CSK vs KKR, IPL 2022: ಮೊದಲ ಪಂದ್ಯದಲ್ಲಿ ಚೆನ್ನೈ-ಕೋಲ್ಕತ್ತಾ ಮುಖಾಮುಖಿ: ಅಯ್ಯರ್-ಜಡೇಜಾಗೆ ಅಗ್ನಿ ಪರೀಕ್ಷೆ

Jadeja vs Shreyas Iyer: ಮೊದಲ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಸೆಣೆಸಾಟ ನಡೆಸಲಿದೆ. ಶ್ರೇಯಸ್ ಅಯ್ಯರ್ ಹಾಗೂ ರವೀಂದ್ರ ಜಡೇಜಾ ಅವರಿಗೆ ಇದೊಂದು ಅಗ್ನಿ ಪರೀಕ್ಷೆಯಾಗಿದ್ದು ನಾಯಕತ್ವ ವಹಿಸಿದ ಮೊದಲ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆಯಲು ಎದುರು ನೋಡುತ್ತಿದ್ದಾರೆ.

CSK vs KKR, IPL 2022: ಮೊದಲ ಪಂದ್ಯದಲ್ಲಿ ಚೆನ್ನೈ-ಕೋಲ್ಕತ್ತಾ ಮುಖಾಮುಖಿ: ಅಯ್ಯರ್-ಜಡೇಜಾಗೆ ಅಗ್ನಿ ಪರೀಕ್ಷೆ
CSK vs KKR IPL 2022
Follow us
TV9 Web
| Updated By: Vinay Bhat

Updated on: Mar 26, 2022 | 8:30 AM

ಐಪಿಎಲ್ 2022ಕ್ಕೆ (IPL2022) ಇಂದು ಕ್ವಿಕ್ ಸ್ಟಾರ್ಟ್ ಸಿಗಲಿದೆ. ಮೊದಲ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR) ತಂಡಗಳು ಸೆಣೆಸಾಟ ನಡೆಸಲಿದೆ. ಶ್ರೇಯಸ್ ಅಯ್ಯರ್ ಹಾಗೂ ರವೀಂದ್ರ ಜಡೇಜಾ (Ravindra Jadeja) ಅವರಿಗೆ ಇದೊಂದು ಅಗ್ನಿ ಪರೀಕ್ಷೆಯಾಗಿದ್ದು ನಾಯಕತ್ವ ವಹಿಸಿದ ಮೊದಲ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆಯಲು ಎದುರು ನೋಡುತ್ತಿದ್ದಾರೆ. ಐದನೇ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಸಿಎಸ್​​ಕೆ ಮತ್ತು ಕಳೆದ ಬಾರಿಯ ಟೂರ್ನಿಯಲ್ಲಿ ಟ್ರೋಫಿ ಎತ್ತಿ ಹಿಡಿಯುವ ಅವಕಾಶವನ್ನು ಅಂತಿಮ ಹಂತದಲ್ಲಿ ಕೈ ತಪ್ಪಿಸಿಕೊಂಡಿದ್ದ ಕೆಕೆಆರ್ ನಡುವಣ ಕಾದಾಟಕ್ಕೆ ಅಭಿಮಾನಿಗಳಂತಿ ಕಾದು ಕುಳಿತಿದ್ದಾರೆ. ಉಭಯ ತಂಡಗಳಿಗೂ ಮೊದಲ ಪಂದ್ಯಕ್ಕೆ ಪ್ರಮುಖ ವಿದೇಶಿ ಆಟಗಾರರು ಅಲಭ್ಯರಾಗಿರುವುದು ಹಿನ್ನಡೆಯಾಗಿದೆ. ಅಲ್ಲದೆ ಎರಡು ದಿನಗಳ ಹಿಂದೆಯಷ್ಟೇ ಸಿಎಸ್‌ಕೆ ತಂಡದ ನಾಯಕ ಸ್ಥಾನದಿಂದ ಕೆಳಗಿಳಿದ ಧೋನಿಯನ್ನು ಸಾರಥಿಯಾಗಿ ನೋಡಲು ಸಾಧ್ಯವಿಲ್ಲ ಎಂಬ ಬೇಸರ ಕೂಡ ಅಭಿಮಾನಿಗಳಲ್ಲಿದೆ.

ಧೋನಿ ನಾಯಕತ್ವದಿಂದ ಕೆಳಗಿಳಿದಿದ್ದು ಒಂದು ಲೆಕ್ಕದಲ್ಲಿ ಉತ್ತಮ ನಿರ್ಧಾರ ಎಂದೂ ಹೇಳಬಹುದು. ತಂಡವನ್ನು ಮುನ್ನಡೆಸುವ ಜವಾಬ್ದಾರಿಯಿಂದ ಹೊರಬಂದು ಬ್ಯಾಟಿಂಗ್​ ಕಡೆ ಮತ್ತಷ್ಟು ಗಮನ ಹರಿಸಿ ಫಿನಿಶಿಂಗ್ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬಹುದು. ಚೆನ್ನೈ ತಂಡದಲ್ಲಿ ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಡ್ವೆನ್ ಬ್ರಾವೊ ಅವರಂತಹ ಅನುಭವಿಗಳು ಮತ್ತು ಋತುರಾಜ್ ಗಾಯಕ್ವಾಡ್, ಶಿವಂ ದುಬೆ ಮತ್ತು ರಾಜವರ್ಧನ್ ಹಂಗರ್ಗೆಕರ್ ಅವರಂತಹ ಯುವ ಪ್ರತಿಭೆಗಳೂ ಇದ್ದಾರೆ. ಆದ್ದರಿಂದ ಕಣಕ್ಕಿಳಿಯುವ ಹನ್ನೊಂದರ ಬಳಗದ ಆಯ್ಕೆ ಮಾಡುವಲ್ಲಿ ಜಡೇಜ ಯಾವ ರೀತಿ ಯೋಜನೆ ರೂಪಿಸುವರು ಎಂಬುದೇ ಈಗ ಕುತೂಹಲದ ಸಂಗತಿ. ಆಡಂ ಮಿಲ್ನೆ ವೇಗದ ಬೌಲಿಂಗ್ ವಿಭಾಗದ ಸಾರಥ್ಯ ವಹಿಸಲಿದ್ದಾರೆ. ಕ್ರೀಸ್ ಜೋರ್ಡಾನ್ ಹಾಗೂ ಆಲ್ರೌಂಡರ್ ಡ್ವೇನ್ ಬ್ರಾವೊ ಮಿಲ್ನೆಗೆ ಸಾಥ್ ನೀಡಲಿದ್ದಾರೆ.

ಇತ್ತ ಭಾರತ ಕ್ರಿಕೆಟ್ ತಂಡದ ಮುಂದಿನ ನಾಯಕನಾಗುವ ಕನಸು ಕಾಣುತ್ತಿರುವ ಶ್ರೇಯಸ್ ಅಯ್ಯರ್​ಗೆ ಇದೊಂದು ಚಿನ್ನದಂತಹ ಅವಕಾಶ. ನಾಯಕತ್ವ ಗುಣಗಳನ್ನು ಅನಾವರಣಗೊಳಿಸುವ ದೃಷ್ಟಿಯಿಂದ ಶ್ರೇಯಸ್ ಪಾಲಿಗೆ ಈ ಲೀಗ್ ವೈಯಕ್ತಿಕವಾಗಿ ಸವಾಲಾಗಿದೆ. ಬಹುತೇಕ ಹೊಸ ತಂಡವಾಗಿ ಕಣಕ್ಕಿಳಿಯಲಿದೆ. ಫಾರ್ಮ್ ಕಂಡುಕೊಳ್ಳಲು ಪರದಾಡುತ್ತಿರುವ ಅಜಿಂಕ್ಯಾ ರಹಾನೆಗೆ ಸ್ಫೋಟಿಸಲು ಉತ್ತಮ ಅವಕಾಶ ಲಭಿಸಿದೆ. ಕಳೆದ ಆವೃತ್ತಿಯ 2ನೇ ಚರಣದಲ್ಲಿ ಸ್ಫೋಟಿಸಿದ ಪರಿಣಾಮ ರಾಷ್ಟ್ರೀಯ ತಂಡದಲ್ಲೂ ಸ್ಥಾನ ಗಿಟ್ಟಿಸಿಕೊಂಡ ವೆಂಕಟೇಶ್ ಅಯ್ಯರ್ ಹಾಗೂ ರಹಾನೆ ಇನಿಂಗ್ಸ್ ಆರಂಭಿಸುವ ನಿರೀಕ್ಷೆಯಿದೆ. ಶ್ರೇಯಸ್ ಅಯ್ಯರ್, ನಿತೀಶ್ ರಾಣಾ, ಸ್ಯಾಮ್ ಬಿಲ್ಲಿಂಗ್ಸ್, ಆಂಡ್ರೆ ರಸೆಲ್ ತಂಡದ ಭರವಸೆಯ ಬ್ಯಾಟರ್‌ಗಳಾಗದ್ದಾರೆ. ಪ್ಯಾಟ್ ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ ಯುವ ಬೌಲರ್ ಶಿವಂ ಮಾವಿ ಹಾಗೂ ಉಮೇಶ್ ಯಾದವ್ ಹೆಚ್ಚಿನ ಜವಾಬ್ದಾರಿ ವಹಿಸಬೇಕಾಗಿದೆ. ಇವರಿಗೆ ಸುನಿಲ್ ನರೈನ್, ವರುಣ್ ಚಕ್ರವರ್ತಿ ಸಾಥ್ ನೀಡಬೇಕಿದೆ.

ಇನ್ನು ಬಲಾಬಲದ ವಿಚಾರಕ್ಕೆ ಬರುವುದಾದರೆ ಕೋಲ್ಕತ್ತಾ ವಿರುದ್ಧ ಚೆನ್ನೈ ಹೆಚ್ಚು ಪ್ರಾಬಲ್ಯ ಹೊಂದಿದೆ. ಈವರೆಗೆ ಈ ತಂಡಗಳ ನಡುವೆ 26 ಪಂದ್ಯಗಳು ನಡೆದಿದ್ದು, ಚೆನ್ನೈ 17ರಲ್ಲಿ ಗೆದ್ದಿದ್ದರೆ, ಕೋಲ್ಕತ್ತಾ ಕೇವಲ 8 ಪಂದ್ಯಗಳಲ್ಲಿ ಗೆಲುವನ್ನು ಕಂಡಿದೆ. ಇನ್ನು, ಕಳೆದ ಬಾರಿ ಅಂಕಿ ಅಂಶಗಳನ್ನು ಗಮನಿಸಿದ್ದಲ್ಲಿ, ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 27 ರನ್‌ಗಳಿಂದ ಕೋಲ್ಕತ್ತಾವನ್ನು ಸೋಲಿಸಿತು. ಆದರೆ, ಚೆನ್ನೈ ಐಪಿಎಲ್‌ನ ಆರಂಭಿಕ ಪಂದ್ಯದಲ್ಲಿ 12 ಬಾರಿ ಆಡಿದ್ದು, ಅದರಲ್ಲಿ 6 ರಲ್ಲಿ ಸೋತಿದೆ. ಕೋಲ್ಕತ್ತಾ 14 ಪಂದ್ಯಗಳಲ್ಲಿ 10 ಅನ್ನು ಗೆದ್ದಿದೆ. ಈ ಅಂಕಿ ಅಂಶವು ಕೋಲ್ಕತ್ತಾ ನೈಟ್ ರೈಡರ್ಸ್ ಪರವಾಗಿದೆ.

ಸಿಎಸ್​​ಕೆ ಸಂಭಾವ್ಯ ಪ್ಲೇಯಿಂಗ್ XI:

ರಿತುರಾಜ್ ಗಾಯಕ್ವಾಡ್, ರಾಬಿನ್ ಉತ್ತಪ್ಪ, ಡೆವೊನ್ ಕಾನ್ವೇ, ಅಂಬಟಿ ರಾಯುಡು, ಡ್ವೇನ್ ಬ್ರಾವೋ, ರವೀಂದ್ರ ಜಡೇಜಾ (ನಾಯಕ), ಎಂಎಸ್ ಧೋನಿ, ಶಿವಂ ದುಬೆ, ರಾಜವರ್ಧನ್ ಹಂಗೇಕರ್, ಆಡಮ್ ಮಿಲ್ನೆ, ಮಹಿಷ್ ಟೀಕ್ಷಣ.

ಕೆಕೆಆರ್ ಸಂಭಾವ್ಯ ಪ್ಲೇಯಿಂಗ್ XI:

ವೆಂಕಟೇಶ್ ಅಯ್ಯರ್, ಸ್ಯಾಮ್ ಬಿಲ್ಲಿಂಗ್ಸ್, ಶ್ರೇಯಸ್ ಅಯ್ಯರ್, ನಿತೀಶ್ ರಾಣಾ, ಶೆಲ್ಡನ್ ಜಾಕ್ಸನ್, ಆಂಡ್ರೆ ರಸೆಲ್, ಸುನಿಲ್ ನರೈನ್, ಟಿಮ್ ಸೌಥಿ, ಉಮೇಶ್ ಯಾದವ್, ಶಿವಂ ಮಾವಿ, ವರುಣ್ ಚಕ್ರವರ್ತಿ.

ಪಂದ್ಯ ಆರಂಭ: ರಾತ್ರಿ 7.30, ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ ಪ್ಲಸ್ ಹಾಟ್​ಸ್ಟಾರ್.

IPL 2022: ಬಂದೇ ಬಿಡ್ತು ಐಪಿಎಲ್: ಹೊಸ ಮಾದರಿಯ ಮಿಲಿಯನ್ ಡಾಲರ್ ಟೂರ್ನಿಗೆ ಇಂದು ಚಾಲನೆ