ಭಾರತ ಹಾಗೂ ಪಾಕಿಸ್ತಾನ (India vs Pakistan) ವಿರುದ್ಧದ ಕದನಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದಿನಿಂದ ಸೂಪರ್ 12 (Super 12) ಹಂತದ ಪಂದ್ಯಗಳು ರಂಗೇರಲಿದ್ದು, ಭಾನುವಾರ ಭಾರತ-ಪಾಕ್ (IND vs PAK) ಮುಖಾಮುಖಿ ಆಗಲಿದೆ. ಪಾಕಿಸ್ತಾನ ತಂಡವನ್ನು ಯಾವ ಹಂತದಲ್ಲೂ ದುರ್ಬಲ ಎನ್ನಲು ಸಾಧ್ಯವಿಲ್ಲ. ಟಿ20 ಕ್ರಿಕೆಟ್ನಲ್ಲಿ (ICC T20 World Cup) ಪಾಕ್ ಅಷ್ಟರ ಮಟ್ಟಿಗೆ ಯಶಸ್ಸು ಸಾಧಿಸಿದೆ. ಹೀಗಾಗಿ ಭಾರತಕ್ಕಿದು ಪ್ರತಿಷ್ಠೆಯ ಪಂದ್ಯ ಆಗಿರುವುದರಿಂದ ಹೊಸ ಯೋಜನೆಯೊಂದಿಗೆ ಕಣಕ್ಕಿಳಿಯಬೇಕಿದೆ. ಹೀಗಿರುವಾಗ ಟೀಮ್ ಇಂಡಿಯಾದ (Team India) ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ (VVS Laxam) ಅವರು ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಭಾರತದ ಆಡುವ ಬಳಗವನ್ನು ಹೆಸರಿಸಿದ್ದಾರೆ.
ಹೌದು, ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಎರಡು ವರ್ಷಗಳ ಸುದೀರ್ಘ ಅವಧಿಯ ಬಳಿಕ ಟಿ20 ವಿಶ್ವಕಪ್‌ನಲ್ಲಿ ಮುಖಾಮುಖಿಯಾಗುತ್ತಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲೇ ಇದೊಂದು ವಿಶೇಷ ಹೈವೋಲ್ಟೇಜ್ ಪಂದ್ಯ. ಈ ಎರಡು ತಂಡಗಳು ಇದಕ್ಕೂ ಮುನ್ನ 2019ರ ಏಕದಿನ ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಕೂಡ ಭಾರತ ಗೆಲುವು ಸಾಧಿಸಿತ್ತು. ಆದರೆ ಅಪಾಯಕಾರಿಯಾಗಿರುವ ಪಾಕಿಸ್ತಾನ ತಂಡವನ್ನು ಹಗುರವಾಗಿ ಪರಿಗಣಿಸಲು ಸಾಧ್ಯವೇ ಇಲ್ಲ.
ಈ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ಬ್ಯಾಟ್ಸ್‌ಮನ್ ವಿವಿಎಸ್ ಲಕ್ಷ್ಮಣ್, ಪಾಕ್ ವಿರುದ್ಧದ ರೋಚಕ ಪಂದ್ಯಕ್ಕೆ ಟೀಮ್ ಇಂಡಿಯಾದ ಅತ್ಯುತ್ತಮ 11 ಆಟಗಾರರ ತಂಡ ಕಟ್ಟಿದ್ದಾರೆ. ಈ ಪೈಕಿ ಅಭ್ಯಾಸ ಪಂದ್ಯಗಳಲ್ಲಿ ಅಬ್ಬರದ ಅರ್ಧಶತಕಗಳನ್ನು ಬಾರಿಸಿರುವ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಅವರನ್ನು ಆರಂಭಿಕರನ್ನಾಗಿ ಆಯ್ಕೆ ಮಾಡಿದ್ದಾರೆ. ಆದರೆ, ಉತ್ತಮ ಫಾರ್ಮ್ನಲ್ಲಿರುವ ಯುವ ಓಪನರ್ ಇಶಾನ್ ಕಿಶನ್ ಅವರನ್ನು ಕಡೆಗಣಿಸಿದ್ದಾರೆ.
ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಸಲುವಾಗಿ ಮೂರನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಮತ್ತು ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರನ್ನು ಆಯ್ಕೆ ಮಾಡಿರುವ ಲಕ್ಷ್ಮಣ್, ಆಲ್‌ರೌಂಡರ್‌ಗಳನ್ನಾಗಿ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಅವರನ್ನು ತೆಗೆದುಕೊಂಡಿದ್ದಾರೆ.
“ಭಾರತ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಬಹುತೇಕರ ಸ್ಥಾನ ಖಚಿತವಾಗಿದೆ. ನಾನಂತೂ ರೋಹಿತ್, ರಾಹುಲ್ ಅವರನ್ನು ಆರಂಭಿಕರನ್ನಾಗಿ ತೆಗೆದುಕೊಂಡು ನಂತರ ವಿರಾಟ್, ಸೂರ್ಯಕುಮಾರ್ ಮತ್ತು ರಿಷಭ್ ಪಂತ್ ಅವರನ್ನು ಆಡಿಸುತ್ತೇನೆ. ನಂತರ ಹಾರ್ದಿ ಮತ್ತು ಜಡೇಜಾ ಬರಬಹುದು,” ಎಂದು ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಲಕ್ಷ್ಮಣ್ ವಿವರಿಸಿದ್ದಾರೆ.
ಲಕ್ಷ್ಮಣ್ ಅವರು ಕಿಶನ್ ಜೊತೆಗೆ ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ 3 ವಿಕೆಟ್ ಪಡೆದು ಮಿಂಚಿದ್ದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಅವರನ್ನು ಕೈಬಿಟ್ಟಿದ್ದಾರೆ. ಅದೇ ಪಂದ್ಯದಲ್ಲಿ ವಿಕೆಟ್ ಪಡೆಯದೇ 54 ರನ್‌ಗಳನ್ನು ಹೊಡೆಸಿಕೊಂಡ ಭುವನೇಶ್ವರ್ ಕುಮಾರ್ ಅವರನ್ನು ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್‌ಗೆ ಆಯ್ಕೆ ಮಾಡಿದ್ದಾರೆ. ಅವರೊಟ್ಟಿಗೆ ಮತ್ತೊಬ್ಬ ವೇಗಿಗಾಗಿ ಜಸ್‌ಪ್ರೀತ್ ಬುಮ್ರಾ ಅವರನ್ನು ತೆಗೆದುಕೊಂಡಿದ್ದಾರೆ. ಇಬ್ಬರು ಪರಿಣತ ಸ್ಪಿನ್ನರ್‌ಗಳಾಗಿ ವರುಣ್ ಚಕ್ರವರ್ತಿ ಮತ್ತು ರಾಹುಲ್ ಚಹರ್ ಅವರನ್ನು ಹೆಸರಿಸಿದ್ದಾರೆ.
ವಿವಿಎಸ್ ಲಕ್ಷ್ಮಣ್ ಆಯ್ಕೆಯ ಟೀಮ್ ಇಂಡಿಯಾ ಪ್ಲೇಯಿಂಗ್ XI ಇಲ್ಲಿದೆ:
ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ (ನಾಯಕ), ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಜಸ್‌ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ರಾಹುಲ್ ಚಹರ್.
West Indies vs England: ಇಂದಿನಿಂದ ಸೂಪರ್ 12 ಹಂತ: ಚಾಂಪಿಯನ್ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ಮುಖಾಮುಖಿ
(VVS Laxman predicted Team India playing XI for the much-anticipated clash India vs Pakistan T20 World Cup Match)