
ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯ 4ನೇ ಪಂದ್ಯವು ಕಾರಣಾಂತರಗಳಿಂದ ರದ್ದಾಗಿತ್ತು. ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಈ ಪಂದ್ಯದಲ್ಲಿ ಇಂಡಿಯಾ ಚಾಂಪಿಯನ್ಸ್ ಹಾಗೂ ಪಾಕಿಸ್ತಾನ್ ಚಾಂಪಿಯನ್ಸ್ ತಂಡಗಳು ಮುಖಾಮುಖಿಯಾಗಬೇಕಿತ್ತು. ಆದರೆ ಪಂದ್ಯದ ಆರಂಭಕ್ಕೂ ಒಂದು ದಿನ ಮುಂಚಿತವಾಗಿ ಇಂಡಿಯಾ ಚಾಂಪಿಯನ್ಸ್ ತಂಡದ ಆಟಗಾರರಾದ ಇರ್ಫಾನ್ ಪಠಾಣ್, ಹರ್ಭಜನ್ ಸಿಂಗ್, ಯೂಸುಫ್ ಪಠಾಣ್, ಸುರೇಶ್ ರೈನಾ ಹಾಗೂ ಶಿಖರ್ ಧವನ್ ಪಾಕ್ ವಿರುದ್ಧ ಕಣಕ್ಕಿಳಿಯುವುದಿಲ್ಲ ಎಂದು ತಿಳಿಸಿದ್ದರು. ಇದರಿಂದಾಗಿ ಭಾರತ-ಪಾಕಿಸ್ತಾನ್ ನಡುವಣ ಪಂದ್ಯವನ್ನು ರದ್ದುಗೊಳಿಸಲಾಯಿತು.
ಇದೀಗ ಈ ರದ್ದಾದ ಪಂದ್ಯದ 2 ಅಂಕಗಳಿಗಾಗಿ ಪಾಕಿಸ್ತಾನ್ ಚಾಂಪಿಯನ್ಸ್ ತಂಡ ಹೊಸ ಬೇಡಿಕೆ ಮುಂದಿಟ್ಟಿದೆ. ಸಾಮಾನ್ಯವಾಗಿ ಪಂದ್ಯ ರದ್ದಾದರೆ ಉಭಯ ತಂಡಗಳು ಒಂದೊಂದು ಅಂಕಗಳನ್ನು ಹಂಚಿಕೊಳ್ಳುವುದು ವಾಡಿಕೆ. ಆದರೆ ಈ ಪಂದ್ಯದಲ್ಲಿ ನಾವು ಕಣಕ್ಕಿಳಿಯಲು ಸಿದ್ಧರಿದ್ದೆವು. ಅತ್ತ ಇಂಡಿಯಾ ಚಾಂಪಿಯನ್ಸ್ ತಂಡ ಪಂದ್ಯದಿಂದ ಹಿಂದೆ ಸರಿದಿರುವುದು. ಹೀಗಾಗಿ ನಮಗೆ ಸಂಪೂರ್ಣ ಅಂಕಗಳನ್ನು ನೀಡಬೇಕೆಂದು ಪಾಕಿಸ್ತಾನ್ ಚಾಂಪಿಯನ್ಸ್ ತಂಡದ ಮಾಲೀಕರಾದ ಕಾಮಿಲ್ ಖಾನ್ ಹೊಸ ಬೇಡಿಕೆ ಮುಂದಿಟ್ಟಿದ್ದಾರೆ.
ಕಾಮಿಲ್ ಖಾನ್ ಅವರ ಪ್ರಕಾರ, ಇಂಡಿಯಾ ಚಾಂಪಿಯನ್ಸ್ ಹಾಗೂ ಪಾಕಿಸ್ತಾನ್ ಚಾಂಪಿಯನ್ಸ್ ನಡುವಣ ಪಂದ್ಯ ರದ್ದಾಗಲು ಮುಖ್ಯ ಕಾರಣ ಭಾರತೀಯ ಆಟಗಾರರು. ಅವರು ಮ್ಯಾಚ್ ಆಡಲ್ಲ ಎಂದಿರುವ ಕಾರಣ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಇಲ್ಲಿ ಪಾಕಿಸ್ತಾನ್ ತಂಡದ ಯಾವುದೇ ತಪ್ಪಿಲ್ಲ. ಮಳೆ ಅಥವಾ ಇನ್ನಿತರೆ ಕಾರಣಗಳಿಂದಾಗಿ ಮ್ಯಾಚ್ ಕ್ಯಾನ್ಸಲ್ ಮಾಡಲಾಗಿಲ್ಲ.
ಇಂಡಿಯಾ ಚಾಂಪಿಯನ್ಸ್ ತಂಡವು ಪಂದ್ಯದಿಂದ ಹಿಂದೆ ಸರಿದಿರುವ ಕಾರಣ ಪಂದ್ಯವನ್ನು ರದ್ದುಗೊಳಿಸಲಾಗಿದೆ ಅಷ್ಟೇ. ಹೀಗಾಗಿ ಪಾಕಿಸ್ತಾನ್ ಚಾಂಪಿಯನ್ಸ್ ತಂಡಕ್ಕೆ ಸಂಪೂರ್ಣ ಅಂಕಗಳನ್ನು ನೀಡಬೇಕು ಎಂದು ಕಾಮಿಲ್ ಖಾನ್ ಹೇಳಿದ್ದಾರೆ. ಇತ್ತ ಪಾಕಿಸ್ತಾನ್ ಚಾಂಪಿಯನ್ಸ್ ತಂಡವು 2 ಅಂಕಗಳಿಗೆ ಬೇಡಿಕೆ ಇಟ್ಟಿರುವುದು ಇದೀಗ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯ ಆಯೋಜಕರ ಹೊಸ ಚಿಂತೆಗೆ ಕಾರಣವಾಗಿದೆ.
ಏಕೆಂದರೆ ಮ್ಯಾಚ್ ರದ್ದತಿಯಿಂದಾಗಿ ಉಭಯ ತಂಡಗಳಿಗೆ ಒಂದೊಂದು ಅಂಕಗಳನ್ನು ನೀಡಲು ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಆಯೋಜಕರು ನಿರ್ಧರಿಸಿದ್ದರು. ಆದರೀಗ ಇಂಡಿಯಾ ಚಾಂಪಿಯನ್ಸ್ ತಂಡದೊಂದಿಗೆ ಅಂಕವನ್ನು ಹಂಚಿಕೊಳ್ಳಲು ನಾವು ಸಿದ್ಧರಿಲ್ಲ ಎಂದು ಪಾಕಿಸ್ತಾನ್ ಚಾಂಪಿಯನ್ಸ್ ಹೊಸ ವರಸೆ ಶುರು ಮಾಡಿದ್ದಾರೆ. ಹೀಗಾಗಿ ಈ ಟೂರ್ನಿಯ ವಿವಾದ ಯಾವ ಮಟ್ಟಕ್ಕೆ ಹೋಗಿ ತಲುಪಲಿದೆ ಎಂಬುದೇ ಈಗ ದೊಡ್ಡ ಪ್ರಶ್ನೆ.
ಇಂಡಿಯಾ ಚಾಂಪಿಯನ್ಸ್ ಹಾಗೂ ಪಾಕಿಸ್ತಾನ್ ಚಾಂಪಿಯನ್ಸ್ ನಡುವಣ ಪಂದ್ಯವು ಜುಲೈ 20 ರಂದು ನಡೆಯಬೇಕಿತ್ತು. ಎಡ್ಜ್ಬಾಸ್ಟನ್ ಸ್ಟೇಡಿಯಂನಲ್ಲಿ ನಿಗದಿಯಾಗಿದ್ದ ಈ ಪಂದ್ಯವನ್ನು ಭಾನುವಾರ ಬೆಳಿಗ್ಗೆ ರದ್ದುಗೊಳಿಸಲಾಯಿತು. ಇದಕ್ಕೆ ಮುಖ್ಯ ಕಾರಣ ಭಾರತೀಯ ಆಟಗಾರರು ಹಿಂದೆ ಸರಿದಿರುವುದು. ಹೀಗೆ ಪಂದ್ಯದಿಂದ ಹಿಂದೆ ಸರಿಯಲು ಕಾರಣ ಏಪ್ರಿಲ್ 22 ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಪ್ರವಾಸಿಗರ ಮೇಲಿನ ಭಯೋತ್ಪಾದಕರ ದಾಳಿ.
ಇದನ್ನೂ ಓದಿ: ಬರೋಬ್ಬರಿ 13 ಸಿಕ್ಸ್: ಟಿ10 ಪಂದ್ಯದಲ್ಲಿ ತೂಫಾನ್ ಸೆಂಚುರಿ ಸಿಡಿಸಿದ ಜೋಶ್
ಪಾಕ್ ಪ್ರೇರಿತ ಉಗ್ರರ ದುಷ್ಕೃತ್ಯವನ್ನು ಖಂಡಿಸಿ ಅನೇಕರು ಪಾಕಿಸ್ತಾನ್ ವಿರುದ್ಧ ಭಾರತೀಯರು ಯಾವುದೇ ಪಂದ್ಯವಾಡಬಾರದು ಸೋಷಿಯಲ್ ಮೀಡಿಯಾದಲ್ಲಿ ಆಗ್ರಹಿಸಿದ್ದರು. ಇದಕ್ಕೆ ಬೆಂಬಲ ವ್ಯಕ್ತಪಡಿಸಿ ಇರ್ಫಾನ್ ಪಠಾಣ್, ಹರ್ಭಜನ್ ಸಿಂಗ್, ಯೂಸುಫ್ ಪಠಾಣ್, ಸುರೇಶ್ ರೈನಾ ಹಾಗೂ ಶಿಖರ್ ಧವನ್ ಪಾಕ್ ವಿರುದ್ಧ ಕಣಕ್ಕಿಳಿಯುವುದಿಲ್ಲ ಎಂದು ತಿಳಿಸಿದ್ದರು. ಇದರ ಬೆನ್ನಲ್ಲೇ ಇಂಡಿಯಾ ಚಾಂಪಿಯನ್ಸ್ ತಂಡದ ಇತರೆ ಆಟಗಾರರು ಕೂಡ ಹಿಂದೆ ಸರಿಯುವ ಸೂಚನೆ ನೀಡಿದ್ದರು. ಹೀಗಾಗಿ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯ ಆಯೋಜಕರು ಪಂದ್ಯವನ್ನೇ ರದ್ದುಗೊಳಿಸಲು ನಿರ್ಧರಿಸಿದ್ದಾರೆ.
Published On - 8:53 am, Tue, 22 July 25