VIDEO: ಪ್ರೇಕ್ಷಕನ ಟಿ-ಶರ್ಟ್ ಬದಲಿಸಿದ ರವೀಂದ್ರ ಜಡೇಜಾ
India vs England 5th Test: ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ 224 ರನ್ ಕಲೆಹಾಕಿದರೆ, ಇಂಗ್ಲೆಂಡ್ 227 ರನ್ಗಳಿಸಿದೆ. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಭಾರತ ತಂಡವು 396 ರನ್ಗಳಿಸಿ ಆಲೌಟ್ ಆಗಿದೆ. ಅತ್ತ ಮೊದಲ ಇನಿಂಗ್ಸ್ನಲ್ಲಿನ ಮುನ್ನಡೆಯೊಂದಿಗೆ ಇಂಗ್ಲೆಂಡ್ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 374 ರನ್ಗಳ ಗುರಿ ಪಡೆದುಕೊಂಡಿದ್ದು, ಇನ್ನು 2 ದಿನದಾಟಗಳು ಬಾಕಿಯಿದ್ದು, ಹೀಗಾಗಿ ಈ ಪಂದ್ಯದಲ್ಲಿ ಫಲಿತಾಂಶವನ್ನು ನಿರೀಕ್ಷಿಸಬಹುದು.

ಭಾರತ ಮತ್ತು ಇಂಗ್ಲೆಂಡ್ ನಡುವಣ 5ನೇ ಟೆಸ್ಟ್ ಪಂದ್ಯವು ನಾಲ್ಕನೇ ದಿನದಾಟಕ್ಕೆ ಕಾಲಿಟ್ಟಿದೆ. ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದ ಮೂರನೇ ದಿನದಾಟದಲ್ಲಿ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ದ್ವಿತೀಯ ದಿನದಾಟದಲ್ಲಿ ಅರ್ಧಶತಕ ಪೂರೈಸಿದ್ದ ಯಶಸ್ವಿ ಜೈಸ್ವಾಲ್ ಮೂರನೇ ದಿನದಾಟದಲ್ಲಿ ಶತಕ ಸಿಡಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ ಕೂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಬ್ಯಾಟಿಂಗ್ ವೇಳೆ ಜಡೇಜಾ ಅವರಿಗೆ ಸಮಸ್ಯೆಗಳು ಎದುರಾಗಿದ್ದವು. ಆದರೆ ಈ ಸಮಸ್ಯೆಗಳು ಎದುರಾಗಿದ್ದು ಬೌಲರ್ಗಳಿಂದ ಅಲ್ಲ. ಬದಲಾಗಿ ಸ್ಟೇಡಿಯಂ ಗ್ಯಾಲರಿಯಲ್ಲಿ ಕೂತಿದ್ದ ಪ್ರೇಕ್ಷಕನಿಂದ..!
ಹೌದು, ಮೂರನೇ ದಿನದಾಟದಂದು 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರವೀಂದ್ರ ಜಡೇಜಾ ಉತ್ತಮ ಆರಂಭ ಪಡೆದಿದ್ದರು. ಇದರ ನಡುವೆ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ವ್ಯಕ್ತಿಯೊಬ್ಬರ ಟಿ-ಶರ್ಟ್ ಜಡೇಜಾ ಅವರ ಕಣ್ಣು ಕುಕ್ಕಲಾರಂಭಿಸಿದೆ.
ಪ್ರೇಕ್ಷಕರೊಬ್ಬರು ಸ್ಟ್ರೈಟ್ ಗ್ಯಾಲರಿಯಲ್ಲಿ ರೆಡ್ ಟಿ-ಶರ್ಟ್ ಧರಿಸಿ ಕೂತಿದ್ದರಿಂದ ಇತ್ತ ಜಡೇಜಾ ಚೆಂಡಿನ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತಿರಲಿಲ್ಲ. ಈ ವಿಷಯವನ್ನು ಅವರು ಆನ್-ಫೀಲ್ಡ್ ಅಂಪೈರ್ ಕುಮಾರ್ ಧರ್ಮಸೇನ ಅವರಿಗೆ ತಿಳಿಸಿದರು.
ತಕ್ಷಣವೇ ಅಂಪೈರ್, ಸ್ಟೇಡಿಯಂ ಸಿಬ್ಬಂದಿಗೆ ತಿಳಿಸಿ ರೆಡ್ ಟಿ-ಶರ್ಟ್ ಧರಿಸಿದ ಪ್ರೇಕ್ಷಕನನ್ನು ಅಲ್ಲಿಂದ ಸ್ಥಳಾಂತರಿಸುವಂತೆ ಕೇಳಿಕೊಂಡರು. ಆದರೆ ತಾನು ಕೂತಿದ್ದ ಜಾಗದಿಂದ ಕದಲಲು ರೆಡ್ ಟಿ-ಶರ್ಟ್ ಪ್ರೇಕ್ಷಕ ಒಪ್ಪಲಿಲ್ಲ.
ಈ ವೇಳೆ ಸಮಸ್ಯೆಯನ್ನು ತಿಳಿಸಿದ ಮೈದಾನದ ಸಿಬ್ಬಂದಿಯೊಬ್ಬರು, ಅವರಿಗೆ ಬೂದು ಬಣ್ಣದ ಟಿ-ಶರ್ಟ್ ನೀಡಿದರು. ಪ್ರೇಕ್ಷಕ ತನ್ನ ರೆಡ್ ಟಿ-ಶರ್ಟ್ ಮೇಲೆ ಮತ್ತೊಂದು ಟಿ-ಶರ್ಟ್ ಧರಿಸುತ್ತಿದ್ದಂತೆ ರವೀಂದ್ರ ಜಡೇಜಾ ಥಂಬ್ಸ್-ಅಪ್ ಮೂಲಕ ಧನ್ಯವಾದ ತಿಳಿಸಿದರು.
Red shirt, but total green flag 💚#SonySportsNetwork #ENGvIND #NayaIndia #DhaakadIndia #TeamIndia #ExtraaaInnings pic.twitter.com/gkV3t21x6K
— Sony Sports Network (@SonySportsNetwk) August 2, 2025
ಇನ್ನು ಆ ಬಳಿಕ ಉತ್ತಮ ಬ್ಯಾಟಿಂಗ್ ಮುಂದುವರೆಸಿದ ರವೀಂದ್ರ ಜಡೇಜಾ 77 ಎಸೆತಗಳನ್ನು ಎದುರಿಸಿ 5 ಫೋರ್ಗಳೊಂದಿಗೆ 53 ರನ್ ಬಾರಿಸಿದರು. ಈ ಮೂಲಕ ಟೀಮ್ ಇಂಢಿಯಾ ದ್ವಿತೀಯ ಇನಿಂಗ್ಸ್ನಲ್ಲಿ 396 ರನ್ಗಳಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
ರೆಡ್ ಟಿ-ಶರ್ಟ್ ಧರಿಸಿದರೆ ಸಮಸ್ಯೆಯೇನು?
ಬೌಲರ್ ಎಂಡ್ನ ಗ್ಯಾಲರಿಯಲ್ಲಿ ರೆಡ್ ಟಿ-ಶರ್ಟ್ ಧರಿಸಿದ ಪ್ರೇಕ್ಷಕರಿದ್ದರೆ ಕೆಲ ಬ್ಯಾಟರ್ಗಳಿಗೆ ಸಮಸ್ಯೆಯಾಗುವುದು ಸಾಮಾನ್ಯ. ಇದಕ್ಕೆ ಮುಖ್ಯ ಕಾರಣ ಚೆಂಡನ್ನು ಗುರುತಿಸಲು ಸಾಧ್ಯವಾಗದೇ ಇರುವುದು. ಅಂದರೆ ಟೆಸ್ಟ್ ಕ್ರಿಕೆಟ್ನಲ್ಲಿ ರೆಡ್ ಬಾಲ್ ಬಳಸಲಾಗುತ್ತದೆ. ಅತ್ತ ಸಂಪೂರ್ಣ ಏಕಾಗ್ರತೆಯಿಂದ ಬ್ಯಾಟರ್ ಚೆಂಡನ್ನು ಎದುರು ನೋಡುತ್ತಿರುತ್ತಾರೆ.
ಇದನ್ನೂ ಓದಿ: ಆರ್ಚರ್ ಅಲ್ಲ… ಇಂಗ್ಲೆಂಡ್ ಪರ ಕಣಕ್ಕಿಳಿದ ತಂಡದಲ್ಲಿರದ ಆಟಗಾರ
ಇದೇ ವೇಳೆ ರೆಡ್ ಬಣ್ಣದ ಬಟ್ಟೆ ಧರಿಸಿದ ಪ್ರೇಕ್ಷಕರು ನೇರವಾಗಿ ಕೂತಿದ್ದರೆ ರೆಡ್ ಬಾಲ್ ಅನ್ನು ಗುರುತಿಸುವಲ್ಲಿ ಬ್ಯಾಟರ್ಗಳು ಎಡವುತ್ತಾರೆ. ಇದೇ ಸಮಸ್ಯೆ ಎದುರಾಗುತ್ತಿರುವುದರಿಂದ ರವೀಂದ್ರ ಜಡೇಜಾ ಕೂಡ ರೆಡ್ ಟಿ-ಶರ್ಟ್ ಧರಿಸಿದ್ದ ಪ್ರೇಕ್ಷಕನ ಬಗ್ಗೆ ಅಂಪೈರ್ಗೆ ತಿಳಿಸಿದ್ದರು. ಹೀಗಾಗಿ ರೆಡ್ ಟಿ-ಶರ್ಟ್ ಪ್ರೇಕ್ಷಕ ಟಿ-ಶರ್ಟ್ ಮೇಲೆ ಟಿ-ಶರ್ಟ್ ಧರಿಸಿ ಪಂದ್ಯ ವೀಕ್ಷಿಸಬೇಕಾಯಿತು.
Published On - 10:54 am, Sun, 3 August 25
