ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯರ ಕೆರಿಬಿಯನ್ ಪ್ರೀಮಿಯರ್ ಲೀಗ್ 2024 ರ ಫೈನಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಒಡೆತನದ ಬಾರ್ಬಡೋಸ್ ರಾಯಲ್ಸ್ ತಂಡ, ಕೆಕೆಆರ್ ಒಡೆತನದ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಆಗಸ್ಟ್ 29 ರಂದು ನಡೆದ ಈ ರೋಚಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟ್ರಿನ್‌ಬಾಗೊ ತಂಡ ಕೇವಲ 94 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಬಾರ್ಬಡೋಸ್ ತಂಡ ಇನ್ನು 30 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ ಕಳೆದುಕೊಂಡು ಜಯದ ನಗೆಬೀರಿತು.
ಬಾರ್ಬಡೋಸ್ನ ಈ ಐತಿಹಾಸಿಕ ಗೆಲುವಿನಲ್ಲಿ ಚಾಮರಿ ಅಟಪಟ್ಟು ಮತ್ತು ಅಲಿಯಾ ಅಲ್ಲಿನ್ ಕೊಡುಗೆ ಪ್ರಮುಖವಾಗಿತ್ತು. ಪಂದ್ಯದಲ್ಲಿ ಬಾರ್ಬಡೋಸ್ ನಾಯಕ ಹೇಲಿ ಮ್ಯಾಥ್ಯೂಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಟ್ರಿನ್‌ಬಾಗೊ ತಂಡ ಆಲಿಯಾ ಅವರ ಮಾರಕ ದಾಳಿಯ ಮುಂದೆ ಪೆವಿಲಿಯನ್ ಪರೇಡ್ ನಡೆಸಿತು. ಇಡೀ ತಂಡ ಕೇವಲ 93 ರನ್‌ಗಳಿಗೆ ಇನ್ನಿಂಗ್ಸ್ ಮುಗಿಸಿತು. ಆಲಿಯಾ 4 ಓವರ್‌ಗಳಲ್ಲಿ ಕೇವಲ 21 ರನ್ ನೀಡಿ 4 ವಿಕೆಟ್ ಪಡೆದರು. ನಾಯಕ ಹ್ಯಾಲಿ ಮ್ಯಾಥ್ಯೂಸ್ ಕೂಡ ಅತ್ಯುತ್ತಮ ಬೌಲಿಂಗ್ ಮಾಡಿ 4 ಓವರ್‌ಗಳಲ್ಲಿ ಕೇವಲ 13 ರನ್ ನೀಡಿ 2 ವಿಕೆಟ್ ಪಡೆದರು.
-Champions of WCPL 2024
-Champions of WCPL 2023BACK TO BACK TROPHIES FOR BARBADOS ROYALS. pic.twitter.com/mbFotfLekC
— Rajesh Gaonkar (@GaonkarRajesh1) August 30, 2024
ಎರಡನೇ ಇನ್ನಿಂಗ್ಸ್‌ನಲ್ಲಿ 94 ರನ್‌ಗಳನ್ನು ಬೆನ್ನಟ್ಟುವುದು ಸಹ ಬಾರ್ಬಡೋಸ್ ತಂಡಕ್ಕೆ ಕಷ್ಟಕರವಾಯಿತು. ಆದರೆ ಆ ನಂತರ ಇನ್ನಿಂಗ್ಸ್ ನಿಭಾಯಿಸಿದ ಅನುಭವಿ ಬ್ಯಾಟ್ಸ್‌ಮನ್ ಚಾಮರಿ ಅಟಪಟ್ಟು 47 ಎಸೆತಗಳಲ್ಲಿ ಅಜೇಯ 39 ರನ್ ಗಳಿಸಿ ತಮ್ಮ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಮೊದಲ ವಿಕೆಟ್‌ಗೆ 48 ರನ್‌ಗಳ ಜೊತೆಯಾಟವಿದ್ದರೂ, ಆ ಬಳಿಕ ತಂಡ ಒಂದರ ಹಿಂದೆ ಒಂದರಂತೆ ವಿಕೆಟ್ ಕಳೆದುಕೊಂಡಿತು. ಹೀಗಾಗಿ ಮುಂದಿನ 37 ರನ್ ಗಳಿಸುವಷ್ಟರಲ್ಲಿ ತಂಡವು 5 ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರ ಹೊರತಾಗಿಯೂ ಚಾಮರಿ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಪಂದ್ಯವನ್ನು ಮುಗಿಸಿದರು.
ಬಾರ್ಬಡೋಸ್ ನಾಯಕಿ ಹೇಲಿ ಮ್ಯಾಥ್ಯೂಸ್ ಇಡೀ ಪಂದ್ಯಾವಳಿಯಲ್ಲಿ ಪ್ರಾಬಲ್ಯ ಸಾಧಿಸಿದರು. ಚೆಂಡು ಮತ್ತು ಬ್ಯಾಟ್ ಎರಡರಲ್ಲೂ ಮಿಂಚಿದ ಅವರು, ಇಡೀ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಎರಡನೇ ಬ್ಯಾಟರ್ ಎನಿಸಿಕೊಂಡರು. ಆಡಿದ 4 ಪಂದ್ಯಗಳಲ್ಲಿ 134 ರನ್ ಕಲೆಹಾಕಿದ ಮ್ಯಾಥ್ಯೂಸ್, ಬೌಲಿಂಗ್ನಲ್ಲೂ ಗರಿಷ್ಠ 11 ವಿಕೆಟ್ ಪಡೆದರು. ಈ ಅದ್ಭುತ ಪ್ರದರ್ಶನಕ್ಕಾಗಿ ಅವರು ಸರಣಿಯ ಆಟಗಾರ್ತಿಯಾಗಿ ಆಯ್ಕೆಯಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:09 pm, Fri, 30 August 24