ಚಿನ್ನದ ನಿಧಿಯನ್ನು ಸರ್ಕಾರಕ್ಕೆ ನೀಡಿದ್ದೇ ತಪ್ಪಾಯ್ತಾ? ಬೀದಿಗೆ ಬೀಳುವ ಭಯದಲ್ಲಿ ಕುಟುಂಬ
ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮನೆ ಅಗೆಯುವಾಗ ಚಿನ್ನದ ನಿಧಿ ಪತ್ತೆಯಾಗಿತ್ತು. ಪ್ರಾಮಾಣಿಕತೆ ಮೆರೆದು ನಿಧಿಯನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ ಕುಟುಂಬ ಈಗ ಆತಂಕದಲ್ಲಿದೆ. ನಿಧಿ ಸಿಕ್ಕ ಸ್ಥಳವನ್ನು ನಿಷಿದ್ಧ ಪ್ರದೇಶವೆಂದು ಘೋಷಿಸಿದ್ದು, ಕುಟುಂಬಕ್ಕೆ ಮನೆ ಇಲ್ಲದಂತಾಗಿದೆ. ಸರ್ಕಾರ ನೆರವಾಗಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗದಗ, ಜ.11: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮನೆ ಪಾಯ ಅಗೆಯುವಾಗ ಚಿನ್ನದ ನಿಧಿ ಪತ್ತೆಯಾದ ಘಟನೆ ಇದೀಗ ಹೊಸದೊಂದು ಸಮಸ್ಯೆಗೆ ಕಾರಣವಾಗಿದೆ. ಪ್ರಾಮಾಣಿಕತೆ ಮೆರೆದ ಕುಟುಂಬ ನಿಧಿಯನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರೂ, ಈಗ ಆ ಕುಟುಂಬಕ್ಕೆ ಭಯ ಮತ್ತು ಆತಂಕ ಶುರುವಾಗಿದೆ. ನಿಧಿ ಸಿಕ್ಕಿದ ಸ್ಥಳವನ್ನು ನಿಷಿದ್ಧ ಪ್ರದೇಶವೆಂದು ಘೋಷಿಸಿರುವ ಕಾರಣ, ಅವರು ಕಟ್ಟುತ್ತಿದ್ದ ಮನೆ ಅರ್ಧಕ್ಕೆ ನಿಂತಿದೆ. ಹೀಗಾಗಿ, ವಾಸಕ್ಕೆ ಮನೆಯಿಲ್ಲದೆ ಕುಟುಂಬ ಬೀದಿಗೆ ಬಂದಂತಾಗಿದ್ದು, ಎಲ್ಲಿ ಬದುಕು ಸಾಗಿಸಬೇಕು ಎಂಬ ಚಿಂತೆಯಲ್ಲಿದೆ. ಮನೆಯ ಯಜಮಾನ ಮೃತಪಟ್ಟಿದ್ದು, ಕುಟುಂಬದಲ್ಲಿ ತಾಯಿ ಮತ್ತು ಚಿಕ್ಕ ಮಗನಿದ್ದಾನೆ. ಈ ಬಡ ಕುಟುಂಬಕ್ಕೆ ಈಗ ಆಸರೆ ಇಲ್ಲದೆ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯ ಸದಸ್ಯರು ಮತ್ತು ಗ್ರಾಮಸ್ಥರು ಒಗ್ಗಟ್ಟಾಗಿ ನಿಂತು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸರ್ಕಾರ ಮಾನವೀಯ ದೃಷ್ಟಿಯಿಂದ ಕುಟುಂಬಕ್ಕೆ ಒಂದು ನಿವೇಶನ ಅಥವಾ ಮನೆಯನ್ನು ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಕುಟುಂಬದವರು ಚಿನ್ನದ ಆಸೆಯನ್ನು ಬಿಟ್ಟು, ನಮಗೆ ಮನೆ ಬೇಕು ಎಂದು ಕಣ್ಣೀರು ಹಾಕುತ್ತಿದ್ದಾರೆ. ಈ ಬಗ್ಗೆ ಟಿವಿ9 ಜತೆಗೆ ಮಾತನಾಡಿ ಕುಟುಂಬದವರು , “ನಮ್ಮ ಅಣ್ಣನ ಮನೆ ಅಥವಾ ಸಣ್ಣ ಮಾವನ ಮನೆಯಲ್ಲಿ ತಾತ್ಕಾಲಿಕವಾಗಿ ವಾಸಿಸುತ್ತಿದ್ದೇವೆ. ಚಿನ್ನದ ನಿಧಿ ನಮಗೆ ಬೇಡ, ಸರ್ಕಾರ ನಮಗೆ ಬದುಕಲು ಒಂದು ಮನೆ ನೀಡಿದರೆ ಸಾಕು. ಮಗನಿಗೆ ಶಿಕ್ಷಣ ಕೊಡಿಸಿ, ಅವನ ಭವಿಷ್ಯ ರೂಪಿಸಲು ಸಹಾಯ ಮಾಡಿ” ಎಂದು ಬೇಡಿಕೊಂಡಿದ್ದಾರೆ. ನಿಧಿ ಸಿಕ್ಕಾಗ ನಾವು ಇಂತಹ ಪರಿಸ್ಥಿತಿ ಎದುರಾಗುತ್ತದೆ ಎಂದು ಊಹಿಸಿರಲಿಲ್ಲ, ಹೊಲ ಮಾರಿ ಮನೆ ಕಟ್ಟಲು ಆರಂಭಿಸಿದ್ದೇವೆ ಎಂದು ಕುಟುಂಬದ ಹಿರಿಯ ಸದಸ್ಯರೊಬ್ಬರು ನೋವಿನಿಂದ ತಿಳಿಸಿದ್ದಾರೆ. ಚಿನ್ನ ದೊರೆತಿದ್ದರೂ, ಅದು ಇವರಿಗೆ ನೆಮ್ಮದಿ ನೀಡುವ ಬದಲು ಕಷ್ಟ ತಂದಿದೆ. ಹೀಗಾಗಿ, ಸರ್ಕಾರವು ಕೂಡಲೇ ಸ್ಪಂದಿಸಿ ಆ ಕುಟುಂಬಕ್ಕೆ ಸೂಕ್ತ ನೆರವು ನೀಡಬೇಕೆಂದು ಇಡೀ ಲಕ್ಕುಂಡಿ ಗ್ರಾಮಸ್ಥರು ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

