
ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಸೋತು ಸುಣ್ಣವಾಗಿರುವ ಪಾಕಿಸ್ತಾನ್ ವಿರುದ್ಧ ಪಾಕ್ ತಂಡದ ಮಾಜಿ ನಾಯಕ ವಾಸಿಂ ಅಕ್ರಮ್ ನಾಲಿಗೆ ಹರಿಬಿಟ್ಟಿದ್ದಾರೆ. ಟೀಮ್ ಇಂಡಿಯಾ ವಿರುದ್ದದ ಪಂದ್ಯದಲ್ಲಿ ಹೀನಾಯ ಸೋಲಿನ ಬಳಿಕ ಚಾನೆಲ್ ಚರ್ಚೆಯಲ್ಲಿ ಕಾಣಿಸಿಕೊಂಡ ಅಕ್ರಮ್, ಪಾಕಿಸ್ತಾನ್ ಆಟಗಾರರನ್ನು ಕೋತಿಗಳಿಗೆ ಹೋಲಿಸಿದ್ದಾರೆ.
ದುಬೈ ಇಂಟರ್ನ್ಯಾಷನಲ್ ಮೈದಾನದಲ್ಲಿ ನಡೆದ ಈ ಪಂದ್ಯದ ದ್ವಿತೀಯ ಇನಿಂಗ್ಸ್ ವೇಳೆ ಪಾಕಿಸ್ತಾನ್ ಆಟಗಾರರು ಬಾಳೆಹಣ್ಣು ತಿಂದಿದ್ದರು. ಟೀಮ್ ಇಂಡಿಯಾ ಬ್ಯಾಟಿಂಗ್ ವೇಳೆಯ ಪಾನೀಯ ವಿರಾಮದ ವೇಳೆ ಪಾಕ್ ಆಟಗಾರರಿಗೆ ದೊಡ್ಡ ತಟ್ಟೆಯಲ್ಲಿ ಬಾಳೆಹಣ್ಣುಗಳು ಮೈದಾನಕ್ಕೆ ಬಂದಿದ್ದವು.
ಹೀಗೆ ಪಂದ್ಯದ ನಡುವೆ ಬಾಳೆಹಣ್ಣು ತಿಂದು ಹೊಟ್ಟೆ ತುಂಬಿಸಿಕೊಂಡ ಆಟಗಾರರ ನಡೆಯನ್ನು ವಿಮರ್ಶಿಸಿದ ವಾಸಿಂ ಅಕ್ರಮ್, ಮಂಗಗಳು ಕೂಡ ಇಷ್ಟೊಂದು ಬಾಳೆಹಣ್ಣುಗಳನ್ನು ತಿನ್ನುವುದಿಲ್ಲ. ನಮ್ಮ ಆಟಗಾರರು ಮೊದಲ ಪಾನೀಯ ಬ್ರೇಕ್ ಹಾಗೂ ಎರಡನೇ ಪಾನೀಯ ಬ್ರೇಕ್ ವೇಳೆ ಅಷ್ಟೊಂದು ಬಾಳೆ ಹಣ್ಣುಗಳನ್ನು ತಿಂದಿದ್ದಾರೆ.
ನಮ್ಮ ಕಾಲದಲ್ಲಿ ಪಾಕಿಸ್ತಾನ್ ತಂಡದ ಮಾಜಿ ನಾಯಕ ಇಮ್ರಾನ್ ಖಾನ್ ಅವರು ಆಟಗಾರರು ಇಷ್ಟೊಂದು ಬಾಳೆಹಣ್ಣು ತಿನ್ನುವುದನ್ನು ನೋಡಿದ್ದರೆ, ಅಲ್ಲಿಯೇ ಅವನಿಗೆ ಪಾಠ ಕಲಿಸುತ್ತಿದ್ದರು ಎಂದು ಅಕ್ರಮ್ ಇದೇ ವೇಳೆ ಹೇಳಿದರು.
ಅಲ್ಲದೆ ಪಂದ್ಯ ನಡೆಯುವಾಗ ಆಟಗಾರರು ಇಷ್ಟೊಂದು ಬಾಳೆಹಣ್ಣುಗಳನ್ನು ತಿನ್ನುವ ಅವಶ್ಯಕತೆಯಿತ್ತಾ? ಎರಡು ಪಾನೀಯ ವಿರಾಮದ ವೇಳೆಯೂ ಪಾಕ್ ಆಟಗಾರರು ಕೋತಿಗಳಂತೆ ಬಾಳೆಹಣ್ಣು ತಿನ್ನುವತ್ತ ಗಮನಹರಿಸಿದ್ದರು ಎಂದು ವಾಸಿಂ ಅಕ್ರಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾಸಿಂ ಅಕ್ರಮ್ ಅವರ ಈ ಹೇಳಿಕೆಯು ಇದೀಗ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. ಪಾಕ್ ಆಟಗಾರರನ್ನು ಪರೋಕ್ಷವಾಗಿ ಕೋತಿಗಳಿಗೆ ಹೋಲಿಸಿರುವ ಅಕ್ರಮ್ ಅವರ ನಡೆಯನ್ನು ಅನೇಕರು ಜನಾಂಗೀಯ ನಿಂದನೆ ಎಂದು ಆರೋಪಿಸಿದ್ದಾರೆ. ಅಲ್ಲದೆ ವಾಸಿಂ ಅಕ್ರಮ್ ಈ ಬಗ್ಗೆ ಕ್ಷಮಾಪಣೆ ಕೇಳಬೇಕೆಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಅಬ್ಬರಿಸಿ ಬೊಬ್ಬಿರಿದು ವಿರಾಟ್ ಕೊಹ್ಲಿ ಬರೆದ ದಾಖಲೆಗಳು ಒಂದೆರೆಡಲ್ಲ..!
ಒಟ್ಟಿನಲ್ಲಿ ಆಟಗಾರರ ಪ್ರದರ್ಶನದ ವೇಳೆ ವಾಸಿಂ ಅಕ್ರಮ್ ನೀಡಿರುವ ಹೇಳಿಕೆಯು ಇದೀಗ ಭಾರೀ ಚರ್ಚೆಗೆ ಕಾರಣವಾಗಿದ್ದು, ಈ ಬಗ್ಗೆ ಪಾಕ್ ತಂಡದ ಮಾಜಿ ವೇಗಿ ಏನು ಸ್ಪಷ್ಟನೆ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.