ರಣರೋಚಕ ಪಂದ್ಯದಲ್ಲಿ ಪಾಕ್ ಪಡೆಯನ್ನು ಬಗ್ಗು ಬಡಿದ ವೆಸ್ಟ್ ಇಂಡೀಸ್

West Indies vs Pakistan: ಪಾಕಿಸ್ತಾನ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ದ್ವಿತೀಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಗೆಲುವು ದಾಖಲಿಸಿದೆ. ಇದಕ್ಕೂ ಮುನ್ನ ನಡೆದ ಮೊದಲ ಟಿ20 ಪಂದ್ಯದಲ್ಲಿ ಪಾಕಿಸ್ತಾನ್ ತಂಡ 14 ರನ್​ಗಳ ಜಯ ಸಾಧಿಸಿತ್ತು. ಇದೀಗ ವೆಸ್ಟ್ ಇಂಡೀಸ್ ದ್ವಿತೀಯ ಪಂದ್ಯದಲ್ಲಿ 2 ವಿಕೆಟ್​ಗಳ ಗೆಲುವು ದಾಖಲಿಸಿದೆ. 

ರಣರೋಚಕ ಪಂದ್ಯದಲ್ಲಿ ಪಾಕ್ ಪಡೆಯನ್ನು ಬಗ್ಗು ಬಡಿದ ವೆಸ್ಟ್ ಇಂಡೀಸ್
Wi Vs Pak

Updated on: Aug 03, 2025 | 10:00 AM

ಸತತ ಸೋಲುಗಳಿಂದ ಕಂಗೆಟ್ಟಿದ್ದ ವೆಸ್ಟ್ ಇಂಡೀಸ್ ತಂಡವು ಕೊನೆಗೂ ಗೆಲುವಿನ ಲಯಕ್ಕೆ ಮರಳಿದೆ. ಫ್ಲೋರಿಡಾದ ಸಿಬಿಆರ್​ ಸ್ಟೇಡಿಯಂನಲ್ಲಿ ನಡೆದ ಪಾಕಿಸ್ತಾನ್ ವಿರುದ್ಧ ದ್ವಿತೀಯ ಟಿ20 ಪಂದ್ಯದಲ್ಲಿ ವಿಂಡೀಸ್ ಪಡೆ 2 ವಿಕೆಟ್​ಗಳ ರೋಚಕ ಜಯ ಸಾಧಿಸಿದೆ.  ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಾಕ್ ಪಡೆ ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 21 ರನ್​ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂವರು ಬ್ಯಾಟರ್​ಗಳು ಪೆವಿಲಿಯನ್​ನತ್ತ ಮುಖ ಮಾಡಿದ್ದರು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಸಲ್ಮಾನ್ ಅಲಿ ಅಘಾ 38 ರನ್​ ಬಾರಿಸಿದರು. ಇನ್ನು ಅಂತಿಮ ಹಂತದಲ್ಲಿ ಹಸನ್ ನವಾಝ್ 40 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ಪಾಕಿಸ್ತಾನ್ ತಂಡವು 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 133 ರನ್​ ಕಲೆಹಾಕಿತು.

134 ರನ್​ಗಳ ಸುಲಭ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡಕ್ಕೆ ಮೊಹಮ್ಮದ್ ನವಾಝ್ ಆರಂಭಿಕ ಆಘಾತ ನೀಡಿದ್ದರು. 2ನೇ ಓವರ್​ನ ಮೊದಲ ಎಸೆತದಲ್ಲೇ ಅಲಿಕ್ ಅಥನಾಝ್ (2) ವಿಕೆಟ್ ಪಡೆದು ಪಾಕ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಜ್ಯುವೆಲ್ ಆ್ಯಂಡ್ರೊ (12) ಸಹ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಶೆರ್ಫೇನ್ ರದರ್​ಫೋರ್ಡ್​ ಕೇವಲ 9 ರನ್​ಗಳಿಸಿ ಆಲೌಟ್ ಆದರು.

ಪರಿಣಾಮ ಪವರ್​ಪ್ಲೇನಲ್ಲಿ ವೆಸ್ಟ್ ಇಂಡೀಸ್ ತಂಡ ಕಲೆಹಾಕಿದ್ದು ಕೇವಲ 34 ರನ್​ಗಳು ಮಾತ್ರ. ಆದರೆ ಮಧ್ಯಮ ಕ್ರಮಾಂಕದಲ್ಲಿ ಗುಡಕೇಶ್ ಮೋಟಿ 28 ರನ್ ಬಾರಿಸುವ ಮೂಲಕ ತಂಡಕ್ಕೆ ಪಂದ್ಯ ಗೆಲ್ಲಿಸಿ ಕೊಡುವ ಭವರಸೆ ಮೂಡಿಸಿದರು. ಅದರಂತೆ ಕೊನೆಯ 4 ಓವರ್​ಗಳಲ್ಲಿ ವೆಸ್ಟ್ ಇಂಡೀಸ್​ ತಂಡಕ್ಕೆ 39 ರನ್​ಗಳ ಅವಶ್ಯಕತೆಯಿತ್ತು.

ಈ ಹಂತದಲ್ಲಿ ಜೊತೆಗೂಡಿದ ಜೇಸನ್ ಹೋಲ್ಡರ್ ಹಾಗೂ ರೊಮಾರಿಯೊ ಶೆಫರ್ಡ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ 18ನೇ ಓವರ್​ನಲ್ಲಿ 12 ರನ್​ಗಳು ಮೂಡಿಬಂದವು. ಇನ್ನು 19ನೇ ಓವರ್​ನಲ್ಲಿ 16 ರನ್ ಚಚ್ಚಿದರು. ಅದರಂತೆ ಕೊನೆಯ ಓವರ್​ನಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ 8 ರನ್​ಗಳ ಅವಶ್ಯಕತೆಯಿತ್ತು.

ಶಾಹೀನ್ ಶಾ ಅಫ್ರಿದಿ ಎಸೆದ ಅಂತಿಮ ಓವರ್​ನ ಮೊದಲ ಎಸೆತದಲ್ಲಿ ಹೋಲ್ಡರ್ 1 ರನ್ ಕಲೆಹಾಕಿದರು. 2ನೇ ಎಸೆತದಲ್ಲಿ ರೊಮಾರಿಯೊ ಶೆಫರ್ಡ್ (15) ಔಟಾದರು. 3ನೇ ಎಸೆತದಲ್ಲಿ ಶಮರ್ ಜೋಸೆಫ್ 1 ರನ್​ಗಳಿಸಿದರು. 4ನೇ ಎಸೆತದಲ್ಲಿ ಹೋಲ್ಡರ್ ಬ್ಯಾಟ್​ನಿಂದ ಮತ್ತೊಂದು ರನ್. 5ನೇ ಎಸೆತದಲ್ಲಿ ಶಮರ್ ಒಂದು ರನ್ ಓಡುವಲ್ಲಿ ಯಶಸ್ವಿಯಾದರು.

ಅದರಂತೆ ಅಂತಿಮ ಎಸೆತದಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ 4 ರನ್​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಶಾಹೀನ್ ಅಫ್ರಿದಿ ವೈಡ್ ಎಸೆದರು. ಒಂದು ಎಸೆತದಲ್ಲಿ ಮೂರು ರನ್​ಗಳ ಅವಶ್ಯಕತೆ. ಕೊನೆಯ ಎಸೆತದಲ್ಲಿ ಫೋರ್ ಬಾರಿಸುವ ಮೂಲಕ ಜೇಸನ್ ಹೋಲ್ಡರ್ (16) ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಗೆಲುವಿನೊಂದಿಗೆ ವೆಸ್ಟ್ ಇಂಡೀಸ್ ತಂಡವು ಸತತ ಸೋಲುಗಳ ಸರಪಳಿಯನ್ನು ಮುರಿದಿದೆ.

ಇದನ್ನೂ ಓದಿ: ಆರ್ಚರ್ ಅಲ್ಲ… ಇಂಗ್ಲೆಂಡ್ ಪರ ಕಣಕ್ಕಿಳಿದ ತಂಡದಲ್ಲಿರದ ಆಟಗಾರ

ಅಂದರೆ ಕಳೆದ 6 ಟಿ20 ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಸೋಲನುಭವಿಸಿತ್ತು. ಇದೀಗ 7ನೇ ಪಂದ್ಯದಲ್ಲಿ 2 ವಿಕೆಟ್​ಗಳ ರೋಚಕ ಗೆಲುವು ದಾಖಲಿಸುವಲ್ಲಿ ವೆಸ್ಟ್ ಇಂಡೀಸ್ ತಂಡ ಯಶಸ್ವಿಯಾಗಿದೆ.