ಗ್ರೋಕ್ ಅಶ್ಲೀಲ ಅವಾಂತರಗಳು; ತಪ್ಪೊಪ್ಪಿಕೊಂಡು ಭಾರತ ಸರ್ಕಾರದ ಆದೇಶ ಪಾಲಿಸಿದ ಎಕ್ಸ್
X admits its mistakes over grok generated obscene content: ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ ಗ್ರೋಕ್ ಎಐ ದುರುಪಯೋಗಪಡಿಸಿಕೊಂಡು ಅಶ್ಲೀಲ ಕಂಟೆಂಟ್ ಸೃಷ್ಟಿಯಾಗುತ್ತಿರುವುದು ಹೆಚ್ಚಾಗುತ್ತಿದೆ. ಹಲವು ದೇಶಗಳು ಗ್ರೋಕ್ ಮತ್ತು ಎಕ್ಸ್ ಮೇಲೆ ಕ್ರಮ ತೆಗೆದುಕೊಳ್ಳಲು ಮುಂದಾಗಿವೆ. ಭಾರತ ಕೂಡ ಎಕ್ಸ್ಗೆ ಎಚ್ಚರಿಕೆ ನೀಡಿದೆ. ಇದೀಗ ಎಕ್ಸ್ ತನ್ನಿಂದಾದ ತಪ್ಪನ್ನು ಒಪ್ಪಿಕೊಂಡು ಹಲವು ಅಶ್ಲೀಲ ಕಂಟೆಂಟ್ ಅನ್ನು ಬ್ಲಾಕ್ ಮಾಡಿದೆ.

ನವದೆಹಲಿ, ಜನವರಿ 11: ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಆದ ಎಕ್ಸ್ನಲ್ಲಿ ಇತ್ತೀಚೆಗೆ ಎಐ ದುರುಪಯೋಗಪಡಿಸಿಕೊಂಡು ಅಶ್ಲೀಲ ಕಂಟೆಂಟ್ ಅನ್ನು ಸೃಷ್ಟಿಸುತ್ತಿರುವ ಪ್ರಕರಣ ಜಾಗತಿಕವಾಗಿ ಪಿಡುಗಾಗಿ ಪರಿಣಿಸಿದೆ. ಭಾರತ ಸರ್ಕಾರ ಈ ವಿಚಾರದಲ್ಲಿ ಗಂಭೀರವಾಗಿದ್ದು, ಗ್ರೋಕ್ (Grok AI) ಮೂಲಕ ಸೃಷ್ಟಿಯಾಗುತ್ತಿರುವ ಅಶ್ಲೀಲ ಕಂಟೆಂಟ್ ಅನ್ನು ಅಳಿಸಬೇಕೆಂದೂ ಮತ್ತು ಭಾರತೀಯ ಕಾನೂನು ನಿಯಮಗಳಿಗೆ ಬದ್ಧವಾಗಿರಬೇಕೆಂದೂ ಎಕ್ಸ್ಗೆ ಸರ್ಕಾರ ತಿಳಿಸಿತ್ತು. ಇದರ ಬೆನ್ನಲ್ಲೇ ಎಕ್ಸ್ (ಹಿಂದಿನ ಟ್ವಿಟ್ಟರ್) ತನ್ನಿಂದ ತಪ್ಪಾಗಿರುವುದನ್ನು ಒಪ್ಪಿಕೊಂಡಿದ್ದು, ಭಾರತೀಯ ಕಾನೂನಿಗೆ ಬದ್ಧವಾಗಿರುವುದಾಗಿ ಭರವಸೆ ನೀಡಿದೆ.
ಸರ್ಕಾರದ ಆದೇಶದಂತೆ ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ 3,500 ಕಂಟೆಂಟ್ ಅನ್ನು ಭಾರತದಲ್ಲಿ ಬ್ಲಾಕ್ ಮಾಡಲಾಗಿದೆ. ಈ ಅಶ್ಲೀಲ ಕಂಟೆಂಟ್ ಸೃಷ್ಟಿಗೆ ಕಾರಣವಾದ ಸುಮಾರು 600 ಅಕೌಂಟ್ಗಳನ್ನು ಡಿಲೀಟ್ ಮಾಡಲಾಗಿದೆ. ಇನ್ಮುಂದೆ ಅಶ್ಲೀಲ ಇಮೇಜ್ಗಳ ಸೃಷ್ಟಿಗೆ ಅವಕಾಶ ಕೊಡುವುದಿಲ್ಲ ಎಂದೂ ಎಕ್ಸ್ ತಿಳಿಸಿದೆ ಎಂದು ಸರ್ಕಾರದ ಮೂಲಗಳು ಮಾಧ್ಯಮಗಳಿಗೆ ತಿಳಿಸಿರುವುದು ವರದಿಯಾಗಿದೆ.
ಇದನ್ನೂ ಓದಿ: ಪ್ರಧಾನಿ ಮೋದಿಯ ದೃಷ್ಟಿ ಮತ್ತು ನಿಲುವು ಕಂಡು ಅಚ್ಚರಿಗೊಂಡ ಎಐ ಸ್ಟಾರ್ಟಪ್ಗಳ ಮುಖ್ಯಸ್ಥರು
ಎಕ್ಸ್ ಬಳಕೆದಾರರಿಂದ ಗ್ರೋಕ್ ದುರುಪಯೋಗ
ಗ್ರೋಕ್ ಎಂಬುದು ಎಐ ಚಾಟ್ಬೋಟ್ ಅಪ್ಲಿಕೇಶನ್. 2023ರಲ್ಲಿ ಇದರ ಬಿಡುಗಡೆಯಾಗಿದ್ದು. ಇದರಲ್ಲಿ ಗ್ರೋಕ್ ಇಮ್ಯಾಜಿನ್ ಎನ್ನುವ ಹೊಸ ಫೀಚರ್ ಪರಿಚಯಿಸಲಾಗಿದೆ. ಇದನ್ನು ಬಳಸಿ ವಯಸ್ಕರ ಅಥವಾ ಅಶ್ಲೀಲ ಕಂಟೆಂಟ್ ಸೃಷ್ಟಿಸಬಹುದು. ಪೇಯ್ಡ್ ಗ್ರಾಹಕರಿಗೆ ಈ ಫೀಚರ್ ಲಭ್ಯ ಇದೆ. ಆದರೆ, ಎಕ್ಸ್ ಬಳಕೆದಾರರಿಗೆ ಈ ಚಾಟ್ಬೋಟ್ ಅನ್ನು ಉಚಿತವಾಗಿ ಬಳಸಲು ಅವಕಾಶ ಕೊಡಲಾಗಿದೆ. ಎಕ್ಸ್ ಪೋಸ್ಟ್ಗಳಲ್ಲಿ ಗ್ರೋಕ್ಗೆ ಟ್ಯಾಗ್ ಮಾಡಿ ಬೇಕಾದ್ದನ್ನು ಕಮ್ಯಾಂಡ್ ಮಾಡಬಹುದು. ಪೋಸ್ಟ್ ಆಗಿರುವ ಒಬ್ಬ ವ್ಯಕ್ತಿ ಫೋಟೋವನ್ನು ನಗ್ನಗೊಳಿಸುವಂತೆ ಹೇಳಿದರೂ ಅದು ಮಾಡುತ್ತದೆ. ಒಂದು ವಿಚಾರದ ಬಗ್ಗೆ ಮಾಹಿತಿ ಹೆಕ್ಕಿ ತೆಗೆ ಎಂದರೆ ಅದನ್ನೂ ಮಾಡುತ್ತದೆ. ಆದರೆ ಎಕ್ಸ್ನಲ್ಲಿ ಇತ್ತೀಚೆಗೆ ಜನರು ಅಶ್ಲೀಲ ಕಂಟೆಂಟ್ ಸೃಷ್ಟಿ ಮಾಡುವ ಟ್ರೆಂಡ್ ಹೆಚ್ಚಾಗುತ್ತಿದೆ.
ಹಲವು ದೇಶಗಳು ಈ ವಿಚಾರದಲ್ಲಿ ಎಕ್ಸ್ ಮೇಲೆ ಕುಪಿತಗೊಂಡಿವೆ. ಇಂಡೋನೇಷ್ಯಾ ದೇಶ ಗ್ರೋಕ್ ಅನ್ನೇ ಬ್ಲಾಕ್ ಮಾಡಿದೆ. ಬ್ರೆಜಿಲ್, ಫ್ರಾನ್ಸ್, ಜರ್ಮನಿ, ಮಲೇಷ್ಯಾ ಮತ್ತು ಅಮೆರಿಕ ದೇಶಗಳು ಗ್ರೋಕ್ ವಿರುದ್ಧ ತನಿಖೆಗೆ ಯೋಜಿಸಿವೆ. ಅಮೆರಿಕದ ಮೂವರು ಸಂಸದರು ಆ್ಯಪ್ ಸ್ಟೋರ್ ಮತ್ತು ಪ್ಲೇಸ್ಟೋರ್ಗಳಿಂದ ಗ್ರೋಕ್ ಆ್ಯಪ್ ಅನ್ನು ತೆಗೆದುಹಾಕುವಂತೆಯೂ ಆ್ಯಪಲ್ ಮತ್ತು ಗೂಗಲ್ಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬಿಲ್ನಲ್ಲಿ ನಕಲಿ ಜಿಎಸ್ಟಿ ನಂಬರ್ ಕೊಟ್ಟು ಸರ್ಕಾರಕ್ಕೂ, ಗ್ರಾಹಕರಿಗೂ ಯಾಮಾರಿಸುತ್ತಾರೆ; ಅಸಲಿ ಪತ್ತೆ ಹಚ್ಚೋದು ಹೇಗೆ?
ಗ್ರೋಕ್ ಸೃಷ್ಟಿತ ಅಶ್ಲೀಲ ಕಂಟೆಂಟ್ಗಳನ್ನು ತೆಗೆದುಹಾಕಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಜನವರಿ 2ರಂದು ಭಾರತ ಕೂಡ ಎಕ್ಸ್ಗೆ ಎಚ್ಚರಿಕೆ ನೀಡಿತ್ತು. ಇದೀಗ ಎಕ್ಸ್ ತನ್ನ ತಪ್ಪು ಒಪ್ಪಿಕೊಂಡು, ಗ್ರೋಕ್ ಸೃಷ್ಟಿತ ಅಶ್ಲೀಲ ಕಂಟೆಂಟ್ ಅನ್ನು ಬ್ಲಾಕ್ ಮಾಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




