
ಐಪಿಎಲ್ ಸೀಸನ್ 15 ನಲ್ಲಿ KL ರಾಹುಲ್ ನಾಯಕತ್ವದ ಹೊಸ ಫ್ರಾಂಚೈಸಿ ಲಕ್ನೋ ಸೂಪರ್ ಜೈಂಟ್ಸ್ ಉತ್ತಮ ಪ್ರದರ್ಶನವನ್ನು ಮುಂದುವರೆಸಿದೆ. ಐಪಿಎಲ್‌ನ 45ನೇ ಪಂದ್ಯದಲ್ಲಿ ಸೂಪರ್ ಜೈಂಟ್ಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿ ಏಳನೇ ಗೆಲುವು ದಾಖಲಿಸಿದೆ. ಲಕ್ನೋ ತಂಡ 10 ತಂಡಗಳ ಅಂಕಪಟ್ಟಿಯಲ್ಲಿ 14 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ತಲುಪಿದೆ. ಹೀಗಾಗಿ ಪ್ಲೇಆಫ್‌ಗೆ ಪ್ರವೇಶಿಸುವುದು ಬಹುತೇಕ ಖಚಿತ ಎನ್ನಬಹುದು. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ ಜಯ ಬೆನ್ನಲ್ಲೇ ಲಕ್ನೋ ತಂಡದ ಭರ್ಜರಿಯಾಗಿ ಗೆಲುವನ್ನು ಆಚರಿಸಿದೆ.
ಈ ಸಂಭ್ರಮದ ವಿಡಿಯೋವನ್ನು ಲಕ್ನೋ ಸೂಪರ್ ಜೈಂಟ್ಸ್ ತನ್ನ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಎಲ್ಲಾ ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿ ಹಾಡಿನೊಂದಿಗೆ ನೃತ್ಯ ಮಾಡುತ್ತಿರುವುದು ಕಾಣಬಹುದು. ಕೃನಾಲ್ ಪಾಂಡ್ಯ ಸೇರಿದಂತೆ ಹಲವು ಆಟಗಾರರ ಕೈಯಲ್ಲಿ ಮೊಬೈಲ್ ಹಿಡಿದು ಸಾಹಿತ್ಯದೊಂದಿಗೆ ಹಾಡುತ್ತಿದ್ದಾರೆ. ಈ ಸಂಭ್ರಮದಲ್ಲಿ ನಾಯಕ ಕೆಎಲ್ ರಾಹುಲ್ ಸೇರಿದಂತೆ ವೇಗಿ ಅವೇಶ್ ಖಾನ್ ಕೂಡ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ನ ಈ ವಿಡಿಯೋಗೆ ಅಭಿಮಾನಿಗಳು ಕೂಡ ಕಾಮೆಂಟ್ ಮಾಡುತ್ತಿದ್ದಾರೆ. ಕೃನಾಲ್ ಪಾಂಡ್ಯ ಪತ್ನಿ ಪಂಖುರಿ ಶರ್ಮಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಅದೇ ಸಮಯದಲ್ಲಿ ತಂಡದ ಮೆಂಟರ್ ಗೌತಮ್ ಗಂಭೀರ್ ಮುಖದಲ್ಲಿ ಅನೇಕರು ನಗುವನ್ನು ಹುಡುಕಿದ್ದಾರೆ. ‘ಗೌತಮ್ ವಿಜಯದ ನಂತರವೂ ಗಂಭೀರ’ ಎಂದು ಕೆಲವರು ಕಾಲೆಳೆದಿದ್ದಾರೆ.
ಇನ್ನು ಈ ಪಂದ್ಯದ ಬಗ್ಗೆ ಹೇಳುವುದಾದರೆ, ಲಕ್ನೋ ಸೂಪರ್ ಜೈಂಟ್ಸ್ ಮೊದಲು ಬ್ಯಾಟಿಂಗ್ ಮಾಡಿ 3 ವಿಕೆಟ್‌ಗೆ 195 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 189 ರನ್ ಗಳಿಸಿ ಸೋಲೋಪ್ಪಿಕೊಂಡಿತು. ಸೂಪರ್ ಜೈಂಟ್ಸ್ ಪರ ನಾಯಕ ಕೆಎಲ್ ರಾಹುಲ್ 77 ರನ್ ಗಳಿಸಿದರೆ, ದೀಪಕ್ ಹೂಡಾ 52 ರನ್ ಕೊಡುಗೆ ನೀಡಿದರು. ಡೆಲ್ಲಿ ಪರ ಶಾರ್ದೂಲ್ ಠಾಕೂರ್ ಮೂರು ವಿಕೆಟ್ ಪಡೆದರು. ಡೆಲ್ಲಿ ಪರ ನಾಯಕ ರಿಷಬ್ ಪಂತ್ 44 ರನ್ ಗಳಿಸಿದರು. ಸೂಪರ್ ಜೈಂಟ್ಸ್ ಪರ ಮೊಹ್ಸಿನ್ ಖಾನ್ ನಾಲ್ಕು ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.