
ಮಂಗಳವಾರ (ಜೂನ್ 3) ನಡೆಯಲಿರುವ ಐಪಿಎಲ್ 2025 ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಪಂಜಾಬ್ ಕಿಂಗ್ಸ್ (PBKS) ತಂಡವನ್ನು ಎದುರಿಸಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಜರುಗಲಿರುವ ಈ ಪಂದ್ಯವನ್ನು ನಾವು ವಿರಾಟ್ ಕೊಹ್ಲಿಗಾಗಿ ಗೆಲ್ಲಲು ಪ್ರಯತ್ನಿಸುತ್ತೇವೆ ಎಂದು ಆರ್ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಹೇಳಿದ್ದಾರೆ.
ಫೈನಲ್ ಪಂದ್ಯದ ಮುನ್ನಾದಿನ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ರಜತ್ ಪಾಟಿದಾರ್, ಈ ಬಾರಿ ನಾವು ಐಪಿಎಲ್ ಟ್ರೋಫಿ ಗೆಲ್ಲಲು ಪ್ರಯತ್ನಿಸುತ್ತೇವೆ. ವಿರಾಟ್ ಕೊಹ್ಲಿಗಾಗಿ ಕಪ್ ಗೆಲ್ಲುವುದು ನಮ್ಮೆಲ್ಲರ ಗುರಿ ಎಂದಿದ್ದಾರೆ. ಈ ಮೂಲಕ ಕಿಂಗ್ ಕೊಹ್ಲಿಯ 18 ವರ್ಷಗಳ ಕಾಯುವಿಕೆಗೆ ಇತಿಶ್ರೀ ಹಾಡಲು ಆರ್ಸಿಬಿ ತಂಡದ ಪ್ಲ್ಯಾನ್ ರೂಪಿಸಿದೆ ಎಂಬ ವಿಚಾರವನ್ನು ರಜತ್ ಪಾಟಿದಾರ್ ಬಹಿರಂಗಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಈ ಹಿಂದೆ ಮೂರು ಬಾರಿ ಫೈನಲ್ ಆಡಿದ್ದರು. 2009 ರಲ್ಲಿ ಅನಿಲ್ ಕುಂಬ್ಳೆ ನಾಯಕತ್ವದಲ್ಲಿ ಫೈನಲ್ ಆಡಿದ್ದ ಕೊಹ್ಲಿ, 2011 ರಲ್ಲಿ ಡೇನಿಯಲ್ ವೆಟ್ಟೋರಿ ಸಾರಥ್ಯದಲ್ಲಿ ಅಂತಿಮ ಪಂದ್ಯವಾಡಿದ್ದರು. ಇದಾದ ಬಳಿಕ 2016 ರಲ್ಲಿ ತಮ್ಮದೇ ನಾಯಕತ್ವದಲ್ಲಿ ವಿರಾಟ್ ಕೊಹ್ಲಿ ಫೈನಲ್ನಲ್ಲಿ ಕಣಕ್ಕಿಳಿದಿದ್ದರು. ಇದೀಗ ನಾಲ್ಕನೇ ಬಾರಿ ಫೈನಲ್ ಆಡಲು ಕಿಂಗ್ ಕೊಹ್ಲಿ ಸಜ್ಜಾಗಿದ್ದಾರೆ.
ಕಳೆದ 17 ವರ್ಷಗಳಿಂದ ಐಪಿಎಲ್ ಟ್ರೋಫಿಗಾಗಿ ಕಾಯುತ್ತಿರುವ ಕೊಹ್ಲಿಗಾಗಿ ನಾವು ಟ್ರೋಫಿ ಗೆಲ್ಲುವ ವಿಶ್ವಾಸವಿದೆ. ಅದಕ್ಕಾಗಿ ನಾವು ಪ್ರಯತ್ನಿಸಲಿದ್ದೇವೆ ಎಂದು ರಜತ್ ಪಾಟಿದಾರ್ ಹೇಳಿದ್ದಾರೆ. ಈ ಮೂಲಕ ಕೊಹ್ಲಿಯ ಐಪಿಎಲ್ ಟ್ರೋಫಿ ಬರವನ್ನು ನೀಗಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಆರ್ಸಿಬಿ ನಾಯಕ.
ಇದೇ ವೇಳೆ ಗಾಯದ ಕಾರಣ ಕಳೆದ ಎರಡು ಪಂದ್ಯಗಳಿಂದ ಹೊರಗುಳಿದಿರುವ ಆರ್ಸಿಬಿ ತಂಡದ ಸ್ಟಾರ್ ಆಲ್ರೌಂಡರ್ ಟಿಮ್ ಡೇವಿಡ್ ಬಗ್ಗೆ ಕೂಡ ಕೇಳಲಾಯಿತು. ಈ ಪ್ರಶ್ನೆಗೆ ಉತ್ತರಿಸಿದ ರಜತ್ ಪಾಟಿದಾರ್, ಆ ಬಗ್ಗೆ ವೈದ್ಯರು ನಿಗಾವಹಿಸಿದ್ದಾರೆ. ಇಂದು ಸಂಜೆ ಟಿಮ್ ಡೇವಿಡ್ ಆಡುತ್ತಾರೊ ಇಲ್ಲವೊ ಎಂಬುದು ತಿಳಿಯಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: IPL 2025: ಫೈನಲ್ ಪಂದ್ಯಕ್ಕೂ ಮುನ್ನ RCB ತಂಡಕ್ಕೆ ಬಿಗ್ ಶಾಕ್: ಪ್ರಮುಖ ಆಟಗಾರ ಡೌಟ್
ಅಂದರೆ ಟಿಮ್ ಡೇವಿಡ್ ವಿಷಯದಲ್ಲಿ ಮಂಗಳವಾರ ಸಂಜೆಯವರೆಗೆ ಕಾದು ನೋಡಲು ಆರ್ಸಿಬಿ ನಿರ್ಧರಿಸಿದೆ. ಅದರಂತೆ ಇಂದು ಸಂಜೆ ಅವರು ಆಡಲು ಫಿಟ್ ಆಗಿರುವುದು ಕಂಡು ಬಂದರೆ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆಯಲಿದ್ದಾರೆ. ಇಲ್ಲದಿದ್ದರೆ, ಟಿಮ್ ಡೇವಿಡ್ ಬದಲಿಗೆ ಲಿಯಾಮ್ ಲಿವಿಂಗ್ಸ್ಟೋನ್ ಕಣಕ್ಕಿಳಿಯುವುದು ಖಚಿತ.