ಮಾಯಾ ನಗರಿ ಮುಂಬೈನಲ್ಲಿ ಇಂದು ಬೆಳಗ್ಗಿನಿಂದಲೇ ಕ್ರಿಕೆಟ್ ಜಾತ್ರೆ ಶುರುವಾಗಿದೆ. ಇಲ್ಲಿನ ಪ್ರಸಿದ್ಧ ವಾಂಖೆಡೆ ಕ್ರೀಡಾಂಗಣ ಇಂಡಿಯನ್ ಪ್ರೀಮಿಯರ್ ಲೀಗ್ ಐಪಿಎಲ್ 2022ರ (IPL 2022) ಚೊಚ್ಚಲ ಪಂದ್ಯಕ್ಕೆ ವೇದಿಕೆಯಾಗಲಿದೆ. ಶನಿವಾರ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR) ನಡುವೆ ಮೊದಲ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಟಿ20 ಕ್ರಿಕೆಟ್ಗೆ ಹೇಳಿ ಮಾಡಿಸಿದ ವಾಂಖೆಡೆ ಪಿಚ್‌ನಲ್ಲಿ (Wankhede Pitch) ಈ ರೋಚಕ ಕಾದಾಟ ನಡೆಯಲಿದ್ದು ಅಭಿಮಾನಿಗಳಂತು ಕಾದು ಕುಳಿತಿದ್ದಾರೆ. ಈ ಸ್ಟೇಡಿಯಂನಲ್ಲೇ 20 ಲೀಗ್ ಪಂದ್ಯಗಳು ನಡೆಯಲಿವೆ. ಬ್ರಬೋರ್ನ್ ಕ್ರೀಡಾಂಗಣ ಕೂಡ ಆತಿಥ್ಯ ವಹಿಸಿದೆ. ಡಿ.ವೈ ಪಾಟಿಲ್ ಕ್ರೀಡಾಂಗಣದಲ್ಲಿ 15 ಪಂದ್ಯಗಳು ನಡೆಯಲಿದ್ದು, ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣ ಎಂಸಿಎಗೆ 15 ಪಂದ್ಯಗಳನ್ನು ನೀಡಲಾಗಿದೆ. ಸದ್ಯ ಇಂದು ನಡೆಯಲಿರುವ ಸಿಎಸ್ಕೆ-ಕೆಕೆಆರ್ ನಡುವಣ ಪಂದ್ಯಕ್ಕೆ ಪಿಚ್ ಹೇಗಿದೆ ಎಂಬುದನ್ನು ನೋಡೋಣ.
ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣ ಬ್ಯಾಟ್ಸ್‌ಮನ್‌ಗಳ ಸ್ವರ್ಗವಾಗಿದ್ದು, ದಾಂಡಿಗರು ಈ ಪಿಚ್‌ನಲ್ಲಿ ರನ್ ಹೊಳೆಯನ್ನೇ ಹರಿಸಲಿದ್ದಾರೆ. 2ನೇ ಇನ್ನಿಂಗ್ಸ್ ವೇಳೆ ಇಬ್ಬನಿ ಬೀಳುವ ಸಾಧ್ಯತೆ ಇರುವ ಕಾರಣ, ಮೊದಲು ಬ್ಯಾಟ್ ಮಾಡುವ ತಂಡ ಕನಿಷ್ಠ 180-190 ರನ್ ಗಳಿಸಿದರಷ್ಟೇ ಗೆಲ್ಲುವ ನಿರೀಕ್ಷೆ ಇಟ್ಟುಕೊಳ್ಳಬಹುದು. ಈ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಗಳಲ್ಲಿ ಚೇಸ್ ಮಾಡುವ ತಂಡ ಹೆಚ್ಚಿನ ಹಿಡಿತವನ್ನು ಹೊಂದಿರುವುದು ಸಾಮಾನ್ಯವಾಗಿದೆ. ಹೀಗಾಗಿ ಟಾಸ್ ಗೆಲ್ಲುವ ತಂಡ ಮೊದಲು ಬೌಲಿಂಗ್ ಆಯ್ದುಕೊಂಡು, ಚೇಸಿಂಗ್ ಮಾಡಿದರೆ ಪಂದ್ಯ ಗೆಲ್ಲುವ ಸಾಧ್ಯತೆಗಳು ಹೆಚ್ಚಾಗಿವೆ. ವೇಗಿಗಳಿಗೆ ಪಿಚ್ ನೆರವು ನೀಡುವ ಸಾಧ್ಯತೆ ಕೂಡ ಹೆಚ್ಚು.
ವಾಂಖೆಡೆಯಲ್ಲಿ ಐಪಿಎಲ್ ಸರಾಸರಿ ಇನ್ನಿಂಗ್ಸ್‌ಗೆ 180 ಮತ್ತು ಅಂತರರಾಷ್ಟ್ರೀಯ ಪಂದ್ಯಗಳಿಗೆ 194 ಆಗಿದೆ. ಗಡಿ ಚಿಕ್ಕದಾಗಿದ್ದು, ಪವರ್ ಹಿಟ್ಟರ್ ಗಳಿಗೆ ಹಬ್ಬ ಎಂದೇ ಹೇಳಬಹುದು. ಆದಾಗ್ಯೂ, ಪ್ರತಿ ಐಪಿಎಲ್ ಋತುವಿನಲ್ಲಿ ವಾಂಖೆಡೆಯಲ್ಲಿ 7 ಅಥವಾ 9 ಪಂದ್ಯಗಳು ನಡೆಯುತ್ತಿದ್ದವು. ಆದರೆ ಈ ಬಾರಿ 20 ಪಂದ್ಯಗಳು ನಡೆಯಲಿವೆ. ಇದರ ನಡುವೆ ಕೆಲವೊಮ್ಮೆ ಸ್ಪಿನ್ನರ್‌ಗಳು ಮತ್ತು ಮಧ್ಯಮ ವೇಗಿಗಳಿಗೆ ಕೂಡ ಮಿಂಚುವ ಅವಕಾಶವಿರುತ್ತದೆ. ಒಟ್ಟಾರೆಯಾಗಿ ಈ ಪಿಚ್‌ನಲ್ಲಿ ರನ್ ಮಳೆ ಹರಿಯುವುದು ಖಚಿತ. ಸೆಕೆಂಡ್ ಬ್ಯಾಟಿಂಗ್ ಮಾಡುವ ತಂಡಕ್ಕೆ ಹೆಚ್ಚು ಅನುಕೂಲ ಇರುವ ಕಾರಣ ಟಾಸ್ ಗೆದ್ದ ತಂಡ ಬೌಲಿಂಗ್ ಮಾಡಲಿದೆ. ಶೇ. 25ರಷ್ಟು ವೀಕ್ಷಕರಿಗೆ ಅವಕಾಶ ಕಲ್ಪಿಸಿದ್ದು ವಾಂಖೆಡೆಯಲ್ಲಿ ಅಭಿಮಾನಿಗಳ ಸದ್ದು ಕೂಡ ಇರಲಿದೆ.
ಇಂದಿನ ಪಂದ್ಯದಲ್ಲಿ ಯಾರಿಗೆ ಗೆಲುವು ಎಂಬುದನ್ನು ನೋಡುವುದಾದರೆ ಮೇಲ್ನೋಟಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಪರ ಹೆಚ್ಚು ಮತಗಳಿವೆ. ಸಿಎಸ್ಕೆ ಪರ ಅನುಭವಿ ಆಟಗಾರರನ್ನು ನೋಡಿದರೆ, ಈ ಪಂದ್ಯದಲ್ಲಿ ಕೋಲ್ಕತ್ತಾಗೆ ಕೊಂಚ ಹಿನ್ನಡೆಯಾಗಬಹುದು. ಅಲ್ಲದೆ ಕೋಲ್ಕತ್ತಾ ವಿರುದ್ಧ ಚೆನ್ನೈ ಹೆಚ್ಚು ಪ್ರಾಬಲ್ಯ ಹೊಂದಿದೆ. ಈವರೆಗೆ ಈ ತಂಡಗಳ ನಡುವೆ 26 ಪಂದ್ಯಗಳು ನಡೆದಿದ್ದು, ಚೆನ್ನೈ 17ರಲ್ಲಿ ಗೆದ್ದಿದ್ದರೆ, ಕೋಲ್ಕತ್ತಾ ಕೇವಲ 8 ಪಂದ್ಯಗಳಲ್ಲಿ ಗೆಲುವನ್ನು ಕಂಡಿದೆ. ಕಳೆದ ಬಾರಿ ಅಂಕಿ ಅಂಶಗಳನ್ನು ಗಮನಿಸಿದ್ದಲ್ಲಿ, ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 27 ರನ್‌ಗಳಿಂದ ಕೋಲ್ಕತ್ತಾವನ್ನು ಸೋಲಿಸಿತು. ಆದರೆ ಚುಟುಕು ಕ್ರಿಕೆಟ್ನಲ್ಲಿ ಏನೂ ಬೇಕಾದರೂ ಆಗಬಹುದು ಎಂಬುದು ಈ ಹಿಂದೆ ಅನೇಕ ಬಾರಿ ಸಾಭೀತಾಗಿದನ್ನು ಮರೆಯುವಂತಿಲ್ಲ.
ಪಂದ್ಯ ಆರಂಭ: ರಾತ್ರಿ 7.30ಕ್ಕೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಮತ್ತು ಡಿಸ್ನಿ ಪ್ಲಸ್ ಹಾಟ್ಸ್ಟಾರ್.
CSK vs KKR, IPL 2022: ಮೊದಲ ಪಂದ್ಯದಲ್ಲಿ ಚೆನ್ನೈ-ಕೋಲ್ಕತ್ತಾ ಮುಖಾಮುಖಿ: ಅಯ್ಯರ್-ಜಡೇಜಾಗೆ ಅಗ್ನಿ ಪರೀಕ್ಷೆ
IPL 2022: ಬಂದೇ ಬಿಡ್ತು ಐಪಿಎಲ್: ಹೊಸ ಮಾದರಿಯ ಮಿಲಿಯನ್ ಡಾಲರ್ ಟೂರ್ನಿಗೆ ಇಂದು ಚಾಲನೆ