AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಲ್​ನಲ್ಲಿ ನಕಲಿ ಜಿಎಸ್​ಟಿ ನಂಬರ್ ಕೊಟ್ಟು ಸರ್ಕಾರಕ್ಕೂ, ಗ್ರಾಹಕರಿಗೂ ಯಾಮಾರಿಸುತ್ತಾರೆ; ಅಸಲಿ ಪತ್ತೆ ಹಚ್ಚೋದು ಹೇಗೆ?

Know how to check authenticity of GST number: ಬಿಲ್​ನಲ್ಲಿ ಜಿಎಸ್​ಟಿ ಹೆಸರಿನಲ್ಲಿ ಹೆಚ್ಚುವರಿ ಹಣ ಪಡೆಯಲಾಗುತ್ತದೆ. ಆದರೆ, ಅಸಲಿಗೆ ಜಿಎಸ್​ಟಿ ನೊಂದಾವಣಿಯೇ ಆಗಿರುವುದಿಲ್ಲ. ಇಂಥ ಹಲವು ಬ್ಯುಸಿನೆಸ್​ಗಳು ಕಾಣದ ಕಣ್ಮರೆಯಲ್ಲಿ ವ್ಯಾಪಾರ ಮಾಡುತ್ತಿರುತ್ತವೆ. ಗ್ರಾಹಕ ಮತ್ತು ಸರ್ಕಾರ ಇಬ್ಬರಿಗೂ ಆಗುತ್ತಿರುವ ವಂಚನೆ ಇದು. ಒಂದು ಬ್ಯುಸಿನೆಸ್​ನ ಜಿಎಸ್​ಟಿ ನಂಬರ್ ಅಸಲಿಯಾ ಅಥವಾ ನಕಲಿಯಾ ಎಂದು ಪತ್ತೆ ಮಾಡುವುದು ಹೇಗೆ, ದೂರು ಕೊಡುವುದು ಹೇಗೆ ಎನ್ನುವ ವಿವರ ಇಲ್ಲಿದೆ.

ಬಿಲ್​ನಲ್ಲಿ ನಕಲಿ ಜಿಎಸ್​ಟಿ ನಂಬರ್ ಕೊಟ್ಟು ಸರ್ಕಾರಕ್ಕೂ, ಗ್ರಾಹಕರಿಗೂ ಯಾಮಾರಿಸುತ್ತಾರೆ; ಅಸಲಿ ಪತ್ತೆ ಹಚ್ಚೋದು ಹೇಗೆ?
ಜಿಎಸ್​ಟಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 09, 2026 | 3:58 PM

Share

ನೀವು ಹೋಟೆಲ್​ಗೆ ಹೋದಾಗ ಅಥವಾ ಏನಾದರೂ ಸರಕು ಖರೀದಿಸಿದಾಗ ಜಿಎಸ್​ಟಿ (GST) ಸೇರಿಸಿ ಬಿಲ್ ಹಾಕುತ್ತಾರೆ. ಬಿಲ್​ನಲ್ಲಿ ಜಿಎಸ್​ಟಿ ಶೇ. 5 ಅಥವಾ ಶೇ. 18 ಸೇರಿಸಲಾಗಿರುತ್ತದೆ. ಜೊತೆಗೆ ಜಿಎಸ್​ಟಿ ನಂಬರ್ ಕೂಡ ನಮೂದಾಗಿರುತ್ತದೆ. ಇದನ್ನು ಕಂಡಾಗ ಅಧಿಕೃತವಾಗಿ ನಡೆಯುವ ಬ್ಯುಸಿನೆಸ್ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಆದರೆ, ಕೆಲವರು ಬಿಲ್​ನಲ್ಲಿ ಜಿಎಸ್​ಟಿ ಸೇರಿಸಿರುತ್ತಾರೆ, ಆದರೆ, ಜಿಎಸ್​ಟಿ ನಂಬರ್ ಏನು ಅಂತ ಹಾಕಿರೋದಿಲ್ಲ. ಜಿಎಸ್​ಟಿ ನಂಬರ್ ಹಾಕಿದರೂ ಅದು ಅಸಲಿಯೋ ಅಥವಾ ನಕಲಿಯೋ ಎಂದು ಯಾರಿಗೆ ಗೊತ್ತು?

ಕೆಲ ವಂಚಕರು ನಕಲಿ ಜಿಎಸ್​ಟಿ ನಂಬರ್ ಮತ್ತು ನಕಲಿ ಬಿಲ್ ಕೊಟ್ಟು ಗ್ರಾಹಕರ ಹಾಗೂ ಸರ್ಕಾರ ಇಬ್ಬರಿಗೂ ಪಂಗನಾಮ ಹಾಕುವುದುಂಟು. ಗ್ರಾಹಕರ ಜಾಗದಲ್ಲಿ ಉದ್ಯಮಿಯೇ ಆಗಿದ್ದರೆ ನಕಲಿ ಜಿಎಸ್​ಟಿ ಕಾರಣದಿಂದ ಅವರಿಗೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಕೂಡ ಸಿಕ್ಕೋದಿಲ್ಲ. ಅಷ್ಟಕ್ಕೂ, ನಕಲಿ ಜಿಎಸ್​ಟಿ ನಂಬರ್ ಅನ್ನು ಪತ್ತೆ ಮಾಡುವುದು ಹೇಗೆ? ಈ ಕ್ರಮ ಬಹಳ ಸುಲಭ.

ಇದನ್ನೂ ಓದಿ: ಆನ್​ಲೈನ್ ಫ್ರಾಡ್ ಆದರೆ, ಹೂಡಿಕೆ ಸ್ಕೀಮ್ ಬಗ್ಗೆ ಅನುಮಾನ ಬಂದರೆ ಆರ್​ಬಿಐನ ಸಚೇತ್ ಪೋರ್ಟಲ್ ಮೊರೆಹೋಗಿ

ಪ್ಯಾನ್ ರೀತಿ ಜಿಎಸ್​ಟಿನ್​ಗೂ ಅರ್ಥಗರ್ಭಿತ ಅಂಕಿ ಅಕ್ಷರ ಸಂಯೋಜನೆ…

ಬ್ಯುಸಿನೆಸ್ ನಡೆಸುವ ಪ್ರತಿಯೊಬ್ಬ ವ್ಯಕ್ತಿ ಮತ್ತು ಸಂಸ್ಥೆಯೂ ಜಿಎಸ್​ಟಿಗೆ ನೊಂದಾಯಿಸಿರಬೇಕು. ಹೀಗೆ ರಿಜಿಸ್ಟರ್ ಮಾಡಿಕೊಂಡಿದ್ದರೆ ವಿಶೇಷವಾದ 15 ಅಂಕಿಗಳಿರುವ ಜಿಎಸ್​ಟಿ ನಂಬರ್ ನೀಡಲಾಗುತ್ತದೆ. ತೆರಿಗೆ ಪಾವತಿದಾರರಿಗೆ ಪ್ಯಾನ್ ನಂಬರ್ ಇದ್ದಂತೆ ಬ್ಯುಸಿನೆಸ್​ಮ್ಯಾನ್​ಗಳಿಗೆ ಜಿಎಸ್​ಟಿ ನಂಬರ್ ಇರುತ್ತದೆ.

ಜಿಎಸ್​ಟಿ ನಂಬರ್ 15 ಅಂಕಿಯದ್ದಾಗಿರುತ್ತದೆ. ರಾಜ್ಯದ ಕೋಡ್, ಬ್ಯುಸಿನೆಸ್​ನ ಪ್ಯಾನ್ ನಂಬರ್ ಇತ್ಯಾದಿ ಇರುತ್ತವೆ. ಮೊದಲ ಎರಡು ಡಿಜಿಟ್​ಗಳು ಅಂಕಿಯದ್ದಾಗಿರುತ್ತವೆ. ಕರ್ನಾಟಕದ್ದು 29 ಇರುತ್ತದೆ. ಮಹಾರಾಷ್ಟ್ರದ್ದು 27 ಇರುತ್ತದೆ. ಹೀಗೆ ಬೇರೆ ಬೇರೆ ರಾಜ್ಯಗಳಿಗೆ ಬೇರೆ ಬೇರೆ ಕೋಡ್ ಇರುತ್ತದೆ. ನಂತರದ 10 ಡಿಜಿಟ್​ಗಳು, ಅಂದರೆ 3ರಿಂದ 12ರ ಅಂಕಿಗಳು ಪ್ಯಾನ್ ನಂಬರ್ ಆಗಿರುತ್ತದೆ. 13ನೇ ಅಂಕಿಯು ಆ ಪ್ಯಾನ್ ಅಡಿಯಲ್ಲಿ ಆ ರಾಜ್ಯದೊಳಗೆ ಎಷ್ಟು ನೊಂದಣಿ ಮಾಡಿಕೊಳ್ಳಲಾಗಿದೆ ಆ ಸಂಖ್ಯೆಯಾಗಿರುತ್ತದೆ. ಇನ್ನು, 14ನೇ ಅಂಕಿ ಡೀಫಾಲ್ಟ್ ಆಗಿ Z ಆಗಿರುತ್ತದೆ. ಕೊನೆಯ ಹಾಗು 15ನೇ ಅಂಕಿಯು ದೋಷ ಪತ್ತೆಗೆಂದು ಚೆಕ್ ಕೋಡ್ ಆಗಿ ಒಂದು ಅಂಕಿಯನ್ನೋ ಅಥವಾ ಅಕ್ಷರವನ್ನೋ ನೀಡಲಾಗಿರುತ್ತದೆ.

ನಕಲಿ ಜಿಎಸ್​ಟಿ ನಂಬರ್ ಪತ್ತೆ ಮಾಡುವ ಕ್ರಮ ಹೇಗೆ?

ಜಿಎಸ್​ಟಿ ನಂಬರ್ ನೊಂದಾಯಿತವಾಗಿದೆಯಾ, ಅಸಲಿಯಾ, ಅಲ್ಲವಾ ಎಂಬುದನ್ನು ಪತ್ತೆ ಮಾಡಬಹುದು. ಅದರ ಕ್ರಮ ಹೀಗೆ:

  • ಜಿಎಸ್​ಟಿ ಪೋರ್ಟಲ್​ಗೆ ಹೋಗಿ. ಅದರ ವಿಳಾಸ: www.gst.gov.in/
  • ಇಲ್ಲಿ ‘ಸರ್ವಿಸಸ್’ ಟ್ಯಾಬ್​ನಲ್ಲಿ ‘ಸರ್ಚ್ ಟ್ಯಾಕ್ಸ್​ಪೇಯರ್’ ಅನ್ನು ಕ್ಲಿಕ್ ಮಾಡಿ.
  • ನಂತರ, ‘ಸರ್ಚ್ ಬೈ ಜಿಎಸ್​ಟಿನ್/ಯುಐಎನ್’ ಆಯ್ಕೆ ಮಾಡಿ.
  • ಸರ್ಚ್ ಬಾರ್​ನಲ್ಲಿ 15 ಅಂಕಿಗಳ ಜಿಎಸ್​ಟಿ ನಂಬರ್ ನಮೂದಿಸಿರಿ. ಬಳಿಕ ಕ್ಯಾಪ್ಚಾ ಹಾಕಿ ಸಬ್ಮಿಟ್ ಬಟನ್ ಒತ್ತಿರಿ.

ಇದನ್ನೂ ಓದಿ: ಪಿಎಫ್ ಹಣಕ್ಕೆ ಟ್ಯಾಕ್ಸ್ ಅನ್ವಯ ಆಗುತ್ತಾ? ವಿತ್​ಡ್ರಾ ಮಾಡಿದಾಗ ಟ್ಯಾಕ್ಸ್ ಎಷ್ಟು? ನೀವು ತಿಳಿದಿರಬೇಕಾದ ಸಂಗತಿಗಳಿವು…

ಈಗ ಜಿಎಸ್​ಟಿ ನಂಬರ್ ನೊಂದಾಯಿಸಿದ ಬ್ಯುಸಿನೆಸ್ ಸಂಸ್ಥೆಯ ಎಲ್ಲಾ ಜಾತಕ ಬಹಿರಂಗಗೊಳ್ಳುತ್ತದೆ. ಬ್ಯುಸಿನೆಸ್​ನ ನೊಂದಾಯಿತ ಹೆಸರು, ಯಾವ ಕ್ಷೇತ್ರಗಳಲ್ಲಿ ವ್ಯಾಪಾರ, ರಿಜಿಸ್ಟ್ರೇಶನ್ ಆಗಿದ್ದು ಯಾವಾಗ, ಎಲ್ಲಿ ಇವೇ ಮುಂತಾದ ವಿವರಗಳನ್ನು ಯಾರು ಬೇಕಾದರೂ ನೋಡಬಹುದು.

ಜಿಎಸ್​ಟಿ ನಂಬರ್ ನಕಲಿಯಾಗಿದ್ದರೆ ಏನು ಮಾಡಬೇಕು?

ಒಂದು ವೇಳೆ ಜಿಎಸ್​ಟಿ ನಂಬರ್ ನಕಲಿಯಾಗಿದ್ದು ಗೊತ್ತಾದಾಗ ಅಲ್ಲಿ ವ್ಯಾಪಾರ ಮಾಡಬೇಡಿ. ಬಿಲ್​​ನಲ್ಲಿ ಸುಮ್ಮನೆ ಜಿಎಸ್​ಟಿ ತೋರಿಸಿ ಗ್ರಾಹಕರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿರಬಹುದು. ಸರ್ಕಾರಕ್ಕೆ ಹೋಗಬೇಕಾದ ಹಣವನ್ನು ತಾವೇ ಇಟ್ಟುಕೊಳ್ಳುತ್ತಿರಬಹುದು. ಹೀಗೆ ನಕಲಿ ಜಿಎಸ್​ಟಿ ನಂಬರ್ ಹೊಂದಿರುವ ಕಂಪನಿ ವಿರುದ್ಧ ಹೆಲ್ಪ್​ಡೆಸ್ಕ್​ಗೆ ಇಮೇಲ್ ಕಳುಹಿಸಬಹುದು. ಅದರ ವಿಳಾಸ: helpdesk@gst.gov.in .

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ