ವಿಡಿಯೋ ನೋಡಿ: ಧೋನಿ… ಧೋನಿ, ಅಭಿಮಾನಿಗಳ ಘೋಷಣೆಯ ಅಬ್ಬರಕ್ಕೆ ಕಿವಿ ಮುಚ್ಚಿದ ಆಂಡ್ರೆ ರಸೆಲ್!

ಕೋಲ್ಕತ್ತಾ ನೈಟ್​ ರೈಡರ್ಸ್​ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮಧ್ಯೆ ಸೋಮವಾರ ರಾತ್ರಿ ನಡೆದ ಐಪಿಎಲ್ ಪಂದ್ಯ ಹಲವು ಅಚ್ಚರಿಯ, ತಮಾಷೆಯ ಕ್ಷಣಗಳಿಗೂ ಸಾಕ್ಷಿಯಾಯಿತು. ಒಂದೆಡೆ, ರವೀಂದ್ರ ಜಡೇಜಾ ಅಭಿಮಾನಿಗಳನ್ನು ಕೀಟಲೆ ಮಾಡಿದರೆ, ಧೋನಿ ಅಭಿಮಾನಿಗಳ ಅಬ್ಬರಕ್ಕೆ ಆಂಡ್ರೆ ರಸೆಲ್ ಕಿವಿ ಮುಚ್ಚಿದ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಆ ವಿಡಿಯೋ ಇಲ್ಲಿದೆ ನೋಡಿ.

ವಿಡಿಯೋ ನೋಡಿ: ಧೋನಿ... ಧೋನಿ, ಅಭಿಮಾನಿಗಳ ಘೋಷಣೆಯ ಅಬ್ಬರಕ್ಕೆ ಕಿವಿ ಮುಚ್ಚಿದ ಆಂಡ್ರೆ ರಸೆಲ್!
ಆಂಡ್ರೆ ರಸೆಲ್ & ಧೋನಿ

Updated on: Apr 09, 2024 | 11:42 AM

ಚೆನ್ನೈನ (Chennai) ಎಂಎ ಚಿದಂಬರಂ ಸ್ಟೇಡಿಯಂನಲ್ಲಿ (Chidambaram Stadium) ಸೋಮವಾರ ರಾತ್ರಿ ನಡೆದ ಐಪಿಎಲ್ 22ನೇ ಪಂದ್ಯದಲ್ಲಿ (IPL Match) ಕೋಲ್ಕತ್ತಾ ನೈಟ್​ ರೈಡರ್ಸ್​ (KKR) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (CSK) 7 ವಿಕೆಟ್​​ಗಳ ಭರ್ಜರಿ ಗೆಲವು ಸಾಧಿಸಿತು. ಎಂದಿನಂತೆಯೇ, ಪಂದ್ಯದ ಕೊನೆಯ ಹಂತದಲ್ಲಿ ಎಂಎಸ್​ ಧೋನಿ ಬ್ಯಾಟಿಂಗ್​ಗೆ ಕ್ರೀಸಿಗೆ ಬರುವಾಗ ಚೆನ್ನೈ ತಂಡದ ಅಭಿಮಾನಿಗಳ ಹರ್ಷೋದ್ಘಾರ ಮುಗಿಲುಮುಟ್ಟಿತು. ಧೋನಿ, ಧೋನಿ ಘೋಷಣೆಗಳ ಅಬ್ಬರ ಮುಗಿಲುಮುಟ್ಟಿದರೆ, ಕಿವಿಗಡಚಿಕ್ಕುವ ಸದ್ದು ತಡೆಯಲಾರದೆ ಕೆಕೆಆರ್​​ನ ಆಂಡ್ರೆ ರಸೆಲ್ ಕಿವಿ ಮುಚ್ಚಿಕೊಂಡ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಮೊದಲಿಗೆ, ಶಿವಂ ದುಬೆ ವಿಕೆಟ್ ಪತನವಾದಾಗ ಎಂಎಸ್ ಧೋನಿ ಮೈದಾನಕ್ಕೆ ಪ್ರವೇಶಿಸಲು ಮುಂದಾಗಬೇಕಿತ್ತು. ಅಷ್ಟರಲ್ಲಿ, ಆಲ್​ರೌಂಡರ್ ರವೀಂದ್ರ ಜಡೇಜಾ ಕ್ರೀಸಿಗೆ ಬರಲು ಮುಂದಾದವರಂತೆ ನಟಿಸಿ ಅಭಿಮಾನಿಗಳಿಗೆ ಶಾಕ್ ನೀಡಿದರು. ಜಡೇಜಾ ಕೀಟಲೆಗೆ ಪ್ರೇಕ್ಷಕರು ಒಂಡು ಕ್ಷಣ ಶಾಕ್​ಗೆ ಒಳಗಾದರೆ, ನಂತರ ಧೋನಿ ತಮ್ಮ ಎಂದಿನ ಶೈಲಿಯಲ್ಲಿ ಗ್ಲೌಸ್ ಸರಿಪಡಿಸಿಕೊಳ್ಳುತ್ತಾ ಮೈದಾನಕ್ಕೆ ಎಂಟ್ರಿ ನೀಡಿದರು.

ಕಿವಿ ಮುಚ್ಚಿಕೊಂಡ ರಸೆಲ್: ವಿಡಿಯೋ ನೋಡಿ


ಜಡೇಜಾ ಮೈದಾನ ಪ್ರವೇಶಿಸುವಂತೆ ನಟಿಸಿ ಹಿಂದೆ ಬಂದ ನಂತರ ಎಂದಿನ ಗತ್ತಿನಲ್ಲಿ ಧೋನಿ ಕ್ರೀಸ್​​ನತ್ತ ತೆರಳಿದರು. ಇದೇ ವೇಳೆ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳು ‘ಧೋನಿ… ಧೋನಿ..’ ಎಂದು ಅಬ್ಬರದಿಂದ ಘೋಷಣೆಗಳನ್ನು ಕೂಗತೊಡಗಿದರು. ಇದೇ ವೇಳೆ ಬೌಂಡರಿ ಲೈನ್ ಬಳಿ ಫೀಲ್ಡಿಂಗ್​ ಮಾಡುತ್ತಿದ್ದ ರಸೆಲ್ ಕಿವಿ ಮುಚ್ಚಿಕೊಂಡರು.

ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 137 ರನ್ ಗಳಿಸಿತು. ಕೆಕೆಆರ್ ಪರ ಶ್ರೇಯಸ್ ಅಯ್ಯರ್ 34 ರನ್ ಹಾಗೂ ನರೈನ್ 27 ರನ್ ಗಳಿಸಿದ್ದು ಬಿಟ್ಟರೆ ಉಳಿದವರ ಬ್ಯಾಟ್​​ನಿಂದ ಹೆಚ್ಚು ರನ್​ ಬರಲಿಲ್ಲ.

ಧೋನಿ ಕ್ರೀಸ್​ಗೆ ಬಂದ ಕ್ಷಣ


ಗೆಲುವಿನ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್​ ಕಿಂಗ್ಸ್​ 17.4 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 141 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಋತುರಾಜ್ ಗಾಯಕವಾಡ್ 67 ರನ್ ಗಳಿಸಿ ಅಜೇಯರಾಗುಳಿದರು. ಎಂಎಸ್​ ಧೋನಿ ಕೊನೇ ಹಂತದಲ್ಲಿ ಕ್ರೀಸಿಗೆ ಆಗಮಿಸಿ ಅಭಿಮಾನಿಗಳನ್ನು ಪುಳಕಿತರನ್ನಾಗಿಸಿದರು. 3 ಬಾಲ್​ಗಳನ್ನೆದುರಿಸಿದ ಧೋನಿ 1 ರನ್ ಗಳಿಸಿ ಅಜೇಯರಾಗುಳಿದರು.

ಐಪಿಎಲ್ ಸಂಬಂಧಿತ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:41 am, Tue, 9 April 24