊಮಾಟೊದಲ್ಲಿ 655 ರೂ ಆಗಿರುವುದನ್ನು ಸಾಕ್ಷ್ಯ ಸಮೇತ ಅವರು ತೋರಿಸಿದ್ದಾರೆ. ರೆಸ್ಟೋರೆಂಟ್​ಗಳಿಂದ ಫುಡ್ ಪ್ಲಾಟ್​ಫಾರ್ಮ್​ಗಳು ಶೇ. 35ರಷ್ಟು ಕಮಿಷನ್ ಪಡೆಯುವುದು ಸೇರಿದಂತೆ ವಿವಿಧ ವಿಚಾರಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚಿತವಾಗುತ್ತಿವೆ.

ರೆಸ್ಟೋರೆಂಟ್​ಗಿಂತ ಜೊಮಾಟೋದಲ್ಲಿ ಭಾರೀ ರೇಟ್; ಆನ್​ಲೈನ್​ನಲ್ಲಿ ಡಿಬೇಟ್; ಕರ್ಮ ಫುಡ್ ಆ್ಯಪ್​ನದ್ದೋ, ಹೋಟೆಲ್​ನದ್ದೋ?
ಜೊಮಾಟೊ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 11, 2026 | 3:36 PM

Share

ನವದೆಹಲಿ, ಜನವರಿ 11: ಸ್ವಿಗ್ಗಿ, ಜೊಮಾಟೋ ಇತ್ಯಾದಿ ಫುಡ್ ಆ್ಯಪ್​ಗಳು (food delivery platforms) ಜನರ ಮನೆ ಬಾಗಿಲಿಗೆ ಆಹಾರವನ್ನು ತಂದೊದಗಿಸುವ ಸೇವೆ ನೀಡುತ್ತವೆ. ಪ್ಲಾಟ್​ಫಾರ್ಮ್ ಕಾರ್ಯನಿರ್ವಹಣೆ ಸೇರಿದಂತೆ ವಿವಿಧ ವೆಚ್ಚಗಳನ್ನು ಭರಿಸಲು ವಿವಿಧ ಶುಲ್ಕ ಸೇರಿ ಹೆಚ್ಚಿನ ಹಣವನ್ನು ಗ್ರಾಹಕರಿಗೆ ವಿಧಿಸಲಾಗುತ್ತದೆ. ಆದರೆ, ರೆಸ್ಟೋರೆಂಟ್​ಗೆ ಹೋಗಿ ಊಟ ಮಾಡುವುದಕ್ಕೂ ಆನ್ಲೈನ್​ನಲ್ಲಿ ಆರ್ಡರ್ ಮಾಡಿ ಊಟ ಮಾಡುವುದಕ್ಕೂ ಬೆಲೆಯಲ್ಲಿ ನೂರಾರು ರೂ ವ್ಯತ್ಯಾಸ ಆಗಿ ಹೋದರೆ? ಆನ್​ಲೈನ್​ನಲ್ಲಿ ಇಂಥದ್ದುಂದು ಡಿಬೇಟ್ ನಡೆದಿದೆ.

ನಳಿನಿ ಉನಾಗರ್ ಎಂಬಾಕೆ ಜೊಮಾಟೋ ಹೇಗೆ ವಿಪರೀತ ಬೆಲೆ ಹಾಕುತ್ತಿದೆ ಎಂದು ವಿವರಿಸಿ ಎಕ್ಸ್​ನಲ್ಲಿ ಟ್ವೀಟ್ ಮಾಡಿದ್ದಾಳೆ. ರೆಸ್ಟೋರೆಂಟ್​ನಲ್ಲಿ 320 ರೂ ಬೆಲೆಯ ಆಹಾರವು ಜೊಮಾಟೊದಲ್ಲಿ 655 ರೂ ಆಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಗ್ರೋಕ್ ಅಶ್ಲೀಲ ಅವಾಂತರಗಳು; ತಪ್ಪೊಪ್ಪಿಕೊಂಡು ಭಾರತ ಸರ್ಕಾರದ ಆದೇಶ ಪಾಲಿಸಿದ ಎಕ್ಸ್

ಒಂದೇ ಆಹಾರವನ್ನು ರೆಸ್ಟೋರೆಂಟ್ ಹಾಗೂ ಜೊಮಾಟೊ ಎರಡರಲ್ಲೂ ಬೆಲೆ ಹೋಲಿಕೆ ಮಾಡಿದ್ದಾರೆ. ಚೈನೀಸ್ ಭೇಲ್ ಮತ್ತು ಮಂಚೂರಿಯನ್ ಅನ್ನು ರೆಸ್ಟೋರೆಂಟ್​ನಿಂದ ಪಾರ್ಸಲ್ ಕಟ್ಟಿಸಿಕೊಂಡು, ಅದರ ಬಿಲ್ 320 ರೂ ಆಗಿದೆ. ಅದೇ ರೆಸ್ಟೋರೆಂಟ್​ನಲ್ಲಿ ಅದೇ ಚೈನೀಸ್ ಭೇಲ್ ಮತ್ತು ಮಂಚೂರಿಯನ್ ಅನ್ನು ಬುಕ್ ಮಾಡಿದಾಗ ಅವುಗಳ ಬೆಲೆ 600 ರೂ ಸೇರಿ ಒಟ್ಟು ಬಿಲ್ 655 ರು ಆಗಿದೆ. ಇದರ ಫೋಟೋವನ್ನು ನಳಿನಿ ಅವರು ಶೇರ್ ಮಾಡಿದ್ದಾರೆ.

‘ಜೊಮಾಟೊದವರೆ, ನನ್ನ ಆರ್ಡರ್​ನ ವಾಸ್ತವ ಬೆಲೆ 320 ರೂ. ಆದರೆ, ಜೊಮಾಟೊದಲ್ಲಿ 655 ರು ಆಗಿದೆ. ಎಲ್ಲಾ ಡಿಸ್ಕೌಂಟ್​ಗಳನ್ನು ಹಾಕಿಯೂ ನಾನು 550 ರೂ ಪಾವತಿಸಬೇಕು. ಇಷ್ಟು ಬೆಲೆ ವ್ಯತ್ಯಾಸ ನಿಜಕ್ಕೂ ಅಸಹಜ. ಗ್ರಾಹಕರಿಂದ ಸಿಕ್ಕಾಪಟ್ಟೆ ವಸೂಲಿ ಮಾಡಲಾಗುತ್ತಿದೆ’ ಎಂದು ಈ ಮಹಿಳೆ ಟ್ವೀಟ್ ಮಾಡಿದ್ದಾರೆ.

ಇವರ ಟ್ವೀಟ್​ಗೆ ಜೊಮಾಟೊ ಪ್ರತಿಕ್ರಿಯಿಸಿದೆ. ನಮ್ಮ ಪ್ಲಾಟ್​ಫಾರ್ಮ್​ನಲ್ಲಿ ಬೆಲೆಯನ್ನು ನಿರ್ಧರಿಸುವುದು ರೆಸ್ಟೋರೆಂಟ್ ಪಾರ್ಟ್ನರ್​ಗಳೇ. ಗ್ರಾಹಕರು ಹಾಗು ರೆಸ್ಟೋರೆಂಟ್​ಗಳಿಗೆ ಮಧ್ಯವರ್ತಿಯಾಗಷ್ಟೇ ಜೊಮಾಟೊ ಕೆಲಸ ಮಾಡುತ್ತದೆ ಎಂದು ಹೇಳಿದೆ.

ಇದನ್ನೂ ಓದಿ: ಬಿಲ್​ನಲ್ಲಿ ನಕಲಿ ಜಿಎಸ್​ಟಿ ನಂಬರ್ ಕೊಟ್ಟು ಸರ್ಕಾರಕ್ಕೂ, ಗ್ರಾಹಕರಿಗೂ ಯಾಮಾರಿಸುತ್ತಾರೆ; ಅಸಲಿ ಪತ್ತೆ ಹಚ್ಚೋದು ಹೇಗೆ?

ಇದು ಆನ್​ಲೈನ್​ನಲ್ಲಿ ಚರ್ಚೆ ಹುಟ್ಟುಹಾಕಿದೆ. ರೆಸ್ಟೋರೆಂಟ್ ಪ್ಲಾಟ್​ಫಾರ್ಮ್​ಗಳಿಂದ ಜೊಮಾಟೊ ಶೇ. 35ರಷ್ಟು ಕಮಿಷನ್ ಪಡೆಯುತ್ತದೆ ಎಂದು ಹಲವರು ಎತ್ತಿತೋರಿಸಿದ್ದಾರೆ.

ನಳಿನಿ ಅವರ ಟ್ವೀಟ್

ಪ್ಲಾಟ್​ಫಾರ್ಮ್​ಗಳಲ್ಲಿ ಕಾಣುವ ಆಹಾರಗಳ ಬೆಲೆಯನ್ನು ನಿರ್ಧರಿಸುವುದು ರೆಸ್ಟೋರೆಂಟ್​ಗಳೇ. ಆದರೆ, ಭಾರೀ ದೊಡ್ಡ ಮೊತ್ತದ ಕಮಿಷನ್ ಅನ್ನು ಸರಿದೂಗಿಸಲು ರೆಸ್ಟೋರೆಂಟ್​ಗಳು ಬೆಲೆ ಏರಿಸುತ್ತವೆ. ರೆಸ್ಟೋರೆಂಟ್ ಬೆಲೆ ಏರಿಸಿದರೆ ಅದರಿಂದಲೂ ಫುಡ್ ಪ್ಲಾಟ್​ಫಾರ್ಮ್​ಗಳಿಗೆ ಲಾಭವಾಗುತ್ತದೆ. ಅಂತಿಮವಾಗಿ ಗ್ರಾಹಕರಿಗೆ ಹೊರೆ ಆಗುವುದು ಎಂದು ಹಲವು ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ