AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

WCL 2026: ವೆಸ್ಟ್ ಇಂಡೀಸ್ ‘ಚಾಂಪಿಯನ್ಸ್​’

ವರ್ಲ್ಡ್ ಚಾಂಪಿಯನ್​ಶಿಪ್ ಆಫ್ ಲೆಜೆಂಡ್ಸ್ ಎಂಬುದು ನಿವೃತ್ತ ಅಂತರರಾಷ್ಟ್ರೀಯ ಕ್ರಿಕೆಟ್ ತಾರೆಗಳು ಭಾಗವಹಿಸುವ ಒಂದು ಪ್ರಮುಖ ಟಿ20 ಕ್ರಿಕೆಟ್ ಪಂದ್ಯಾವಳಿಯಾಗಿದೆ. ಇದರ ಮೂರನೇ ಆವೃತ್ತಿಯ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ತಂಡವು ಇಂಗ್ಲೆಂಡ್ ತಂಡವನ್ನು ಸೋಲಿಸಿ ಚೊಚ್ಚಲ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

WCL 2026: ವೆಸ್ಟ್ ಇಂಡೀಸ್ 'ಚಾಂಪಿಯನ್ಸ್​'
West Indies ChampionsImage Credit source: WCL
ಝಾಹಿರ್ ಯೂಸುಫ್
|

Updated on: Oct 19, 2026 | 7:22 AM

Share

ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ 2026 ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ತಂಡವು ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಚಾಂಪಿಯನ್ಸ್ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿ ವೆಸ್ಟ್ ಇಂಡೀಸ್ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಬ್ರಾವೋ ಕಮಾಲ್:

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಚಾಂಪಿಯನ್ಸ್ ತಂಡಕ್ಕೆ ವೆಸ್ಟ್ ಇಂಡೀಸ್ ಬೌಲರ್‌ಗಳು ಆರಂಭದಲ್ಲೇ ಸಿಂಹಸ್ವಪ್ನವಾದರು. ಕೆರಿಬಿಯನ್ ಪಡೆಯ ಸ್ಟಾರ್ ಆಲ್ ರೌಂಡರ್ ಡ್ವೇನ್ ಬ್ರಾವೋ ತಮ್ಮ ಅನುಭವವನ್ನು ಧಾರೆಯೆರೆದು 4 ಓವರ್​ಗಳಲ್ಲಿ ಕೇವಲ 21 ರನ್ ನೀಡಿ 3 ಪ್ರಮುಖ ವಿಕೆಟ್ ಕಬಳಿಸಿದರು.

ಬ್ರಾವೋ ಅವರ ಈ ಕರಾರುವಾಕ್ ದಾಳಿಗೆ ಸಿಲುಕಿದ ಇಂಗ್ಲೆಂಡ್ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಲಷ್ಟೇ ಶಕ್ತವಾಯಿತು.

ಸಿಮನ್ಸ್ – ವಾಲ್ಟನ್ ತೂಫಾನ್:

ಇಂಗ್ಲೆಂಡ್ ಚಾಂಪಿಯನ್ಸ್ ನೀಡಿದ 160 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ತಂಡಕ್ಕೆ ಆರಂಭಿಕ ಆಟಗಾರರು ಸ್ಫೋಟಕ ಅಡಿಪಾಯ ಹಾಕಿಕೊಟ್ಟರು. ವೆಸ್ಟ್ ಇಂಡೀಸ್‌ನ ಆರಂಭಿಕ ದಾಂಡಿಗ ಲೆಂಡ್ಲ್ ಸಿಮನ್ಸ್ ಮತ್ತು ಚಾಡ್ವಿಕ್ ವಾಲ್ಟನ್ ಇಂಗ್ಲೆಂಡ್ ಬೌಲರ್‌ಗಳನ್ನು ಮನಸೋ ಇಚ್ಛೆ ದಂಡಿಸಿದರು.

ಈ ಮೂಲಕ ಲೆಂಡ್ಲ್​ ಸಿಮನ್ಸ್ ಕೇವಲ 53 ಎಸೆತಗಳಲ್ಲಿ ಅಜೇಯ 77 ರನ್ ಬಾರಿಸಿದರೆ, ಚಾಡ್ವಿಕ್ ವಾಲ್ಟನ್ 35 ಎಸೆತಗಳಲ್ಲಿ ಬಿರುಸಿನ 58 ರನ್ ಚಚ್ಚಿದರು. ಈ ಭರ್ಜರಿ ಬ್ಯಾಟಿಂಗ್​ನೊಂದಿಗೆ ಈ ಜೋಡಿಯು ಇನ್ನೂ 3 ಓವರ್‌ಗಳು ಬಾಕಿ ಇರುವಂತೆಯೇ, ಅಂದರೆ 17 ಓವರ್‌ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ವೆಸ್ಟ್ ಇಂಡೀಸ್ ತಂಡವನ್ನು ಗುರಿ ತಲುಪಿಸಿದರು. ಈ ಮೂಲಕ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ತಂಡವು 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ಈ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ಡ್ವೇನ್ ಬ್ರಾವೋ ಅವರಿಗೆ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿ ಒಲಿಯಿದರೆ, ಇಡೀ ಟೂರ್ನಿಯುದ್ದಕ್ಕೂ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಚಾಡ್ವಿಕ್ ವಾಲ್ಟನ್ ‘ಸರಣಿ ಶ್ರೇಷ್ಠ’ ಗೌರವಕ್ಕೆ ಪಾತ್ರರಾದರು.

ಇಂಗ್ಲೆಂಡ್ ಚಾಂಪಿಯನ್ಸ್ ಪ್ಲೇಯಿಂಗ್ 11: ರವಿ ಬೋಪಾರ (ನಾಯಕ) , ಡೇವಿಡ್ ಮಲಾನ್ , ಜೇಸನ್ ರಾಯ್ , ಮೊಯಿನ್ ಅಲಿ , ಜೋ ಡೆನ್ಲಿ , ಫಿಲ್ ಮಸ್ಟರ್ಡ್ (ವಿಕೆಟ್ ಕೀಪರ್) , ಸಮಿತ್ ಪಟೇಲ್ , ಓವೈಸ್ ಶಾ , ಟೈಮಲ್ ಮಿಲ್ಸ್ , ಅಜ್ಮಲ್ ಶಹಜಾದ್ , ಟೋಬಿ ರೋಲ್ಯಾಂಡ್-ಜೋನ್ಸ್.

ಇದನ್ನೂ ಓದಿ: ಕೆರಿಬಿಯನ್ನರ ಕಮಾಲ್: 9.19 ಎಸೆತಗಳಲ್ಲೇ ವಿಶ್ವ ದಾಖಲೆ!

ವೆಸ್ಟ್ ಇಂಡೀಸ್ ಚಾಂಪಿಯನ್ಸ್ ಪ್ಲೇಯಿಂಗ್ 11: ಕ್ರಿಸ್ ಗೇಲ್ (ನಾಯಕ) , ಲೆಂಡ್ಲ್ ಸಿಮ್ಮನ್ಸ್ , ಚಾಡ್ವಿಕ್ ವಾಲ್ಟನ್ (ವಿಕೆಟ್ ಕೀಪರ್ ). ಶಿವನರೈನ್ ಚಂದ್ರಪಾಲ್ , ಜೆರ್ಮೈನ್ ಬ್ಲ್ಯಾಕ್‌ವುಡ್ , ಕಾರ್ಲೋಸ್ ಬ್ರಾಥ್‌ವೈಟ್ , ರೇಮನ್ ರೀಫರ್ , ಡ್ವೇನ್ ಬ್ರಾವೋ , ಶೆಲ್ಡನ್ ಕಾಟ್ರೆಲ್ , ಫಿಡೆಲ್ ಎಡ್ವರ್ಡ್ಸ್ , ನಿಕಿತ ಮಿಲ್ಲರ್.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More